ಬೆಂಗಳೂರು :ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಯ ವಿರುದ್ದ ಇಂದು ರೈತರು ದೇಶವ್ಯಾಪಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜನ್ಮದಿನವನ್ನು ರೈತರು ಹೋರಾಟದ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು.
ಕಾರ್ಪೋರೇಟ್ ಕಂಪನಿಗಳ ಪರವಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತು ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ನಿರಂತರವಾಗಿ ಹೋರಾಟ ನಡೆಸುತ್ತಿರುವ ರೈತರು, ಕಾರ್ಮಿಕರು, ದುಡಿಯುವ ವರ್ಗಗಳ ಪ್ರತಿರೋಧವನ್ನು ಲೆಕ್ಕಿಸದೇ, ಸಂಸದೀಯ ಪ್ರಜಾಪ್ರಭುತ್ವ ನಿಯಮಗಳನ್ನು ಗಾಳಿಗೆ ತೂರಿ, ದೇಶದ ಬಹು ಸಂಖ್ಯಾತರನ್ನು ಬಾದಿಸುವ, ದೇಶದ ಆಹಾರ ಭದ್ರತೆ, ಸ್ವಾವಲಂಬನೆಗೆ, ಸ್ವಾತಂತ್ರ್ಯಕ್ಕೆ ದಕ್ಕೆಯಾಗುವ ಕಾರ್ಪೋರೇಟ್ ಕಂಪನಿಗಳ ಪರವಾದ ಧೋರಣೆಯನ್ನು ಹಿಮ್ಮೆಟ್ಟಿಸಲು ದುಡಿಯುವ ವರ್ಗದ ಒಗ್ಗಟ್ಟಿನ ಚಳುವಳಿ ಗಳಿಂದ ಮಾತ್ರ ಸಾಧ್ಯ ಎಂದು ಪ್ರತಿಭಟನೆಕಾರರು ಐಕ್ಯ ಪ್ರದರ್ಶನ ನೀಡಿದ್ದಾರೆ.
ಇಂದು ರಾಜ್ಯವ್ಯಾಪಿ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿ ನಡೆದದ್ದು ಕಲಬುರ್ಗಿ, ಹಾಸನ, ಧಾರವಾಡ, ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ರಾಯಚೂರು, ಗಂಗಾವತಿ, ಸಿರಗುಪ್ಪಾ, ಬಳ್ಳಾರಿ, ಕುರಗೋಡು, ಸೊಂಡುರು, ಹೊಸಪೇಟೆ, ಮಂಡ್ಯ, ಮಳವಳ್ಳಿ ಅಂಕೋಲಾ, ಹುಬ್ಬಳ್ಳಿ, ಕೋಲಾರ, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರ ನಡೆಸುವ ಮೂಲಕ ಕೃಷಿ ಮಸುದೆಯನ್ನು ವಾಪಸ್ಸ ಪಡೆಯುವಂತೆ ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ, ಸ್ವಾವಲಂಬನೆಗಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ `ರಾಷ್ಟ್ರಪಿತ ಗಾಂಧೀಜಿ’ಯವರ ಜನ್ಮ ದಿನವನ್ನು ಸಾಮ್ರಾಜ್ಯಶಾಹಿಗಳು, ಜಾಗತೀಕ ಬಂಡವಾಳಗಾರರು, ಕಾಪೋರೇಟ್ ಕಂಪನಿಗಳಿಗೆ ಈ ದೇಶವನ್ನು ಮತ್ತೆ ಗುಲಾಮರನ್ನಾಗಿ ಮಾಡುವುದಕ್ಕೆ ಬಿಡುವುದಿಲ್ಲ, ಅಂತಹ ನೀತಿಗಳನ್ನು ಹಿಂಪಡೆಯುವವರಿಗೆ ಈ ಸಂಘರ್ಷ ನಿಲ್ಲುವುದಿಲ್ಲ ಎಂದು ರೈತರು ಪ್ರತಿಜ್ಞೇ ಗೈದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು, ರೈತ ಮುಖಂಡ ವೀರ ಸಂಗಯ್ಯ ರೈತರ ವಿರೋಧಿ ನೀತಿಗಳ ವಿರುದ್ದ ಆಕ್ರೊಶ ವ್ಯಕ್ತ ಪಡಿಸಿದರು.
ಪಂಜಾಬ್ ನಲ್ಲಿ ಕೃಷಿ ಸುಗ್ರಿವಾಜ್ಷೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಪ್ರಭಲಗೊಳ್ಳುತ್ತಿದೆ. ಇಂದು ರೈಲು ತಡೆ ನಡೆಸುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 07 ರ ವರೆಗೆ ರೈತರು ರೈಲು ತಡೆ ಮತ್ತು ರಸ್ತೆ ತಡೆ ನಡೆಸಲಿದ್ದೇವೆ ಎಂದು ರೈತ ಸಂಘಟನೆಗಳು ತಿಳಿಸಿದ್ದಾರೆ. ಮಹಾರಾಷ್ಟ್ರ, ಹರ್ಯಾಣದಲ್ಲೂ ಇಂದು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತವಾಗಿದೆ.
ಕೇಂದ್ರ ಸರಕಾರ ಜಾರಿಗೆ ಮುಂದಾಗಿರು ಮೂರು ಕೃಷಿ ಮಸೂದೆಗಳು ಹಾಗೂ ರಾಜ್ಯ ಸರಕಾರ ಜಾರಿ ಮಾಡಲು ಮುಂದಾಗಿರುವ ಭೂಸುಧಾರಣಾ ಮತ್ತು ಎಪಿಎಂಸಿ ತಿದ್ದಿಪಡಿ ಕಾಯ್ದೆಗಳು ರೈತರಿಗೆ ಅಪಾಯಕಾರಿಯಾಗಲಿವೆ ಎಂದು ರೈತರು ಮತ್ತು ರೈತ ಸಂಘಟನೆಗಳು ಹೇಳುತ್ತಲೆ ಬರುತ್ತಿವೆ. ಸರಕಾರ ಹೋರಾಟವನ್ನು ಗೌರವಿಸುವ ಬದಲು ಅವರನ್ನು ಅವಮಾನಿಸುವ ಮತ್ತು ಕಡೆಗಣಿಸುವ ಕೆಲಸ ಮಾಡುತ್ತಿದೆ. ರೈತ ಚಳುವಳಿ ಇನ್ನಷ್ಟು ಪ್ರಖರಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಕೇಂದ್ರ ರಾಜ್ಯ ಸರಕಾರಗಳನ್ನು ಇನ್ನಾದರೂ ಎಚ್ಚೆತ್ತಕೊಂಡು ರೈತರ ಹಿತ ಕಾಪಡಾಲು ಮುಂದೆ ಬರಬೇಕು.