ಚಿಲಿ : ಹೊಸ ಸಂವಿಧಾನ ರಚನೆಗೆ ಭಾರೀ ಬೆಂಬಲ

ಅಕ್ಟೋಬರ್ 25 ರಂದು ನಡೆದ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆ’ ಯಲ್ಲಿ 1980 ರಲ್ಲಿ ಜನರಲ್ ಅಗಸ್ಟೊ ಪಿನೋಶೆ (1973-1990) ಮಿಲಿಟರಿ ಸರ್ವಾಧಿಕಾರ ಆಡಳಿತದ ಅಡಿಯಲ್ಲಿ, ಹೇರಲಾಗಿದ್ದ ಸಂವಿಧಾನವನ್ನು ರದ್ದು ಮಾಡಿ ಹೊಸ ಸಂವಿಧಾನ ರಚಿಸಲು ಭಾರೀ ಬೆಂಬಲ ವ್ಯಕ್ತವಾಗಿದೆ. ಇದು ಸರ್ವಾಧಿಕಾರದ ವಿರುದ್ಧ ಚಿಲಿಯ ಜನರ ಹಲವು ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ವರ್ಣಿಸಲಾಗಿದೆ.

ಅಕ್ಟೋಬರ್ 25 ರಂದು ನಡೆದ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆ’ ಯಲ್ಲಿ ದೊಡ್ಡ ಪ್ರಮಾಣದ  ಬಹುಮತದೊಂದಿಗೆ ಹೊಸ ಸಂವಿಧಾನದ ರಚಿಸಲು, ಚಿಲಿಯ ಮತದಾರರು ಅನುಮೋದನೆ ನೀಡಿದ್ದಾರೆ. 1980 ರಲ್ಲಿ ಜನರಲ್ ಅಗಸ್ಟೊ ಪಿನೋಶೆ (1973-1990) ರ ಮಿಲಿಟರಿ ಸರ್ವಾಧಿಕಾರ ಆಡಳಿತದ ಅಡಿಯಲ್ಲಿ, ಹೇರಲಾಗಿದ್ದ ಸಂವಿಧಾನವನ್ನು ರದ್ದು ಮಾಡಿ ಹೊಸ ಸಂವಿಧಾನ ರಚಿಸಲು ಭಾರೀ ಬೆಂಬಲ ವ್ಯಕ್ತವಾಗಿದೆ. ಶೇ.78.27 ರಷ್ಟು ಮತಗಳು ಹೊಸ ಸಂವಿಧಾನದ ರಚಿಸುವ ಪರವಾಗಿ ಬಿದ್ದಿದೆ..  ಇದು ಸರ್ವಾಧಿಕಾರದ ವಿರುದ್ಧ ಚಿಲಿಯ ಜನರ ಹಲವು ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ವರ್ಣಿಸಲಾಗಿದೆ.

ಚುನಾಯಿತ ಸೋಶಲಿಸ್ಟ್ ಅಧ್ಯಕ್ಷ ಅಲೆಂದೆ ಅವರನ್ನು ಕ್ಷಿಪ್ರದಂಗೆಯಲ್ಲಿ ಉರುಳಿಸಿ ಬಂದ ಜನರಲ್ ಪಿನೊಶೆ ಹೇರಿದ ಸಂವಿಧಾನ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡಿತ್ತು. ಹೆಚ್ಚಿನ ಸಾರ್ವಜನಿಕ ಸೇವೆ ಮತ್ತು ಕಲ್ಯಾಣಗಳನ್ನು ಕೊನೆಗೊಳಿಸುವ ಅಥವಾ ಕಡಿತಗೊಳಿಸುವ ಅತ್ಯಂತ ತೀವ್ರವಾದ ಮುಕ್ತ-ಮಾರುಕಟ್ಟೆ ಬಂಡವಾಳಶಾಹಿ ಆಧಾರಿತ ಆರ್ಥಿಕ  ಧೋರಣೆಗಳನ್ನು ಹೇರಿತ್ತು. ಆಮೂಲಕ ಆರ್ಥಿಕ ಅಸಮಾನತೆ, ಬಡತನ ಗಳನ್ನು ಅಗಾಧವಾಗಿ ಹೆಚ್ಚಿಸುವಲ್ಲಿ ಮತ್ತು ಸಾಮಾಜಿಕ ಅತೃಪ್ತಿ ಉಂಟು ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.  1990ರಲ್ಲಿ ಇದರ ಕೆಲವು ಪ್ರಜಾಸತ್ತಾತ್ಮಕ ಹಕ್ಕುಗಳ ವಿರೋಧಿ ಅಂಶಗಳನ್ನು ತೆಗೆದು ಹಾಕಲಾಯಿತಾದರೂ, ಜನ-ವಿರೋಧಿ ಆರ್ಥಿಕ ಅಂಶಗಳು ಉಳಿದುಕೊಂಡಿದ್ದವು.

ಜನಪರ ಆರ್ಥಿಕ- ಸಾಮಾಜಿಕ ಸುಧಾರಣೆಗಳನ್ನು ಜಾರಿ ಮಾಡಲು ಈ ಸಂವಿಧಾನವೇ ಅಡ್ಡಿ ಎಂದು ಗುರುತಿಸಿದ ಸಾಮಾಜಿಕ-ರಾಜಕೀಯ ಚಳುವಳಿಗಳು ಇದರ ವಿರುದ್ಧ ಹೋರಾಡುತ್ತಲೇ ಬಂದಿದ್ದವು. ಕಳೆದ ವರ್ಷ ಮೆಟ್ರೋ ದರಗಳ ವಿರುದ್ಧ ಆರಂಭವಾದ ಪ್ರತಿಭಟನೆ ಆಶ್ಚರ್ಯರೀತಿಯಲ್ಲಿ ಗರಿಗೆದರಿಕೊಂಡು ಪಿನೊಶೆ ಕಾಲದ ಪಿಂಚಣೆ ಯೋಜನೆಯ ರದ್ದತಿ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯಸೇವೆಯಲ್ಲಿ ಹೂಡಿಕೆ, ಆದಿವಾಸಿಗಳ ಹಕ್ಕುಗಳ ಮಾನ್ಯತೆಗಳಿಗೆ ಹಕ್ಕೊತ್ತಾಯಗಳಿಗೆ ವಿಸ್ತರಿಸಿತ್ತು. ಅಂತಿಮವಾಗಿ ಇವೆಲ್ಲ ಜನಪರ ಕ್ರಮಗಳಿಗೆ ತೊಡಕಾಗಿರುವ ಪಿನೊಶೆ ಸಂವಿಧಾನ ರದ್ದತಿ ಮಾಡಬೇಕು ಎಂದು ಒತ್ತಾಯ ಮಾಡಿ ಅದಕ್ಕೆ ಸರಕಾರ ಮಣಿಯುವಂತೆ ಮಾಡಿತ್ತು. ಅದರ ಫಲವೇ ಸಂವಿಧಾನ ಬದಲಿಸುವ ಕುರಿತು ಅಕ್ಟೋಬರ್ 25 ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆ.

ಈ ಐತಿಹಾಸಿಕ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಇದ್ದ ಎರಡನೆಯ ಪ್ರಶ್ನೆ, ಹೊಸ ಸಂವಿಧಾನವನ್ನು ಬರೆಯಬೇಕಾದ ವಿಧಾನಕ್ಕೆ  ಸಂಬಂಧಿಸಿದ್ದಾಗಿತ್ತು. ಚಿಲಿಯ ಮತದಾರರು  “ಸಾಂವಿಧಾನಿಕ ಅಸೆಂಬ್ಲಿ”ಯ    ವಿಧಾನವನ್ನು ಆರಿಸಿಕೊಂಡಿದ್ದಾರೆ. ಇದು ಪ್ರಬುದ್ದವಾದ ಹಾದಿಯೆಂದು ಮೆಚ್ಚುಗೆ ವ್ಯಕ್ತ ಪಡಿಸಲಾಗಿದೆ.‌‌  ಶೇ.79.04% ಮತಗಳ ಅಪಾರ ಬಹುಮತ ದೊಂದಿಗೆ, ಈ ಕಾರ್ಯಕ್ಕಾಗಿ ನಾಗರಿಕರಿಂದ ಚುನಾಯಿತರಾದ ಸದಸ್ಯರನ್ನು ಒಳಗೊಂಡಿರುತ್ತದೆ.  ಸಮಾನ ಸಂಖ್ಯೆಯ ಸ್ತ್ರೀ ಮತ್ತು ಪುರುಷರು  ಕಡ್ಡಾಯವಾಗಿ ಈ “ಸಾಂವಿಧಾನಿಕ ಅಸೆಂಬ್ಲಿ”ಯ    ಭಾಗವಾಗಿರುತ್ತಾರೆ.

ಸಂವಿಧಾನದಲ್ಲಿನ ಯಾವುದೇ ಬದಲಾವಣೆಯನ್ನು ತಿರಸ್ಕರಿಸುವ ಆಯ್ಕೆಯು ಕೇವಲ ಶೇ. 21.73% ಮತಗಳನ್ನು ಪಡೆಯಿತು. ಹೊಸ ಸಂವಿಧಾನವನ್ನು “ಮಿಶ್ರ ಸಮಾವೇಶ” ದಿಂದ ಬರೆಯುವ ವಿಧಾನವು ಕೇವಲ ಶೇ 20.96  ಮತಗಳನ್ನು ಪಡೆಯಿತು. “ಮಿಶ್ರ ಸಮಾವೇಶ”ದ ವಿಧಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸದಸ್ಯರ ಶೇ. 50 ರಷ್ಟು ಪ್ರಾತಿನಿಧ್ಯ ಮತ್ತು ಶೇ. 50 ರಷ್ಟು, ಚುನಾಯಿತ ಸದಸ್ಯರಿರುತ್ತಾರೆ.

ಯ ಹೊರಗಿನ 65 ದೇಶಗಳಲ್ಲಿ ವಾಸಿಸುತ್ತಿರುವ 85% ಕ್ಕೂ ಹೆಚ್ಚು ಸಾಗರೋತ್ತರ ಮತದಾರರು ಹೊಸ ಸಂವಿಧಾನದ ಕರಡು ರಚನೆಯನ್ನು ಬೆಂಬಲಿಸಿದ್ದಾರೆ.  ಮತದಾನದ ಪ್ರಮಾಣವು 50% ಕ್ಕಿಂತ ಹೆಚ್ಚಿದ್ದು, 1990 ರಲ್ಲಿ ಚಿಲಿಯಲ್ಲಿ ಪ್ರಜಾಪ್ರಭುತ್ವ ಮರಳಿದ ನಂತರದಲ್ಲಿ ಇದು ಅತಿ ಹೆಚ್ಚು ಮತದಾನವಾಗಿದೆ.

ಫಲಿತಾಂಶಗಳ ಘೋಷಣೆಯ ನಂತರ ರಾತ್ರಿ 10:00 ರ ಸುಮಾರಿಗೆ, ರಾಜಧಾನಿ ಸ್ಯಾಂಟಿಯಾಗೊದ ಡಿಗ್ನಿಟಿ ಪ್ಲಾಜಾ’  ದಲ್ಲಿ ಹತ್ತಾರು ಜನರು ಜಮಾಯಿಸಿ “ಅನುಮೋದನೆ” ಮತ್ತು “ಸಾಂವಿಧಾನಿಕ ಸಮಾವೇಶ” ಆಯ್ಕೆಗಳ ವಿಜಯೋತ್ಸವವನ್ನು ಘೋಷಣೆಗಳು, ಹಾಡುಗಳು, ಪಟಾಕಿ ಮತ್ತು ಮಡಕೆ ಹೊಡೆಯುವ ಘಟನೆಗಳೊಂದಿಗೆ ಆಚರಿಸಿದರು.  ಇದಲ್ಲದೆ, ರಾಜಧಾನಿಯ ಮಧ್ಯದಲ್ಲಿರುವ ಅತ್ಯಂತ ಎತ್ತರದ ಕಟ್ಟಡವಾದ ಟೆಲಿಫೋನ್ ಟವರ್‌ನಲ್ಲಿ ವಿಜಯದ ಸಂದೇಶವನ್ನು ಯೋಜಿಸಲಾಗಿತ್ತು. ದೇಶದ ಇತರ ನಗರಗಳಲ್ಲಿಯೂ ನಾಗರಿಕರು, ಸಾಮಾಜಿಕ ಚಳುವಳಿಗಳು ಮತ್ತು ಪ್ರಗತಿಪರ ರಾಜಕೀಯ ಪಕ್ಷಗಳು ಬೀದಿಗಿಳಿದು ಫಲಿತಾಂಶ ಮತ್ತು ಜನರ ವಿಜಯವನ್ನು ಆಚರಿಸಿದ ಸುದ್ದಿಗಳು ಬಂದಿವೆ.

‘ಲಾ ಮೊನೆಡಾ’ ಅಧ್ಯಕ್ಷೀಯ ಅರಮನೆಯಿಂದ, ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ,ರವರು,  ಚುನಾವಣೆಗಳಲ್ಲಿ ನಾಗರಿಕರು ಭಾರಿ ಪ್ರಮಾಣದಲ್ಲಿ ಭಾಗವಹಿಸಿ ಮತ ಚಲಾಯಿಸಿದ್ದನ್ನು ಶ್ಲಾಘಿಸಿದರು ಮತ್ತು ಹೊಸ ಸಂವಿಧಾನದ ಬಗ್ಗೆ ಒಟ್ಟಾಗಿ ಕೆಲಸ ಮಾಡಲು ಏಕತೆಯನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿದರು.  “ಈ ಜನಾಭಿಪ್ರಾಯ ಸಂಗ್ರಹವು ಚಿಲಿಯ ಹೊಸ ಸಂವಿಧಾನವನ್ನು ಒಪ್ಪಿಕೊಳ್ಳಲು ನಾವು ಒಟ್ಟಾಗಿ ಪ್ರಯಾಣಿಸ ಬೇಕಾದ ಹಾದಿಯು ಪ್ರಾರಂಭವಾಗಿದೆ.  ಇಲ್ಲಿಯವರೆಗೆ ಸಂವಿಧಾನವು ನಮ್ಮನ್ನು ವಿಭಜಿಸಿತ್ತು. ‌ಇಂದಿನಿಂದ, ನಾವೆಲ್ಲರೂ ಸಹಕರಿಸುವ ಮೂಲಕ ಒಗ್ಗಟಿನಿಂದ ಸಜ್ಜಾಗಬೇಕು.  ಆದ್ದರಿಂದ ಹೊಸ ಸಂವಿಧಾನವು ಏಕತೆ, ಸ್ಥಿರತೆ ಮತ್ತು ಭವಿಷ್ಯದ ದೊಡ್ಡ ಚೌಕಟ್ಟಾಗಿದೆ ”ಎಂದು ಪಿನೆರಾ ಪ್ರಸ್ತಾಪಿಸಿದ್ದು ಮೆಚ್ಚುಗೆಗೆ ‌ಪಾತ್ರವಾಗಿದೆ ಎನ್ನಲಾಗಿದೆ.

ಮುಂದೇನು?

“ಸಾಂವಿಧಾನಿಕ ಅಸೆಂಬ್ಲಿ” ಯ 155 ಸದಸ್ಯರನ್ನು ಆಯ್ಕೆ ಮಾಡಲು ನಾಗರಿಕರು ಮತ್ತೆ ಮತದಾನಕ್ಕೆ ಮಾಡುತ್ತಾರೆ.  ಈ ಮತದಾನವು 2021 ರ ಏಪ್ರಿಲ್ 11 ರಂದು ಪ್ರಾದೇಶಿಕ ಮತ್ತು ಪುರಸಭೆಯ ಚುನಾವಣೆಗಳೊಂದಿಗೆ ನಡೆಯಲಿದೆ. ಚುನಾಯಿತ ಸದಸ್ಯರಿಗೆ ಹೊಸ ಸಂವಿಧಾನದ ಬಗ್ಗೆ ಕೆಲಸ ಮಾಡಲು ಒಂಬತ್ತು ತಿಂಗಳು ಇರುತ್ತದೆ.  ಅದರ ತಯಾರಿಕೆಯ ಎರಡು ತಿಂಗಳ ನಂತರ, ಹೊಸ ಸಂವಿಧಾನದ ಅಂತಿಮ ಕರಡನ್ನು ಅಂಗೀಕಾರಕ್ಕಾಗಿ ಹೊಸ ಜನಪ್ರಿಯ ಜನಾಭಿಪ್ರಾಯ ಸಂಗ್ರಹಕ್ಕೆ ತರಲಾಗುವುದು.  ಇದು ಕಡ್ಡಾಯ ಮತದಾನ ಪ್ರಕ್ರಿಯೆಯಾಗಲಿದ್ದು, 2022 ರ ದ್ವಿತೀಯಾರ್ಧದಲ್ಲಿ ನಡೆಯಲಿದೆ. ಹೀಗೆ ಎರಡು ವರ್ಷಗಳ ನಂತರ ಚಿಲಿ ಹೊಸ ಸಂವಿಧಾನ ಪಡೆಯಲಿದೆ.

 ಅಂತರರಾಷ್ಟ್ರೀಯ ಮೆಚ್ಚುಗೆ

ಸಂವಿಧಾನದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಚಿಲಿ ಜನರು ತಮ್ಮ ಭಾರಿ ಗೆಲುವು ಸಾಧಿಸಿದ್ದಕ್ಕಾಗಿ ಲ್ಯಾಟಿನ್ ಅಮೆರಿಕದಾದ್ಯಂತ ಹಲವಾರು ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಮತ್ತು ಸಂಘಟನೆಗಳು ಅಭಿನಂದನೆ ಸಲ್ಲಿಸಿದ್ದಾರೆ.  ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಚಿಲಿಯ ಜನರನ್ನು ಅಭಿನಂದಿಸಿದ ಮೊದಲ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು 1973 ರಲ್ಲಿ ಮಿಲಿಟರಿ ದಂಗೆಯಿಂದ ಉರುಳಿಸಲ್ಪಟ್ಟ ಚಿಲಿಯ ಮಾಜಿ ಸೋಶಲಿಸ್ಟ್ ಅಧ್ಯಕ್ಷ ಸಾಲ್ವಡಾರ್ ಅಲೆಂಡೆ ಅವರ ಕೊನೆಯ ಭಾಷಣವನ್ನು ನೆನಪಿಸಿಕೊಂಡರು. “ಚಿಲಿ ಜನರಿಗೆ ನನ್ನ ಅಭಿನಂದನೆಗಳು, ಮನ್ನಣೆ ಮತ್ತು ಮೆಚ್ಚುಗೆ ತಮ್ಮ ಸಂವಿಧಾನದ ಭವಿಷ್ಯವನ್ನು ನಿರ್ಧರಿಸಲು ಮತ್ತು ಪಿನೋಶೆಯಿಸಂ’ ಗೆ ಅಂತ್ಯ ಹಾಡಲು ನೀವುಗಳು ಇಂದು ಬೀದಿಗಳಲ್ಲಿ ಮತ್ತು ಚುನಾವಣಾ ಕೇಂದ್ರಗಳಲ್ಲಿ ತೊಡಗಿದ್ದೀರಿ.  ಉತ್ತಮ ಸಮಾಜವನ್ನು ನಿರ್ಮಿಸಲು ದೊಡ್ಡ ಮಾರ್ಗಗಳನ್ನು ತೆರೆಯಲಾಗಿದೆ.

 

 

Donate Janashakthi Media

Leave a Reply

Your email address will not be published. Required fields are marked *