- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಆಕ್ಷೇಪಣೆ ಸಲ್ಲಿಕೆ
- ನಿಯಮಗಳು ನೌಕರರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಪೂರಕವಾಗಿರಲಿ
ಬೆಂಗಳೂರು: ಕರ್ನಾಟಕ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು- 2020ರ ಕರಡಿನಲ್ಲಿ ಪ್ರಸ್ತಾಪಿಸಲಾಗಿರುವ ಕೆಲವು ಅಂಶಗಳು ನೌಕರರಲ್ಲಿ ಆತಂಕ ಮತ್ತು ತಲ್ಲಣ ಉಂಟು ಮಾಡಿದ್ದು, ಇವು ನೌಕರರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದು, ಅವುಗಳನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ನೌಕರರ ಒಕ್ಕೂಟದ ಪರವಾಗಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಜೈಕುಮಾರ್, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, 1966 ನ್ನು ಆಧರಿಸಿ ಇದುವರೆವಿಗೂ ಹಲವಾರು ಸುತ್ತೋಲೆಗಳು ಮತ್ತು ಆದೇಶಗಳು ನೌಕರರ ನಡತೆಗಳನ್ನು ನಿಯಂತ್ರಿಸುತ್ತಿದ್ದವು. ಈಗ ಪ್ರಕಟಿಸಿರುವ 2020ರ ಕರಡು ನಿಯಮಾವಳಿಗಳಲ್ಲಿ ಹೊಸದೇನೂ ಇಲ್ಲ, ಬದಲಿಗೆ 1966ರ ನಿಯಮಗಳನ್ನೇ ಪುನರ್-ಸ್ಥಾಪಿಸಲಾಗುತ್ತಿದೆಯೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಬ್ರಿಟಿಷರ ಕಾಲದ ವಸಾಹತುಶಾಹಿ ಮನೋಧೋರಣೆಯಿಂದ ಕೂಡಿದ 1966ರ ನಡತೆ ನಿಯಮಗಳೂ ನೌಕರರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವುದಲ್ಲದೇ ಅವರ ಕುಟುಂಬ ಸದಸ್ಯರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳನ್ನು ಒಳಗೊಂಡಿದ್ದವು. ಆದರೆ, ಸ್ವಾತಂತ್ರ್ಯ ಪಡೆದ ಎಪ್ಪತ್ತು ವರ್ಷಗಳ ನಂತರದಲ್ಲಿಯೂ ಸಾಂವಿಧಾನಿಕ ಹಕ್ಕುಗಳಿಗೆ ಬಹು ದೊಡ್ಡ ಪೆಟ್ಟು ನೀಡುವ ನಿಯಮಗಳನ್ನೇ ಜಾರಿಗೊಳಿಸ ಹೊರಟಿರುವುದು ಆಘಾತಕಾರಿಯಾಗಿದೆ. ಜೊತೆಗೆ ಪರಿಷ್ಕರಣೆ ಮಾಡುವಾಗಲೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಗರಿಕ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುವ ಅಂಶಗಳನ್ನೇ ಉಳಿಸಿಕೊಳ್ಳುವುದರ ಜೊತೆಗೆ ಕೆಲವು ಹೊಸ ಅಂಶಗಳನ್ನು ಸೇರಿಸಲಾಗಿದೆ ಎಂದು ಆಕ್ಷೇಪಿಸಿರುವ ಒಕ್ಕೂಟ ಆಕ್ಷೇಪಾರ್ಹ ಅಂಶಗಳನ್ನು ಕೈಬಿಡುವಂತೆ ಒತ್ತಾಯಿಸಿದೆ.
ಕರಡಿನ 5ನೇ ಅಂಶದಲ್ಲಿ ನೌಕರ ಅಥವಾ ನೌಕರಳ ಕುಟುಂಬ ಸದಸ್ಯರು ರಾಜಕೀಯ, ನ್ಯಾಯಯುತ ಚಳವಳಿ ಹೋರಾಟದಲ್ಲಿ ತೊಡಗುವುದನ್ನು ನಿಷೇಧಿಸಿದ್ದು, ತೊಡಗಿದರೆ ನೌಕರರನ್ನೇ ಬಾಧ್ಯಸ್ಥರನ್ನಾಗಿ ಮಾಡುವುದು ದಿಗ್ಭ್ರಮೆ ಮೂಡಿಸುವಂತಹುದು. ಇದು ನೌಕರರ ಕುಟುಂಬ ಸದಸ್ಯರು ತಮ್ಮಿಚ್ಛೆ ಮತ್ತು ಅಭಿರುಚಿಗೆ ಅನುಗುಣವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಸರ್ಕಾರ ಈ ಮೂಲಕ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಆದುದರಿಂದ ರಾಜಕೀಯ ಪಕ್ಷ ಅಥವಾ ಅದರಲ್ಲಿ ಭಾಗವಹಿಸುವ ಸಂಘ ಸಂಸ್ಥೆಗಳಲ್ಲಿ ಅಥವಾ ಯಾವುದೇ ಪ್ರಜಾಸತ್ತಾತ್ಮಕ ಚಳುವಳಿಯಲ್ಲಿ ಭಾಗವಹಿಸಲು ನೌಕರರ ಕುಟುಂಬ ಸದಸ್ಯರಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು.
