– ಪ್ರೊ. ರಾಜೇಂದ್ರ ಚೆನ್ನಿ
ಚುನಾವಣಾ ರಾಜಕೀಯದ ಮೂಲಾಧಾರವೇ ಭ್ರಷ್ಟಾಚಾರವಾಗಿದೆ. ಅನೈತಿಕ ಆಯ್ಕೆಯ ಮೂಲಕ ನಮ್ಮ ಪ್ರತಿನಿಧಿಗಳಾಗುವ ಶಾಸಕರು, ಸಂಸದರು ನಮ್ಮ ಸಂವಿಧಾನಾತ್ಮಕ ಮತ್ತು ಮಾನವೀಯ ಹಕ್ಕುಗಳ ಶತ್ರುಗಳಾಗುತ್ತಾರೆ! ಇದೊಂದು ವಿಷಚಕ್ರದ ಹಾಗಿದೆ. ಪ್ರಾಯಶಃ ಇದೇ ಪ್ರವೃತ್ತಿಗಳು ಮುಂದುವರೆದರೆ ಚುನಾವಣೆಗಳು ಅಪ್ರಸ್ತುತವಾಗಿ ಬಿಡಬಹುದು. ಅಂದರೆ ಮುಂದಿನ ಹಂತದ ಫ್ಯಾಸಿಜಂ, ಚುನಾವಣೆಗಳ ಬೆಂಬಲವನ್ನೂ ಕೇಳದೇ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಬಹುದು. ಆ ಸ್ಥಿತಿಯೂ ತುಂಬಾ ದೂರವಿಲ್ಲವೆಂದು ಕಾಣುತ್ತದೆ.
ಇತ್ತೀಚಿನ ದಶಕಗಳಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳು ನಿರಂತರವಾಗಿ ಆಕ್ರಮಣಗಳಿಗೆ ಒಳಗಾಗಿ ಅವನತಿಯನ್ನು ತಲುಪಿವೆ. ಅವು ನಿಷ್ಕ್ರಿಯವಾಗಿವೆ ಅಥವಾ ಪ್ರಭುತ್ವದೊಂದಿಗೆ ನಿರ್ಲಜ್ಜವಾಗಿ ಶಾಮೀಲಾಗಿವೆ. ಬಲಪಂಥೀಯ ರಾಜಕೀಯದ ಏಕಮಾತ್ರ ಸಾಧನೆಯೆಂದರೆ ಪ್ರಜಾಪ್ರಭುತ್ವವಾದಿ ಸಂಸ್ಕøತಿಯನ್ನು ನಾಶಮಾಡಿ ಸರ್ವಾಧಿಕಾರಿ ಪ್ರವೃತ್ತಿಗಳನ್ನು ಬೆಳೆಸುವುದು. ಇಲ್ಲಿ ಪ್ರಜಾಪ್ರಭುತ್ವವಾದಿ ಸಂಸ್ಕøತಿಯೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿವರಿಸಿದ ಬಗೆಯದು. ಅದರ ಮುಖ್ಯ ಆಧಾರವಾಗಿರುವುದು ‘ಸಂವಿಧಾನಬದ್ಧ ನೈತಿಕತೆ’ಎನ್ನುವುದು. ಅದಿರದಿದ್ದರೆ ಪ್ರಜಾಪ್ರಭುತ್ವವು ಕೇವಲ ಚುನಾವಣಾ ಪ್ರಜಾಪ್ರಭುತ್ವವಾಗಿ (Electoral democracy) ಬಿಡುತ್ತದೆ. ನಾವು ಈಗ ಎದುರಿಸುತ್ತಿರುವ ಬಹುದೊಡ್ಡ ಅಪಾಯವೆಂದರೆ ಒಂದು ಸಾಮಾಜಿಕ ಪ್ರಜಾಪ್ರಭುತ್ವವಾಗುವ ಬದಲು ನಮ್ಮ ವ್ಯವಸ್ಥೆಯು ಚುನಾವಣಾ ಪ್ರಜಾಪ್ರಭುತ್ವವಾಗಿದೆ.
ದೇಶದ ಮಾನ್ಯ ಪ್ರಧಾನಮಂತ್ರಿಗಳು ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ಕೇವಲ ಚುನಾವಣೆ ಗೆಲ್ಲುವ ಯಂತ್ರಗಳನ್ನಾಗಿಸಿದ್ದಾರೆ. ರಾಷ್ಟ್ರದ ಬಹುದೊಡ್ಡ ಸಮಸ್ಯೆಗಳಾದ ಕುಸಿಯುತ್ತಿರುವ ಆರ್ಥಿಕತೆ, ಭಯಾನಕವಾಗುತ್ತಿರುವ ನಿರುದ್ಯೋಗ ಇತ್ಯಾದಿಗಳ ಬಗ್ಗೆ ಸಂಸತ್ತಿನಲ್ಲಿಯೂ ಮಾತನಾಡಲು ಲಭ್ಯವಿಲ್ಲದ ಅವರು ಚುನಾವಣೆಗಳಲ್ಲಿ ಮಾತ್ರ 24×7 ದುಡಿಯುತ್ತಾರೆ. ಯಾವ ರಾಜ್ಯದ ಚುನಾವಣೆಗಳು ನಡೆದರೂ ಅವು ಒಕ್ಕೂಟವ್ಯವಸ್ಥೆಯ ಅಡಿಯಲ್ಲಿ ನಡೆಯುತ್ತವೆ ಎನ್ನುವ ಪ್ರಾಥಮಿಕ ಕಲ್ಪನೆಯು ಇಲ್ಲದಂತೆ ಪ್ರಧಾನಿಯವರು ಸೇರಿದಂತೆ ಎಲ್ಲಾ ಪಕ್ಷಗಳು ಇನ್ನೊಂದು ಪಕ್ಷವೊಂದನ್ನು ಮುಗಿಸುವ ಮಾತನ್ನು ಆಡುತ್ತಿವೆ. ಹೀಗಾದರೆ ಒಕ್ಕೂಟ ವ್ಯವಸ್ಥೆಯು ದುರ್ಬಲವಾಗುತ್ತದೆ. ಏಕೆಂದರೆ ಪರಸ್ಪರ ದ್ವೇಷವೇ ರಾಜಕೀಯದ ಕೇಂದ್ರವಾಗಿ ಬಿಟ್ಟರೆ ಒಕ್ಕೂಟದ ಪರಿಕಲ್ಪನೆಯೆ ಉಳಿಯಲಾರದು. ಅಂಬೇಡ್ಕರ್ ಅವರು ಪ್ರಸಿದ್ಧ ವಿದ್ವಾಂಸರ ಅಭಿಪ್ರಾಯಗಳನ್ನು ತಿಳಿಸುತ್ತಾ ಪ್ರಜಾಪ್ರಭುತ್ವದ ಜೀವಾಳವೆಂದರೆ ವಿರೋಧ ಮತ್ತು ವಿರೋಧಪಕ್ಷವೆಂದು ಗುರುತಿಸುತ್ತಾರೆ. ರಾಜಕೀಯದ ಆರೋಗ್ಯಕ್ಕೆ ಇವು ಮುಖ್ಯವೆಂದು ಹೇಳುತ್ತಾ ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚಿನ ಬಹುಮತವನ್ನು ಪಡೆದು ವಿರೋಧ ಪಕ್ಷವೇ ಇಲ್ಲದಂತಾಗಿದ್ದು ಅಪಾಯಕಾರಿ ಎಂದು ವಿಶ್ಲೇಷಿಸುತ್ತಾರೆ.
