- ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ: ಸರಕಾರ
ಬೆಂಗಳೂರು: ತಕ್ಷಣದಿಂದ ಜಾರಿಗೆ ಬರುವಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮತ್ತು ನಿಗಮಕ್ಕೆ 500 ಕೋಟಿ ರೂಪಾಯಿಗಳ ಅನುದಾನವನ್ನೂ ಘೋಷಿಸಿದೆ.
ಕರ್ನಾಟಕ ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಈ ನಿಗಮ ಸ್ಥಾಪಿಸಲಾಗುತ್ತಿದೆ ಎಂದು ಸರಕಾರ ಹೇಳಿದೆ.
ಇದನ್ನೂ ಓದಿ: ಸಮುದಾಯಗಳ ಓಲೈಕೆಗೆ ನಿಗಮ/ಪ್ರಾದಿಕಾರಿಗಳ ಸ್ಥಾಪನೆ
ನಿಗಮವನ್ನು ಕಂಪನಿ ಕಾಯ್ದೆ 2013ರ ಸೆಕ್ಷನ್ 7ರ ಅಡಿಯಲ್ಲಿ ನೋಂದಣಿ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ವಾಣಿಜ್ಯ ವ್ಯವಹಾರ ಇಲಾಖೆ ಅಡಿಯಲ್ಲಿ ನಿಗಮವನ್ನು ನೋಂದಾಯಿಸಿ, ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವವರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ನಿಗಮದ ಜವಾಬ್ದಾರಿಯನ್ನು ವಹಿಸಲಾಗಿದೆ. ನಿಗಮ ಸ್ಥಾಪನೆ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೇ ಭರಿಸಲಿದ್ದು, ನಂತರ ಸರಕಾರ 500 ಕೋಟಿ ರೂಪಾಯಿಗಳ ಅನುದಾನ ನೀಡಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಈಗ ಪ್ರಾಧಿಕಾರದ ರಾಜಕೀಯ : ಸರಕಾರದ ನಿಲುವಿಗೆ ಚಿಂತಕರ ಆಕ್ರೋಶ
ಕಳೆದ ವಾರ ರಾಜ್ಯ ಸರಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಿಸಿತ್ತು. ಜೊತೆಗೆ 50 ಕೋಟಿ ರೂಪಾಯಿಗಳ ಅನುದಾನ ನೀಡುವುದಾಗಿಯೂ ಹೇಳಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರ ನಡುವೆಯೇ ರಾಜ್ಯ ಸರಕಾರ ಇದೀಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಿರ್ಧರಿಸಿದೆ.