ಮದುವೆಗಾಗಿ ಮತಾಂತರ ಅಪರಾಧವೆ?

ಅಂತರ ಧರ್ಮೀಯ ಮದುವೆಗಳನ್ನು ತಡೆಗಟ್ಟುವ ದುರುದ್ದೇಶದಿಂದ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶದ ಬಿಜೆಪಿ ಸರ್ಕಾರಗಳು ಕಠಿಣ ಕಾನೂನು ತರಲು ಮುಂದಾಗಿದೆ. `ಲವ್ ಜಿಹಾದ್’ ಎಂದು ಕರೆಯಲಾಗುತ್ತಿರುವ ಇಂತಹ ಮದುವೆಗಳನ್ನು ಕರ್ನಾಟಕ ರಾಜ್ಯದಲ್ಲಿಯೂ ತಡೆಗಟ್ಟಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರೂ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಟಿ. ರವಿ ಇತ್ತೀಚೆಗೆ ಹೇಳಿದ್ದಾರೆ. ಈ ನಡುವೆ ಮಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲೂ, ಕೋರ್ ಕಮೀಟಿ ಸಭೆಯಲ್ಲೂ ಇದೇ ನಿರ್ಣಯವನ್ನು ಕೈಗೊಳ್ಳಲಾಗಿದೆ.

ದೇಶದ ಯಾವುದೇ ಕಾನೂನಿನಲ್ಲಿ `ಲವ್ ಜಿಹಾದ್’ ಎಂಬುದರ ವ್ಯಾಖ್ಯಾನವಿಲ್ಲ. ದೇಶದ ಯಾವುದೇ ತನಿಖಾ ಸಂಸ್ಥೆಯು `ಲವ್ ಜಿಹಾದ್’ ಎಂಬ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿಲ್ಲ. ಕೇವಲ ಸಂಘ ಪರಿವಾರದ ಶಬ್ದಕೋಶದಲ್ಲಿ ಮಾತ್ರ ಅದು ಕಾಣಸಿಗಬಹುದು. ಅವರೇ ಅದರ ಜನಕರು. ಕೇವಲ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸಲ್ಮಾನರ ಮೇಲೆ ಸುಳ್ಳು ಆರೋಪ ಹೊರಿಸಿ ಅವರಿಗೆ ಕಿರುಕುಳ ಕೊಡುವ ಉದ್ದೇಶದಿಂದ ಈ ಚರ್ಚೆಯನ್ನು ಮುನ್ನೆಲೆಗೆ ತರಲಾಗಿದೆ.

ಮೊದಲನೆಯದಾಗಿ ಅಂತರ ಧರ್ಮೀಯ ವಿವಾಹ ಸಂವಿಧಾನ ವಿರೋಧಿಯಲ್ಲ ನಮ್ಮ ಸಂವಿಧಾನ ಅಂತರ ಧರ್ಮೀಯ ವಿವಾಹವನ್ನು ಪ್ರತಿಬಂಧಿಸುವುದಿಲ್ಲ. ವಿಭಿನ್ನ ಧರ್ಮಗಳಿಗೆ ಸೇರಿದ ಅಥವ ಯಾವುದೇ ಧರ್ಮಕ್ಕೆ ಸೇರದ ಯುವಕ ಯುವತಿಯರು, ವಿಭಿನ್ನ ಜಾತಿಗಳಿಗೆ ಸೇರಿದ ಯುವಕ ಯುವತಿಯರು ಅಥವ ಯಾವುದೇ ಜಾತಿ ಪದ್ಧತಿಯನ್ನು ಒಪ್ಪದ ಯುವಕ ಯುವತಿಯರು ಪರಸ್ಪರ ಒಪ್ಪಿಕೊಂಡು ಸ್ವಸಂತೋಷದಿಂದ ವಿವಾಹವಾಗಬಹುದು.

ಎರಡನೆಯದಾಗಿ ಮತಾಂತರಕ್ಕಾಗಿ ಮದುವೆಯಾಗುವುದಾಗಲಿ, ಮದುವೆಯಾಗಿ ಮತಾಂತರ ಆಗುವುದಾಗಲಿ ಸಂವಿಧಾನ ವಿರೋಧಿಯಲ್ಲ. ನಮ್ಮ ಸಂವಿಧಾನದ 25ನೇ ವಿಧಿಯು ಯಾವುದೇ ಧರ್ಮವನ್ನು ಹೊಂದುವ, ಆಚರಿಸುವ ಮತ್ತು ಆ ಧರ್ಮದ ಬಗ್ಗೆ ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿದೆ. ವಿವಾಹವೇ ಆಗಲಿ, ಮತಾಂತರವೇ ಆಗಲಿ ಬಲವಂತದ ಕ್ರಮವಾಗಬಾರದು. ಬಲವಂತದಿಂದ ಮಾಡುವ ಯಾವುದೇ ಕ್ರಿಯೆ ಅಪರಾಧವಾಗುತ್ತದೆ. ಈಗ ಅಸ್ಥಿತ್ವದಲ್ಲಿರುವ ಕಾನೂನುಗಳ ಪ್ರಕಾರವೇ ಅವು ಶಿಕ್ಷಾರ್ಹ ಅಪರಾಧಗಳಾಗುತ್ತದೆ.

ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡರು ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ “ಅಂತರ ಧರ್ಮೀಯ ವಿವಾಹಗಳನ್ನು ತಡೆಗಟ್ಟಲು ಕಾನೂನು ತರುವ ವಿಚಾರ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಅದು ಸಂವಿಧಾನದ ವಿಧಿ 14 ಮತ್ತು 15 ರ ಉಲ್ಲಂಘನೆಯಾಗಿದೆ. ನಮ್ಮ ಸಂವಿಧಾನವು ಯಾರಿಗೂ ಜಾತಿ, ಧರ್ಮ, ಬಣ್ಣದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ವಿರೋಧಿಸುತ್ತದೆ.” ನ್ಯಾಯಮೂರ್ತಿ ಗೋಪಾಲಗೌಡರು ಪ್ರತಿಪಾದಿಸುವಂತೆ, ಪ್ರಾಪ್ತ ವಯಸ್ಸಿಗೆ ಬಂದ ಯಾವುದೇ ಯುವಕ ಅಥವ ಯುವತಿ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಲು ಸ್ವತಂತ್ರರು.

ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : ಕರ್ನಾಟಕ ಕರಾವಳಿಯಲ್ಲಿ ಮಿತಿಮೀರಿದ ಮೀನುಗಾರಿಕೆ

ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರನ್ನು ಬಲವಂತದಿಂದ ಬಾಲ್ಯವಿವಾಹಕ್ಕೆ ಒಳಪಡಿಸುತ್ತಿರುತ್ತಾರೆ. ಮಕ್ಕಳ ತಾಯಿ ತಂದೆಯರೇ ಬಲವಂತದ ವಿವಾಹ ಮಾಡಿಸುತ್ತಾರೆ. ಇದು ಸರಿಯಾ? ಒಂದೇ ಧರ್ಮದವರು ಎಂಬ ನೆಪದಲ್ಲಿ ಇಂತಹ ದೌರ್ಜನ್ಯ ನಡೆಯುತ್ತಲೇ ಇದೆ. ವಿವಾಹಗಳಲ್ಲಿ ಮುಖ್ಯವಾದದ್ದು ವಧು ವರನ ನಡುವೆ ಸ್ವತಂತ್ರ ಆಯ್ಕೆ. ನಿಗದಿತ ಪ್ರಾಪ್ತ ವಯಸ್ಸಿನಲ್ಲಿ ಮಾತ್ರ ಈ ಆಯ್ಕೆ ಸಾಧ್ಯ. ವಿವಾಹಕ್ಕೆ ಪರಸ್ಪರ ಪ್ರೀತಿ, ವಿಶ್ವಾಸ ಬಹಳ ಮುಖ್ಯ. ಅವರಿಗೆ ಒಂದೇ ಜಾತಿ, ಒಂದೇ ಧರ್ಮ, ಒಂದೇ ಬಣ್ಣ, ಒಂದೇ ಭಾಷೆ ಮುಖ್ಯವಲ್ಲ. ಈ ಪ್ರೀತಿ, ಈ ಪ್ರೇಮ ಹಟ್ಟಿಯಲ್ಲಿ ಹುಟ್ಟಿ ಮೊಹಲ್ಲಾಕ್ಕೆ ವಿಸ್ತರಿಸಬಹುದು. ಯಾರಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ, ತಡೆಯಬಾರದು ಅಂತರ ಜಾತಿ, ಅಂತರ ಧರ್ಮೀಯ ವಿವಾಹಗಳನ್ನು ಸಮಾಜ ಬೆಂಬಲಿಸಬೇಕು. ಪ್ರೋತ್ಸಾಹಿಸಬೇಕು. ಅವುಗಳು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಅಂತರ್ ಜಾತಿ ಹಾಗೂ ಅಂತರ ಧರ್ಮೀಯ ಮದುವೆಯಾಗಲು ಬಯಸುವರನ್ನು ಮರ್ಯಾದಾ ಹತ್ಯೆಯಂತಹ ಬರ್ಬರ ಕೃತ್ಯಗಳಿಗೆ ಒಳ ಪಡಿಸಬಾರದು. ಇಂತಹ ಬೆದರಿಕೆಗಳಿಂದ ಭೀತಿಗೊಳಗಾದ ಯುವ ಜೋಡಿಗಳು ಅನೇಕ ಸಲ ಅನಿವಾರ್ಯವಾಗಿ ಮನೆ ಬಿಟ್ಟು ಓಡಿ ಹೋಗುತ್ತಾರೆ. ಪರಸ್ಥಳಗಳಲ್ಲಿ ಯಾತನಾಮಯ ಪರಿಸ್ಥಿತಿಗಳಲ್ಲಿ ಬದುಕುತಿರುತ್ತಾರೆ. ಇಂತಹ ಅಮಾಯಕರಿಗೆ ರಕ್ಷಣೆ ಒದಗಿಸುವ ಕಾನೂನು ತಿದ್ದುಪಡಿಗಳನ್ನು ತರಬೇಕೆ ಹೊರತು ಅವರನ್ನು ಸಮಾಜದ ಎದುರು ಅಪರಾಧಿಗಳಂತೆ ಬಿಂಬಿಸುವುದನ್ನು ತಡೆಯಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾನೂನು ಮಾಡುವ ಬಿಜೆಪಿಗರ ಪ್ರಯತ್ನ ನಿಷ್ಟ್ರಯೋಜಕ. ಮದುವೆಗಾಗಿ ಮತಾಂತರ ತಪ್ಪಲ್ಲ.

 

Donate Janashakthi Media

Leave a Reply

Your email address will not be published. Required fields are marked *