– ಬಿಹಾರಕ್ಕೆ ಕೋವಿಡ್ ಉಚಿತ ಲಸಿಕೆ: ಸ್ವಪಕ್ಷದ ಪ್ರಣಾಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಟು ಟೀಕೆ
ಮೈಸೂರು: ‘ಚುನಾವಣೆಯಲ್ಲಿ ಗೆಲ್ಲದಿದ್ದರೇ ಜನರನ್ನು ಸಾಯಿಸ್ತೀರಾ ?’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಬಿಹಾರ ವಿಧಾನಸಭಾ ಚುನಾವಣೆಗಾಗಿ ಸ್ವಪಕ್ಷ ಬಿಜೆಪಿ ಪ್ರಕಟಿಸಿದ ಪ್ರಣಾಳಿಕೆಯನ್ನೇ ಕಟು ಶಬ್ದಗಳಲ್ಲಿ ಟೀಕಿಸಿದರು.
‘ಗೆದ್ದರೆ ಮಾತ್ರ ಲಸಿಕೆಯಾ? ಗೆಲ್ಲದಿದ್ದರೆ ಜನ ಸತ್ತು ಹೋಗಲಾ?’ ಎಂದು ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಯಾವುದೇ ರಾಜಕೀಯ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹ ಗಂಭೀರ ವಿಷಯವನ್ನು ಪ್ರಕಟಿಸಬಾರದು’ ಎಂದು ಸ್ವಪಕ್ಷದ ಪ್ರಣಾಳಿಕೆಯ ವಿರುದ್ಧವೇ ಹರಿಹಾಯ್ದರು.
ವಿದೂಷಕನಂತೆ ವರ್ತಿಸಬೇಡಿ
‘ಸಿದ್ದರಾಮಯ್ಯಗೆ ಕಾಂಗ್ರೆಸ್ನಲ್ಲಿ ಗೌರವವಿಲ್ಲ. ಒಂದು ಕಡೆ ಡಿಕೆಶಿಯ ಹೆದರಿಕೆ. ಇನ್ನೊಂದೆಡೆ ಈಶ್ವರಪ್ಪ ಎಲ್ಲಿ ಎದ್ದಾನೋ ಎಂಬ ಭಯ. ರಾಜ್ಯ ರಾಜಕಾರಣದ ಪ್ರಸ್ತುತ ಸನ್ನಿವೇಶ ಬುದ್ದಿಗೆಡಿಸಿದೆ. ಇದರಿಂದ ಹತಾಶರಾಗಿ ವಿದೂಷಕನಂತೆ ವರ್ತಿಸಬೇಡಿ’ ಎಂದು ಎಚ್.ವಿಶ್ವನಾಥ್ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರನ್ನು ಸಿದ್ದರಾಮಯ್ಯ ಕಾಡು ಮನುಷ್ಯ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ‘ಕಾಡನ್ನು ಕಾಪಾಡುವವರಿಗೆ, ಕನ್ನಡ ಭಾಷೆಗೆ, ಜನತಂತ್ರ ವ್ಯವಸ್ಥೆಗೆ ಅಪಮಾನ ಮಾಡುತ್ತಿದ್ದೀರಿ. ನಿಮಗೆ ಏಕವಚನ, ಬಹುವಚನ ಗೊತ್ತಿಲ್ವಾ? ಪ್ರಬುದ್ಧತೆಯ ಪ್ರದರ್ಶನಕ್ಕಾಗಿ ಸಂಧಿ ಪಾಠ ಮಾಡುತ್ತಿದ್ದವರು ನೀವು. ಆದರೆ ಇದೀಗ ನಿಮ್ಮ ಮಾತು, ವರ್ತನೆ ಪ್ರಬುದ್ಧವಾಗಿಲ್ಲ. ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದೀರಿ. ನಿಮ್ಮನ್ನು ಕನ್ನಡಿಗರು ಕ್ಷಮಿಸಲ್ಲ’ ಎಂದು ಹರಿಹಾಯ್ದರು.