ಮೊಘಲರನ್ನು ದೂಷಿಸುವ ಮೂಲಕ ದೂಷಣೆಯ ಆಟ ಆರಂಭವಾಗಿತ್ತು. ನಂತರ, ಬ್ರಿಟಿಷರನ್ನು, ತದನಂತರ ಗಾಂಧಿಗಳನ್ನು (ಬಡಪಾಯಿ ಮಹಾತ್ಮ ಗಾಂಧಿಯನ್ನೂ ಬಿಡಲಿಲ್ಲ), ಅಲ್ಲಿಂದ ಮನಮೋಹನ್ ಸಿಂಗ್, ಅಂತಿಮವಾಗಿ ಜವಾಹರಲಾಲ್ ನೆಹರೂ ಮೇಲೆ ಜಮಾಯಿಸಿದರು. ಆದರೆ ಅರ್ಧಶತಮಾನದ ಹಿಂದೆಯೇ ಸತ್ತಿರುವ ವ್ಯಕ್ತಿಯ ಮೇಲೆ ಎಷ್ಟೊಂದು ಮಣ್ಣು ಹಾಕಲು ಸಾಧ್ಯ? ಅದೂ ಫಜೀತಿಗಳು ತ್ವರಿತವಾಗಿ ರಾಶಿ ಬೀಳುತ್ತಿರುವಾಗ, ಮತ್ತೊಂದು ಬಲಿ ಪಶುವನ್ನು ಹುಡುಕಲೇ ಬೇಕು. ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಬಂದಾಗ, ಮೇಲೆ ಆಕಾಶದತ್ತ ಕೈತೋರಿಸುವುದಕ್ಕಿಂತ ಉತ್ತಮ ಆಯ್ಕೆ ಇದೆಯೇ? ಯಾವ ಪ್ರಶ್ನೋತ್ತರ ಕಾಲವೂ ಬಾಧಿಸದ, ಜೈಲು ಶಿಕ್ಷೆಯನ್ನು ತೋರಿಸಿ ನೋವುಂಟು ಮಾಡಲಾಗದ, ಸವಾಲೇ ಇಲ್ಲದ ದೈವತ್ವವನ್ನು ಹೊದ್ದ ಬಲಿಪಶುವೇ ಸಿಕ್ಕರೆ ಇನ್ನೇನು? ಹೌದು, ಸ್ವಾಮಿ, ಇದೆಲ್ಲವೂ ದೇವರ ಆಟ ಎಂದು ಹೇಳಿದರೆ ಆಯ್ತು. ಮತ್ತೆ, ಒಳ್ಳೆಯ ಕಾಲ (ಅಂದರೆ, ಜಿಡಿಪಿ ಬೆಳವಣಿಗೆ) ಮರಳಿದಾಗ, ಹಿಂದಿನ ಹೇಳಿಕೆಗೆ ಮರುರೂಪ ಕೊಟ್ಟು, ಆ ದೇವರನ್ನು ಒಬ್ಬ ವ್ಯಕ್ತಿಯೊಂದಿಗೆ ಸಮೀಕರಿಸಿ, “ನಾಯಕನಿಗೆ ಜಯವಾಗಲಿ” ಎಂದು ಘರ್ಜಿಸಿದರಾಯಿತು! ಆದರೆ, ಒಳ್ಳೆಯ ಸಮಯ ಬೇಗನೇ ಮರಳದಿದ್ದರೆ ಮಾಡುವುದೇನು?
ಎಂದು ಗಂಭೀರವಾಗಿ ಪ್ರಶ್ನಿಸುತ್ತಾರೆ ಅವಯ್ ಶುಕ್ಲ, ಹತ್ತು ವರ್ಷಗಳ ಹಿಂದೆ ನಿವೃತ್ತರಾಗಿರುವ ಐಎಎಸ್ ಅಧಿಕಾರಿ.
ಕೃಪೆ: ನ್ಯೂಸ್ಕ್ಲಿಕ್, ಸೆಪ್ಟಂಬರ್ 14, 2020 .
“ಕಾನೂನು ಮಿಥ್ಯೆ” ಎಂಬುದು ಒಂದು ವಿಚಾರ ಅಥವ ಪರಿಕಲ್ಪನೆ. ಈ ಪರಿಕಲ್ಪನೆಯ ಪ್ರಕಾರ, ವಾಸ್ತವದಲ್ಲಿ ಒಂದು ಸಂಗತಿ ನಡೆಯದೇ ಇದ್ದರೂ ಸಹ ಕಾನೂನಿನ ದೃಷ್ಟಿಯಲ್ಲಿ ಅದು ನಡೆದಿದೆ ಎಂದು ಭಾವಿಸಲಾಗುತ್ತದೆ(ಉದಾ: ಒಬ್ಬನ ವಿಳಾಸ ತಿಳಿಯದಿರುವಾಗ ಅವನ ಮೇಲೆ ಜಾರಿಮಾಡಬೇಕಾದ ಸಮನ್ಸನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಿ ಅದು ಜಾರಿಯಾದಂತೆ ಭಾವಿಸಲಾಗುತ್ತದೆ) ಕಾನೂನು ಅಥವಾ ಸಂಪ್ರದಾಯ ಅಥವಾ ನಂಬಿಕೆಯ ಪ್ರಕಾರ ಇದು ಮಾನವ ಕೋಟಿಯ ಒಳಿತಿಗೆ ಎನ್ನಲಾಗುತ್ತದೆ. ಈ ಕಾನೂನು ಮಿಥ್ಯೆಯ ಕೆಲವು ಮುಖ್ಯವಾದ ಉದಾಹರಣೆಗಳೆಂದರೆ: ನ್ಯಾಯ, ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಮಾನತೆ. ವಾಸ್ತವಿಕ ಜಗತ್ತಿನಲ್ಲಿ ಅವುಗಳ ನಿಜ ಅರ್ಥದಲ್ಲಿ ಅವು ಇಲ್ಲವೇ ಇಲ್ಲ. ಆದರೆ, ಅವು ಇವೆ ಎಂದು ನಮ್ಮನ್ನು ನಂಬಿಸಲಾಗಿದೆ. ಒಂದು ಸುವ್ಯವಸ್ಥಿತ ಮತ್ತು ಸ್ಥಿರ ಸಮಾಜಕ್ಕೆ ಕಾನೂನು, ಸಂಪ್ರದಾಯ ಮತ್ತು ನಂಬಿಕೆಗಳು ಅಗತ್ಯವಾಗುತ್ತವೆ. ಅವು ಇಲ್ಲದಿದ್ದರೆ ಸಮಾಜವು ಅವ್ಯವಸ್ಥೆಯ ಸ್ಥಿತಿಗೆ ಇಳಿಯುತ್ತದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಸಂವಿಧಾನವೂ ಸಹ ಒಂದು “ಕಾನೂನು ಮಿಥ್ಯೆ” ಆಗಿಯೇ ಕಾಣುತ್ತದೆ. ದೇವರು ಎಂಬುದು ಕೂಡ. ವಾಸ್ತವವಾಗಿ ದೇವರು ಎಂಬುದು ಅಸ್ತಿತ್ವದಲ್ಲಿಲ್ಲ. ಕೊನೆಯ ಪಕ್ಷ ವಿಜ್ಞಾನವು ತೃಪ್ತಿಕರವಾಗಿ ಒಪ್ಪಿಕೊಳ್ಳುವ ಮಟ್ಟಿಗಂತೂ ಇಲ್ಲ. ಆದರೆ, ಶ್ರದ್ಧೆ, ಭಕ್ತಿ, ನಂಬಿಕೆಗಳ ದೃಷ್ಟಿಯಲ್ಲಿ ಮತ್ತು ಒಂದು ಸ್ಥಿರ ಸಮಾಜದ ಹಿತದೃಷ್ಟಿಯಲ್ಲಿ ದೇವರ ಅಸ್ತಿತ್ವವನ್ನು ಜನರು ನಂಬುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ಇದು ಅಧಿಕಾರ ಹಿಡಿಯಲು ಬಿಜೆಪಿ-ಆರ್ಎಸ್ಎಸ್ ಜೋಡಿಯು ಸಂಪೂರ್ಣವಾಗಿ ಬಳಸಿಕೊಂಡಿರುವ ಒಂದು ಮಿಥ್ಯೆ. ಅವರು ಇದನ್ನು ಎಷ್ಟೊಂದು ಲಾಭದಾಯಕವಾಗಿ ಉಪಯೋಗಿಸಿಕೊಂಡಿದ್ದಾರೆಂದರೆ ಆ ಮಟ್ಟಿಗೆ ಈ ಹಿಂದೆ ಯಾರೂ ಬಳಸಿಕೊಂಡಿಲ್ಲ ಮತ್ತು ಬಹುಷಃ ಮುಂದೆಯೂ ಸಹ ಯಾರಿಗೂ ಸಾಧ್ಯವಿಲ್ಲ. ಈ ವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ನಡೆಸಿದ ಚಳವಳಿ ಮತ್ತು ಈಗ ರಾಮಮಂದಿರ ನಿರ್ಮಾಣದ ಆರಂಭವು ಇದಕ್ಕೆ ಒಂದು ಉತ್ತಮ ಉದಾಹರಣೆ. ವಾಸ್ತವವಾಗಿ, ಇದು ದೇವರು ಮತ್ತು ನ್ಯಾಯ- ಈ ಎರಡು ಕಾನೂನು ಮಿಥ್ಯೆಗಳು ಕಲೆತು ಏಕೀಭವಿಸಿ ಬಿಜೆಪಿಯ ಉದ್ದೇಶವನ್ನು ಈಡೇರಿಸಿದ ನಿದರ್ಶನ. ಅದರಲ್ಲೂ ನ್ಯಾಯದ ಕಲ್ಪನೆಯಂತೂ ಸರ್ವೋಚ್ಚ ನ್ಯಾಯಾಲಯದ ವಿವರಿಸಲಾಗದ ತೀರ್ಪಿನ ರೂಪದಲ್ಲಿ ಒಂದು ಸಮುದಾಯದ ನಿರೀಕ್ಷೆಗಳನ್ನು ಹುಸಿಗೊಳಿಸಿತು, ಆದರೆ ಒಬ್ಬ ನ್ಯಾಯಾಧೀಶರನ್ನು ಸಂಸದೀಯ ಎತ್ತರಕ್ಕೆ ಕೊಂಡೊಯ್ದಿತು.
ಆದರೆ, ಮಿಥ್ಯೆ ಎಂದರೆ ಆಡಳಿತದಲ್ಲಿರುವ ಬಿಜೆಪಿಗೆ ಭಾರೀ ಹಿತವೆನಿಸುವ ಸಂಗತಿ. ಏಕೆಂದರೆ, ಅದು ಎದೆ ತಟ್ಟಿ ಹೇಳುವ ಸಾಧನೆಗಳು ಮತ್ತು ಆಶ್ವಾಸನೆಗಳು ಕಲ್ಪನಾವಿಹಾರಗಳಲ್ಲವೆಂದರೂ ಬಹುಪಾಲು ಮಿಥ್ಯೆಗಳಂತೂ ಹೌದು; ವೇಗದ ಆರ್ಥಿಕ ಬೆಳವಣಿಗೆ, ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ, ೨೧ ದಿನಗಳಲ್ಲಿ ಕೊರೊನಾ ಸಾಂಕ್ರಾಮಿಕದ ನಿರ್ಮೂಲನೆ, ಭಾರತವನ್ನು ʻವಿಶ್ವಗುರು’ ಮಾಡುವುದು, ಹವಾಮಾನ ಬದಲಾವಣೆ ಸುಧಾರಣೆಗಳಲ್ಲಿ ಜಗತ್ತಿಗೆ ಮುಂದಾಳತ್ವ, ವರ್ಷಕ್ಕೆ ಒಂದು ಕೋಟಿ ಹೊಸ ಉದ್ಯೋಗಗಳ ಸೃಷ್ಟಿ, ಕಪ್ಪು ಹಣ ನಿರ್ಮೂಲನೆ, ದೇಶವನ್ನು ಒಗ್ಗೂಡಿಸುವುದು ಮತ್ತು ಜಿಎಸ್ಟಿಯ ಮೂಲಕ ಇಡೀ ತೆರಿಗೆ ವ್ಯವಸ್ಥೆಯನ್ನು ಕ್ರಾಂತಿಕಾರಕವಾಗಿಸುವ ಕೆಲಸ.
ಇನ್ನೂ ಹಲವು ಸೃಜನಶೀಲ ಕಪೋಲ ಕಲ್ಪನೆಗಳಿವೆ. ಆದರೆ, ಪ್ರಸಕ್ತ ಆಡಳಿತವು ವಾಸ್ತವ ಮತ್ತು ಮಿಥ್ಯೆಯ ನಡುವಿನ ವ್ಯತ್ಯಾಸದ ಗೆರೆಗಳನ್ನು, ತನ್ನದೇ ಕ್ರಿಯೆಗಳು ಮತ್ತು “ದೇವರ ಆಟ”ದ ನಡುವಿನ ವ್ಯತ್ಯಾಸವನ್ನು ಅಳಿಸಿ ಹಾಕಿದೆ ಎಂದು ಉದಹರಿಸಲು ಇವಿಷ್ಟು ಸಾಕು. ನಮ್ಮ ಹಣಕಾಸು ಸಚಿವರ ಇತ್ತೀಚಿನ ಹೇಳಿಕೆ ಈ ಬಗ್ಗೆ ದೊರಕುವ ಒಂದು ಅಧಿಕೃತ ಧೃಢೀಕರಣ. ನಮ್ಮ ಅರ್ಥವ್ಯವಸ್ಥೆಯು (-) ೨೩.೯% ದಷ್ಟು ಭಯಾನಕವಾಗಿ ಕುಸಿದಿರುವುದು ಒಂದು “ದೇವರ ಆಟ”, ಆದ್ದರಿಂದ ರಾಜ್ಯಗಳಿಗೆ ಜಿಎಸ್ಟಿ ಬಾಕಿಯನ್ನು ಕೇಂದ್ರ ಸರ್ಕಾರ ಪಾವತಿಸಬೇಕಾಗಿಲ್ಲ. ವಾಸ್ತವವಾಗಿ, ಈ “ದೇವರ ಆಟ”ವೂ ಒಂದು ಕಾನೂನು ಮಿಥ್ಯೆಯೇ!
ನಿರ್ಮಲಾ ಸೀತಾರಾಮನ್ ಬಹಳ ಧಾರ್ಮಿಕ ಶ್ರದ್ಧೆಯ ವ್ಯಕ್ತಿ: ಅವರು ಈರುಳ್ಳಿ ತಿನ್ನುವುದಿಲ್ಲ. ಅವರು ಮಂಡಿಸುವ ಬಜೆಟ್ ಅಂಕಿ-ಅಂಶಗಳಿಗಿಂತಲೂ ಅವರು ಉದ್ಧರಿಸುವ ಪ್ರಾಚೀನ ಸಾಹಿತ್ಯದ ಶ್ರೇಷ್ಠ ಕೃತಿಗಳ ಅಣಿ ಮುತ್ತುಗಳೇ ಹೆಚ್ಚು ನೈಜವಾಗಿವೆ. ಸರಸ್ವತಿ ನದಿ ಎಂಬ ಒಂದು ಪುರಾಣದ ನದಿ ಹರಿಯುತ್ತಿದ್ದುದು ಸತ್ಯ ಎಂದು ಹೇಗೆ ಅವರು ನಂಬುತ್ತಾರೋ, ಆರ್ಥಿಕತೆಯ “ಹಸಿರು ಚಿಗುರು” ಗಳು ಮೂಡುತ್ತಿವೆ ಎಂಬ ಅವರ ನಂಬಿಕೆಯೂ ಅಷ್ಟೇ ನೈಜವಾಗಿದೆ. ಸಮಸ್ಯೆ ಎಂದರೆ, ಇವೆಲ್ಲ ನಿರ್ಮಲಾ ಸೀತಾರಾಮನ್ ಕಣ್ಣಿಗೆ ಮಾತ್ರ ಕಾಣುತ್ತವೆ. ಬೇರೆ ಯಾರಿಗೂ ಕಾಣುವುದಿಲ್ಲ. ಆದ್ದರಿಂದ, ಈ ಶ್ರದ್ಧಾವಂತೆಯಿಂದ ದೇವರ ದೂಷಣೆಯನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ಇವರಿಗೂ ಇನ್ನೊಬ್ಬ ಮಹಾನ್ ದೈವಭಕ್ತ ಅರ್ಜೆಂಟೈನಾದ ಖ್ಯಾತಿವೆತ್ತ ಫುಟ್ಬಾಲ್ ಆಟಗಾರ ಡಿಯಾಗೊ ಮರಡೋನಾಗೂ ಇರುವ ಸಾಮ್ಯತೆಗಳು ಬಹಳ ಕಡಿಮೆ. ಆದರೆ ಆತನೂ ‘ದೇವರ ಕೈ’ ಬಗ್ಗೆ ಮಾತನಾಡಿದ್ದ. ಆದರೆ ಅವನೇನೋ ಆ ಕೈಯಿಂದ ತನ್ನ ಫುಟ್ಬಾಲ್ ಪಂದ್ಯವನ್ನು ಗೆದ್ದ. ಆದರೆ, ನಮ್ಮ ಹಣಕಾಸು ಸಚಿವರು ತಮ್ಮ ಪಂದ್ಯವನ್ನು ಕಳೆದುಕೊಳ್ಳುತ್ತಿರುವಂತೆ ತೋರುತ್ತದೆ.
ನಿರ್ಮಲಾ ಸೀತಾರಾಮನ್ ಅವರ ಈ ನಿಗೂಢ ಹೇಳಿಕೆ ರಾಜಕೀಯ ವ್ಯಾಖ್ಯಾನಕಾರರು ಮತ್ತು ಅರ್ಥಶಾಸ್ತ್ರಜ್ಞರನ್ನು ಗೊಂದಲಕ್ಕೆ ತಳ್ಳಿದೆ. ನಿಜ, ಈ ಮಂದಿ ಸ್ಪಷ್ಟ ಆಲೋಚನೆಗೆ ಹೆಸರುವಾಸಿಯಾದವರೇನಲ್ಲ ಎಂಬುದು ಬೇರೆ ಮಾತು. ನಿರ್ಮಲಾ ಸೀತಾರಾಮನ್ ಅವರ ಈ ಮಾತಿನ ಅರ್ಥವನ್ನು ಗ್ರಹಿಸುವ ಸಲುವಾಗಿ, ಬೊಬ್ಬಿಡುವ ಟಿವಿ ಆಂಕರ್ಗಳು ಕೂಡ ರಿಯಾ ಚಕ್ರವರ್ತಿ ಮತ್ತು ಕಂಗನಾ ರಣಾವತ್ ಅವರತ್ತ ನೆಟ್ಟಿದ್ದ ತಮ್ಮ ನೋಟವನ್ನು ಈ ಹೇಳಿಕೆಯತ್ತ ತಿರುಗಿಸಿದ್ದಾರೆ(ಅವರ ಮಟ್ಟಿಗೆ ನಿಜಕ್ಕೂ ಇದೊಂದು ಸಾಹಸ ಎಂದು ಒಪ್ಪಿಕೊಳ್ಳಲೇಬೇಕು). ಸರಿ. ನಿರ್ಮಲಾ ಸೀತಾರಾಮನ್ ಅವರ ಈ ಮಾತು, ಪ್ರಧಾನಿ ನರೇಂದ್ರ ಮೋದಿಯವರನ್ನು ಕೊನೆಗೂ ದೈವತ್ವಕ್ಕೆ ಏರಿಸಿದೆ ಎಂದರ್ಥವೇ? ಏಕೆಂದರೆ, ಹತಾಶೆಯ ಮತ್ತು ವಿನಾಶದ ಈ ವಾದ್ಯಗೋಷ್ಠಿಯನ್ನು ಮಹಾನಾಯಕನ ಕೈಗಳು ಮಾತ್ರವೇ ನಿರ್ದೇಶಿಸಬಲ್ಲವು. ಅಥವಾ, ನಮಗೆ ನಮ್ಮ ಹಕ್ಕಾಗಿ ಸಿಗಬೇಕಾದುದನ್ನು ತಪ್ಪಿಸಲು ಪ್ರಭುತ್ವವು ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರ ಸಾಲಿನಲ್ಲಿ ನಿಂತಿದೆ ಎಂಬ ಸಾರ್ವಭೌಮ ಮೋಸದ ಅಂತಿಮ ತಪ್ಪೊಪ್ಪಿಗೆಯೆ?
ದೇವರ ಈ ಆಟದ ಬಗ್ಗೆ ಶ್ರೀಮತಿ ಸೀತಾರಾಮನ್ ಅವರು ತಮ್ಮ ಹೇಳಿಕೆಯಲ್ಲಿರುವ ಸ್ಪಷ್ಟ ವಿರೋಧಾಭಾಸವನ್ನು ವಿವರಿಸಲಿಲ್ಲ; ಒಬ್ಬ ಹಿಂದೂ ದೇವರು ತನ್ನ ಸ್ವಂತ ಭಕ್ತರಿಗೆ ಇಂತಹ ಘೋರ ಶಿಕ್ಷೆಯನ್ನು ವಿಧಿಸಿರುವುದಾದರೂ ಏಕೆ? ಅಥವಾ ಒಂದು ಹಿಂದೂ ರಾಷ್ಟ್ರವು ತನ್ನದೇ ದೇವರನ್ನು ದೂಷಿಸುವುದಾದರೂ ಏಕೆ? ಈ ತೊಡಕು ಅಮೆರಿಕನ್ ಕವಿ ಓಗ್ಡೆನ್ ನ್ಯಾಶ್ ಅವರ ಒಂದು ಅಮರ ಪದ್ಯವನ್ನು ನೆನಪಿಗೆ ತರುತ್ತದೆ:
“ದೇವರು ಯಹೂದಿಗಳನ್ನು
ಆಯ್ಕೆ ಮಾಡಿರುವುದು ಎಷ್ಟು ವಿಚಿತ್ರವಾಗಿದೆ.
ಆದರೆ, ಇನ್ನೂ ಹೆಚ್ಚು ವಿಚಿತ್ರವೆಂದರೆ,
ಯಹೂದಿ ದೇವರನ್ನು ಆಯ್ದುಕೊಂಡವರು
ಯಹೂದಿಗಳನ್ನು ಧಿಕ್ಕರಿಸುವುದು!”
ಇಲ್ಲಿ ಇದೇ ರೀತಿಯ ಇನ್ನೊಂದು ಗೊಂದಲದ ಕೈಮೇಲಾಗಿರುವಂತೆ ಕಾಣುತ್ತದೆ. ಬಹುಶಃ ಸಂಸತ್ತಿನ ಹಾಲಿ ಅಧಿವೇಶನದಲ್ಲಿ ಅದರ ಬಗ್ಗೆ ಸ್ಪಷ್ಟನೆ ಸಿಗಬಹುದೇನೋ? ಹೌದು. ವಾಡಿಕೆಯ ಪ್ರಶ್ನೋತ್ತರ ಕಾಲ ಇರುವುದಿಲ್ಲ ಎಂದು ನನಗೆ ಗೊತ್ತು. ಏಕೆಂದರೆ, ಉತ್ತರಗಳೇ ಉಳಿದಿಲ್ಲವಲ್ಲ. ಆದರೂ, ಈ ವಿಷಯವನ್ನು ನಿಂದನೆಯ ಪ್ರಕರಣದ ರೀತಿಯಲ್ಲಿ, ಬಹುಶಃ, ತಾನಾಗಿಯೇ ಕೈಗೆತ್ತಿಕೊಳ್ಳಬಹುದು. ಅಷ್ಟಕ್ಕೂ, ಸರ್ಕಾರಕ್ಕೆ ಸಲಹೆ ಕೊಡಲು ಈಗ ಸಂಸತ್ತಿನಲ್ಲಿ ನಿವೃತ್ತ (ಅಥವಾ ಮರುರೂಪಿತ) ರಂಜನ್ ಗೊಗೊಯ್ (ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ) ಅವರೇ ಇದ್ದಾರೆ: ದೇವರನ್ನು ತೋರಿಸು, ನಾನು ನಿಯಮವನ್ನು ತೋರಿಸುತ್ತೇನೆ.
ಬಾಳೆಹಣ್ಣು ಗಣರಾಜ್ಯದ ವಾಹಿನಿಗಳನ್ನೇ ನೆಚ್ಚಿರುವವರನ್ನು ಬಿಟ್ಟು ಉಳಿದೆಲ್ಲರಿಗೂ ಶ್ರೀಮತಿ ಸೀತಾರಾಮನ್ ಮತ್ತು ಅವರ ಕ್ಯಾಪ್ಟನ್ ಇಡೀ ಭೂಮಿಕೆಯ ಮೇಲಿನ ನಿಯಂತ್ರಣವನ್ನು ವೇಗವಾಗಿ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಕಾಣುತ್ತಿದೆ, ಅದು ‘ದೇವರ ಆಟ’ಗಳಿಂದ ಅಲ್ಲ ದುರಹಂಕಾರದ ಕೃತ್ಯಗಳಿಂದ :ಸಿಎಎ, ಎನ್ಆರ್ಸಿ, ಎನ್ಐಎ, ಜಿಎಸ್ಟಿ, ಯುಎಪಿಎ, ನೋಟು ರದ್ದತಿ, ೨೦,೦೦೦ ಕೋಟಿ ರೂ.ಗಳ ವೆಚ್ಚದ ಹೊಸ ಪಾರ್ಲಿಮೆಂಟ್ ಕಟ್ಟಡ ಸಮೂಹ, ೨೦೨೧ರ ಕುಂಭಮೇಳಕ್ಕೆ ೨,೦೦೦ ಕೋಟಿ ಬಜೆಟ್ ಘೋಷಣೆ, ಈಗಾಗಲೇ ಬುಲೆಟ್ ಕಳೆದುಕೊಂಡಿರುವ ಬುಲೆಟ್ ರೈಲು – ಈ ಎಲ್ಲದರ ನಡುವೆ ನಮ್ಮ ಅರ್ಥವ್ಯವಸ್ಥೆಯ ತಳ ಕಿತ್ತುಕೊಂಡು ಹೋಗಿದೆ, ಅತ್ತ ನಮ್ಮ ಉತ್ತರದ ಗಡಿಗಳಲ್ಲಿ ಡ್ರ್ಯಾಗನ್ ಆರಾಮವಾಗಿ ತನ್ನ ಬಾಲವನ್ನು ಸುರುಳಿ ಸುತ್ತಿಕೊಳ್ಳುತ್ತಿದೆ, ನಾವಾದರೋ, ಕೊರೊನಾ ಸಾಂಕ್ರಾಮಿಕದ “ಸುಗಮ ಹರಡುವಿಕೆ”ಯಲ್ಲಿ ಅಮೇರಿಕಾವನ್ನು ಹಿಂದಿಕ್ಕಿ, ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಿ ಮುಂಬರುವ ದೀಪಾವಳಿಯನ್ನು ಆಚರಿಸಲಿದ್ದೇವೆ.
ನಮ್ಮ ಆರ್ಥಿಕ ಪುನರುಜ್ಜೀವನವನ್ನು ಬಿಂಬಿಸಲು ಒಂದು ಹೊಸ ರೇಖಾಚಿತ್ರವನ್ನೇ ಅರ್ಥಶಾಸ್ತ್ರಜ್ಞರು ಕಂಡುಹಿಡಿಯಬೇಕಾಗಿ ಬಂದಿದೆ. ಏಕೆಂದರೆ, ಭಾರತದ ಅರ್ಥವ್ಯವಸ್ಥೆಯ ಚೇತರಿಕೆಯು ಇಂಗ್ಲಿಷ್ ವರ್ಣಮಾಲೆಯ K ಅಕ್ಷರ ಆಕಾರದಲ್ಲಿರುತ್ತದೆಯಂತೆ-ಒಂದು ಲಂಬ ರೇಖೆಯಿಂದ ಎರಡು ಕವಲುರೇಖೆಗಳಾಗಿ ಚಾಚಿಕೊಂಡು, ಬೃಹತ್ ಪ್ರಮಾಣದ ಅಸಮಾನತೆಗಳು ಉಂಟಾಗುವ ಸೂಚನೆಯನ್ನು ಕೊಡುತ್ತವೆ. ಬಹುಶಃ, ಇದನ್ನು ಮುಂದಿನ ದಿನಗಳಲ್ಲಿ, ಕೇದಾರನಾಥ ರೇಖೆ ಎಂದು ಕರೆಯಬಹುದು, ಸರ್ವೋಚ್ಚ ನಾಯಕನು ತನ್ನ ಜೋಳಿಗೆ ಸಮೇತ ಒಂದು ಹಿಮಾಲಯದ ಗುಹೆಯಲ್ಲಿ ತನ್ನ ಮೊದಲ ಪಟ್ಟಿಯ ಕಾರ್ಪೊರೇಟ್ ದೋಸ್ತುಗಳೊಂದಿಗೆ ಧ್ಯಾನಿಸುತ್ತಾ ಅತೀಂದ್ರೀಯ ಔನ್ನತ್ಯಕ್ಕೆ ಏರುವುದರ ಪ್ರತೀಕವಾಗಿ. K ಅಕ್ಷರದ ಕೆಳಗೆ ಚಾಚುವ ಕವಲುರೇಖೆಯಲ್ಲಿರುವ ನನ್ನ-ನಿಮ್ಮಂತಹ ಮೂರ್ಖರು , ದಿವಾಳಿಯ ಮತ್ತು ವಿನಾಶದ ಪಾತಾಳಕ್ಕೆ ಧುಮುಕುತ್ತೇವೆ. ಇದೀಗ K ಗ್ರಾಫಿನ ಸಾರಭೂತ ಅಂಶ.
ಆದರೆ, ಮುಂದೆಯೂ ಚುನಾವಣೆಗಳನ್ನು ಗೆಲ್ಲಲೇ ಬೇಕಾಗಿದೆ. ಅದು ನಾವೇ ಸಾಧಿಸಿದ್ದು ಎನ್ನುವ ಸಮಯವಲ್ಲ, ಹೊಣೆ ದಾಟಿಸುವ ಸಮಯ. ದೇವರನ್ನು ಸಂತುಷ್ಟಗೊಳಿಸುವ ಕೆಲಸವನ್ನು ಆಮೇಲೆ ಮಾಡಬಹುದು, ಬಹುಶಃ, ರಾಮ ಮಂದಿರದ ಪ್ರತಿಷ್ಠಾಪನೆಯ ಸಮಯದಲ್ಲಿ, ಅಥವ ಕಾಶಿ ಮತ್ತು ಮಥುರಾ ದೇವಸ್ಥಾನಗಳ ವಿವಾದವನ್ನು ಮುನ್ನೆಲೆಗೆ ತಂದಾಗ. ಈಗಂತೂ ದೂಷಣೆಯ ಸಮಯವೇ. ೪೦ ಲಕ್ಷ ಕೋಟಿ ರೂ.ಗಳ ಸಾಲ ವಸೂಲಿ ಮುಂದೂಡಿಕೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯು ಕುಸಿದು ಬೀಳುವ ಹಂತದಲ್ಲಿದೆ. ರಾಜ್ಯ ಸರ್ಕಾರಗಳು ಆದಾಯಗಳು ಕುಸಿದಿರುವ ಹಿನ್ನೆಲೆಯಲ್ಲಿ ತಮ್ಮ ನೌಕರರನ್ನು ಮನೆಗೆ ಕಳಿಸಲು, ಉಳಿಯುವವರ ವೇತನವನ್ನು ಮತ್ತು ನಿವೃತ್ತ ನೌಕರರ ಪಿಂಚಣಿಯನ್ನು ಕಡಿತಗೊಳಿಸಲು ಆರಂಭಿಸಲಿವೆ. ಈಗಾಗಲೇ ೨ ಕೋಟಿ ೩೦ ಲಕ್ಷ ಸಂಬಳದಾರ ಉದ್ಯೋಗಗಳು ನಾಶವಾಗಿವೆ. ಬಿಹಾರ ಮತ್ತು ಬಂಗಾಳದಲ್ಲಿ ಚುನಾವಣೆಗಳು ಹತ್ತಿರದಲ್ಲೇ ಇವೆ. ಯಾರಾದರೂ ಡಬ್ಬ ಹಿಡಿದು ಸಾಗಬೇಕಾಗಿದೆ.
ಸರ್ಕಾರ ಮತ್ತು ಬಿಜೆಪಿ ದೂಷಣೆಯ ಆಟವನ್ನು ಆರಂಭಿಸುತ್ತವೆ. ಇದನ್ನು ಮೊಘಲರನ್ನು ದೂಷಿಸುವ ಮೂಲಕ ಆರಂಭಿಸಿದ್ದರು. ನಂತರ, ಬ್ರಿಟಿಷರನ್ನು, ತದನಂತರ ಗಾಂಧಿಗಳನ್ನು (ಬಡಪಾಯಿ ಮಹಾತ್ಮ ಗಾಂಧಿಯನ್ನೂ ಬಿಡಲಿಲ್ಲ), ಅಲ್ಲಿಂದ ಮನಮೋಹನ್ ಸಿಂಗ್, ಅಂತಿಮವಾಗಿ ಜವಾಹರಲಾಲ್ ನೆಹರೂ ಮೇಲೆ ಜಮಾಯಿಸಿದರು. ಆದರೆ ಅರ್ಧಶತಮಾನದ ಹಿಂದೆಯೇ ಸತ್ತಿರುವ ವ್ಯಕ್ತಿಯ ಮೇಲೆ ಎಷ್ಟೊಂದು ಮಣ್ಣು ಹಾಕಲು ಸಾಧ್ಯ? ಅದೂ ಫಜೀತಿಗಳು ತ್ವರಿತವಾಗಿ ರಾಶಿ ಬೀಳುತ್ತಿರುವಾಗ, ಮತ್ತೊಂದು ಬಲಿ ಪಶುವನ್ನು ಹುಡುಕಲೇ ಬೇಕು. ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಬಂದಾಗ, ಮೇಲೆ ಆಕಾಶದತ್ತ ಕೈತೋರಿಸುವುದಕ್ಕಿಂತ ಉತ್ತಮ ಆಯ್ಕೆ ಇದೆಯೇ? ಯಾವ ಪ್ರಶ್ನೋತ್ತರ ಕಾಲವೂ ಬಾಧಿಸದ, ನೋವಿನ ಬಗ್ಗೆ, ಜೈಲು ಶಿಕ್ಷೆಯನ್ನು ತೋರಿಸಿ ನೋವುಂಟು ಮಾಡಲಾಗದ, ಸವಾಲೇ ಇಲ್ಲದ ದೈವತ್ವವನ್ನು ಹೊದ್ದ ಬಲಿಪಶುವೇ ಸಿಕ್ಕರೆ ಇನ್ನೇನು? ಹೌದು, ಸ್ವಾಮಿ, ಇದೆಲ್ಲವೂ ದೇವರ ಆಟ ಎಂದು ಹೇಳಿದರೆ ಆಯ್ತು. ಮತ್ತೆ, ಒಳ್ಳೆಯ ಕಾಲ (ಅಂದರೆ, ಜಿಡಿಪಿ ಬೆಳವಣಿಗೆ) ಮರಳಿದಾಗ, ಹಿಂದಿನ ಹೇಳಿಕೆಗೆ ಮರುರೂಪ ಕೊಟ್ಟು, ಆ ದೇವರನ್ನು ಒಬ್ಬ ವ್ಯಕ್ತಿಯೊಂದಿಗೆ ಸಮೀಕರಿಸಿ, “ನಾಯಕನಿಗೆ ಜಯವಾಗಲಿ” ಎಂದು ಘರ್ಜಿಸಿದರಾಯಿತು! ಆದರೆ, ಒಳ್ಳೆಯ ಸಮಯ ಬೇಗನೇ ಮರಳದಿದ್ದರೆ ಮಾಡುವುದೇನು? ಆಗ, ಗೂಬೆ ಕೂರಿಸುವುದು ಯಾರ ಮೇಲೆ? ಅದಕ್ಕೇನಂತೆ, ಹೇಗೂ ಇದ್ದೇ ಇದ್ದಾನಲ್ಲಾ ಆ ಪವಿತ್ರಾತ್ಮ!
ಅನು: ಕೆ.ಎಂ.ನಾಗರಾಜ್