- ಇಂದು ಮತ್ತೆ ಹತ್ರಾಸ್ಗೆ ತೆರಳಲಿರುವ ರಾಹುಲ್ ಗಾಂಧಿ
ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರಗೈದು ಬಳಿಕ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಆಕೆ 15 ದಿನಗಳ ಕಾಲ ಚಿಕಿತ್ಸೆ ಪಡೆದು ಬಳಿಕ ಸಾವನ್ನಪ್ಪಿದ್ದಳು. ಆ ಹತ್ರಾಸ್ ಹಳ್ಳಿಗೆ ಇಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆರಳಲಿದ್ದಾರೆ.
ಮೊನ್ನೆ ಕೂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಹತ್ರಾಸ್ ಗೆ ತೆರಳಲು ಪ್ರಯತ್ನಿಸಿದ್ದರು. ಆಗ ಅವರನ್ನು ಡೆಲ್ಲಿ-ನೋಯ್ಡಾ ರಸ್ತೆಯಲ್ಲೇ ತಡೆಯಲಾಗಿತ್ತು. ಉತ್ತರ ಪ್ರದೇಶ ಪೊಲೀಸರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಳ್ಳಾಡಿದ್ದರು. ಆದರೂ ಅತ್ಯಾಚಾರಕ್ಕೆ ಒಳಗಾಗಿದ್ದ ಕುಟುಂಬವನ್ನು ಭೇಟಿ ಮಾಡೇ ಮಾಡುತ್ತೇವೆ, ಆ ಕುಟುಂಬದ ಜೊತೆಗೆ ನಿಲ್ಲುತ್ತೇವೆ, ಅವರಿಗೆ ಸಾಂತ್ವನ ಹೇಳುತ್ತೇವೆ. ಕಡೆ ಪಕ್ಷ ಕಾರ್ಯಕರ್ತರೆಲ್ಲರನ್ನು ಬಿಟ್ಟು ನಮಗಿಬ್ಬರಿಗೆ ಅವಕಾಶ ಕೊಡಿ ಎಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದರು.
ಅಕ್ಷರಶಃ ಗೂಂಡಾಗಳಂತೆ ವರ್ತಿಸಿದ್ದ ಉತ್ತರ ಪ್ರದೇಶ ಪೊಲೀಸರು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಲವಂತದಿಂದ ವಾಪಸ್ ಕಳುಹಿಸಿದ್ದರು. ಇದಾದ ಬಳಿಕ ನಿನ್ನೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರಾದ ಡೆರೆಕ್ ಒಬ್ರಾಯ್, ಕಕೊಲಿ ಗೋಶ್ ದಸ್ತಿದರ್, ಪ್ರತಿಮಾ, ಮಾಜಿ ಸಂಸದೆ ಮಮತಾ ಠಾಕೂರ್ ಅವರ ಸಂತ್ರಸ್ತ ಯುವತಿ ಕುಟುಂಬ ಭೇಟಿಯಾಗಿ ಸಾಂತ್ವನ ನೀಡಲು ಮುಂದಾಗಿದ್ದರು. ಉತ್ತರ ಪ್ರದೇಶ ಪೊಲೀಸರು ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗವನ್ನು ತಡೆದಿದ್ದರು. ಇದಲ್ಲದೆ ಹತ್ರಾಸ್ ಗ್ರಾಮಕ್ಕೆ ಮಾಧ್ಯಮದವರು ಭೇಟಿ ನೀಡಬಾರದು, ಸಂತ್ರಸ್ತ ಕುಟುಂಬದವರ ಸಂದರ್ಶನ ಮಾಡಬಾರದೆಂದು ನಿರ್ಬಂಧ ಹೇರಲಾಗಿತ್ತು.
ಮೊದಲಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಡೆದ ಬಗ್ಗೆ, ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗವನ್ನು ತಡೆದ ಬಗ್ಗೆ ಹಾಗೂ ಹತ್ರಾಸ್ ಗ್ರಾಮಕ್ಕೆ ಮಾಧ್ಯಮದವರು ಭೇಟಿ ನೀಡಬಾರದು, ಸಂತ್ರಸ್ತ ಕುಟುಂಬದವರ ಸಂದರ್ಶನ ಮಾಡಬಾರದೆಂದು ನಿರ್ಬಂಧ ಏರಿದ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ನಡುವೆ ಹತ್ರಾಸ್ ಗ್ರಾಮಕ್ಕೆ ರಾಜಕೀಯ ನಾಯಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಹೋಗಲು ಅವಕಾಶ ಕಲ್ಪಿಸಬೇಕೆಂದು ನೇರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ನಾಯಕಿ ಉಮಾಭಾರತಿ ಒತ್ತಾಯಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಒತ್ತಡಕ್ಕೆ ಮಣಿದಿರುವ ಉತ್ತರ ಪ್ರದೇಶ ಸರ್ಕಾರ ಈಗ ಹತ್ರಾಸ್ ಗ್ರಾಮಕ್ಕೆ ತೆರಳಲು ಹಾಗೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಮಾಧ್ಯಮಗಳಿಗೆ ಅನುಮತಿ ನೀಡಿದೆ. ಮಾಧ್ಯಮಗಳಿಗೆ ಅನುಮತಿ ನೀಡುತ್ತಿದ್ದಂತೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಇಂದು ಮತ್ತೊಮ್ಮೆ ಹತ್ರಾಸ್ ಗೆ ತೆರಳಲು ಸಿದ್ದವಾಗಿದೆ.
ಇಂದು ಮಧ್ಯಾಹ್ನ ದೆಹಲಿಯಿಂದ ಹೊರಡಲಿರುವ ರಾಹುಲ್ ಗಾಂಧಿ ನೇತೃತ್ವದ ನಿಯೋಗವು ಹತ್ರಾಸ್ ಗೆ ತೆರಳಿ ಅತ್ಯಾಚಾರಕ್ಕೆ ಒಳಗಾಗಿದ್ದ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ನಿರ್ಧರಿಸಿದೆ. ಇಂದಾದರೂ ರಾಹುಲ್ ಗಾಂಧಿ ಅವರನ್ನು ಹತ್ರಾಸ್ ಗೆ ಹೋಗಲು ಉತ್ತರ ಪ್ರದೇಶ ಪೊಲೀಸರು ಬಿಡುವರೇ ಎಂಬುದನ್ನು ಕಾದುನೋಡಬೇಕು.