ಮತ್ತೆ ಗುಲಾಮಗಿರಿಗೆ ತಳ್ಳುವ ಧೋರಣೆಗಳಿಗೆ ಕಾರ್ಮಿಕ ವರ್ಗದ ಮಹಾ ಸವಾಲು

ಭಾರತದ ಕಾರ್ಮಿಕ ವರ್ಗ ಇನ್ನೊಂದು ಬೃಹತ್ ಹೋರಾಟಕ್ಕೆ ಸಿದ್ಧತೆ ನಡೆಸಿದೆ. ಇದೇ ನವೆಂಬರ್ 26 ರಂದು ಇನ್ನೊಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಇದು ನವಉದಾರವಾದಿ ಧೋರಣೆಗಳ ವಿರುದ್ಧ 20ನೇ ಐಕ್ಯ ಮುಷ್ಕರ ಕಾರ್ಯಾಚರಣೆಕೊವಿಡ್ ಕಾಲದ ನಿರ್ಬಂಧಗಳ ಮರೆಯಲ್ಲಿ ನವಉದಾರವಾದಿ ಧೋರಣೆಗಳನ್ನು ಅತ್ಯಂತ ಆಕ್ರಾಮಕವಾಗಿ ಜಾರಿಗೊಳಿಸಲು ಕಾರ್ಮಿಕರ ಹಕ್ಕುಗಳ ಮೇಲೆ ನೇರ ದಾಳಿ ನಡೆಸಿರುವ ದುಷ್ಟ , ಸಂವಿಧಾನವಿರೋಧಿ ವರ್ತನೆಯ ವಿರುದ್ಧಸಂವಿಧಾನ ದಿನದಂದು ದೇಶದ ಕೋಟ್ಯಂತರ ಕಾರ್ಮಿಕರು ಬೃಹತ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಏಕೆ ಐಕ್ಯ ಹೋರಾಟ, ಕಾರ್ಮಿಕರು ಮುಂದಿಟ್ಟಿರುವ ಬೇಡಿಕೆಗಳೇನು?

ಎಸ್. ವರಲಕ್ಷ್ಮಿ, ಸಿಐಟಿಯು ರಾಜ್ಯ ಅಧ್ಯಕ್ಷರು

ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಲಾಕ್‌ಡೌನ್ ಹೇರಲಾಯಿತು. ಆಗ ಮೊದಲೇ ಸಂಕಷ್ಟದಲ್ಲಿದ್ದ ಕಾರ್ಮಿಕರ ಹಿತವನ್ನು ಕಾಪಾಡುವ ಬದಲಿಗೆ ಭಾರತದ ಕೇಂದ್ರ ಸರಕಾರ ಮತ್ತಷ್ಟು ಸಂಕಷ್ಟಗಳನ್ನೇ ಹೇರಿತು, ಮಾತ್ರವಲ್ಲ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಅನ್ನದಾತ ರೈತ, ಸಂಪತ್ತನ್ನು ಸೃಷ್ಟಿಸುವ ಶ್ರಮಿಕನನ್ನು ಪೂರ್ಣ ಗುಲಾಮಗಿರಿಗೆ ತಳ್ಳುವ ಕ್ರಮಗಳನ್ನು ತರುತ್ತಿದೆ. ಪ್ರಭುತ್ವದ ಈ ಸರ್ವಾಧಿಕಾರಿ ವರ್ತನೆಗೆ ಎಲ್ಲ ದೇಶ ಪ್ರೇಮಿ ಕಾರ್ಮಿಕ ಸಂಘಟನೆಗಳು, ಅಂದರೆ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು, ಎಲ್‌ಐಸಿ, ಬ್ಯಾಂಕ್, ರಕ್ಷಣಾ ವಲಯ, ರೈಲ್ವೆ, ಬಿಎಸ್‌ಎನ್‌ಎಲ್, ರಾಜ್ಯ ಮತ್ತು ಕೇಂದ್ರ ಸೇವೆ ಮುಂತಾದ ಎಲ್ಲಾ ರಂಗಗಳಲ್ಲಿನ ಅಖಿಲ ಭಾರತ ಸಂಘಟನೆಗಳು, ಅಸಂಘಟಿತ ಕ್ಷೇತ್ರದ ಕಾರ್ಮಿಕರಾದ ಕಟ್ಟಡ, ಹಮಾಲಿ, ಬೀಡಿ, ತೋಟಗಾರಿಕೆ, ಗುತ್ತಿಗೆ ಕಾರ್ಮಿಕರು, ಪಂಚಾಯ್ತಿ ನೌಕರರು, ಬೀದಿ ಬದಿ ವ್ಯಾಪಾರಸ್ಥರು, ಮನೆಕೆಲಸಗಾರರು, ಆಟೋ, ಟ್ಯಾಕ್ಸಿ, ಸಾರಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರು, ಅಂಗನವಾಡಿ, ಬಿಸಿಯೂಟ, ಆಶಾ, ನೌಕರರ ಸಂಘಟನೆಗಳು ಭಾರತದ ಸಂವಿಧಾನದ ಸಂಸ್ಥಾಪನ ದಿನವಾದ ನವೆಂಬರ್ 26 ರಂದು ಸಂವಿಧಾನಿಕ ಹಕ್ಕುಗಳಿಗಾಗಿ ಪ್ರತಿರೋಧವನ್ನು ವ್ಯಕ್ತ ಮಾಡುತ್ತಿವೆ. ಇದಕ್ಕೆ ವಿದ್ಯಾರ್ಥಿ, ಯುವಜನ, ಮಹಿಳಾ, ರೈತ ಸಂಘಟನೆಗಳು ಬೆಂಬಲ ನೀಡಿವೆ.

  ಮುಷ್ಕರದ ಬೇಡಿಕೆಗಳೇನು?

* ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು

ವ್ಯಾಪಾರವನ್ನು ಸುಲಭವಾಗಿಸಬೇಕೆಂಬ ವಿಶ್ವ ಬ್ಯಾಂಕ್ ಪ್ರೇರಿತ ಗುರಿಸಾಧನೆಗೆ ‘73 ವರ್ಷಗಳಲ್ಲಿ ಮೊದಲ ಬಾರಿಗೆ ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆ’ಯ ಹೆಸರಿನಲ್ಲಿ ಬಂಡವಾಳಶಾಹಿಗಳ ಪರವಾದ ಬದಲಾವಣೆಗಳನ್ನು ತರಲಾಗಿದೆ. 4 ಕಾನೂನುಗಳನ್ನು ಸೇರಿಸಿ ವೇತನ ಸಂಹಿತೆ, 9 ಕಾನೂನುಗಳನ್ನು ಸೇರಿಸಿ ಸಾಮಾಜಿಕ ಸುರಕ್ಷಾ ಸಂಹಿತೆ, 13 ಕಾನೂನುಗಳನ್ನು ಸೇರಿಸಿ ಉದ್ಯೊಗ, ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ, 3 ಕಾನೂನುಗಳನ್ನು ಸೇರಿಸಿ ಔದ್ಯೋಗಿಕ ಸಂಬಂಧ ಸಂಹಿತೆಗಳನ್ನು ಜಾರಿಗೊಳಿಸಿವೆ.

ಔದ್ಯೋಗಿಕ ಸಂಹಿತೆಯ ಪ್ರಕಾರ, 18 ಸಾವಿರಕ್ಕಿಂತ ಹೆಚ್ಚಿನ ವೇತನದಾರರು ಇನ್ನು ಮುಂದೆ ಮೇಲ್ವಿಚಾರಕರು; ಎಲ್ಲಾ ಖಾಯಂ ಕೆಲಸಗಳಿಗೂ ನಿಶ್ಚಿತ ಅವಧಿಯ ಕಾರ್ಮಿಕರ ನೇಮಕ; ತಾಂತ್ರಿಕ ಬೆಳವಣಿಗೆಯಿಂದ ಕೆಲಸಗಾರರ ಉತ್ಪಾದನಾ ಸಾಮರ್ಥ್ಯ ಹೆಚ್ಚಿದ್ದರೂ ಕೂಡಾ ಕಾರ್ಖಾನೆಗಳನ್ನು ಮುಚ್ಚಲು ಇದ್ದ 100ರ ಮಿತಿಯನ್ನು 300ಕ್ಕೇರಿಸಿದೆ. ಅಂದರೆ, 300ರೊಳಗಿನ ಸಂಖ್ಯೆಯಲ್ಲಿ ಕಾರ್ಮಿಕರಿರುವ ಕಾರ್ಖಾನೆಗಳನ್ನು ಮುಚ್ಚಲು ಸರ್ಕಾರದ ಅನುಮತಿ ಈಗ ಅನಗತ್ಯ; ಇನ್ನು ಮುಂದೆ ಸಂಘ ರಚಿಸಲು ಒಟ್ಟು ಸದಸ್ಯರ 10% ಸದಸ್ಯತ್ವ ಕಡ್ಡಾಯ, ಒಂದಕ್ಕಿಂತ ಹೆಚ್ಚು ಇರುವ ಸಂಘಟನೆಗಳಿರುವ ಕಾರ್ಖಾನೆಗಳಲ್ಲಿ 51 % ಸದಸ್ಯತ್ವ ಇರುವ ಸಂಘಟನೆಗೆ ಮಾನ್ಯತೆ ; ಇನ್ನು ಮುಂದೆ ಸಂಧಾನ ವಿಫಲವಾದರೆ ಇಂಡಸ್ಟ್ರೀಯಲ್ ಟ್ರಿಬ್ಯುನಲ್‌ಗೆ ವಹಿಸಲು ಸರ್ಕಾರಕ್ಕೆ ಯಾವುದೇ ಬಾಧ್ಯತೆ ಇಲ್ಲ; ಕಾರ್ಮಿಕ ನ್ಯಾಯಾಲಯಗಳನ್ನು ನಿಷಿದ್ದಗೊಳಿಸಲಾಗಿದೆ; ಯಾವುದೇ ವಿಚಾರ ಟ್ರಿಬ್ಯುನಲ್‌ನಲ್ಲಿ ಬಾಕಿಯಿದ್ದರೆ ಆ ಅವಧಿ ಮಾತ್ರವಲ್ಲ ಅದು ಮುಕ್ತಾಯಗೊಂಡ 60 ದಿನಗಳವರೆಗೂ ಮುಷ್ಕರ ನಡೆಸುವಂತಿಲ್ಲ; “ಅಕ್ರಮ” ಎಂದು ಕರೆಯುವ ಮುಷ್ಕರಗಳಲ್ಲಿ ಭಾಗವಹಿಸಿದವರಿಗೆ ಮತ್ತು ಅದಕ್ಕೆ ಪ್ರೇರಣೆ ನೀಡಿದವರಿಗೆ ಅತೀ ದೊಡ್ಡ ಮೊತ್ತದ ದಂಡ ಮತ್ತು ಜೈಲುವಾಸ ವಿಧಿಸಬಹುದು; ಕಾರ್ಮಿಕರು ಮುಷ್ಕರದಲ್ಲಿದ್ದರೆ ಯಾವ ಮುನ್ಸೂಚನೆ ಇಲ್ಲದೇ ಬೀಗಮುದ್ರೆ ಮಾಡಿ ಅಧಿಕಾರಿಗಳಿಗೆ ತಿಳಿಸಿದರೆ ಸಾಕು.

ಉದ್ಯೋಗ ಸುರಕ್ಷೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಸಂಹಿತೆಯ ಪ್ರಕಾರ ಕಾರ್ಮಿಕರ ಸಂಖ್ಯೆಯನ್ನು ವಿದ್ಯುತ್ ಶಕ್ತಿ ರಹಿತ ಉದ್ದಿಮೆಗಳಲ್ಲಿ 10 ರಿಂದ 20ಕ್ಕೆ, ವಿದ್ಯುತ್ ಸಹಿತವಾಗಿದ್ದಲ್ಲಿ 20 ರಿಂದ 40ಕ್ಕೆ ದ್ವಿಗುಣಗೊಳಿಸಿರುವುದರಿಂದ ಇವು ಈ ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಮಿಕರ ಕಾಯ್ದೆಯಡಿ ಬರುವುದಿಲ್ಲ. 20 ಜನ ಗುತ್ತಿಗೆ ಕಾರ್ಮಿಕರ ಸಂಖ್ಯೆಯನ್ನು 50ಕ್ಕೇರಿಸಿದೆ. 50ರೊಳಗೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರ ಕಾರ್ಮಿಕ ಇಲಾಖೆಯಲ್ಲಿ ಪರವಾನಿಗೆ ಪಡೆಯಬೇಕಿಲ್ಲ. ಮೂಲ ಕೆಲಸಗಳಿಗೂ ನೇಮಿಸಬಹುದು, ಸಮಾನ ವೇತನ ನೀಡಬೇಕಿಲ್ಲ. ಗುತ್ತಿಗೆ ಕಾರ್ಮಿಕ ದೂರುಗಳ ನಿವಾರಣೆಗೆ ಇದ್ದ ತ್ರಿಪಕ್ಷೀಯ ಕೇಂದ್ರ ಸಲಹಾ ಗುತ್ತಿಗೆ ಕೆಲಸಗಾರರ ಮಂಡಳಿಯನ್ನು ಈ ಸಂಹಿತೆ ರದ್ದುಗೊಳಿಸಿದೆ. ಓವರ್ ಟೈಮ್‌ನ ಮಿತಿಯನ್ನು ನಿರ್ದಿಷ್ಟಗೊಳಿಸಿಲ್ಲ, ಮತ್ತು ಕೆಲಸಗಾರರ ಒಪ್ಪಿಗೆ ಪಡೆಯಬೇಕಿಲ್ಲ. ಈ ಸಂಹಿತೆಯ ಯಾವುದೇ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯಗಳ ಬದಲಿಗೆ ಆಡಳಿತಾತ್ಮಕ ಅರ್ಜಿ(ಅಪೆಲೆಟ್) ಪ್ರಾಧಿಕಾರಕ್ಕೆ ಕೊಡಬೇಕು. ವ್ಯಾಜ್ಯಗಳ ಇತ್ಯರ್ಥಕ್ಕೆ ಯಾವುದೇ ನ್ಯಾಯಾಂಗ ಪರಿಹಾರ ನೀಡುವುದಿಲ್ಲ ಮಹಿಳೆಯರನ್ನು ಎಲ್ಲಾ ಸಂಸ್ಥೆಗಳಿಗೂ, ಎಲ್ಲಾ ರೀತಿಯ ಕೆಲಸಗಳಿಗೂ, ರಾತ್ರಿ ಪಾಳಿಗೂ ನೇಮಿಸಿಕೊಳ್ಳಲು ಅವಕಾಶ.

ಸಾಮಾಜಿಕ ಸುರಕ್ಷಾ ಸಂಹಿತೆಯ ಪ್ರಕಾರ ಮಾಲೀಕರು ಮತ್ತು ಕಾರ್ಮಿಕರು ಇಚ್ಚಿಸಿದರೆ ಭವಿಷ್ಯ ನಿಧಿ ಮತ್ತು ಇಎಸ್‌ಐ ಯಿಂದ ಹೊರಬರಬಹುದು. ಕೊಡುಗೆ ಪ್ರಮಾಣ ಕಡಿಮೆ, ಸ್ವರೂಪ ಬದಲಿಸುವ ಅಧಿಕಾರ ಆ ಸಂಸ್ಥೆಗಳಿಗೆ ನೀಡಿದೆ;

ಬೀಡಿ, ಮ್ಯಾಂಗನೀಸ್, ಕಬ್ಬಿಣ, ಕ್ರೋಮ್ ಅದಿರು, ಮೈಕಾ ಗಣಿ ಕೆಲಸಗಾರರ ಕ್ಷೇಮಾಭಿವೃದ್ದಿ ಸೆಸ್‌ಗಳನ್ನು ರದ್ದುಗೊಳಿಸಲಾಗಿದೆ. ಆದರೆ ಇವರಿಗೆ ಬೇರೆ ನಿರ್ದಿಷ್ಟ ಯೋಜನೆಗಳಲ್ಲಿ ಕಟ್ಟಡ ಕಾರ್ಮಿಕ ಸೌಲಭ್ಯಗಳ ಜಾರಿಯ ಬಗ್ಗೆ ನಿರ್ದಿಷ್ಟತೆ ಇಲ್ಲ;

ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸಂಬಂಧಿಸಿ ಸಾಮಾಜಿಕ ಸುರಕ್ಷತೆಯ ಮಾತಿದೆ, ಆದರೆ ಹಣಕಾಸು ನೀಡಿಕೆಯ ಬಗ್ಗೆ ಸ್ಪಷ್ಟ ಕ್ರಮ ನಿಗದಿ ಮಾಡಿಲ್ಲ.

 ವೇತನ ಸಂಹಿತೆಯಲ್ಲಿ ವೈಜ್ಞಾನಿಕ ಲೆಕ್ಕಾಚಾರ, ಐಎಲ್‌ಒ ಸಮಾವೇಶಗಳ ಮತ್ತು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಸೂತ್ರಗಳ ಆಧಾರದಲ್ಲಿ ಕನಿಷ್ಠ ವೇತನವನ್ನು ನಿಗದಿಗೊಳಿಸುವ ಬದಲಿಗೆ ಬಿಜೆಪಿ ಸರ್ಕಾರ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ತಳ ಮಟ್ಟದ ಕನಿಷ್ಠ ವೇತನ ನಿರ್ಧರಿಸಲು ಹೊರಟಿದೆ. ನೌಕರರು ಒಂದು ದಿನ ಮುಷ್ಕರ ಮಾಡಿದರೆ 8 ದಿನದ ಸಂಬಳ ಕಡಿತ, ಬೋನಸ್ ಮಾತುಕತೆಗೆ ಅಗತ್ಯವಿರುವ ಬ್ಯಾಲನ್ಸ್ ಶೀಟ್ ಕೊಡಬೇಕಾಗಿಲ್ಲ. ಕಾರ್ಮಿಕ ಅಧಿಕಾರಿಗಳ ಕಾರ್ಯ ವ್ಯಾಪ್ತಿ ಮೊಟಕುಗೊಳಿಸಿ ಇನ್ಸ್ಪೆಕ್ಟರ್‌ಗಳನ್ನು ಇನ್ಸ್ಪೆಕ್ಟರ್ ಕಮ್ ಫೆಸಿಲಿಟೇಟರ್‌ಗಳೆಂದು ಗುರ್ತಿಸಲಾಗಿದೆ. ಇವರು ಸರ್ಕಾರದ ಪರ‍್ವಾನುಮತಿಯಿಲ್ಲದೇ ತಪಾಸಣೆ ಮಾಡುವಂತಿಲ್ಲ.

ಒಟ್ಟಿನಲ್ಲಿ, ಈ ಸಂಹಿತೆಗಳು ಕೆಲಸಗಾರರನ್ನು ತೀವ್ರವಾಗಿ ಶೋಷಿಸಲು ಮಾಲೀಕರಿಗೆ ಅತೀ ಹೆಚ್ಚಿನ ಸಾಮರ್ಥ್ಯವನ್ನು ಕೊಡುತ್ತವೆ. ಆಳಗೊಂಡಿರುವ ಬಂಡವಾಳಶಾಹಿ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಆಳುವ ವರ್ಗಕ್ಕೆ ಅನಿರ್ಬಂಧಿತ ಅಧಿಕಾರ ನೀಡಲು ಅದಕ್ಕೆ ನಿರಂಕುಶ ಅಧಿಕಾರ ನೀಡಲು ನವ ಉದಾರೀಕರಣ ನೀತಿಗಳಿಗೆ ಅನುಗುಣವಾಗಿ ಈ ಸಂಹಿತೆಗಳನ್ನು ವಿನ್ಯಾಸಗೊಳಿಸಲಾಗಿದೆ.

* ರೈತ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಬೇಕು

ಎಲ್ಲಾ ಸಂಸದೀಯ ಮತ್ತು ಸಂವಿಧಾನಿಕ ಕಾರ್ಯ ವಿಧಾನಗಳನ್ನು ಉಲ್ಲಂಘನೆ ಮಾಡಿ 70% ಗ್ರಾಮೀಣ ಜನತೆ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳ ಪರವಾಗಿ ಮಾಡಲು ಎಲ್ಲಾ ಸುಧಾರಣ ಕೃಷಿ ಗುತ್ತಿಗೆ, ಬೀಜ, ಅರಣ್ಯ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (RCEP) ಸರಕಾರ ಸಹಿ ಹಾಕಿದೆ.

ಹಾಗೆಯೇ ರಾಜ್ಯದಲ್ಲಿಯೂ ಕೂಡ APMC ಮತ್ತು ಭೂಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. 2020 ರ ಮಳೆಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಕಾನೂನು ಮಾಡಲು ಆಗದೇ ಈಗ ಪುನ: ಸುಗ್ರೀವಾಜ್ಞೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಈಗಿರುವ ಕೃಷಿ ಬಿಕ್ಕಟ್ಟಿನಿಂದ ರೈತಾಪಿ ಜನತೆಯನ್ನು ಹೊರ ತರಲು ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು, ಬೆಳೆದ ಫಸಲಿಗೆ ಬೆಂಬಲ ಬೆಲೆ ಸಿಗಬೇಕು. ಕೃಷಿಗೆ ಬೇಕಾಗುವ ಮೂಲ ಸೌಕರ್ಯಗಳನ್ನೊದಗಿಸಿ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣೆ, ಸಾರಿಗೆ ಇತ್ಯಾದಿಗಳ ಸುಧಾರಣೆಯಾಗಬೇಕು. ಕೃಷಿಯಾಧಾರಿತ ಕೈಗಾರಿಕೆಗಳ ಸ್ಥಾಪನೆ ಮಾಡಿ ಕೃಷಿಯನ್ನು ಲಾಭದಾಯಕ ಮತ್ತು ಉತ್ತೇಜನಕಾರಿ ಮಾಡುವ ಬದಲಿಗೆ ಇಡೀ ಕೃಷಿಯನ್ನು ಸುಧಾರಣೆಯ ಹೆಸರಿನಲ್ಲಿ ಅಗತ್ಯ ಸರಕುಗಳ ಕಾಯ್ದೆಯನ್ನು ನಿಗ್ರಹಿಸಿದ್ದಾರೆ. ಹೀಗಾಗಿ ಕಾರ್ಪೋರೇಟ್ ಮತ್ತು ಗುತ್ತಿಗೆ ಕೃಷಿಯನ್ನು, ಆಹಾರ ಸಂಸ್ಕರಣೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಮತ್ತು ದೇಶೀಯ ಗುತ್ತೇದಾರಿಗಳನ್ನು ಉತ್ತೇಜಿಸಲಾಗುತ್ತದೆ. ಹಾಗೆಯೇ 2020 ವಿದ್ಯುತ್ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸದೇ 12 ಮುಖ್ಯ ಮಂತ್ರಿಗಳ ವಿರೋಧವಿದ್ದರೂ ವಿದ್ಯುತ್ ವಿತರಣಾ ಜಾಲವನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದರಿಂದ ಸಬ್ಸಿಡಿ ದರದ ವಿದ್ಯುತ್ ಪೂರೈಕೆಗೆ ಹೊಡೆತ ಬೀಳುವುದಲ್ಲದೆ, ಇದರ ನಿಯಂತ್ರಣದಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನುಅಲ್ಲಗೆಳೆದು, ಈಗಿರುವ ನೌಕರರನ್ನು ಪ್ರಾಂಚೈಸಿ ಮಾಲೀಕರ ಒಡೆತನಕ್ಕೆ ಒಳಪಡಿಸಲಾಗುತ್ತಿದೆ.

* ಕಡಿಮೆ ಆದಾಯದ ಕುಟುಂಬಗಳಿಗೆ 7500 ರೂ. ನಗದು ವರ್ಗಾವಣೆ ಮಾಡಬೇಕು

ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೋನಾಗಿಂತ ಮೊದಲೇ ಇದ್ದ ಜಿಡಿಪಿ ಬೆಳವಣಿಗೆ ದರ 2016-17ರಲ್ಲಿ 8.3% ಇತ್ತು ಸತತವಾಗಿ ಇಳಿಯುತ್ತ ಇದು 2017-18ರಲ್ಲಿ 7 ಶೇ.ಕ್ಕೆ, 2018-19ರಲ್ಲಿ 6.1ಶೇ.ಕ್ಕೆ, 2019-20ರಲ್ಲಿ 4.ಶೇ.ಕ್ಕೆ ಇಳಿದಿದೆ; 2020-21ರಲ್ಲಿ (-)9.5ಶೇ. ಕ್ಕೆ ಇಳಿಯಲಿದೆ. ಇದು ಉದ್ಯೋಗಗಳ ಮೇಲೆ ಪರಿಣಾಮ ಬೀರಿ 15 ಕೋಟಿ ಜನರನ್ನು ತಮ್ಮ ಜೀವನಾಧಾರಗಳನ್ನು ಕಳೆದು ಕೊಂಡು ಅಕ್ಷರಶ: ಬೀದಿ ಪಾಲಾಗಿದ್ದಾರೆ.

ಭಾರತದಲ್ಲಿ ಆರ್ಥಿಕ ಅಸಮಾನತೆಗಳು ಹೆಚ್ಚಿವೆ. ಕೊರೋನಾ ಸಮಯದಲ್ಲಿ ಅಸಂಘಟಿತ ಕ್ಷೇತ್ರದ ಕಾರ್ಮಿಕರು, ಸೇವಾ ವಲಯಗಳಲ್ಲಿ ದುಡಿಯುವ ಸ್ಕೀಂ ನೌಕರರು, ಉತ್ಪಾದನಾ ವಲಯದ ಕಾರ್ಮಿಕರು, ಸ್ವ ಉದ್ಯೋಗಸ್ಥರು, ಸಾರಿಗೆ ವಿಭಾಗಗಳಲ್ಲಿ ದುಡಿಯುವವರು, ಖಾಯಂ ಅಲ್ಲದ ವಿಭಾಗಗಳಲ್ಲಿ ದುಡಿಯುವವರು ಕೃಷಿ ಕೂಲಿಕಾರರು, ಬಡ ರೈತರು, ಜೀವನೋಪಾಯಗಳನ್ನು ಕಳೆದು ಕೊಂಡಿರುವಾಗ, 1000 ಕೋಟಿಗಿಂತ ಹೆಚ್ಚು ಸಂಪತ್ತು ಇರುವ 828 ಅತಿ ಶ್ರೀಮಂತ ವಿಭಾಗದ ಆಸ್ತಿ ಈಗ 31 ಲಕ್ಷ 72 ಸಾವಿರದ 500 ಕೋಟಿಗೆ ಹೆಚ್ಚಾಗಿದೆ. (35%ದಷ್ಟು). ಆರ್ಥಿಕ ಹಿಂಜರಿತದಿಂದ ಪಾರಾಗಬೇಕಾದರೆ ಜನಸಾಮಾನ್ಯರ ಕೊಂಡು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಿಕ್ಕಾಗಿ ಕನಿಷ್ಠ ವೇತನ, ಹಣಕಾಸು ಆಯೋಗಗಳ ಶಿಫಾರಸ್ಸು ಜಾರಿ ಮಾಡುವುದರೊಂದಿಗೆ ಆದಾಯ ತೆರಿಗೆಯ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ಮಾಸಿಕ 7500 ರೂ.ಗಳನ್ನು ಪಾವತಿಸಬೇಕು.

*ಎಲ್ಲ ಅಗತ್ಯವಿರುವವರಿಗೆ ತಿಂಗಳಿಗೆ 10 ಕೆ.ಜಿ. ಉಚಿತ ಪಡಿತರ ನೀಡಬೇಕು.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 107 ದೇಶಗಳ ಪೈಕಿ ಭಾರತ 94ನೇ ಸ್ಥಾನದಲ್ಲಿದೆ. ಇದು ಪಕ್ಕದ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪಾಕಿಸ್ಥಾನ ದಂತಹ ಸಣ್ಣ ಪುಟ್ಟ ದೇಶಗಳಿಗಿಂತಲೂ ಕೆಳಗಿದೆ. ಲಕ್ಷ ಗಟ್ಟಲೆ ಜನರು ಹಸಿವಿನಿಂದ ಸಾಯುತ್ತಿರುವುದಷ್ಟೇ ಅಲ್ಲದೇ ಶ್ರಮಶಕ್ತಿಗೆ ಅಪಾಯವಾಗುತ್ತಿದೆ. ಆದ್ದರಿಂದ ಕೇಂದ್ರೀಯ ಗೋದಾಮುಗಳಲ್ಲಿ ಕೊಳೆಯುತ್ತಿರುವ 77 ಮಿಲಿಯನ್ ಟನ್ ಆಹಾರವನ್ನು ಅಗತ್ಯವಿರುವವರಿಗೆ ಯಾವುದೇ ಉಚಿತವಾಗಿ ಹಂಚಿಕೆ ಮಾಡಿ ಜನರನ್ನು ಹಸಿವಿನಿಂದ ಮುಕ್ತಗೊಳಿಸಬೇಕು.

ನರೇಗಾ ಕೆಲಸವನ್ನು 200 ದಿನಗಳಿಗೆ ಹೆಚ್ಚಿಸಿ, ನಗರ ಪ್ರದೇಶಗಳಿಗೆ ವಿಸ್ತರಿಸಿ, ಕೂಲಿಯನ್ನು ಹೆಚ್ಚಿಸಬೇಕು ಕೊರೋನಾ ಸಂದರ್ಭದಲ್ಲಿ ಸುಮಾರು 14 ಕೋಟಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ರಹಿತರಾಗಿದ್ದಾರೆ. ಇಂತಹ ಜನರನ್ನು ಸಂರಕ್ಷಿಸಲು ಈಗಿರುವ 36 ಸಾವಿರ ಕೋಟಿ ಬಜೆಟನ್ನು 1 ಲಕ್ಷ ಕೋಟಿ ರೂ.ಗೆ ಹೆಚ್ಚಿಸಬೇಕು ಮತ್ತು ಮೀಸಲಿರಿಸಬೇಕು.

ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಿ.

ಸ್ವಾತಂತ್ರ್ಯ ನಂತರದಲ್ಲಿ ಭಾರತದ ಅಭಿವೃದ್ದಿಗೆ ಅತ್ಯಗತ್ಯವಾದ ಬಂಡವಾಳವನ್ನು ಅಂದಿನ ಬೃಹತ್ ಬಂಡವಾಳಗಾರರು ಹಾಕುವ ಬದಲಿಗೆ ಅಂದಿನ ಸರ್ಕಾರವೇ ಬಂಡವಾಳ ಹೂಡಿ ಭಾರತವನ್ನು ಮುನ್ನಡೆಸಿತು. ಆದರೆ ಇಂದು ಅತ್ಯಂತ ಲಾಭದಾಯಕವಾಗಿ ನಡೆಯುವ ಆ ಸಂಸ್ಥೆಗಳನ್ನು ಅದೇ ಬಂಡವಾಳದಾರರಿಗೆ ಧಾರೆಯೆರೆಯುತ್ತಿದೆ.

85 ಲಕ್ಷಕೋಟಿ ಠೇವಣಿ ದಾರರಿರುವ ರಾಷ್ಟ್ರೀಕೃತ ಬ್ಯಾಂಕುಗಳನ್ನು 10 ಲಕ್ಷ ಕೋಟಿ ವಸೂಲಾಗದ ಸಾಲದ ಪ್ರಮಾಣವನ್ನು ಮನ್ನಾ ಮಾಡುವ ತಂತ್ರಗಾರಿಕೆಯಿಂದ 32 ರಾಷ್ಟ್ರೀಕೃತ ಬ್ಯಾಂಕುಗಳನ್ನು ಸೇರಿಸಿ 12 ಬ್ಯಾಂಕುಗಳನ್ನಾಗಿ ಪರಿವರ್ತಿಸಿದೆ. 40 ಕೋಟಿ ಪಾಲಿಸಿದಾರರನ್ನೊಂದಿರುವ 32 ಲಕ್ಷ ಕೋಟಿ ಆಸ್ತಿಯನ್ನೊಂದಿರುವ ಎಲ್‌ಐಸಿಯನ್ನು ಇಂದು ಖಾಸಗೀಕರಿಸಲು ಹೊರಟಿದೆ.

ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ದೇಶದ ಪ್ರತಿಷ್ಟಿತ 109 ರೈಲ್ವೆ ನಿಲ್ದಾಣಗಳನ್ನು ಖಾಸಗೀಕರಿಸಿ, 157 ಖಾಸಗಿ ರೈಲುಗಳನ್ನೋಡಿಸುವ ನಿರ್ಧಾರದಿಂದ ರೈಲ್ವೆ ಪ್ರಯಾಣಿಕರ ಟಿಕೆಟ್‌ಗೆ ಸಿಗುತ್ತಿದ್ದ 43 % ಸಬ್ಸಿಡಿ ರದ್ದಾಗಿ, 70 ಸಾವಿರ ಜನರ ಉದ್ಯೋಗ ನಷ್ಟವಾಗುವ ಅಪಾಯವಿದೆ. ಹೀಗೆ ವಿಮಾನ ನಿಲ್ದಾಣಗಳು, ಬಂಧರು, ಹಡಗು ಕಟ್ಟೆಗಳು ಮುಂತಾದ ಲಾಭಗಳಿಸುವ ಸರ್ಕಾರಿ ಸಂಸ್ಥೆಗಳು, ಕಲ್ಲಿದ್ದಲು ಗಣಿಗಳು, ಸಮೃದ್ದ ಪಿಎಸ್‌ಯು ಗಳಾದ ಬಿಪಿಸಿಎಲ್, ರಕ್ಷಣಾ ವಲಯದ 41 ಆರ್ಡಿನೆನ್ಸ್ ಫ್ಯಾಕ್ಟರಿಗಳು, ಬಿಎಸ್‌ಎನ್‌ಎಲ್, ಏರ್ ಇಂಡಿಯಾ, ಸಾರಿಗೆ ಸೇರಿದಂತೆ 55 ಪಿಎಸ್‌ಯು ಗಳು ಹೀಗೆ ಈ ಸಂಸ್ಥೆಗಳನ್ನು ಹರಾಜು ಮತ್ತು 100 % ವಿದೇಶಿ ಬಂಡವಾಳದ ಮೂಲಕ ಖಾಸಗೀಕರಣದ ಉನ್ಮಾದಕ್ಕೆ ಒಡ್ಡಲಾಗುತ್ತಿದೆ.

* ಸರ್ಕಾರಿ ಮತ್ತು ಪಿಎಸ್ಯುಗಳ ನೌಕರರ ಮೇಲಿನ ಅಕಾಲಿಕ ನಿವೃತ್ತಿಯ ಮೇಲಿನ ಕ್ರೂರ ಸುತ್ತೋಲೆ ಹಿಂತೆಗೆದುಕೊಳ್ಳಬೇಕು.

ಈಗಾಗಲೇ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ನೌಕರರ ಮೇಲಿನ ಒತ್ತಡವನ್ನು ಹೆಚ್ಚು ಮಾಡಲು ಅಥವಾ ಅವರಿಗೆ ಕೆಲಸ ಬಿಡಿಸಲು ಕೇಂದ್ರ ಸರ್ಕಾರ ಒಂದು ಸುತ್ತೋಲೆ ತಂದಿದೆ. ಅದರಲ್ಲಿ 50 ವರ್ಷ ವಯಸ್ಸಾದ ಅಥವಾ 30 ವರ್ಷ ಸೇವೆ ಸಲ್ಲಿಸಿದ ನೌಕರರ ಕಾರ್ಯದಕ್ಷತೆ ಕಡಿಮೆಯಾಗಿರುತ್ತದೆ ಆದ್ದರಿಂದ ಅಂತಹವರನ್ನು ಯಾವುದೇ ಪರಿಹಾರ ಕೊಡದೆ ಕೆಲಸದಿಂದ ಹೊರದಬ್ಬ ಬಹುದು. ಮತ್ತು ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಕುಟುಂಬದವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ 2020 ರಿಂದ 21 ಮಾರ್ಚ್ ರವರೆಗೆ ಕೊಡಬೇಕಾದ DA ಕೊಡದಿರುವುದರಿಂದ ಒಬ್ಬೊಬ್ಬ ನೌಕರ ಕನಿಷ್ಠ 70 ಸಾವಿರದಿಂದ 2 1/2 ಲಕ್ಷದ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಪ್ರಶ್ನಿಸುವ ಹಾಗಿಲ್ಲ.

ಎಲ್ಲರಿಗೂ ಪಿಂಚಣಿ ಒದಗಿಸಬೇಕು, ಎನ್‌ಪಿಎಸ್ ರದ್ದು ಮಾಡಬೇಕು, ಹಿಂದಿನ ಪಿಂಚಣಿ ಯೋಜನೆಯ ಪುನರ್ಸ್ಥಾಪನೆ ಮತ್ತು ಇಪಿಎಸ್-95ನ್ನು ಸುಧಾರಿಸಬೇಕು.

ಸಾರ್ವಜನಿಕ ಸೇವೆಯನ್ನು ಮಾಡುವ ಪ್ರತಿಯೊಬ್ಬ ಉದ್ಯೋಗಿ ತನ್ನ ವಿಶ್ರಾಂತ ಜೀವನವನ್ನು ಸಭ್ಯತೆಯಿಂದ ನಡೆಸುವ ಗ್ಯಾರಂಟಿಗೆ ಪಿಂಚಣಿ ವ್ಯವಸ್ಥೆಯನ್ನು ಒದಗಿಸಿದ್ದು, ಆದರೆ ಸರ್ಕಾರಗಳು ತಮ್ಮ ಪಾಲಿನ ಖರ್ಚನ್ನು ಕಡಿಮೆ ಮಾಡಿ ವಂತಿಗೆಯಾಧಾರಿತ ಮತ್ತು ಷೇರು ಮಾರುಕಟ್ಟೆಯಾಧಾರಿತ NPSನ್ನು ಪ್ರಾರಂಭಿಸಲಾಗಿದೆ. ಮಾತ್ರವಲ್ಲದೆ 20 ಸಾಮಾಜಿಕ ಸುರಕ್ಷತಾ ಕಾಯ್ದೆ ತಂದಿದ್ದರೂ ಅದಕ್ಕೆ ಬೇಕಾದ ಹಣಕಾಸನ್ನು ಒದಗಿಸಿಲ್ಲ. ಈಗಾಗಲೇ ಒಟ್ಟು ಸಂಖ್ಯೆಯ 30% ಹಿರಿವಯಸ್ಕರಿದ್ದಾರೆ, ಮುಂದಿನ 4-5 ವರ್ಷಗಳಲ್ಲಿ ಇದು 40%ಗೆ ಹೆಚ್ಚಳವಾದರೆ ದೇಶದ ಪರಿಸ್ಥಿತಿ ಅತ್ಯಂತ ಶೋಚನೀಯವಾಗುತ್ತದೆ. ಆದ್ದರಿಂದ ಹಳೆ ಪಿಂಚಣಿ ವ್ಯವಸ್ಥೆ ಎಲ್ಲರಿಗೂ 10 ಸಾವಿರ ಪಿಂಚಣಿಯನ್ನು ಗ್ಯಾರಂಟಿ ಮಾಡಬೇಕೆಂದೂ ಒತ್ತಾಯಿಸಲಾಗುತ್ತಿದೆ.

ಬಿಜೆಪಿ ಕೇಂದ್ರ ಸರಕಾರ ದೇಶದಲ್ಲಿ ಈಗ ನಿರ್ಮಿಸಿರುವ ಪರಿಸ್ಥಿತಿಯನ್ನು ಒಪ್ಪಲು ಕಾರ್ಮಿಕ ವರ್ಗಕ್ಕೆ ಸಾಧ್ಯವಿಲ್ಲ. ಇಂತಹ ನೀತಿಗಳಿಗೆ ಅಸಹಕಾರದ ರೂಪದಲ್ಲಿ ಹೆಚ್ಚಿನ ಸ್ವರೂಪದ ಪ್ರತಿರೋಧದ ಹೋರಾಟಕ್ಕೆ ಅದು ಅಣಿಯಾಗುತ್ತಿದೆ.. ನವೆಂಬರ್ 26ರ ಅಖಿಲ ಭಾರತ ಮುಷ್ಕರ ಈ ದಿಕ್ಕಿನಲ್ಲಿ ಒಂದು ಮಹತ್ವದ ಕಾರ್ಯಾಚರಣೆ. ಇದು ಈಗಾಗಲೇ ಅಕ್ಟೋಬರ್ 2ರ ರಾಷ್ಟೀಯ ಸಮಾವೇಶದ ಘೋಷಣೆಯಲ್ಲಿ ಹೇಳಿರುವಂತೆ ಇನ್ನಷ್ಟು ತೀವ್ರ, ಪಟ್ಟುಬಿಡದ ಮತ್ತು ದೀರ್ಘ ಹೋರಾಟಗಳಿಗೆ ಸಿದ್ಧತೆಯಾಗಿದೆ.

 

Donate Janashakthi Media

Leave a Reply

Your email address will not be published. Required fields are marked *