ಕರಡಿನ 6ನೇ ಅಂಶದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಸಂಘಗಳಲ್ಲಿ ಚುನಾಯಿತ ಹುದ್ದೆ ಹೊಂದಲು ಸರ್ಕಾರದ ಪೂರ್ವ-ಅನುಮೋದನೆ ಅವಶ್ಯವೆಂದು ಹೇಳಿರುವುದು ನೌಕರ ಕ್ರೀಡಾಪಟುಗಳ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ಚಿವುಟಿ ಹಾಕಿದಂತಾಗುತ್ತದೆ. ಹಾಗಾಗಿ ನಿರ್ಬಂಧ ತೆಗೆದುಹಾಕಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಕರಡಿನ 9ನೇ ಅಂಶದಲ್ಲಿ ಬಹಿರಂಗ ಸಭೆ ಮತ್ತು ಮುಷ್ಕರದಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿರುವುದು ನೌಕರರು ತಮ್ಮ ಕುಂದು ಕೊರತೆ, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಶಾಂತಿಯುತ ಪ್ರತಿಭಟನೆ ಅಥವಾ ಮುಷ್ಕರದಲ್ಲಿ ಭಾಗವಹಿಸುವುದು ಸಂವಿಧಾನದ ವಿಧಿ 19ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ನಿಯಮ (9) ರ ಅಂಶಗಳನ್ನು ತೆಗೆದು ಹಾಕಬೇಕು ಎಂದು ಒಕ್ಕೂಟ ಆಕ್ಷೇಪಣೆ ಸಲ್ಲಿಸಿದೆ.
ಕರಡಿನ 10ನೇ ಅಂಶದಲ್ಲಿ ನೌಕರರ ಸಾಹಿತ್ಯಿಕ ಚಟುವಟಿಕೆ ಮೇಲೆ ನಿರ್ಬಂಧ ವಿಧಿಸಿದೆ. ಇದೇ ಕರಡಿನ ಮತ್ತೊಂದೆಡೆ ನೌಕರರು ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ದನಾಗಿರಬೇಕು ಎಂದು ಹೇಳಲಾಗಿದೆ. ಅಲ್ಲದೆ ಈ ನಿರ್ಬಂಧ ಸಂವಿಧಾನದ ವಿಧಿ 53 ಎ (ಹೆಚ್) ಪಾಲಿಸಿವುದನ್ನು ನಿರ್ಬಂಧಿಸುವುದು ಸಂವಿಧಾನ-ವಿರೋಧಿಯಾಗುತ್ತದೆ ಎಂದು ಒಕ್ಕೂಟ ಸರ್ಕಾರದ ಗಮನಕ್ಕೆ ತಂದಿದೆ.
ಕರಡಿನ 11ನೇ ನಿಯಮದಲ್ಲಿ ಸರ್ಕಾರದ ಮಾನ್ಯತೆ ಹೊಂದಿರುವ ಸಂಘಗಳು ಮಾತ್ರವೇ ಸರ್ಕಾರಗಳ ಕಾರ್ಯನೀತಿಯನ್ನು ಟೀಕಿಸುವುದಕ್ಕೆ ಈ ನಿಯಮದಡಿ ವಿನಾಯಿತಿ ನೀಡಲಾಗಿದೆ. ಮತ್ತು 36ನೇ ನಿಯಮದಲ್ಲಿ ಮಾನ್ಯತೆ ಪಡೆಯದೇ ಇರುವಂತಹ ಸಂಸ್ಥೆಗಳೊಂದಿಗೆ ಪತ್ರ ವ್ಯವಹಾರ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಒಂದೇ ನೌಕರ ಸಂಘಟನೆಗೆ ಮಾನ್ಯತೆ ನೀಡಲಾಗಿದ್ದು, ಇದು ನೌಕರರ ನೈಜ ಆಶೋತ್ತರಗಳಿಗೆ ಪೂರಕವಾಗಿರುವುದಿಲ್ಲ. ಆದುದರಿಂದ, ನೌಕರರ ಸದಸ್ಯತ್ವ, ಅವರು ಆಯ್ಕೆ ಮಾಡಿಕೊಳ್ಳುವಂಥಹ ನೌಕರರ ಸಂಘಟನೆ ಇತ್ಯಾದಿಗಳನ್ನು ಪರಿಶೀಲಿಸುವ ಪದ್ದತಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವವರೆಗೂ ಮಾನ್ಯತೆಯ ಪ್ರಶ್ನೆಯನ್ನು ಬದಿಗಿರಿಸಿ, ನೌಕರರ ಹಿತಾಸಕ್ತಿಗಳಿಗಾಗಿ ದುಡಿಯುತ್ತಿರುವ ನೌಕರ ಸಂಘಟನೆಗಳಿಗೆ ಪರಿಗಣನೆ ನೀಡಬೇಕು. ಆದುದರಿಂದ ಯಾವುದೇ ನೌಕರ ಸಂಘಗಳು ಅಥವಾ ಪದಾಧಿಕಾರಿಗಳಿಗೆ ಇಂತಹ ನಿರ್ಬಂಧ ವಿಧಿಸುವ ನಿಯಮ 11 (1) & ಅದರ ಉಪಕಂಡಿಕೆಯನ್ನು ಕೈಬಿಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಕರಡಿನ 12ನೇ ಅಂಶದಲ್ಲಿ ಸಮಿತಿ ಅಥವಾ ಪ್ರಾಧಿಕಾರಗಳ ವಿಚಾರಣೆ ವೇಳೆ ಸರ್ಕಾರದ ಪೂರ್ವಾನುಮತಿ ಪಡೆಯದೇ ಸಾಕ್ಷ್ಯ ನೀಡಬಾರದೆಂದು ನಿರ್ಬಂಧ ವಿಧಿಸಿದ್ದು, ಇದು ನೌಕರನು ಸರ್ಕಾರದ ವಿಷಯಗಳಿಗೆ ಸಂಬಂಧಪಡದ, ನೌಕರನ ಬದುಕು ಮತ್ತು ಸಮಾಜದ ಒಳಿತಿನ ಹಿನ್ನೆಲೆಯಲ್ಲಿ ಸಾಕ್ಷ್ಯ ನೀಡಲು ಅಡ್ಡಿಯಾಗದಂತೆ ಈ ನಿಯಮವನ್ನು ಮಾರ್ಪಡಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಕರಡಿನ 14ನೇ ಅಂಶದಲ್ಲಿ ನೌಕರರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವಾರು ನೌಕರ ಸಂಘಟನೆಗಳು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ, ನೌಕರರ ಸಂಘಗಳಿಗೆ ವಂತಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸಬಾರದು. ಕರಡಿನ 18 (1) ನಿಯಮದಲ್ಲಿ ಸಾಹಿತ್ಯ, ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ ಸಾಂದರ್ಭಿಕ ಕೆಲಸಗಳನ್ನು ಕೈಗೊಳ್ಳಲು ವಿಧಿಸಿರುವ ಷರತ್ತುಗಳ ಪೈಕಿ ಅಧಿಕೃತ ಕರ್ತವ್ಯಗಳಿಗೆ ತೊಂದರೆಯಾಗಬಾರದು ಎಂಬುದಕ್ಕೆ ಮಾತ್ರ ಸೀಮಿತಗೊಳಿಸಿ ಉಳಿದ ಷರತ್ತುಗಳನ್ನು ಕೈಬಿಡಬೇಕು. ನಿಯಮ 24 (3)ರಲ್ಲಿ ನೌಕರ ಅಥವಾ ಕುಟುಂಬ ಸದಸ್ಯರು ಸರ್ಕಾರಕ್ಕೆ ಮೊದಲೇ ತಿಳಿಸದೇ ಯಾವುದೇ ಸ್ವತ್ತನ್ನು ಆರ್ಜಿಸತಕ್ಕದ್ದಲ್ಲ ಅಥವಾ ವಿಲೇ ಮಾಡತಕ್ಕದ್ದಲ್ಲ ಎಂಬುದನ್ನು ಸ್ವತ್ತಿನ ಆರ್ಜಿಸಿದ ಅಥವಾ ವಿಲೇ ಮಾಡಿದ ಪ್ರಕ್ರಿಯೆ ಮುಗಿದ ಗರಿಷ್ಟ ಮೂರು ತಿಂಗಳ ಒಳಗೇ ಸರ್ಕಾರಕ್ಕೆ ತಿಳಿಸುವುದು ಎಂದು ಮಾರ್ಪಡಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.