ಮೈಸೂರು: ಕಬ್ಬು ಬೆಲೆ ನಿಗದಿಗೆ ಆಗ್ರಹ, ರಸ್ತೆಯಲ್ಲಿ ಮಲಗಿ ರೈತರ ಆಕ್ರೋಶ

  •  ರೈತರ ಕುತ್ತಿಗೆಪಟ್ಟಿ ಹಿಡಿದ ಪೊಲೀಸ್ ಸಿಬ್ಬಂದಿ: ಆರೋಪ 
  • ರಸ್ತೆಯಲ್ಲಿ ಮಲಗಿ ಪ್ರತಿಭಟನಕಾರರ ಆಕ್ರೋಶ

ಮೈಸೂರು:  ಕಬ್ಬಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿಯ ಬಾಗಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಲು ಯತ್ನಿಸಿದಾಗ ಪೊಲೀಸರು ತಡೆದರು.

ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ರೈತರ ಕುತ್ತಿಗೆಪಟ್ಟಿ ಹಿಡಿದರು ಎಂದು ರೈತರು ಆರೋಪಿಸಿದರು. ಕೋಪಗೊಂಡ ಪ್ರತಿಭಟನಕಾರರು ಸಮೀಪದ ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಈ ಹಿಂದೆ ಬಾಗಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಈ ಬಾರಿ ಜಿಲ್ಲಾಧಿಕಾರಿ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ರೈತರನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದಾರೆ ಎಂದು ರೈತರು ಕಿಡಿಕಾರಿದರು. ನಂತರ, ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಮನವಿ ಸ್ವೀಕರಿಸಿದರು.

ಬೇಡಿಕೆ ಏನು? ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳು ಕಡಿಮೆ ತೋರಿಸುವ ಮೂಲಕ ಕಡಿಮೆ ಎಫ್‌ಆರ್‌ಪಿ ದರ ನಿಗದಿಯಾಗುವಂತೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ದರ ನಿಗದಿಯಾಗಿದೆ. ಸರ್ಕಾರವೇ ಒಂದು ಟನ್‌ ಕಬ್ಬಿಗೆ ₹ 3,050 ಉತ್ಪಾದನಾ ವೆಚ್ಚ ಎಂದು ಹೇಳಿರುವುದರಿಂದ ನಮಗೆ ಕನಿಷ್ಠ ₹ 3,300 ಬೆಲೆ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಹೊರ ಜಿಲ್ಲೆಯಿಂದ ಕಬ್ಬು ತರುತ್ತಿರುವ ಕಾರಣ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಕಬ್ಬು ಕಟಾವು ವಿಳಂಬವಾಗುತ್ತಿದೆ. ಸರ್ಕಾರ ಎಫ್‌ಆರ್‌ಪಿ ದರ ಕುರಿತು ಯಾವುದೇ ನಿರ್ಧಾರ ‍ಪ್ರಕಟಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಕಿಡಿಕಾರಿದರು.

ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಲ್‌ ಭತ್ತವನ್ನು ಖರೀದಿ ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗೆ ₹ 200 ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಕೆಆರ್‌ಎಸ್‌ ರಾಮೇಗೌಡ, ಗಳಿಗರಹುಂಡಿ ವೆಂಕಟೇಶ್, ಬರಡನಪುರ ನಾಗರಾಜ್, ದೊಡ್ಡಕಾಟೂರು ಮಹದೇವಸ್ವಾಮಿ ಇದ್ದರು.

Donate Janashakthi Media

Leave a Reply

Your email address will not be published. Required fields are marked *