ಬೆಂಗಳೂರು : ಉತ್ತರ ಪ್ರದೇಶದಲ್ಲಿ ಸರಣಿಯ ರೀತಿಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ವಿರುದ್ಧ ದೇಶವ್ಯಾಪೀ ಪ್ರತಿಭಟನೆ ನಡೆದಿದೆ.
ಎರಡು ದಿನಗಳಿಂದ ದೇಶದಾದ್ಯಂತ ಸುದ್ದಿಯಾಗಿರುವ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ಬಾರ್ಬರಿಕವಾಗಿ ಅತ್ಯಾಚಾರ ಎಸಗಿ, ನಾಲಗೆ ಕತ್ತರಿಸಿ, ಬೆನ್ನು ಮೂಳೆ ಮುರಿದು ಹಾಕಿದ ಘಟನೆಗೆ ಅಲ್ಲಿಯ ಸರಕಾರದ ವಿವಿಧ ಆಡಳಿತ ವಿಭಾಗಗಳು ನಡೆದುಕೊಂಡ ರೀತಿಗೆ ಮತ್ತು ಅವಳ ಸಾವಿನ ನಂತರ ಜಿಲ್ಲಾಧಿಕಾರಿ/ಜಿಲ್ಲಾ ದಂಡಾಧಿಕಾರಿಗಳು, ಪೋಲೀಸರು ಶವ ಸಂಸ್ಕಾರಕ್ಕೆ ಕುಟುಂಬದವರಿಗೆ ಅವಕಾಶ ಕೊಡದೇ ಬಂಧನದಲ್ಲಿಟ್ಟು ನಡೆಸಿದ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಕೃತ್ಯವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಷನ್, ಭಾರತ ಯುವಜನ ಫೆಡರೇಷನ್ ಮತ್ತಿತರ ಸಂಘಟನೆಗಳು ದೇಶದಾದ್ಯಂತ ನಿನ್ನೆ ಪ್ರತಿಭಟನೆ ನಡೆಸಿದ್ದರು.
ಇಂದು ಕರ್ನಾಟಕದಲ್ಲಿ ಜನವಾದಿ ಮಹಿಳಾ ಸಂಘಟನೆ, ಎಸ್.ಎಫ್.ಐ, ದಲಿತ ಹಕ್ಕುಗಳ ಸಮಿತಿ, ಏ.ಐ.ಎಲ್.ಯು.ಜಂಟಿಯಾಗಿ ಕರೆ ನೀಡಿದ್ದ ಹೋರಾಟಕ್ಕೆ ರಾಜ್ಯದ ಬೆಂಗಳೂರು, ಕೋಲಾರ ಮಂಡ್ಯ, ಬಳ್ಳಾರಿಯ ಹೊಸಪೇಟೆ, ಕಲ್ಬುರ್ಗಿ, ಉತ್ತರ ಕನ್ನಡ, ರಾಯಚೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ನಡೆದಿವೆ.
ಇದನ್ನು ಓದಿ : ಯೋಗಿಯ ರಾಜ್ಯದಲ್ಲಿ ಭೋಗಿಗಳದೇ ಕಾರುಬಾರು.
ಯೋಗಿ ಆದಿತ್ಯನಾಥರ ಅಧಿಪತ್ಯದಲ್ಲಿ ಉತ್ತರ ಪ್ರದೇಶ ಗೂಂಡಾ ರಾಜ್ಯವಾಗಿ ಪರಿವರ್ತನೆಯಾಗಿದೆ, ನೆಲದ ಕಾನೂನುಗಳಿಗೆ ಬೆಲೆಯೇ ಇಲ್ಲದೇ ಅತ್ಯಾಚಾರಿಗಳು, ವಿವಿಧ ರೀತಿಯ ದೌರ್ಜನ್ಯ ಎಸಗುವವರು ರಾಜಾರೋಷವಾಗಿ ತಿರುಗಾಡುತ್ತಾರೆ. ಜನಪ್ರತಿನಿಧಿಗಳೇ ಬಹಳ ಪ್ರಕರಣಗಳಲ್ಲಿ ಆಪಾದಿತರು ದೋಷಿಗಳು ಇರುವುದು ವಿಪರ್ಯಾಸ. ದೊಡ್ಡವರೇ ಇಂಥಹ ಹೇಯ ಕೃತ್ಯದಲ್ಲಿ ತೊಡಗಿದ್ದರೆ ಇನ್ನು ತಳ ಹಂತದಲ್ಲಿ ಅದೇ ಪ್ರಚೋದಕ ಸಂಗತಿಯಾಗಬಹುದು ಎನ್ನುವುದಕ್ಕೂ ಉತ್ತರ ಪ್ರದೇಶ ಉದಾಹರಣೆಯಾಗಿದೆ. ಯೋಗಿ ಆದಿತ್ಯನಾಥರ ಸಾರಥ್ಯದಲ್ಲಿ ನಡೆಯುತ್ತಿರುವ ಮನುವಾದದ ಅನುಷ್ಠಾವಾಗುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.