ಕಲಾವಿದರಿಗೆ ಫ್ಯಾಸಿಸ್ಟ್ ಶಕ್ತಿಗಳು ಯಾಕೆ ಇಷ್ಟು ಹೆದರುತ್ತವೆ? : ನಾಸಿರುದ್ದೀನ್ ಶಾ

“ಹಲ್ಲಾ ಬೋಲ್ : ಸಫ್ದರ್ ಹಾಶ್ಮಿ ಸಾವು-ಬದುಕು” ಪುಸ್ತಕ ಬಿಡುಗಡೆ

“ಸಫ್ದರ್ ಸಾವು ಮತ್ತು ಬದುಕಿನ ಕುರಿತು ‘ಹಲ್ಲಾ ಬೋಲ್’ ಪುಸ್ತಕವನ್ನು ಓದುತ್ತಿದ್ದಾಗ ನಾನು ಸರದಿಯಲ್ಲಿ ಹಲವು ಭಾವಗಳ ಮೂಲಕ ಹಾದು ಹೋದೆ – ಮಾಹಿತಿ ಪಡೆದೆ, ತಮಾಷೆಯೆನಿಸಿತು, ಕಸಿವಿಸಿಗೊಂಡೆ, ಭಾವುಕನಾದೆ ಮತ್ತು ಆಕ್ರೋಶಭರಿತನಾದೆ, ಅವರ ಜೀವನದಿಂದ ಒಬ್ಬ ಕಲಾವಿದನ ಬದುಕು ಸಮಾಜಕ್ಕೆ ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಆಗಬಲ್ಲುದು. ಅವರ ತಕ್ಷಣದ ಪ್ರಭಾವ, ಪರಿಣಾಮಗಳು ಇಲ್ಲದಿದ್ದರೂ, ಕಲಾವಿದರು, ಬುದ್ಧಿಜೀವಿಗಳು ಮತ್ತು ರಾಜಕೀಯ-ಸಾಮಾಜಿಕ ಕಾರ್ಯಕರ್ತರಿಗೆ ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ಯಾಕೆ ಇಷ್ಟು ಹೆದರುತ್ತವೆ ಎಂದು ತಿಳಿದುಕೊಂಡೆ. ಯಾಕೆಂದರೆ ಅವರ ಪ್ರಭಾವ, ಮತ್ತು ಪರಿಣಾಮ ದೂರಗಾಮಿ ಹಾಗೂ ಆಳವಾಗಿರುತ್ತದೆ. ಅದಕ್ಕಾಗಿಯೇ, ಇಂದು ಬುದ್ಧಿಜೀವಿಗಳನ್ನು ಬೇಟೆಯಾಡಲಾಗುತ್ತಿದೆ.”

ಸಫ್ದರ್ ಕೊಲೆಯಾದಾಗ ಅವನಂತೆಯೇ ಒಬ್ಬ ರಂಗ ಕಲಾವಿದನಾಗಿದ್ದ ನನಗೆ ಹಲವು ಪ್ರಶ್ನೆಗಳು ಎದುರಾದವು. ಸಫ್ದರ್ ನಂತೆ ತಾನು ನಂಬಿದ ಮೌಲ್ಯ-ಸಿದ್ಧಾಂತಗಳಿಗೆ ಸಾಯಲು ಸಹ ಸಿಧ್ಧನಾಗುವ ಧೈರ್ಯ ನನಗಿದೆಯೆ? ನನ್ನ ಜೀವ ಅಪಾಯದಲ್ಲಿದೆ ಅಂತ ಗೊತ್ತಿದ್ದೂ ಆಳರಸರ ಮುಂದೆ ಸತ್ಯ ಹೇಳಬಲ್ಲೆನೆ? ನನ್ನ ಕೆಲಸದ ಫಲ ನನ್ನ ಜೀವನಕಾಲದಲ್ಲಿ ಕಾಣಲು ಸಾಧ್ಯವಿಲ್ಲದಿದ್ದರೂ ನಾನು ಮಾಡಬೇಕೆಂದಿರುವ ಕೆಲಸ ಮಾಡಬಲ್ಲೆನೆ? ಈ ಪ್ರಶ್ನೆಗಳಿಗೆ ಆಗ ನನಗೆ ಉತ್ತರ ಅಸ್ಪಷ್ಟವಾಗಿತ್ತು. ಆದರೆ ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ಉತ್ತರ ಸ್ಪಷ್ಟವಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ದೂರದ ವರೆಗೂ ಮಾರ್ದನಿಸುವಂತೆ ಗಟ್ಟಿಯಾದ ದನಿಯಲ್ಲಿ ಸ್ಪಷ್ಟವಾಗಿ ‘ಹೌದು’ ಎಂಬುದು ನಮ್ಮೆಲ್ಲರ ಉತ್ತರವಾಗಬೇಕು – ಹೀಗೆಂದವರು ಭಾರತದ ಪ್ರಸಿದ್ಧ ರಂಗ ಮತ್ತು ಸಿನಿಮಾ ಕಲಾವಿದ ನಾಸೀರುದ್ದೀನ್ ಶಾ.

ಅವರು ಅಕ್ಟೋಬರ್ 30ರಂದು ವೆಬ್ ನಲ್ಲಿ ಸಫ್ದರ್ ಹಶ್ಮಿ ಸಾವು ಮತ್ತು ಬದುಕಿನ ಕುರಿತ ‘ಹಲ್ಲಾ ಬೋಲ್’ ನ ಕನ್ನಡ ಅನುವಾದ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಈ ಪುಸ್ತಕದ ಮೂಲ ಲೇಖಕ ಸಫ್ದರ್ ಆರಂಭಿಸಿದ್ದ ‘ಜನಮ್’ ಬೀದಿನಾಟಕದ ತಂಡವನ್ನು ಇಂದಿಗೂ ಮುನ್ನಡೆಸುತ್ತಿರುವ ಸುಧನ್ವ ದೇಶಪಾಂಡೆ. ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವವರು ಕರ್ನಾಟಕದ ಹಿರಿಯ ರಂಗಕರ್ಮಿ ಮತ್ತು ಪ್ರಮುಖ ಸಾಂಸ್ಕೃತಿಕ ಸಂಘಟನೆಯಾದ ಸಮುದಾಯದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎಂ.ಜಿ.ವೆಂಕಟೇಶ್.  ಈ ವೆಬ್ ಪುಸ್ತಕ ಬಿಡುಗಡೆಯನ್ನು ಪುಸ್ತಕದ ಪ್ರಕಾಶಕರಾದ ಕ್ರಿಯಾ ಮಾಧ್ಯಮ ಮತ್ತು ಸಮುದಾಯ ಕರ್ನಾಟಕ ಸಂಘಟಿಸಿತ್ತು.

ಕಲಾವಿದರಿಗೆ ಫ್ಯಾಸಿಸ್ಟ್ ಶಕ್ತಿಗಳು ಯಾಕಿಷ್ಟು ಹೆದರುತ್ತವೆ?

‘ಹಲ್ಲಾ ಬೋಲ್’ ಪುಸ್ತಕ

ಇಂದು ನಮಗೆ ಆಯ್ಕೆಯಿರುವುದು ಹುಸಿದೇಶಪ್ರೇಮದ ನಗಾರಿ ಬಾರಿಸುವುದು ಅಥವಾ ದೇಶದ್ರೋಹಿ ಎಂದು ಕರೆಸಿಕೊಳ್ಳುವುದರ ನಡುವೆ. ಸರಕಾರವನ್ನು ಪ್ರಶ‍್ನಿಸುವುದು ದೇಶಪ್ರೇಮದ ಕೊರತೆ, ಆಳರಸರೊಂದಿಗೆ ಸಣ್ಣ ಭಿನ್ನಮತ ಸಹ ದೇಶದ್ರೋಹ, ನಮ್ಮ ಪ್ರೀತಿಯ ದೇಶದ ಬಗೆಗಿನ ಕಾಳಜಿ ವಿಚ್ಛಿದ್ದಕಾರಕ ಮತ್ತು ದ್ವೇಷ – ಎಂದು ಪರಿಗಣಿಸಲಾಗುವ; ಇತಿಹಾಸವನ್ನು ಸುಳ್ಳುಗಳಿಂದ ವಿಕೃತಗೊಳಿಸುವುದಲ್ಲದೆ ಪುರಾಣವಾಗಿಸಿರುವ ಗಂಭೀರ ಸ್ಥಿತಿಯಲ್ಲಿ ನಾವು ಇದ್ದೇವೆ, ಇಂತಹ ಪರಿಸ್ಥಿತಿಯಲ್ಲಿ ಇದು ಮೌನವಾಗಿರುವ ಕಾಲವಲ್ಲ ಎಂದು ಉರ್ದು ಕವಿ ಸಾಹಿರ್ ಲುಧಿಯಾನವಿ ಅವರ ‘ಅಗರ್ ಆಜ್ ಭಿ ಹಮ್ ಖಾಮೋಶ್ ರಹೆ..’ ಎಂಬ ಕವಿತೆಯನ್ನು ಉದ್ಧರಿಸುತ್ತಾ ಅವರು ಹೇಳಿದರು.

ಸಫ್ದರ್ ಸಾವು ಮತ್ತು ಬದುಕಿನ ಕುರಿತು ‘ಹಲ್ಲಾ ಬೋಲ್’ ಪುಸ್ತಕವನ್ನು ಓದುತ್ತಿದ್ದಾಗ ನಾನು ಸರದಿಯಲ್ಲಿ ಹಲವು ಭಾವಗಳ ಮೂಲಕ ಹಾದು ಹೋದೆ – ಮಾಹಿತಿ ಪಡೆದೆ, ತಮಾಷೆಯೆನಿಸಿತು, ಕಸಿವಿಸಿಗೊಂಡೆ, ಭಾವುಕನಾದೆ ಮತ್ತು ಆಕ್ರೋಶಭರಿತನಾದೆ, ಅವರ ಜೀವನದಿಂದ ಒಬ್ಬ ಕಲಾವಿದನ ಬದುಕು ಸಮಾಜಕ್ಕೆ ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಆಗಬಲ್ಲುದು. ಅವರ ತಕ್ಷಣದ ಪ್ರಭಾವ, ಪರಿಣಾಮಗಳು ಇಲ್ಲದಿದ್ದರೂ, ಕಲಾವಿದರು, ಬುದ್ಧಿಜೀವಿಗಳು ಮತ್ತು ರಾಜಕೀಯ-ಸಾಮಾಜಿಕ ಕಾರ್ಯಕರ್ತರಿಗೆ ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ಯಾಕೆ ಇಷ್ಟು ಹೆದರುತ್ತವೆ ಎಂದು ತಿಳಿದುಕೊಂಡೆ. ಯಾಕೆಂದರೆ ಅವರ ಪ್ರಭಾವ ಮತ್ತು ಪರಿಣಾಮ ದೂರಗಾಮಿ ಹಾಗೂ ಆಳವಾಗಿರುತ್ತದೆ. ಅದಕ್ಕಾಗಿಯೇ, ಇಂದು ಬುದ್ಧಿಜೀವಿಗಳನ್ನು ಬೇಟೆಯಾಡಲಾಗುತ್ತಿದೆ. ಕಲಾವಿದರ ಸರದಿ ಸದ್ಯದಲ್ಲೇ ಬರಲಿದೆ. ಈ ನಿಟ್ಟಿನಲ್ಲಿ ಈಗ ಜೈಲಿನಲ್ಲಿರುವ ಬುದ್ಧಿಜೀವಿಗಳಾದ ಸುಧಾ ಭಾರದ್ವಾಜ್, ವರವರ ರಾವ್, ಸ್ಟಾನ್ಲಿ ಸ್ವಾಮಿ, ಡಾ. ತೇಲ್ತುಂಬ್ಡೆ ಅವರ ಜತೆ ‘ನಾವಿದ್ದೇವೆ’ ಎಂದು ಹೇಳಬೇಕಾಗಿದೆ ಎಂದು ಉರ್ದು ಕವಿ ಫೈಜ್ ಜೈಲಿನಲ್ಲಿ ಬರೆದ ಒಂದು ಕವಿತೆಯನ್ನು ಉದ್ಧರಿಸುತ್ತಾ ಅವರು ಹೇಳಿದರು.

‘ಕಾರ್ಮಿಕರು ಮತ್ತು ಕಲಾವಿದರು ಸಹಚರರಾಗುತ್ತಿರುವುದು ಅಪಾಯಕಾರಿಯಾಗಿತ್ತು’.

ಈ ಪುಸ್ತಕವನ್ನು ಎಡಚಳುವಳಿಯಲ್ಲಿ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿರುವುದರಿಂದ ಅಥವಾ ಅವರ ಸಮಕಾಲೀನರಾಗಿದ್ದರಿಂದ ಸಫ್ದರ್ ಜೀವನ್ ಕುರಿತು ಈಗಾಗಲೇ ತಿಳಿದುಕೊಂಡವರಿಗಾಗಿ ನಾನು ಬರೆದಿದ್ದಲ್ಲ. ಅವರ ಮರಣದ ನಂತರ ಹುಟ್ಟಿದ ಅವರ ಬಗ್ಗೆ ಕೇಳೇ ಇರದ ಅಥವಾ ಅವರ ಬಗ್ಗ ಅಲ್ಪ ಸ್ವಲ್ಪ ಕೇಳಿರುವ  ಆದರೇ ಹೆಚ್ಚೇನೂ ಗೊತ್ತಿರದ ಆಸಕ್ತ ಯುವಜನತೆಗಾಗಿ ಬರೆದಿದ್ದು.  ಹೀಗೆಂದವರು ಶಾ ಅವರಿಗಿಂತ ಮೊದಲು ತಮ್ಮ ಪುಸ್ತಕದ ಕುರಿತು ಮಾತನಾಡಿದ ಮೂಲ ಲೇಖಕ ಸುಧನ್ವ ದೇಶಪಾಂಡೆ. ಈ ನಿಟ್ಟಿನಲ್ಲಿ ಸಫ್ದರ್ ತಮ್ಮ ಏರುಯೌವನದಲ್ಲಿ ಹುತಾತ್ಮರಾಗಿ ಯುವಜನರ ಶಾಶ್ವತ ಹೀರೋ ಆದ ಚೇ, ಭಗತ್ ಸಿಂಗ್ ಅವರನ್ನು ಹೋಲುತ್ತಾರೆ. ಅವರನ್ನು ಬಹುವಾಗಿ ಮೆಚ್ಚಿಕೊಳ್ಳುವವರಿಗೂ ಅವರು ಹುತಾತ್ಮರಾದ ಕುರಿತು ಗೊತ್ತಿದ್ದಷ್ಟು, ಅವರ ಜೀವನ ಸಾಧನೆ ಅಥವಾ ಅವರು ಹುತಾತ್ಮರಾಗುವ ಪರಿಸ್ಥಿತಿ ಹೇಗೆ ಉಂಟಾಯಿತು ಎನ್ನುವುದರ ಕುರಿತು ಸಹ ಗೊತ್ತಿರುವುದಿಲ್ಲ ಎಂದು ಸುಧನ್ವ ಹೇಳಿದರು.

ಸುಧನ್ವ ದೇಶಪಾಂಡೆ, ಮಾಲಾಶ್ರೀ ಹಶ್ಮಿ

ಇದು ಹುತಾತ್ಮನಾದ ಬರಿಯ ಒಬ್ಬ ವ್ಯಕ್ತಿಯ ಜೀವನದ ಕಥನ ಮಾತ್ರವಲ್ಲ, ಅವನು ಕಟ್ಟಿಕೊಂಡ ಬೀದಿನಾಟಕ ತಂಡ ಜನಮ್, ಅವನು ಭಾಗವಾಗಿದ್ದ ರಾಜಕೀಯ ಚಳುವಳಿ, ಕಾರ್ಮಿಕ ಚಳುವಳಿ, ಸಾಂಸ್ಕೃತಿಕ ಪರಿಸರ, ಆ ಕಾಲದ ವಿದ್ಯಮಾನಗಳು ಇವೆಲ್ಲದರ ಕಥನ. ಆಳುವ ವರ್ಗ ಮತ್ತು ಪಕ್ಷ ಸಫ್ದರ್ ಎಂಬ ವ್ಯಕ್ತಿ ಅಪಾಯಕಾರಿ ಎಂದು ಅವನನ್ನು ಗುರಿಯಾಗಿಟ್ಟು ಮಾರಣಾಂತಿಕ ದಾಳಿ ಮಾಡಲಿಲ್ಲ. ಬದಲಾಗಿ ಕಾರ್ಮಿಕ ಪ್ರತಿನಿಧಿ ಸ್ಪರ್ಧಿಸಿದ್ದ ಚುನಾವಣೆಯ ಪ್ರಚಾರದ ಭಾಗವಾಗಿದ್ದ ಈ ನಾಟಕ ಪ್ರದರ್ಶನ ತಡೆಯುವುದು ಅವರ ಉದ್ದೇಶವಾಗಿತ್ತು. ಚುನಾವಣೆಯಲ್ಲಿ ನಿರ್ದಿಷ್ಟವಾಗಿ ಮತ್ತು ಸಾಮಾನ್ಯವಾಗಿ ದೈನಂದಿನ ಹೋರಾಟದಲ್ಲಿ  ಹಾಗೂ ರಾಜಕಾರಣದಲ್ಲಿ ಕಾರ್ಮಿಕರು ಮತ್ತು ಕಲಾವಿದರ ತಂಡ ಸಹಚರರಾಗುತ್ತಿರುವುದು ಅವರಿಗೆ ಖಂಡಿತ ಅಪಾಯಕಾರಿಯಾಗಿ ಕಂಡಿತ್ತು. ಆ ದಾಳಿಯಲ್ಲಿ ಒಬ್ಬ ಕಾರ್ಮಿಕ (ರಾಮ್ ಬಹಾದ್ದೂರ್ ಎಂಬ ನೇಪಾಳಿ ವಲಸೆ ಕಾರ್ಮಿಕ) ಮತ್ತು ಕಲಾವಿದ (ಸಫ್ದರ್) ಹುತಾತ್ಮರಾದರು ಎಂಬುದು ಅರ್ಥಗರ್ಭಿತ ಸಂಕೇತವೆಂದು ಸುಧನ್ವ ವಿವರಿಸಿದರು.

ಒಟ್ಟಿಗೆ ಪ್ರಕಟಗೊಂಡ ಮೂಲ ಇಂಗ್ಲಿಷ್ ಮತ್ತು ಹಿಂದಿಯ ಅನುವಾದದ ನಂತರ ಮೊದಲ ಅನುವಾದ ಕನ್ನಡದಲ್ಲಿ  ಪ್ರಕಟವಾಗುತ್ತಿರುವುದು ಮತ್ತು ಅದರ ಅನುವಾದವನ್ನು 70ರ ದಶಕದಲ್ಲಿ ಪ್ರಬಲ ಪ್ರಗತಿಪರ ರಂಗಚಳುವಳಿಯನ್ನು ಆರಂಭಿಸಿದ್ದ ಸಮುದಾಯದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮತ್ತು ಸಫ್ದರ್ ಗೆಳೆಯರೂ ಆಗಿದ್ದ ಎಂ.ಜಿ.ವೆಂಕಟೇಶ್  ಮಾಡಿರುವುದು ನನಗೆ ಸಂತೋಷ ತಂದಿದೆ ಮತ್ತು ಅದು ಸೂಕ್ತವೂ ಆಗಿದೆ. ಏಕೆಂದರೆ ಸಫ್ದರ್ ನೋಡಿದ್ದ ಸಮುದಾಯದ ಬೀದಿನಾಟಕ ‘ಬೆಲ್ಚಿ’ಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ, ಎಂದು ಕನ್ನಡ ಅನುವಾದದ ಕುರಿತು ಸುಧನ್ವ ಸಂತೋಷ ವ್ಯಕ್ತ ಪಡಿಸಿದರು.

‘ಅಧಿಕಾರಸ‍್ಥರ ಕೊವಿದ್. ಗೆ ಮದ್ದು ಅರೆಯುವವರ ಧರ್ಮಗ್ರಂಥವಿದು’

ಕೆ.ಎಸ್.ವಿಮಲ, ಎಂ..ಜಿ.ವೆಂಕಟೇಶ , ಅಚ್ಯುತ ಕುಮಾರ್

ಸಫ‍್ದರ್ ಅವರ ಜೀವನ ಮತ್ತು ಆದರ್ಶಗಳು ಕಾರ್ಮಿಕರ ಕಾನೂನುಗಳನ್ನು ಕಾರ್ಮಿಕ ವಿರೋಧಿಯಾಗಿ ಬದಲಾಯಿಸುತ್ತಿರುವಾಗ, ಕಲಾವಿದ-ಬುದ್ಧಿಜೀವಿಗಳ ಬೇಟೆ ಕೊಲೆಗಳು ನಡೆಯುತ್ತಿರುವ ಇಂದು ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆಯೆಂದು ಅನುವಾದಕ ಎಂ..ಜಿ.ವೆಂಕಟೇಶ ಅವರು ಹೇಳಿದರು. 1989ರಲ್ಲಿ ಸಫ್ದರ್ ಅವರ ಸಾವಿನ ನಂತರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಾ ಸರ್ವಾಧಿಕಾರ ಶಕ್ತಿಗಳು ಇನ್ನು ಮೇಲೆ “ತುರ್ತು ಪರಿಸ್ಥಿತಿ ಹೇರುವುದಿಲ್ಲ. ಅದರ ವಿರೋಧಿಗಳನ್ನು ಜೈಲಿಗೆ ಅಟ್ಟುವುದಿಲ್ಲ. ಗೂಂಡಾಗಳನ್ನು ಬಿಟ್ಟು ಕೊಲ್ಲಿಸುತ್ತದೆ” ಎಂದು ಪ್ರೊ. ಜಿ.ಪಿ.ದೇಶಪಾಂಡೆ ಹೇಳಿದ್ದನ್ನು ನೆನಪಿಸಿಕೊಂಡ  ಅವರು ಈ ಮಾತುಗಳನ್ನು ಇವತ್ತೇ ಹೇಳಿದ ಹಾಗಿದೆ ಎಂದರು.

ಸಿನಿಮಾ ರಂಗಭೂಮಿ ಕಲಾವಿದ ಅಚ್ಯುತ ಕುಮಾರ್  ಮಾತನಾಡುತ್ತಾ ಹಶ್ಮಿ ಅವರ ರಂಗ ಚಟುವಟಿಕೆಗಳು, ನಡವಳಿಕೆಗಳು ನಮ್ಮನ್ನು ಸದಾ ಕಾಡುತ್ತವೆ. 1980ರ ದಶಕದಿಂದಲೇ ಆಳುವ ಸರಕಾರಗಳು ಕಲಾವಿದರ ದನಿ ಅಡಗಿಸುವ ಪ್ರಯತ್ನ ಮಾಡುತ್ತಿವೆ. ನಾವೇ ಆಯ್ಕೆ ಮಾಡಿದ ಸರಕಾರಗಳು ನಮ್ಮ ದನಿಯನ್ನು ಅಡಗಿಸುವ ಕೆಲಸ ಮಾಡುತ್ತಿವೆ ಎಂದರು. ರಂಗ ಕಲಾವಿದೆ  ಗಿರಿಜಾ ಪಿ ಸಿದ್ದಿ ಪುಸ್ತಕದ ಒಂದು ಪ್ರಮುಖ ಭಾಗವನ್ನು ಪರಿಣಾಮಕಾರಿಯಾಗಿ ಓದಿದರು.

 

ನಾವು ಇಂದು ಎರಡು ವಿಧವಾದ ಕೊವಿದ್ ಎದುರಿಸುತ್ತಿದ್ದೇವೆ. ಒಂದು ಜನರ ಶ್ವಾಸಕೋಶದ ಮೇಲೆ ದಾಳಿ ಮಾಡಿ ಉಸಿರು ತೆಗೆಯುವ ಕೊವಿದ್. ಅದಕ್ಕೆ ವಿಜ್ಞಾನಿಗಳು ಪ್ರಯೋಗಶಾಲೆಗಳಲ್ಲಿ ವ್ಯಾಕ್ಸೀನ್

ಬೊಳುವಾರು ಮಹಮ್ಮದ್ ಕುಂಞ

ಕಂಡು ಹಿಡಿದಾರು. ಇನ್ನೊಂದು ನಮ್ಮ ಸಂವಿಧಾನದ ಕತ್ತನ್ನು ಒತ್ತಿ ಹಿಡಿದಿರುವ ಅಧಿಕಾರಸ‍್ಥರ ಕೊವಿದ್. ಇದಕ್ಕೆ ಮದ್ದು ಅರೆಯಲು ನಡುಬೀದಿಯಲ್ಲಿ ‘’ಸತ್ಯವನ್ನೇ ಹೇಳುತ್ತೇನೆ, ಸತ್ಯವಲ್ಲದೆ ಇನ್ನೇನನ್ನೂ ಹೇಳುವುದಿಲ್ಲ’ ಎಂದು ಗಟ್ಟಿದನಿಯಲ್ಲಿ ಹೇಳಬಲ್ಲ ಯುವಜನರೇ ಬೇಕು. ಗಾಂಧೀಜಿಯವರ ಕನಸಿನ ‘ರಾಮರಾಜ್ಯ’ವನ್ನು ಕಟ್ಟಬಯಸುವ ಅವರಿಗೆ ಈ ‘ಹಲ್ಲಾ ಬೋಲ್’ ಎಂಬ ಪುಸ್ತಕ ಒಂದು ಭಗವದ್ಗೀತೆಯೇ ಆಗಬಹುದು ಎಂದು ಮಾರ್ಮಿಕ ಸಮಾರೋಪ ನುಡಿಗಳನ್ನಾಡಿದವರು  ಸಮುದಾಯ ಕರ್ನಾಟಕದ ಗೌರವಾಧ್ಯಕ್ಷ ಮತ್ತು ಹಿರಿಯ ಲೇಖಕ ಬೊಳುವಾರು ಮಹಮ್ಮದ್ ಕುಂಞ.

ಸಮುದಾಯ ಕರ್ನಾಟಕದ ಕೆ.ಎಸ್.ವಿಮಲ ಅವರು ಈ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಋತುಮಾನ  ಜತೆ ಸಹಯೋಗದಲ್ಲಿ ತಯಾರಿಸಿದ ಮತ್ತು ಅವರ ಆಪ್ ನಲ್ಲಿ ಲಭ್ಯವಿರುವ ‘ಹಲ್ಲಾ ಬೋಲ್; ಇ-ಪುಸ್ತಕ ಅವತರಣಿಕೆಯನ್ನೂ ಬಿಡುಗಡೆ ಮಾಡಲಾಯಿತು. ಮಾಧ್ಯಮ ಸಹಯೋಗ ನೀಡಿದ್ದ ಜನಶಕ್ತಿ ಮೀಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಈ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಿತು.

 

 

 

 

 

 

 

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *