ಬಿಜೆಪಿ ಸರಕಾರಗಳ ರೈತ, ದಲಿತ, ಹಾಗೂ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಗಳ ವಿರುದ್ಧ ಐಕ್ಯ ಹೋರಾಟ

ಬೆಂಗಳೂರು: ‘ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ’ ರಾಜ್ಯದ ಸಾವಿರಾರು ರೈತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನ ಎದುರಿನ ರಸ್ತೆಯಲ್ಲಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರ ಬೆಳಿಗ್ಗೆ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಧಿವೇಶನ ನಡೆಯುತ್ತಿರುವ ವಿಧಾನಸೌಧದತ್ತ ಹೋಗಿ‌ ಮುತ್ತಿಗೆ ಹಾಕಲು ಮುಂದಾದರು. ಮಾರ್ಗಮಧ್ಯೆಯೇ ಪೊಲೀಸರು ಅವರನ್ನು ತಡೆದರು. ಹೀಗಾಗಿ, ರಸ್ತೆಯಲ್ಲಿ ಕುಳಿತು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆಗಳನ್ನ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೆಯೇ, ಕೇಂದ್ರ ಸರ್ಕಾರದ ಕೃಷಿ ಮಸೂದೆಗಳಿಗೂ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕೋವಿಡ್ ಸಂಕಷ್ಟ ಬಂದ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ರೈತರ ಪ್ರತಿಭಟನೆ ಇದಾಗಿದೆ. ಸ್ವರಾಜ್ ಇಂಡಿಯಾದ ರಾಷ್ಟ ಮುಖಂಡ ಯೋಗೇಂದ್ರ ಯಾದವ್ ಐಕ್ಯ ಹೋರಾಟವನ್ನು ಉದ್ಘಾಟಿಸಿ ಮಾತನಾಡಿದರು ” ಬಿಜೆಪಿ ಸರಕಾರ ಅಪಾಯಕಾರಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ನಾಶಮಾಡುತ್ತಿದೆ. ಕೊರೊನಾ ಸಂದರ್ಭವನ್ನು‌ ಬಳಸಿ ಕಾರ್ಪೊರೇಟ್ ಗಳ ಪರವಾದ ಕೆಲಸಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ರೈತರು, ದಲಿತರು, ಕಾರ್ಮಿಕರು ಐಕ್ಯ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ರಾಷ್ಟ್ರ ಮುಖಂಡ ಅಶೋಕ‌ ದಾವಲೆ ಮಾತನಾಡಿ” ರೈತ ವಿರೋಧಿ  ಸುಗ್ರಿವಾಜ್ಞೆಗಳನ್ನು ಪ್ರಶ್ನಿಸುವ ಸಂಸದರನ್ನು ಬಿಜೆಪಿ ಅಮಾನತ್ತು ಮಾಡುತ್ತದೆ ಇದ್ದಕ್ಕಿಂತ ನಾಚಿಕೆಗೇಡಿನ‌ ಸಂಗತಿ ಕೇಂದ್ರ ಸರಕಾರಕ್ಕೆ ಬೇರೇನು ಇಲ್ಲ. ಇದು ರೈತ ವಿರೋಧಿ ಸರಕಾರ, ಕರ್ನಾಟಕದಲ್ಲಿ ಆರಂಭವಾದ ಅಂದೋಲನ ಯಶಸ್ವಿಯಾಗಲಿ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಮಾತನಾಡುತ್ತಾ ” ಬಿಜೆಪಿಯ ರೈತ ವಿರೋಧಿ ನೀತಿಗಳ ವಿರುದ್ಧ ಹರಿಹಾಯ್ದರು, ಐಕ್ಯ ಹೋರಾಟ ಬಲಗೊಂಡರೆ ಮಾತ್ರ ಬಿಜೆಪಿಗೆ ನಡುಕ ಹುಟ್ಟಲು ಸಾಧ್ಯ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಜಸ್ಟೀಸ್ ನಾಗಮೋಹನ್ ದಾಸ್, ಮೈಕಲ್ ಫರ್ನಾಂಡೀಸ್, ಶಿವಕುಮಾರ ಕಕ್ಕಾಜಿ, ಎಸ್. ಆರ್. ಹಿರೇಮಠ, ಕವಿತಾ ಕುರಗುಂಟಿ, ಕುರಬೂರು ಶಾಂತಕುಮಾರ, ಪ್ರಕಾಶ್ ಕಮ್ಮರಡಿ, ಬಡಗಲಪುರ ನಾಗೇಂದ್ರ, ಪಿ.ವಿ ಲೋಕೇಶ್, ಕುಮಾರ ಸಮತಳ, ಯು. ಬಸವರಾಜ್, ಮಾರುತಿ ಮಾನ್ಪಡೆ, ಮೀನಾಕ್ಷಿ ಸುಂದರಂ, ಚಾಮರಸ ಪಾಟೀಲ್ ಸೇರಿದಂತೆ ಸಾವಿರಾರು ರೈತರು ಇದ್ದರು.

 

 

Donate Janashakthi Media

Leave a Reply

Your email address will not be published. Required fields are marked *