ಆದರೆ ಇಂದಿನ ರಾಜಕೀಯದಲ್ಲಿ ತಮ್ಮ ಪಕ್ಷದ ವಿರೋಧಿಗಳು ದೇಶದ್ರೋಹಿಗಳು ಎನ್ನುವ ನುಡಿಗಟ್ಟು ಪ್ರಬಲವಾಗಿ ಬೆಳೆದಿದೆ. ಇವೆಲ್ಲವು ಅಧಿಕಾರದ ಅತಿಯಾದ ಕೇಂದ್ರೀಕರಣ, ಪ್ರಜಾಪ್ರಭುತ್ವವಾದಿ ಮೌಲ್ಯಗಳಾದ ಸಂವಾದ, ತರ್ಕಬದ್ಧ ವಾದಮಂಡನೆ, ಚಿಂತನೆ ಇವುಗಳ ಅಂತ್ಯದ ಲಕ್ಷಣಗಳಾಗಿವೆ. ಪರಿಸ್ಥಿತಿಯ ದುರಂತ ವ್ಯಂಗ್ಯವೆಂದರೆ ಭಾರತದ ರಾಜಕೀಯ ಚರಿತ್ರೆಯಲ್ಲಿಯೆ ಈ ಪರಿಯಾಗಿ ಮತದಾರ ಪ್ರಜೆಗಳನ್ನು ಓಲೈಸಿದ, ಮತಕ್ಕಾಗಿ ಪೀಡಿಸಿದ ಉದಾಹರಣೆಗಳೇ ಇಲ್ಲ. ಪ್ರತಿಯೊಂದು ಉಪಚುನಾವಣೆಯೂ ‘ಪ್ರತಿಷ್ಠೆಯ’ಕಾಳವಾಗುವುದು ಏಕೆ? ಪ್ರತಿಯೊಂದು ಚುನಾವಣೆಗೂ ಕೋಟಿಗಟ್ಟಲೆ ಹಣ, ನೇತಾರರ ಓಡಾಟ, ಮಾಧ್ಯಮಗಳ ಭರಾಟೆ ಇವೆಲ್ಲ ಬೇಕೆ? ಒಟ್ಟು ರಾಜ್ಯದ ಬದುಕೆಂದರೆ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಎನ್ನುವಂತೆ ಏಕಾಗಬೇಕು?
ಇನ್ನೊಂದು ವಿಷಯವನ್ನು ಗಮನಿಸಿ. ಚುನಾವಣೆಯ ನಂತರ ಯಾವ ಅಭ್ಯರ್ಥಿಯು ಗೆದ್ದರೂ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ. ಕರ್ನಾಟಕದಲ್ಲಿಯಂತೂ ರಾಜಕೀಯ ತಿಳುವಳಿಕೆ, ನಾಯಕತ್ವ ಇರುವ ಜನಪ್ರತಿನಿಧಿಗಳೇ ಇಲ್ಲ. ಸೈದ್ಧಾಂತಿಕ ತಯಾರಿಯಂತೂ ಗೊತ್ತೇ ಇಲ್ಲ. ಪ್ರಜೆಗಳಿಗೆ ಖಚಿತವಾಗಿ ಗೊತ್ತಾಗುವ ಒಂದೇ ಸಂಗತಿಯೆಂದರೆ ಅವರ ಅಪಾರವಾದ ಭ್ರಷ್ಟಾಚಾರ. ಈ ಪ್ರಮಾಣದ ಭ್ರಷ್ಟಾಚಾರವು ನಮ್ಮ ಕಲ್ಪನಾಶಕ್ತಿಯನ್ನೂ ಮೀರಿದ್ದು. ಹಾಗೆಯೆ ಈ ಜನಪ್ರತಿನಿಧಿಗಳ ಆಸ್ತಿ-ಪಾಸ್ತಿಗಳು. ಅಂದರೆ ಚುನಾವಣಾ ರಾಜಕೀಯದ ಮೂಲಾಧಾರವೇ ಭ್ರಷ್ಟಾಚಾರವಾಗಿದೆ. ಹಾಗಿದ್ದರೆ ಇಂಥ ಚುನಾವಣೆಗಳ ಮೂಲಕ ಸೃಷ್ಟಿಯಾಗುವ ರಾಜಕೀಯ ಪ್ರತಿನಿಧಿತ್ವಕ್ಕೆ ನಾವು ಕೊಡಬೇಕಾದ ಬೆಲೆ ಏನು? ಅದನ್ನು ಜನರ ‘ಪವಿತ್ರ’ಆಯ್ಕೆಯೆಂದು ಯಾಕೆ ನೋಡಬೇಕು? ಅದು ವಿವಿಧ ಬಗೆಯಲ್ಲಿ, ಸಂಪೂರ್ಣವಾಗಿ manipulate ಆಗಿ ಬಂದಿರುವ ಆಯ್ಕೆಯಲ್ಲವೆ? ಇಷ್ಟು ಮಾತ್ರವಲ್ಲ. ಇಂಥ ಅನೈತಿಕ ಆಯ್ಕೆಯ ಮೂಲಕ ನಮ್ಮ ಪ್ರತಿನಿಧಿಗಳಾಗುವ ಶಾಸಕರು, ಸಂಸದರು ನಮ್ಮ ಸಂವಿಧಾನಾತ್ಮಕ ಮತ್ತು ಮಾನವೀಯ ಹಕ್ಕುಗಳ ಶತ್ರುಗಳಾಗುತ್ತಾರೆ! ಇದೊಂದು ವಿಷಚಕ್ರದ ಹಾಗಿದೆ.
ಇಂಡಿಯನ್ ಕಲ್ಚರಲ್ ಫೋರಮ್‍ನ “ಗುಫ್ತಗೂ” ಪತ್ರಿಕೆಯಲ್ಲಿ ಒಂದು ಸಂಶೋಧನಾ ವರದಿ ಪ್ರಕಟವಾಗಿದೆ. ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಂಥ ವೇದಿಕೆಗಳನ್ನು ಬಳಸಿಕೊಂಡು ಅನೇಕ ಬಲಪಂಥೀಯ ವ್ಯಕ್ತಿಗಳು ಅಪಾರ ಸಂಖ್ಯೆಯ ಹಿಂಬಾಲಕರನ್ನು ಸಂಪಾದಿಸಿಕೊಂಡು ವಿಕೃತವಾದ, ಸಂವಿಧಾನ ವಿರೋಧಿಯಾದ ಅಭಿಪ್ರಾಯಗಳನ್ನು ಹರಡಿಸುವುದನ್ನು ಈ ವರದಿ ವಿಶ್ಲೇಷಿಸುತ್ತದೆ. ಇಂಥ ಒಂದು ಜಾಲವು ಅದೆಷ್ಟು ವ್ಯಾಪಕವಾಗಿ ಬೆಳೆದಿದೆ ಮತ್ತು ಮೊಫುಸಲ್ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತಲುಪಿದೆಯೆನ್ನುವುದು ಗಾಬರಿ ಹುಟ್ಟಿಸುವಂತಿದೆ. ಅಂದರೆ ಜನಸಾಮಾನ್ಯರಿಂದ ವಿವೇಕ ಹಾಗೂ ತರ್ಕಬದ್ಧ (rational) ಚಿಂತನೆಯನ್ನೇ ದೋಚಿಕೊಳ್ಳುವ ಈ ಜಾಲದಿಂದಾಗಿ ಪ್ರಜಾಪ್ರಭುತ್ವಕ್ಕೆ ಅವಶ್ಯಕವಾದ ಸಂವಾದವು ಅಸಾಧ್ಯವಾಗಿ ಬಿಡುತ್ತದೆ. ಬದಲಾಗಿ ಕೋಮುದ್ವೇಷ, ಅಸಹನೆ ಇವುಗಳೇ ತುಂಬಿಕೊಳ್ಳುತ್ತವೆ. ಹಾಗಾದರೆ ಪ್ರಜಾಪ್ರಭುತ್ವಕ್ಕೆ ಇನ್ನೆಲ್ಲಿಂದ ಬೆಂಬಲ ಸಿಗಬಲ್ಲದು?
ಪ್ರಾಯಶಃ ಇದೇ ಪ್ರವೃತ್ತಿಗಳು ಮುಂದುವರೆದರೆ ಚುನಾವಣೆಗಳು ಅಪ್ರಸ್ತುತವಾಗಿ ಬಿಡಬಹುದು. ಅಂದರೆ ಮುಂದಿನ ಹಂತದ ಫ್ಯಾಸಿಜಂ ಚುನಾವಣೆಗಳ ಬೆಂಬಲವನ್ನೂ ಕೇಳದೇ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಬಹುದು. ಆ ಸ್ಥಿತಿಯೂ ತುಂಬಾ ದೂರವಿಲ್ಲವೆಂದು ಕಾಣುತ್ತದೆ.