ಹತ್ರಾಸ್​ ಅತ್ಯಾಚಾರ ಪ್ರಕರಣ; ನ್ಯಾಯಾಂಗ ತನಿಖೆಗೆ ಮೃತ ಯುವತಿಯ ಕುಟುಂಬಸ್ಥರ ಒತ್ತಾಯ

ನವದೆಹಲಿ: ನಮ್ಮ ಮಗಳ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ನಾವು ಯಾರೂ ಒತ್ತಾಯಿಸಿಲ್ಲ. ನಮಗೆ ಸಿಬಿಐ ತನಿಖೆ ಬೇಕಾಗಿಯೂ ಇಲ್ಲ. ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಸಾವಿನ ಪ್ರಕರಣದ ತನಿಖೆಯಾಗಬೇಕು. ಎಸ್​ಐಟಿ ಬಗ್ಗೆ ನಮಗೆ ಕೊಂಚವೂ ನಂಬಿಕೆಯಿಲ್ಲ. ಎಸ್​ಐಟಿ ಕೂಡ ಆರೋಪಿಗಳ ಪರವಾಗಿದೆ ಎಂಬ ಅನುಮಾನ ನಮಗಿದೆ. ರಾಜಕಾರಣಿಗಳು ನಮಗೆ ನ್ಯಾಯ ಕೊಡಿಸಲೆಂದು ನಮ್ಮ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ ಎಂದು ನಮಗೆ ಅನಿಸುತ್ತಿಲ್ಲ. ಅವರು ಕೇವಲ ರಾಜಕಾರಣ ಮಾಡಲು, ತಮ್ಮ ಸ್ವಾರ್ಥಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರದ ತನಿಖೆ ನಡೆಯುತ್ತಿರುವುದರಿಂದ ಹತ್ರಾಸ್​ಗೆ ಮಾಧ್ಯಮಗಳು ಹೋಗುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ನಿರ್ಬಂಧ ಹೇರಿತ್ತು. ಅಲ್ಲದೆ, ಮೃತ ಯುವತಿಯ ಮನೆಯ ಬಳಿ ಸ್ಥಳೀಯರಿಗೂ ತೆರಳದಂತೆ ನಿಷೇಧ ಹೇರಲಾಗಿತ್ತು. ನಿನ್ನೆ ಮೃತ ಯುವತಿಯ ಮನೆಗೆ ತೆರಳಲು ಹೋಗುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಮಾರ್ಗಮಧ್ಯದಲ್ಲೇ ಪೊಲೀಸರು ತಡೆದಿದ್ದರು. ಈ ವೇಳೆ ಲಾಠಿ ಚಾರ್ಜ್ ಕೂಡ ನಡೆಸಲಾಗಿತ್ತು. ಇಂದು ಹತ್ರಾಸ್​ನಲ್ಲಿ ಜಿಲ್ಲಾಡಳಿತ ಮಾಧ್ಯಮ ನಿರ್ಬಂಧವನ್ನು ತೆರವುಗೊಳಿಸಿದೆ. ಹೀಗಾಗಿ, ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಯುವತಿಯ ಕುಟುಂಬಸ್ಥರು ಈ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
‘ನಮಗೆ ನಾರ್ಕೋ ಟೆಸ್ಟ್​ ಮಾಡಿಲ್ಲ. ಹಾಗೆಂದರೇನು ಎಂದು ಕೂಡ ನಮಗೆ ಗೊತ್ತಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಬೇಡ ಎಂದು ನಾವು ಬೇಡಿಕೊಳ್ಳುತ್ತಿದ್ದೇವೆ. ನಮಗೆ ಸಿಬಿಐ ತನಿಖೆಯಲ್ಲಿ ಯಾವುದೇ ನಂಬಿಕೆಯಿಲ್ಲ. ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಈ ಕೇಸಿನ ತನಿಖೆಯ ನೇತೃತ್ವ ವಹಿಸಿಕೊಳ್ಳಲಿ’ ಎಂದು ಮೃತ ಯುವತಿಯ ತಾಯಿ ಮನವಿ ಮಾಡಿದ್ದಾರೆ.

ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಹತ್ರಾಸ್ ಎಂಬ ಊರಿನ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿತ್ತು. ಹತ್ರಾಸ್​ನಲ್ಲಿ ಮೃತಪಟ್ಟ ಯುವತಿಯ ಕುಟುಂಬಸ್ಥರನ್ನು ದೂರವಿಟ್ಟು ಮಂಗಳವಾರ ರಾತ್ರೋರಾತ್ರಿ ಪೊಲೀಸರೇ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದರು. ಅದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ನಿನ್ನೆ ಉತ್ತರ ಪ್ರದೇಶ ಸರ್ಕಾರ ಹತ್ರಾಸ್​ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ನಿಯೋಜನೆ ಮಾಡಿತ್ತು. ಮೂವರು ಅಧಿಕಾರಿಗಳಿರುವ ಎಸ್​ಐಟಿ ಈ ಪ್ರಕರಣದ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಉಸಿರಾಡಲಾಗದೆ ಆಕೆ ಪರದಾಡಿದ್ದಳು. ಹಾಗೇ, ಈ ವೇಳೆ ಆಕೆಯ ನಾಲಿಗೆ ಕೂಡ ಅರ್ಧ ತುಂಡಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮಂಗಳವಾರ ಸಾವನ್ನಪ್ಪಿದ್ದಳು. ಆಕೆಯ ಕುತ್ತಿಗೆಯನ್ನು ಹಲವು ಬಾರಿ ಒತ್ತಿದ್ದರಿಂದ ಫ್ರಾಕ್ಚರ್ ಆಗಿತ್ತು ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *