- ದಿಲ್ಲಿಗೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಬಂದಿರುವ ರೈತರಿಗೆ ದೊಡ್ಡ ಮೈದಾನ ಒದಗಿಸಲು ಎಂಟು ಪಕ್ಷಗಳು ಆಗ್ರಹ
ರೈತರು ಸರಕಾರದ ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ಗಂಭೀರ ಆತಂಕಗಳಿಗೆ ದನಿ ನೀಡಲು ಸರಕಾರದ ಎಲ್ಲ ರೀತಿಗಳ ದಮನ ಕ್ರಮಗಳನ್ನು ಎದುರಿಸಿ ರಾಷ್ಟ್ರದ ರಾಜಧಾನಿಗೆ ಬಂದಿದ್ದಾರೆ. ಸಾವಿರ-ಸಾವಿರ ಸಂಖ್ಯೆಯಲ್ಲಿ ಬಂದಿರುವುದರಿಂದ ಅವರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ರಾಮಲೀಲಾ ಮೈದಾನದಂತಹ ದೊಡ್ಡ ಮೈದಾನವನ್ನು ಒದಗಿಸಿ, ಅವರ ಆಹಾರ ಇತ್ಯಾದಿಗಳಿಗೆ ಸಕಲ ಏರ್ಪಾಡುಗಳನ್ನು ಮಾಡಬೇಕು ಎಂದು ಎಂಟು ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು, ಮತ್ತು ಎನ್.ಸಿ.ಪಿ. ಅಧ‍್ಯಕ್ಷರು, ಡಿ.ಎಂ.ಕೆ.ಯ ಖಜಾಂಚಿ ಹಾಗೂ ಆರ್.ಜೆ.ಡಿ. ಯ ಸಂಸತ್ ಸದಸ್ಯರು ಈ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.
ಹೇಳಿಕೆಯ ಪೂರ್ಣ ಪಾಟ ಹೀಗಿದೆ:
ತೀವ್ರ ದಮನ, ಅಶ್ರುವಾಯು ಪ್ರಯೋಗ, ಭಾರೀ ಜಲಫಿರಂಗಿ, ರಸ್ತೆ ಅಡ್ಡಗಟ್ಟುಗಳು, ಪೋಲಿಸ್ ಬ್ಯಾರಿಕೇಡುಗಳನ್ನು ಮತ್ತು ದಿಲ್ಲಿಯ ಸುತ್ತಮುತ್ತಲ ರಾಷ್ಟ್ರೀಯ ಹೆದ್ದಾರಿಗಳನ್ನು ಅಗೆದು ಹಾಕಿ ನಮ್ಮ ರೈತರ ಮೇಲೆ ‘ಯುದ್ಧ’ವನ್ನೇ ನಡೆಸುವಂತೆ ಕಂಡರೂ, ಅವನ್ನೆಲ್ಲ ಎದುರಿಸಿ ಹತ್ತಾರು ಸಾವಿರ ರೈತರು ಯಶಸ್ವಿಯಾಗಿ ರಾಷ್ಟ್ರೀಯ ರಾಜಧಾನಿ ದಿಲ್ಲಿ ತಲುಪಿದ್ದಾರೆ. ರೈತ-ವಿರೋಧಿಯಾದ ಪ್ರತಿಗಾಮಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿರುವ ಈ ಬೃಹತ್ ಪ್ರತಿಭಟನೆಯಲ್ಲಿ ಅವರ ದೃಢನಿರ್ಧಾರ ಮತ್ತು ಎದೆಗಾರಿಕೆಗೆ ನಮ್ಮ ಅಭಿವಂದನೆಗಳು.
ಕೇಂದ್ರ ಸರಕಾರ ನಮ್ಮ ರೈತರು ದಿಲ್ಲಿಗೆ ಬಂದು ತಮ್ಮ ಪ್ರತಿಭಟನೆಗೆ ಶಾಂತಿಯುತವಾಗಿ ದನಿ ನೀಡುವುದನ್ನು ತಡೆಯಬೇಕೆಂಬ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಬೇಕಾಗಿ ಬಂದಿದೆ, ಬದಲಿಸಲೇ ಬೇಕಾಗಿ ಬಂದಿದೆ. ಅದು ರೈತರು ಸಭೆ ಸೇರಲು ಒಂದು ಸ್ಥಳವನ್ನು ಒದಗಿಸಿದೆ. ಆದರೆ ಸಾವಿರ-ಸಾವಿರ ಸಂಖ್ಯೆಯಲ್ಲಿ ರೈತರು ದಿಲ್ಲಿಗೆ ಬಂದಿರುವಾಗ ಈ ಮೈದಾನ ಅವರಿಗೆ ಬಹಳ ಸಣ್ಣದಾಗುತ್ತದೆ. ರಾಮಲೀಲಾ ಮೈದಾನದಂತಹ ದೊಡ್ಡ ಮೈದಾನವನ್ನು ಈ ಶಾಂತಿಯುತ ಪ್ರತಿಭಟನೆಗೆ ಅವರಿಗೆ ಒದಗಿಸಬೇಕು ಮತ್ತು ಅಲ್ಲಿ ಅವರು ಉಳಿದುಕೊಳ್ಳಲು ಹಾಗೂ ಆಹಾರಕ್ಕೆ ಸಕಲ ಏರ್ಪಾಡುಗಳನ್ನು ಮಾಡಬೇಕು ಎಂದು ಈ ಹೇಳಿಕೆಗೆ ಸಹಿ ಹಾಕಿರುವ ನಾವು ಆಗ್ರಹಿಸುತ್ತೇವೆ.
ನಾವು, ಭಾರತದ ಆಹಾರ ಭದ್ರತೆಗೆ ಬೆದರಿಕೆಯೊಡ್ಡುವ, ಕನಿಷ್ಟ ಬೆಂಬಲ ಬೆಲೆಗಳನ್ನು ರದ್ದು ಮಾಡುವ, ಭಾರತೀಯ ಕೃಷಿಯನ್ನು ಮತ್ತು ನಮ್ಮ ರೈತರನ್ನ, ಅನ್ನದಾತರನ್ನು ನಾಶಮಾಡುವ ಈ ಹೊಸ ಕೃಷಿ ಕಾಯ್ದೆಗಳಿಗೆ ನಮ್ಮ ವಿರೋಧವನ್ನು ಪುನರುಚ್ಚರಿಸುತ್ತೇವೆ. ಕೇಂದ್ರ ಸರಕಾರ ಪ್ರಜಾಸತ್ತಾತ್ಮಕ ವಿಧಿ-ವಿಧಾನಗಳನ್ನು ಅನುಸರಿಸಬೇಕು, ಮತ್ತು ಪ್ರತಿಭಟಿಸುತ್ತಿರುವ ರೈತರ ಆತಂಕಗಳನ್ನು ನಿವಾರಿಸಬೇಕು.