ಹಿರಿಯ ಹೋರಾಟಗಾರ ಮಾರುತಿ ಮಾನಪಡೆಯವರಿಗೆ ನುಡಿನಮನ

ರೈತ ನಾಯಕ ಹಾಗೂ ಹಿರಿಯ ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆಯವರು ಇಂದು ಬೆಳಗ್ಗೆ 9:30 ಕ್ಕೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು, ಅವರು ಕಳೆದ 15 ದಿನಗಳಿಂದ ಕೋವೀಡ್  ಸೋಂಕಿನಿಂದ ಬಳಲುತ್ತಿದ್ದರು. ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಗಂಟೆಗೆ ಅವರ ಸ್ವಗ್ರಾಮ ಅಂಬಲಗಾ ಗ್ರಾಮದಲ್ಲಿ  ನೇರವೇರುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶೋಷಿತ ಸಮುದಾಯದಿಂದ ಬಂದ ಮಾನ್ಪಡೆಯವರು ರೈತ ಕಾರ್ಮಿಕ ಚಳುವಳಿಯ ಪ್ರಖರ ಮುಂದಾಳಾಗಿ ಗುರುತಿಸಿಕೊಂಡಿದ್ದರು. ಸರಕಾರಿ ಹುದ್ದೆಯನ್ನು ತೊರೆದು 1982 ರಲ್ಲಿ ಜನಪರ ಚಳುವಳಿಗೆ ಧುಮುಕಿದ್ದ ಮಾನ್ಪಡೆಯವರು ರೈತ ಚಳುವಳಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾದವರು.

1995  ರಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ  ಮಾನ್ಪಡೆಯವರು ನಾಡಿನ ತುಂಬೆಲ್ಲ ರೈತಚಳುವಳಿಯನ್ನು ಪ್ರಖರಗೊಳಿಸಿದ್ದವರಲ್ಲಿ ಪ್ರಮುಖರಾಗಿದ್ದಾರೆ. 2017 ರ ವರೆಗೆ ಅವರು  ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾಗಿ ರೈತರ ನಡುವೆ ಕೆಲಸವನ್ನು ಮಾಡಿದ್ದರು. ಮಾರ್ಕ್ಸ್ವಾದಿ ಕಮ್ಯೂನಿಷ್ಟ ಪಕ್ಷದ ರಾಜ್ಯಕಾರ್ಯದರ್ಶಿ ಮಂಡಳಿಯವರೆಗೆ ಸೇವೆಯನ್ನು ಸಲ್ಲಿಸಿದ್ದರು.

1986 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಆರಂಭಿಸಿದ್ದ ಮಾನ್ಪಡೆಯವರು 1996 ರಲ್ಲಿ ಬೀದರ ಲೋಕಸಭಾ ಕ್ಷೇತ್ರದಿಂದ  ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ನಂತರದಲ್ಲಿ ಕಲಬುರ್ಗಿ ಗ್ರಾಮೀಣ (ಕಮಲಾಪುರ) ಮೀಸಲು ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1989 ರಿಂದ ಕರ್ನಾಟಕ ಗ್ರಾಮ ಪಂಚಾಯತಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಕಾರ್ಮಿಕರ ನಡುವೆ ಹಲವು ಹೋರಾಟಗಳನ್ನು ಸಂಘಟಿಸಿದ್ದರು.

ರೈತ ಮತ್ತು ಕಾರ್ಮಿಕ ಚಳುವಳಿಯ ದಲಿತ ಹಕ್ಕುಗಳ ಸಮಿತಿಯ ಮೂಲಕ ದಲಿತರ ಸಂಕಷ್ಟಗಳಿಗೆ ಧ್ವನಿಯಾಗಿದ್ದರು. ಅಲ್ಪಸಂಖ್ಯಾತ ನಾಯಕರ ಜೊತೆ  ನಿಕಟ ಸಂಪರ್ಕ ಹೊಂದಿದ್ದ ಮಾನ್ಪಡೆಯವರು ಕಲಬುರ್ಗಿಯಲ್ಲಿ ಹಲವಾರು ಸೌಹಾರ್ಧ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮುನ್ನುಗ್ಗುವ ಸ್ವಭಾವದವರಾಗಿದ್ದ ಅವರು ಅನೇಕ ಸಂಘರ್ಷಾತ್ಮಕ ಹೋರಾಟಗಳ ಮೂಲಕ ಬಡವರು ಮತ್ತು ಶೋಷಿತರಿಗೆ ನ್ಯಾಯವನ್ನು ಕೊಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿ ಮಾಡಿದ್ದ ಅಪಾಯಕಾರಿ ಕೃಷಿ ಮಸೂದೆಗಳ ವಿರುದ್ದ ಹೋರಾಟ ನಡೆಸಿದ್ದರು. ಸೆಪ್ಟಂಬರ್ 25 ಮತ್ತು 28 ರಂದು ರಾಜ್ಯದಲ್ಲಿ ನಡೆದ ರೈತರ ಹೋರಾಟದಲ್ಲಿ ಪ್ರಮುಖಪಾತ್ರವನ್ನು ವಹಿಸಿದ್ದರು.

ಮಾನ್ಪಡೆಯವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾರುತಿ ಮಾನಪಡೆ ಅವರು ಜನಪರ ಹೋರಾಟಗಳನ್ನೇ ಉಸಿರಾಗಿಸಿಕೊಂಡಿದ್ದವರು. ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನೇ ಪತನಗೊಳಿಸುವ ಆಕ್ರಮಣಕಾರಿ ಆಡಳಿತ ವ್ಯವಸ್ಥೆ ದೇಶದಲ್ಲಿ ಜಾರಿಗೊಳ್ಳುತ್ತಿರುವ ಹೊತ್ತಿನಲ್ಲೇ ಮಾನ್ಪಡೆಯವರು ನಮ್ಮನ್ನೆಲ್ಲಾ ತೊರೆದಿರುವುದು ಚಳವಳಿಗಳ ಪರಂಪರೆಗೆ ತುಂಬಲಾರದ ನಷ್ಟವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಂತಾಪವನ್ನು ಸೂಚಿಸಿದ್ದಾರೆ.

ರೈತ ಕಾರ್ಮಿಕರ ಹಿತಕ್ಕಾಗಿ ಹೋರಾಟ ನಡೆಸುತ್ತಿದ್ದ ಮಾನ್ಪಡೆಯವರು ನಿಧನದಿಂದ ಚಳುವಳಿಗೆ ತುಂಬಲಾರದ ನಷ್ಟ ಎಂದು ಹಿರಿಯ ಕಾರ್ಮಿಕ ಮುಖಂಡರಾದ  ವಿಜೆಕೆ ನಾಯರ್ ಕಂಬನಿ ಮಿಡಿದಿದ್ದಾರೆ.

ಮಾನ್ಪಡೆಯವರು ದಿನ ನಿತ್ಯ ಜನರಿಗಾಗಿ ದುಡಿಯುತ್ತಿದ್ದವರು, ಸದಾ ಜನರ ಒಳಿತಿಗಾಗಿ ಅವರ ಮನಸ್ಸು ಮಿಡಿಯುತ್ತಿತ್ತು. 20 ವರ್ಷದಿಂದ ಅವರು ನನಗೆ ಸ್ನೇಹಿತರಾಗಿದ್ದರು ಎಂದು ಆರ್ಥಿಕ ತಜ್ಞ ಚಂದ್ರಪುಜಾರಿಯವರು ಮಾನ್ಪಡೆಯವರ ಜೊತೆಗಿನ ಒಡನಾಟವನ್ನು ಮೆಲಕು ಹಾಕಿದ್ದಾರೆ.

ಮಾರುತಿ ಮಾನ್ಪಡೆಯವರು ರೈತ, ಕಾರ್ಮಿಕ, ದಲಿತರ ಪರವಾಗಿ ಬಲಿಷ್ಟ ಹೋರಾಟಗಳನ್ನು ಸಂಘಟಿಸಿದ್ದರು. ಸದಾ ಕ್ರೀಯಾಶೀಲರಾಗಿದ್ದ ಅವರು ಯುವಜನರಿಗೆ ಮಾದರಿ ನಾಯಕರಾಗಿದ್ದರು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿಸಿ ಬಯ್ಯಾರೆಡ್ಡಿ ಮಾನ್ಪಡೆಯವರ ಹೋರಾಟಗಳನ್ನು ನೆನಪಿಸಿಕೊಂಡಿದ್ದಾರೆ.

ಸರಕಾರಿ ನೌಕರಿಯನ್ನು ತ್ಯಜಿಸಿ ರೈತ ಚಳುವಳಿಯ ಪೂರ್ಣಾವಧಿ ಕಾರ್ಯಕರ್ತರಾಗಿ 40 ವರ್ಷಗಳ ಕಾಲ ತೊಡಗಿಕೊಂಡಿದ್ದ ಮಾನ್ಪಡೆಯವರು ಪ್ರಗತಿಪರ ಚಳುವಳಿಯ ಮುಂದಾಳಾಗಿದ್ದರು. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹೋರಾಟಗಳಿಗೆ ಮೊನಚನ್ನು ಒತ್ತಿದವರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ಕೃಷಿಸುಗ್ರಿವಾಜ್ಞೆಗಳ ವಿರುದ್ಧ ಪ್ರಭಲ ಹೋರಾಟಗಳನ್ನು ಸಂಘಟಿಸಿದ್ದರು.  ಮಾನ್ಪಡೆಯವರ ನಿಧನ ಸಿಪಿಐಎಂ ಪಕ್ಷಕ್ಕೆ ಹಾಗೂ ಪ್ರಗತಿಪರ ಚಳುವಳಿಗೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ರವರು ಸಂತಾಪವನ್ನು ಸೂಚಿಸಿದ್ದಾರೆ.

ಜನಶಕ್ತಿ ಮೀಡಿಯಾ ಜನಪರವಾದ ಮಾಧ್ಯಮವಾಗಲಿ ಎಂದು ಅವರು ಹಾರೈಸಿದ್ದರು, ರಾಜ್ಯದಲ್ಲಿನ ಯಾವುದೇ ಬೆಳವಣಿಗೆಗೆ ತಕ್ಷಣದಲ್ಲೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು. ಇತ್ತೀಚೆಗೆ ಜನಶಕ್ತಿ ಮೀಡಿಯಾದಲ್ಲಿ ಅವರು ವಿದ್ಯುತ್‍ಚ್ಚಕ್ತಿ ಖಾಸಗೀಕರಣದಿಂದಾಗುವ ಅಪಾಯಗಳ ಕುರಿತು ನೇರ ಪ್ರಸಾರದಲ್ಲಿ ಭಾಗವಹಿಸಿದ್ದರು. ಜನಶಕ್ತಿ ಮೀಡಿಯಾ ಮಾರುತಿ ಮಾನ್ಪಡೆಯವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *