- 2012ರಲ್ಲಿ ಅಜಾದ್‍ನಗರ ಕಾರ್ಪೋರೆಟರ್ ಅಕ್ರಮ ಬಯಲಿಗೆಳೆದಿದ್ದ ಹಿನ್ನೆಲೆಯಲ್ಲಿ ಲಿಂಗರಾಜು ಹತ್ಯೆ
ಬೆಂಗಳೂರು: ಹತ್ತು ವರ್ಷಗಳ ಹಿಂದೆ ನಡೆದ ಆರ್ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಗೌರಮ್ಮ ಹಾಗೂ ಆಕೆಯ ಪತಿ ಗೋವಿಂದರಾಜು ಸೇರಿದಂತೆ ಎಲ್ಲಾ 12 ಆರೋಪಿಗಳಿಗೆ ಬೆಂಗಳೂರಿನ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ , ತಲಾ 25 ಸಾವಿರ ರೂ. ದಂಡ ವಿಧಿಸಿದೆ.
ಈ ಹತ್ಯೆ ಪ್ರಕರಣದಲ್ಲಿ ಗೋವಿಂದರಾಜು, ಗೌರಮ್ಮ ಗೋವಿಂದರಾಜು ಜೊತೆಗೆ ರಂಗನಾಥ್, ಶಂಕರ್, ರಾಘವೇಂದ್ರ, ಚಂದ್ರ, ಉಮಾಶಂಕರ್, ಭವಾನಿ, ವೇಲು, ಸುರೇಶ್ ಮತ್ತು ಜಾಹೀರ್ ಅವರು ಇತರ ಅಪರಾಧಿಗಳಾಗಿದ್ದಾರೆ.
2012ರ, ನವೆಂಬರ್ 20ರಂದು ದುಷ್ಕರ್ಮಿಗಳು ಆರ್ಟಿಐ ಕಾರ್ಯಕರ್ತ ಲಿಂಗರಾಜು ಅವರನ್ನ ಅವರ ವಿಠಲ್ ನಗರ ನಿವಾಸದ ಬಳಿ ಹಲ್ಲೆ ಮಾಡಿ ಹತ್ಯೆಗೈದಿದ್ದರು. ಆಗ ಆಜಾದನಗರ್ ಕಾರ್ಪೊರೇಟರ್ ಆಗಿದ್ದ ಗೌರಮ್ಮ ಅವರ ಗಂಡ ಗೋವಿಂದರಾಜು ಈ ಕೊಲೆಗೆ ಏಳು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು. ಹಾಗೆ ಕೊಡಲು ಕಾರಣವಾಗಿದ್ದು ಲಿಂಗರಾಜು ಅವರು ಗೋವಿಂದರಾಜು ವಿರುದ್ಧ ಲೋಕಾಯುಕ್ತ ಕೋರ್ಟ್ನಲ್ಲಿದಾಖಲಿಸಿದ್ದ ಖಾಸಗಿ ದೂರು. ಕಾರ್ಪೊರೇಟರ್ ಮತ್ತವರ ಪತಿಯಿಂದ ಹಣದ ಅವ್ಯವಹಾರ ನಡೆದಿದೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಉಪಲೋಕಾಯುಕ್ತರ ಬಳಿಯೂ ಅವರು ದೂರು ದಾಖಲಿಸಿದ್ದರು. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಲಿಂಗರಾಜು ಅವರು ಲೋಕಾಯುಕ್ತಕ್ಕೆ ನೀಡಿದ್ದರು.
ಈ ದೂರಿನ ಮೇರೆಗೆ 2012ರ ನವೆಂಬರ್ 9ರಂದು ಲೋಕಾಯುಕ್ತ ಪೊಲೀಸರು ಕಾರ್ಪೊರೇಟರ್ ಮನೆಗೆ ರೇಡ್ ಮಾಡಿ ಏಳು ಕೋಟಿ ರೂ ಮೊತ್ತದ ಚಿನ್ನ, ಆಸ್ತಿಪತ್ರ ಮತ್ತಿತರ ಆಸ್ತಿಗಳನ್ನ ವಶಪಡಿಸಿಕೊಂಡಿದ್ದರು. ಇದಾಗಿ 10 ದಿನಗಳ ಬಳಿಕ ವಿಠಲ್ ನಗರದಲ್ಲಿರುವ ತಮ್ಮ ಮನೆಯ ಬಳಿ ಲಿಂಗರಾಜು ಅವರು ಹತ್ಯೆಯಾಗಿದ್ದರು. ಮರುದಿನವೇ ರಾಜ್ಯ ಉಚ್ಚ ನ್ಯಾಯಾಲಯವು ಸುವೋ ಮೋಟೋ ಪ್ರಕರಣ ದಾಖಲಿಸಿಕೊಂಡಿತು. ಬಳಿಕ ಕೋರ್ಟ್ ಸೂಚನೆ ಮೇರೆಗೆ ಕೊಲೆ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಲಾಯಿತು.
ವಿಶೇಷ ತನಿಖಾ ತಂಡ ಗೌರಮ್ಮ ಮತ್ತು ಗೋವಿಂದರಾಜು ಸೇರಿ 12 ಮಂದಿ ವಿರುದ್ಧ 4,500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಆ 12 ಮಂದಿಯ ಅಪರಾಧ ಸಾಬೀತಾಗಿ ಈಗ ಸರಿಯಾಗಿ 10 ವರ್ಷಗಳ ಬಳಿಕ ಲಿಂಗರಾಜು ಸಾವಿಗೆ ನ್ಯಾಯ ಸಿಕ್ಕಿದ್ದು, ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ.