ಸಂಪುಟ ಸಂಕಟ: ದೆಹಲಿಗೆ ಹೊರಟ ಸಿಎಂ ಯಡಿಯೂರಪ್ಪ

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಅಮಿತ್ ಶಾ ಒಪ್ಪಿಗೆ ಸಿಗುತ್ತಾ ? 

ಬೆಂಗಳೂರು: ಸಚಿವ ಸಂಪುಟ‌ ಪುನರ್​ ರಚನೆ ಒತ್ತಡದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಸ್ಯೆಗೆ ಮದ್ದು ಹುಡುಕಲು ಇಂದು ದೆಹಲಿಗೆ ತೆರಳಿದ್ದಾರೆ.ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನರ್​​​​  ರಚನೆಗೆ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಇಂದು ಕಲಬುರ್ಗಿಯಲ್ಲಿ ಆತುರಾತುರವಾಗಿ ಕಲ್ಯಾಣ ಕರ್ನಾಟಕ ಉತ್ಸವ ಮುಗಿಸಿದ ಯಡಿಯೂರಪ್ಪ ಇಲ್ಲಿಂದಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜೊತೆಯಲ್ಲಿ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಮೊದಲಿಗೆ 70ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರುವುದು ಮತ್ತು ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವುದಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಯಾರನ್ನೂ ಭೇಟಿಯಾಗದಿರಲು ಮೋದಿ ನಿರ್ಧರಿಸಿರುವುದರಿಂದ ಯಡಿಯೂರಪ್ಪನವರಿಗೆ ಸಮಯ ಕೊಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ‌.

ಇದಾದ ಮೇಲೆ ಯಡಿಯೂರಪ್ಪ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡಲಿದ್ದಾರೆ. ನಡ್ಡಾ ಜತೆ ಸಚಿವ ಸಂಪುಟ ಪುನರ್​​ ರಚನೆ ಬಗ್ಗೆ ಚರ್ಚೆಮಾಡಲಿದ್ದಾರೆ.  ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಅವರಿಲ್ಲದೆ ಸಂಪುಟ ಪುನರ್​​ ರಚನೆಗೆ ಜೆ‌.ಪಿ. ನಡ್ಡಾ ಅವರಿಂದ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಅಮಿತ್ ಶಾ ಅಲಭ್ಯದಿಂದ ಸಂಪುಟ ಕಸರತ್ತು ನೆನೆಗುದಿಗೆ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಯ ಚಾಣಕ್ಯಪುರಿಯಲ್ಲಿ ನಿರ್ಮಣವಾಗುತ್ತಿರುವ ಕರ್ನಾಟಕ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.‌ ಬಳಿಕ‌ ಕೇಂದ್ರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣದ ಬಗ್ಗೆ ಚರ್ಚಿಸಲಿದ್ದಾರೆ.

ಇದಲ್ಲದೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೇಳಲಿದ್ದಾರೆ.‌ ಮೂರು ದಿನ ದೆಹಲಿಯಲ್ಲಿರುವ ಯಡಿಯೂರಪ್ಪ ಸಂಪುಟ ಪುನರ್​​​ ಚನೆಗೆ ಒಪ್ಪಿಗೆ ಪಡೆಯಲು ಒತ್ತು ನೀಡಲಿದ್ದಾರೆ. ಯಡಿಯೂರಪ್ಪ ಪ್ರವಾಸದ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಕೂಡ ದೆಹಲಿಗೆ ದಾಂಗುಡಿ ಇಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *