ಬೆಂಗಳೂರು: ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಕಾನೂನು ಮಾಡದಂತೆ ಒತ್ತಾಯಿಸಿ ರಾಜ್ಯದ ವಿವಿಧೆಡೆ ಸ್ಥಳೀಯ ಶಾಸಕರ ಕಚೇರಿ ಎದುರು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ದೇಶದ ಜನತೆ ಕೊರೊನ ಸಂಕಷ್ಟದಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕರನ್ನು ನಾಶ ಮಾಡುವ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿರುವ ಕ್ರಮವನ್ನು ಖಂಡಿಸಿದರು.
ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟದ ಒತ್ತಾಯ ಪತ್ರವನ್ನು ಸ್ಥಳೀಯರಿಗೆ ನೀಡಿ ಸರ್ಕಾರ ನಿರ್ಧಾರವನ್ನು ಖಂಡಿಸಿದರು.
21ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ 2020 ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ-2020 ಹಾಗೂ ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವ ಕೈಗಾರಿಕ ವ್ಯಾಜ್ಯಗಳ ಕಾಯ್ದೆಗಳ ತಿದ್ದುಪಡಿ ಕಾಯ್ದೆಯನ್ನು ಕೈಬಿಡುವಂತೆ ವಿಧಾನಸಭೆಯಲ್ಲಿ ಎಲ್ಲಾ ವಿಧಾನಸಭಾ ಸದಸ್ಯರು ಒತ್ತಾಯ ಮಾಡುವಂತೆ ಆಯಾ ಆಯಾ ತಾಲ್ಲೂಕಿನಲ್ಲಿ ಶಾಸಕರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.
ರಾಜ್ಯದ ರೈತಾಪಿ ಮತ್ತು ಕಾರ್ಮಿಕ ಜನ ಸಮೂಹಗಳ ಮೇಲೆ ಅತ್ಯಂತ ದುಷ್ಪರಿಣಾಮ ಉಂಟು ಮಾಡಬಲ್ಲ ಕಾಯ್ದೆ ಇವಾಗಿವೆ. ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜ\ನ್ನು ಬಹುರಾಷ್ಟ್ರೀಯ ಕಂಪನಿಗಳ ವಶಕ್ಕೆ ನೀಡಲು ಹೊರಟಿದೆ. ಇದರಿಂದ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲಲಿದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ಸಿಗುವುದಿಲ್ಲ. ಆದ್ದರಿಂದ ಈ ತಿದ್ದುಪಡಿಗೆ ರಾಜ್ಯ ಸರ್ಕಾರ ಒಪ್ಪದಂತೆ ಒತ್ತಾಯಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ದಲಿತ, ಕಾರ್ಮಿಕರಿಗೆ ವಿವಿಧ ಸಾಮಾಜಿಕ ಜನ ಸಮೂಹಗಳನ್ನು ದಮನಕ್ಕೀಡು ಮಾಡುವಂತ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಒಟ್ಟಾರೆಯಾಗಿ ಸಾರ್ವಭೌಮತ್ವ, ಸ್ವಾತಂತ್ರ್ಯ, ಸಮಾನತೆ ಒಕ್ಕೂಟ, ತತ್ವ, ಸಾಮಾಜಿಕ ನ್ಯಾಯ , ಪ್ರಜಾಪ್ರಭುತ್ವ ಮುಂತಾದ ನಮ್ಮ ಸಂವಿಧಾನದ ಮೂಲಭೂತ ಆಶಯ ಮತ್ತು ತತ್ವಗಳಿಗೆ ವಿರುದ್ದವಾಗಿದೆ. ಆದ್ದರಿಂದ ವಿಧಾನಸಭೆಯಲ್ಲಿ ಮೇಲಿನ ಕಾಯ್ದೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ಶಾಸನ ಆಗದಂತೆ ನೋಡಿಕೊಳ್ಳಬೇಕೆಂದು ಒತ್ತಾಸಿದರು.
ಹಾಸನ, ಮೈಸೂರು, ತಿ.ನರಸೀಪುರ, ಕೆ.ಆರ್.ನಗರ ಮತ್ತಿತರ ಕಡೆ ಪ್ರತಿಭಟನೆ ನಡೆದಿದ್ದು, ಎಪಿಎಂಸಿ ಕಾಯಿದೆ, ಭೂ ಸುಧಾರಣೆ ಕಾಯಿದೆ, ವಿದ್ಯುತ್ ಕಾಯಿದೆ ತಿದ್ದುಪಡಿಗಳು ಈ ಮೂರೂ ಕಾಯಿದೆಗಳು ಜನ ವಿರೋಧಿಯಾಗಿವೆ. ಈ ಕಾಯ್ದೆ ವಾಪಸ್ ಪಡೆಯಬೇಕು ಹಾಗೂ ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಅಂಗೀಕಾರ ಮಾಡದಂತೆ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.