ವಿದ್ಯುತ್‌ ದರ, ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರತಿಭಟನೆ

  • ಬಿಜೆಪಿ ಸರಕಾರ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆ ಹಾಕಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ: ಕಾಂಗ್ರೆಸ್‌ ಆರೋಪ

ಬೆಂಗಳೂರು: ವಿದ್ಯುತ್ ದರ ಹೆಚ್ಚಳ ಹಾಗೂ ಬೆಂಗಳೂರು ನಗರ ನಿವಾಸಿಗಳ ಕಟ್ಟಡದ ಆಸ್ತಿ ತೆರಿಗೆ  ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ಪ್ರಚಾರ ಸಮಿತಿ ಶನಿವಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿತು.

ಬಿಜೆಪಿ ಸರಕಾರ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆ ಹಾಕಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಜನರು ಈಗಾಗಲೇ ಕೊರೊನಾದಿಂದ ನಲುಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯ ಮೇಲೆ ಹೆಚ್ಚುವರಿ ತೆರಿಗೆ ಹಾಕಿ ವಸೂಲಿಗೆ ಇಳಿದಿದ್ದಾರೆ. ಇದರಿಂದ ರಾಜ್ಯದ ಜನ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ ಕಾಂಗ್ರೆಸ್‌ ಪ್ರಚಾರ ಸಮಿತಿ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಭಿವೃದ್ಧಿಪರ ಕಾರ್ಯಗಳನ್ನು ಮರೆತು ಸಾಲ ಸಂಗ್ರಹಿಸುವುದರಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ಸಾಲ ತೀರಿಸಲು ಜನರ ಮೇಲೆ ವಿದ್ಯುತ್ ದರ ಏರಿಕೆ ಹಾಗೂ ಬೆಂಗಳೂರು ನಗರ ನಿವಾಸಿಗಳ ಕಟ್ಟಡದ ಆಸ್ತಿ ತೆರಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈಗಾಗಲೇ ವಿದ್ಯುತ್ ಇಲಾಖೆ ಪ್ರತಿ ಯೂನಿಟ್‌ಗೆ ಶೇ. 40%ರಷ್ಟು ದರ ಏರಿಕೆ ಮಾಡಿದೆ.

ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ಹೊಸದಾಗಿ ತೆರಿಗೆ ವಿಧಿಸಲು ಮುಂದಾಗಿದೆ. ಈ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ ಈ ಬಿಜೆಪಿ ಸರ್ಕಾರದ ನಿರ್ಧಾರದಿಂದ ಜನರು ನಿತ್ಯ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಕೇವಲ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಗೆ ಸೀಮಿತವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರ ಸಂಕಷ್ಟ ಅರಿಯುತ್ತಿಲ್ಲ. ಉಪಚುನಾವಣೆಗಳಲ್ಲಿ ಕೋಟ್ಯಂತರ ಹಣ ಸುರಿದು ತನ್ನ ಅಭ್ಯರ್ಥಿಗಳ ಹಾಗೂ ಪಕ್ಷದ ಪ್ರಚಾರಕ್ಕೆ ಸೀಮಿತವಾಗಿದ್ದು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ದೆಹಲಿಗೆ ಸುತ್ತುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಆರೋಪಿಸಿದೆ.
ಈ ಜನವಿರೋಧಿ ಸರಕಾರ ಕೂಡಲೇ ತೆರಿಗೆ ಹೆಚ್ಚಳ ಹಾಗೂ ವಿದ್ಯುತ್ ದರ ಏರಿಕೆಯನ್ನು ಕೈಬಿಡಬೇಕೆಂದು ಸಮಿತಿ ಆಗ್ರಹಿಸಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥರಾದ ಎಸ್. ಮನೋಹರ್, ಜಿ. ಜನಾರ್ದನ್ , ಎ. ಆನಂದ್, ಎಲ್. ಜಯಸಿಂಹ, ಇ. ಶೇಖರ್, ಎಂ. ಎ. ಸಲೀಮ್, ಶ್ರೀಧರ್, ಪ್ರಕಾಶ್, ಪುಟ್ಟರಾಜು, ಮಹೇಶ್, ಶಶಿಭೂಷಣ್, ಚಂದ್ರು,  ವಿನೋದ, ಶೀಲಾ, ಹಾಗೂ ಪಕ್ಷದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *