ಕೊಡಗು : ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸಲು ಮತ್ತು ಮಕ್ಕಳ ಅಪೌಷ್ಟಿಕತೆ ತಪ್ಪಿಸಲು ಜಾರಿಗೆ ತಂದಿದ್ದ ಮಹತ್ವದ ಬಿಸಿಯೂಟ ಯೋಜನೆ ಕಳೆದ ನಾಲ್ಕು ತಿಂಗಳಿಂದ ಕೊಡಗು ಜಿಲ್ಲೆಯಲ್ಲಿ ಸ್ಥಗಿತವಾಗಿದೆ. ಹೌದು ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿರುವ ಪರಿಣಾಮ ಸರ್ಕಾರಿ ಶಾಲೆಗಳ ಬಡ ಮಕ್ಕಳ ಹಸಿವು ನೀಗಿಸುತ್ತಿದ್ದ ಬಿಸಿಯೂಟವೂ ಬಂದ್ ಆಗಿದೆ.
ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 33 ಸಾವಿರದ 483 ವಿದ್ಯಾರ್ಥಿಗಳಿದ್ದು ಅವರಿಗೆ ಮಾರ್ಚ್ ಏಪ್ರಿಲ್ ತಿಂಗಳ ವರೆಗೆ ಮಾತ್ರವೇ ಬಿಸಿಯೂಟಕ್ಕೆ ಬೇಕಾಗಿರುವ ಆಹಾರ ಧಾನ್ಯಗಳ ವಿತರಣೆ ಮಾಡಲಾಗಿದೆ. ಆ ನಂತರ ಅಂದರೆ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಐದು ತಿಂಗಳ ಆಹಾರ ಧಾನ್ಯಗಳನ್ನು ವಿತರಣೆ ಮಾಡಿಲ್ಲ. ಜೂನ್ ಮತ್ತು ಜುಲೈ ತಿಂಗಳ 1633 ಕ್ವಿಂಟಲ್ ಅಕ್ಕಿ ಕಳೆದ ಐದು ತಿಂಗಳಿಂದ ಕೊಡಗಿನ ವಿವಿಧ ಗೋದಾಮುಗಳಲ್ಲಿ ಕೊಳೆಯುತ್ತಿವೆ.
ಅಷ್ಟೇ ಅಲ್ಲ ಅಕ್ಕಿ ಜೊತೆಗೆ 1292 ಕ್ವಿಂಟಲ್ ಬೇಳೆ ಕಾಳುಗಳ ಅಗತ್ಯವಿದ್ದು, ಶಿಕ್ಷಣ ಇಲಾಖೆಯು ಅದನ್ನು ಸರ್ಕಾರಕ್ಕೆ ಇಂಟೆಂಟ್ ಸಲ್ಲಿಸಿದ್ದರೂ ಇನ್ನೂ ಬಂದಿಲ್ಲ. ಇದು ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರದಿಂದ ಬಿಸಿಯೂಟ ವಿತರಣೆಗೆ ಸಂಬಂಧಿಸಿ ಆದೇಶವೂ ಬಂದಿಲ್ಲ. ಹೀಗಾಗಿ ಬಿಸಿಯೂಟಕ್ಕೆ ಬೇಕಾಗಿರುವ ಆಹಾರ ಧಾನಗಳ ವಿತರಣೆ ಮಾಡಿಲ್ಲ. ಸರ್ಕಾರ ಆದೇಶ ನೀಡಿದರೆ ಆಹಾರಧಾನ್ಯಗಳ ವಿತರಣೆ ಮಾಡೋದಕ್ಕೆ ನಾವು ಸಿದ್ಧರಿದ್ದೇವೆ ಎನ್ನುತ್ತಾರೆ ಶಿಕ್ಷಣಾಧಿಕಾರಿ.