ಕಲಬುರಗಿ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಪತ್ನಿ ಜಯಶ್ರೀ ಮತ್ತಿಮೂಡ ಅವರ ಹೆಸರಿನಲ್ಲಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಐಪಿಎಲ್ ಪಂದ್ಯಗಳು ಈಗಾಗಲೆ ಮುಗಿದಿವೆ. ಆದರೆ ಪಂದ್ಯದ ಸಮಯದಲ್ಲಿ ಕಟ್ಟಿದ್ದ ಬೆಟ್ಟಿಂಗ್ ಹಣ ನೀಡುವ ವೇಳೆ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಬೆಟ್ಟಿಂಗ್ ಪ್ರಕರಣದಲ್ಲಿ ಚೇತನ್ ಬನ್ಸಾಲ್ ಹಾಗೂ ವಿಘ್ನೇಶ್ ಎಂಬುವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಬಳಿಕ ಅವರು ನೀಡಿದ ಸುಳುವಿನ ಮೇರೆಗೆ ಕಲಬುರಗಿಯ ಎಂಬಿನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಬೆಟ್ಟಿಂಗ್ ನಡೆಯುತ್ತಿದ್ದ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಕಲಬುರಗಿಯ ಅತುಲ್ ಹಾಗೂ ಪ್ರದೀಪ್ ಕಾರಂಜೆ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಗಳ ಬಳಿ ಇದ್ದ 38.44 ಲಕ್ಷ ರೂ. ನಗದು, ನಾಲ್ಕು ಲ್ಯಾಪ್ಟಾಪ್ಗಳು, ಟಿವಿ ಎರಡು ಕಾರು ಹಾಗೂ ಒಂದು ಸ್ಕೂಟರ್ ಸಹ ಮಹಾರಾಷ್ಟ್ರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಜಯಶ್ರೀ ಮತ್ತಿಮೂಡ ಹೆಸರಿನಲ್ಲಿರುವ ಇನ್ನೋವಾ ಕ್ರಿಸ್ಟಾ ಕಾರನ್ನು ಕೆಎ 51, ಎಂಪಿ 9955 ಮಹಾರಾಷ್ಟ್ರದ ಸೋಲಾಪುರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬೆಟ್ಟಿಂಗ್ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ಆರಂಭಗೊಂಡಿದೆ. ಖಚಿತ ಮಾಹಿತಿ ಮೇರೆಗೆ ನಗರಕ್ಕೆ ಬಂದಿದ್ದ ಮಹಾರಾಷ್ಟ್ರ ಪೊಲೀಸರು, ಕಲಬುರಗಿ ಪೊಲೀಸರ ಗಮನಕ್ಕೂ ಬಾರದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯನ್ನು ಸಮಗ್ರವಾಗಿ ತನಿಖೆ ಮಾಡಬೇಕು. ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ಪ್ರಾಂತರೈತ ಸಂಘದ ಕಲಬುರ್ಗಿ ಜಿಲ್ಲಾಧ್ಯಕ್ಷ ಶರಣಬಸ್ಸಪ್ಪ ಮಮಶೆಟ್ಟಿ , ಕಾರ್ಯದರ್ಶಿ ಅಶೋಕ ಮ್ಯಾಗೇರಿ ಆಗ್ರಹಿಸಿದ್ದಾರೆ.