ಮೈತ್ರಿಕೂಟದಲ್ಲಿ ಮೋದಿ, ನಿತೀಶ್ ಪ್ರತ್ಯೇಕ ಜಾಹೀರಾತು

  • ಮೋದಿ ವಿರೋಧಿಸುವವರ ಮತಸೆಳೆಯಲು ನಿತೀಶ್‍ ತಂತ್ರ

ಪಟನಾ: ಬಿಹಾರ ಚುನಾವಣೆಯನ್ನು ಎನ್‌ಡಿಎ ಮೈತ್ರಿಕೂಟದ ಹೆಸರಿನಲ್ಲಿ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಜತೆಗೂಡಿ ಎದುರಿಸುತ್ತಿದೆ. ಆದರೆ ಕರಪತ್ರ, ಭಿತ್ತಿಪತ್ರ ಹಾಗೂ ಜಾಹೀರಾತುಗಳಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿರುವ ಭಾವನೆ ಮೂಡುವಂತೆ ಪ್ರಚಾರ ನಡೆಸುತ್ತಿವೆ.

ಬಿಜೆಪಿಯ ಭಿತ್ತಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರಾಜಮಾನರಾಗಿದ್ದಾರೆ. ಪತ್ರಿಕೆಗಳಿಗೆ ನಿತೀಶ್ ಕುಮಾರ್ ನೀಡಿರುವ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯ ಉಲ್ಲೇಖವೇ ಇಲ್ಲ!

ಬಿಜೆಪಿ ನೀಡಿದ್ದ ಜಾಹೀರಾತಿನಲ್ಲಿ ನಿತೀಶ್ ಇಲ್ಲದಿರುವುದು

ಬಿಹಾರದ ಪ್ರಮುಖ ದಿನಪತ್ರಿಕೆಗಳಲ್ಲಿ ಶನಿವಾರ ಪ್ರಕಟವಾಗಿದ್ದ ಜಾಹೀರಾತುಗಳಲ್ಲಿ ‘ಬಿಜೆಪಿ ಹೈ ತೊ ಭರೋಸಾ ಹೈ’ (ಬಿಜೆಪಿ ಇದ್ದೆಡೆ ನಂಬಿಕೆ ಇರುತ್ತೆ) ಎಂಬ ಸಾಲು ಎದ್ದು ಕಾಣುವಂತಿತ್ತು. ನರೇಂದ್ರ ಮೋದಿ ಅವರ ಚಿತ್ರ ಎದ್ದು ಕಾಣುವಂತಿದ್ದ ಜಾಹೀರಾತಿನಲ್ಲಿ ಉಚಿತ ಕೋವಿಡ್ ಲಸಿಕೆ, ಉದ್ಯೋಗಾವಕಾಶಗಳು ಸೇರಿದಂತೆ ಬಿಜೆಪಿಯ ಚುನಾವಣಾ ಭರವಸೆಗಳು ಮಾತ್ರವೇ ನಮೂದಾಗಿದ್ದವು.

‘ಬಿಹಾರದಲ್ಲಿ ನಿತೀಶ್‌ ಕುಮಾರ್‌ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿ. (ಕೇಂದ್ರ) ಆಡಳಿತಾರೂಢ ಪಕ್ಷವು ಅವರನ್ನು ತನ್ನ ಜಾಹೀರಾತುಗಳಿಂದ ಕೈಬಿಟ್ಟಿದೆ’ ಎಂದು ನಿತೀಶ್ ಅವರ ರಾಜಕೀಯ ಎದುರಾಳಿಗಳಾದ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ

ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಚುನಾವಾಣೆಗೆ ನಿಂತಿರುವ ಚಿರಾಗ್ ಪಾಸ್ವಾನ್‌, ‘ನಿತೀಶ್‌ ಕುಮಾರ್‌ಗೆ ಬೇಕಿರುವಷ್ಟು ಪುರಾವೆ ಇನ್ನೂ ಸಿಕ್ಕಿಲ್ಲ ಎನಿಸುತ್ತದೆ’ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿಗೆ ನಿಷ್ಠರಾಗಿದ್ದರೂ ನಿತೀಶ್‌ ಕುಮಾರ್‌ರ ಜೆಡಿಯು ಸೋಲಿಸಲು ಚಿರಾಗ್ ಪಣ ತೊಟ್ಟಿದ್ದಾರೆ.

‘ತಮಗೆ ಪೂರ್ಣ ಪುಟದ ಜಾಹೀರಾತು ಮತ್ತು ಪ್ರಮಾಣ ಕೊಟ್ಟಿದ್ದಕ್ಕಾಗಿ ಎನ್‌ಡಿಎಗೆ ನಿತೀಶ್‌ ಕುಮಾರ್‌ ಕೃತಜ್ಞರಾಗಿರಬೇಕು. ಅವರೂ ಸಹ (ಮುಂದಿನ ದಿನಗಳಲ್ಲಿ) ಎನ್‌ಡಿಎ ಮೈತ್ರಿಕೂಟಕ್ಕೆ ಬಿಜೆಪಿಯಷ್ಟೇ ನಿಷ್ಠರಾಗಿರಬೇಕು’ ಎಂದು ಲೋಕಜನಶಕ್ತಿ ಪಕ್ಷವು ವ್ಯಂಗ್ಯವಾಡಿದೆ.

ಅದೇ ಜಾಹೀರಾತಿನ ಚಿತ್ರಗಳನ್ನು ಟ್ವೀಟ್ ಮಾಡಿರುವ ಆರ್‌ಜೆಡಿ, ‘ಬಿಹಾರವು ಮುಖ್ಯಮಂತ್ರಿಗಾಗಿ (ಆಯ್ಕೆಗಾಗಿ) ಮತ ಚಲಾಯಿಸುತ್ತದೆ. ಪ್ರಧಾನಿಗೆ ಅಲ್ಲ’ ಎಂದು ಹೇಳಿದೆ.

ಜೆಡಿಯು ನೀಡಿದ ಜಾಹೀರಾತಿನಲ್ಲಿ ನಿತೀಶ್‍್ ಮಾತ್ರವೇ ಇರುವುದು

ಚುನಾವಣಾ ಜಾಹೀರಾತುಗಳಲ್ಲಿ ಬಿಜೆಪಿ ನಾಯಕರ ಚಿತ್ರಗಳನ್ನು ಹಾಕದಿರುವ ನಿರ್ಧಾರವನ್ನು ನಿತೀಶ್‌ಕುಮಾರ್ ಮೊದಲು ತೆಗೆದುಕೊಂಡರು. ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಕಾರ್ಯಕ್ರಮದ ದಿನ ಬಿಡುಗಡೆ ಮಾಡಿದ್ದ ಜಾಹೀರಾತಿನಲ್ಲಿ ತಮ್ಮ ಚಿತ್ರವನ್ನಷ್ಟೇ ಹಾಕಿಸಿಕೊಂಡಿದ್ದರು. ‘ಸಾತ್ ನಿಶ್ಚಯ್ (ಏಳು ಸಂಕಲ್ಪಗಳು), ಸ್ವಾವಲಂಬಿ ಬಿಹಾರ್’ ಟ್ಯಾಗ್‌ಲೈನ್‌ನ ಆ ಜಾಹೀರಾತಿನ ಮೂಲಕ ಪ್ರಧಾನಿಯ ‘ಆತ್ಮನಿರ್ಭರ್’ ಭಾರತ ಘೋಷಣೆಗೆ ನಿತೀಶ್‌ ತಮ್ಮದೇ ವ್ಯಾಖ್ಯಾನ ನೀಡಿದ್ದರು.

ಈ ಜಾಹೀರಾತುಗಳನ್ನು ಟೀಕಿಸಿದ್ದ ನಿತೀಶ್‌ ಕುಮಾರ್ ವಿರೋಧಿಗಳು, ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಣ ಭಿನ್ನಮತಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದ್ದರು. 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ನಾದಲ್ಲಿ ನಡೆದಿತ್ತು. ಆ ಸಂದರ್ಭ ಪ್ರಕಟವಾಗಿದ್ದ ಜಾಹೀರಾತಿನಲ್ಲಿ ನಿತೀಶ್‌ ಕುಮಾರ್ ಮತ್ತು ನರೇಂದ್ರ ಮೋದಿ ಜತೆಗಿರುವ ಚಿತ್ರವೊಂದು ಗುಜರಾತ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತಿನಲ್ಲಿ ಕಾಣಿಸಿಕೊಂಡಿತ್ತು. ಸಿಟ್ಟಿಗೆದ್ದ ನಿತೀಶ್‌ ಕುಮಾರ್‌ ಈ ಕುರಿತು ತನಿಖೆ ನಡೆಸಲು ತಂಡವೊಂದನ್ನು ಕಳಿಸಿದ್ದರು, ಎಫ್‌ಐಆರ್ ಸಹ ದಾಖಲಿಸಿದ್ದರು.

ಕಳೆದ ಕೆಲ ವರ್ಷಗಳಿಂದ ನಿತೀಶ್‌ ಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. 2013ರಲ್ಲಿ ಅವರು ಬಿಜೆಪಿಯೊಂದಿಗೆ ಮೈತ್ರಿಯನ್ನೂ ಕಡಿದುಕೊಂಡಿದ್ದರು. ಮೂರು ವರ್ಷಗಳ ನಂತರ ಆರ್‌ಜಿಡಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ದೂರವಿಟ್ಟು ಎನ್‌ಡಿಎ ತೆಕ್ಕೆಗೆ ಮರಳಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂರ್ಣ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು.

ಬಿಹಾರದಲ್ಲಿ ಚುನಾವಣೆ ಕಾವೇರಿದ್ದು ಅಕ್ಟೋಬರ್ 28 ಮತ್ತು ನವೆಂಬರ್‌ 7ರಂದು ಮತದಾನ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *