ಕರ್ನಾಟಕ ಬಂದ್ ಬೆಂಬಲಿಸಿ ಕೊಡಗಿನಲ್ಲಿ ರಸ್ತೆ ತಡೆ

– ಮಡಿಕೇರಿ, ಕುಶಾಲನಗರದಲ್ಲಿ ಪ್ರತಿಭಟನಾಕಾರರ ಬಂಧನ 

ಕೊಡಗು: ಭೂ ಸುಧಾರಣಾ ಮತು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ಕೊಡಗಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯವ್ಯಾಪಿಯಾಗಿ ಬಂದ್ ಅಂಗವಾಗಿ ಕೊಡಗು ಜಿಲ್ಲೆಯಲ್ಲೂ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರತಿಭಟನಾಕಾರರು ಶಾಂತಿ ಹೋರಾಟ ಆರಂಭಿಸಿದ್ದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಲವಂತವಾಗಿ ಬಂಧಿಸಲು ಮುಂದಾದರು. ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯಿತು. ಕೊನೆಗೂ ಬಿಡದ ಪೊಲೀಸರು ಪ್ರತಿಭಟನಾಕಾರರನ್ನು ವಾಹನಗಳಿಗೆ ತುಂಬಿ ಕರೆದೊಯ್ದರು.

ಇನ್ನು ಮೈಸೂರು ಮತ್ತು ಕೊಡಗು ಗಡಿಭಾಗವಾದ ಕುಶಾಲನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಅನ್ನು ಬಂದ್ ಮಾಡಿ ಪ್ರತಿಭಟಿಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಇದಕ್ಕೂ ಮೊದಲು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆಗೆ ಜಮಾಯಿಸಿದ ಹೋರಾಟಗಾರರು ಮೊದಲಿಗೆ ಅಂಗಡಿ-ಮುಂಗಟ್ಟುಗಳು ಮುಚ್ಚುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಅಂಗಡಿಗಳನ್ನು ಮುಚ್ಚಿಸದಂತೆ ಎಚ್ಚರಿಕೆ ನೀಡಿದರು. ಹೀಗಾಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಪ್ರತಿಭಟನೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಸೂದೆಯನ್ನು ವಾಪಾಸ್ ಪಡೆಯದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ  ಸಮೀಪದ ಬೀಟಿಕಟ್ಟೆಯಲ್ಲೂ ರಕ್ಷಣಾವೇದಿಕೆ ಮತ್ತು ರೈತ ಸಂಘದ ಕಾರ್ಯಕರ್ತರು ಪ್ರತಿಭಟನಡೆಸಿದರು. ಇನ್ನು ವಿರಾಜಪೇಟೆಯಲ್ಲಿ ಬಂದ್ ಅಂಗವಾಗಿ ಆಟೋ ಚಾಲಕರು ಬೆಳಿಗ್ಗೆ ಆರು ಗಂಟೆಯಿಂದಲೇ ಆಟೋಗಳನ್ನು ರಸ್ತೆಗೆ ಇಳಿಸಲಿಲ್ಲ. ಇನ್ನು ಸಿದ್ಧಾಪುರ ನೆಲ್ಯಹುದಿಕೇರಿಗಳಲ್ಲೂ ಹಮಾಲಿಕಾರ್ಮಿಕರ ಸಂಘ ಮತ್ತು ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಜಿಲ್ಲೆಯಲ್ಲಿ ಬಂದ್ ಎಫೆಕ್ಟ್ ನಿಂದಾಗಿ ವಾಹನಗಳ ಓಡಾಟ ಎಂದಿನಂತೆ ಇರದೆ ಕಡಿಮೆ ಇತ್ತು. ಜೊತೆಗೆ ಜಿಲ್ಲೆಯ ಜನರ ಓಡಾಟ ಕೂಡ ಕಡಿಮೆ ಇದ್ದದ್ದು ಕಂಡುಬಂದಿತು.

Donate Janashakthi Media

Leave a Reply

Your email address will not be published. Required fields are marked *