ಪುಲ್ವಾಮ ದಾಳಿಗೆ ಪಾಕಿಸ್ತಾನ ಶ್ಲಾಘನೆ; ವಿಪಕ್ಷಗಳ ಮೇಲೆ ಹರಿಹಾಯ್ದ ಮೋದಿ

  • ಪುಲ್ವಾಮ ದಾಳಿ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಂಡವರ ಬಣ್ಣ ಬಯಲು

ಕೆವಾಡಿಯಾ (ಗುಜರಾತ್‌): ‘ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬ ಸತ್ಯವನ್ನು ಅಲ್ಲಿನ ಸಂಸತ್ತಿನಲ್ಲೇ ಒಪ್ಪಿಕೊಳ್ಳಲಾಗಿದೆ. ಇದರಿಂದ ಈ ದಾಳಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದವರ ಬಣ್ಣ ಬಯಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

‘ಯೋಧರು ಹುತಾತ್ಮರಾದ ಆ ದಿನ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಇಂತಹ ಸಮಯದಲ್ಲೇ ಕೆಲ ವ್ಯಕ್ತಿಗಳು ಕೊಳಕು ರಾಜಕೀಯಕ್ಕೆ ಮುಂದಾಗಿದ್ದರು’ ಎಂದು ವಿರೋಧ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಪ್ರಧಾನಿ  ಹರಿಹಾಯ್ದರು.

‘ಭಾರತಕ್ಕೆ ನಾವು ಅದರ ಮನೆಯಲ್ಲೇ ಹೊಡೆದೆವು. ಪುಲ್ವಾಮದಲ್ಲಿನ ಯಶಸ್ಸು, ಇಮ್ರಾನ್ ಖಾನ್ ನೇತೃತ್ವದಲ್ಲಿ ಈ ರಾಷ್ಟ್ರ ಸಾಧಿಸಿದ ಯಶಸ್ಸಾಗಿದೆ. ನೀವು ಮತ್ತು ನಾವೆಲ್ಲರೂ ಆ ಯಶಸ್ಸಿನ ಭಾಗವಾಗಿದ್ದೇವೆ’ ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ, ಅಲ್ಲಿನ ಸಂಸತ್‌ನ ಚರ್ಚೆಯೊಂದರ ಸಂದರ್ಭದಲ್ಲಿ ಹೇಳಿದ್ದರು.

‘ಏಕತಾ ದಿನ‘ದ ಅಂಗವಾಗಿ ಕೆವಾಡಿಯಾದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ,  ಚೌಧರಿ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಮೋದಿ ‘ಪುಲ್ವಾಮ ದಾಳಿಯ ನಂತರ ಕೆಲವರು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿದ್ದನ್ನು ಈ ದೇಶದ ಜನ ಇನ್ನೂ ಮರೆತಿಲ್ಲ. ಸೈನಿಕರ ವೀರ ಮರಣದ ಹಿನ್ನೆಲೆಯಲ್ಲಿ ಇಡೀ ದೇಶವೇ ಕಂಬನಿ ಮಿಡಿಯುತ್ತಿತ್ತು. ಆ ಸಂದರ್ಭದಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು. ಅವರೆಲ್ಲರ ಬಣ್ಣ ಈಗ ಬಯಲಾಗಿದೆ’ ಎಂದು ಮೋದಿ, ವಿರೋಧ ಪಕ್ಷಗಳನ್ನು ಕುಟುಕಿದ್ದಾರೆ

‘ಪುಲ್ವಾಮ ಘಟನೆಯ ಬಳಿಕ ಹಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು. ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಯಾವುದೇ ಮಿತಿಯನ್ನಾದರೂ ಮೀರಬಲ್ಲರು ಎಂಬುದಕ್ಕೆ ಅವರ ಹೇಳಿಕೆಗಳು ಸಾಕ್ಷಿಯಂತಿದ್ದವು. ಇಂತಹ ಹೇಳಿಕೆಗಳಿಂದ ನಮ್ಮ ಭದ್ರತಾ ಪಡೆಗಳ ಮಾನಸಿಕ ಸ್ಥೈರ್ಯ ಕುಗ್ಗುವ ಅಪಾಯ ಇದೆ. ಹೀಗಾಗಿ ದಯವಿಟ್ಟು ನೀಚ ರಾಜಕೀಯ ಮಾಡುವುದನ್ನು ಬಿಡಿ ಎಂದು ಆ ರಾಜಕೀಯ ಪಕ್ಷಗಳಲ್ಲಿ  ನಾನು ವಿನಂತಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

ಅಂದು ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್‌ನ ಒಟ್ಟು 40 ಯೋಧರು ಹುತಾತ್ಮರಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *