ಮುಂಬಯಿ: ಕೊರೊನಾ ಸಂಕಷ್ಟ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.
ಈ ನಿಟ್ಟಿನಲ್ಲಿ ಕೆಲವು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಲು ಕೆಲವು ಅವಕಾಶಗಳನ್ನು ಮಾಡಿಕೊಡಲು ಆರ್‌ಬಿಐ ಚಿಂತನೆ ನಡೆಸಿದೆ. ಆರ್ಥಿಕತೆಗೆ ಒತ್ತು ನೀಡಲು ದೊಡ್ಡ ಕೈಗಾರಿಕೋದ್ಯಮ ಹಾಗೂ ಕಾರ್ಪೊರೇಟ್ ಕಂಪನಿಗಳು ಪೇಮೆಂಟ್ ಬ್ಯಾಂಕ್‌ಗಳನ್ನು ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ.
ಟಾಟಾ, ಬಿರ್ಲಾ, ಅಂಬಾನಿಯಂಥ ಸಮೂಹ ಕಂಪನಿಗಳು ಬ್ಯಾಂಕ್ ನಡೆಸಲು ಅನುಮತಿ ನೀಡಬಹುದು ಎಂದು ಆರ್‌ಬಿಐ ಸಲಹ ಸಮಿತಿ ಶಿಫಾರಸು ಮಾಡಿದೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಾಗಿ ಇವು ಕಾರ್ಯ ನಿರ್ವಹಿಸಬಹುದು. ಈಗಾಗಲೇ ಕೆಲವು ಕಂಪನಿಗಳು ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿದ್ದು, ಕೆಲವು ಈಗಾಗಲೇ ಅರ್ಜಿಯನ್ನು ಹಿಂಪಡೆದಿವೆ.
ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ಗಳಂತೆ ಖಾಸಗಿ ವಲಯದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್ ಆರಂಭಿಸಬೇಕಾಗಿದೆ ಎಂದು ಆರ್‌ಬಿಐನ ಆಂತರಿಕ ಕಾರ್ಯ ನಿರ್ವಹಣಾ ಸಮಿತಿ ತಿಳಿಸಿದೆ.
ಕಳೆದ ಜೂನ್ 12ರಂದು ಆರ್‌ಬಿಐ ಈ ಸಮಿತಿ ರಚಿಸಿತ್ತು. ಕೊರೊನಾ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತರಬಹುದಾದ ಬದಲಾವಣೆಗಳು ಹಗೂ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು,.
ಕೆಲವು ಖಾಸಗಿ ಕಂಪನಿಗಳು ನಷ್ಟದ ಸುಳಿಯಲ್ಲಿ ಸಿಲುಕಿರುವುದು ಹಾಗೂ ಸಾಲ ನೀಡುವಲ್ಲಿ ಮಾಡಿರುವ ಅವ್ಯವಹಾರಗಳ ಹಿನ್ನೆಲೆಯಲ್ಲಿ ಬದಲಾವಣೆಗೆ ಆರ್‌ಬಿಐ ಮುಂದಾಗಿದೆ.