ದೇಶದ ಸಾಕ್ಷರತೆ ಪ್ರಮಾಣದಲ್ಲಿ ಮತ್ತೊಮ್ಮೆ ಕೇರಳ ಮೊದಲು

  • ಶೇ 96.2 ಸಾಕ್ಷರತೆಯೊಂದಿಗೆ ದೇಶದ ಅತ್ಯಂತ ಸಾಕ್ಷರ ರಾಜ್ಯವಾಗಿ ಮತ್ತೊಮ್ಮೆ ಹೊರಹೊಮ್ಮಿದ್ದ ಕೇರಳ ರಾಜ್ಯ

 

ನವದೆಹಲಿ: ಶೇ 96.2 ರಷ್ಟು ಸಾಕ್ಷರತೆಯೊಂದಿಗೆ ಕೇರಳ ರಾಜ್ಯವು ಮತ್ತೊಮ್ಮೆ ದೇಶದ ಅತ್ಯಂತ ಸಾಕ್ಷರ ರಾಜ್ಯವಾಗಿ ಹೊರಹೊಮ್ಮಿದ್ದರೆ, ಆಂಧ್ರಪ್ರದೇಶ ಶೇ 66.4 ರಷ್ಟು ಪ್ರಮಾಣದೊಂದಿಗೆ ಕೊನೆಯ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸಮೀಕ್ಷೆಯ ಆಧಾರದ ಮೇಲೆ ವರದಿಯಲ್ಲಿ ಹೇಳಿದೆ.

ರಾಷ್ಟ್ರೀಯ ಮಾದರಿ ಸಮೀಕ್ಷೆಯ 75ನೇ ಭಾಗವಾಗಿ ಜುಲೈ 2017 ರಿಂದ ಜೂನ್ 2018 ರ ನಡುವಿನ ಅವಧಿಯಲ್ಲಿ ‘ಕುಟುಂಬ ಸಾಮಾಜಿಕ ಬಳಕೆ: ಭಾರತದಲ್ಲಿ ಶಿಕ್ಷಣ’ ಆಧಾರಿತ ವರದಿಯಲ್ಲಿ ಏಳು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಲ್ಲಿ ಸಾಕ್ಷರತೆಯ ಪ್ರಮಾಣ ಕುರಿತಾಗಿ ರಾಜ್ಯವಾರು ಮಾಹಿತಿಯನ್ನು ವಿವರವಾಗಿ ನೀಡಿದೆ.

ಸಮೀಕ್ಷೆಯ ಪ್ರಕಾರ, ಕೇರಳದ ನಂತರದ ಸ್ಥಾನದಲ್ಲಿರುವ ದೆಹಲಿಯಲ್ಲಿ ಸಾಕ್ಷರತೆ ಪ್ರಮಾಣ ಶೇ 88.7 ರಷ್ಟಿದ್ದರೆ, ಉತ್ತರಖಾಂಡದಲ್ಲಿ ಶೇ 87.6, ಹಿಮಾಚಲ ಪ್ರದೇಶದಲ್ಲಿ ಶೇ 86.6 ಮತ್ತು ಅಸ್ಸಾಂನಲ್ಲಿ ಶೇ 85.9ರಷ್ಟಿದೆ. ಸಾಕ್ಷರತೆ ಪ್ರಮಾಣ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ ಶೇ 69.7 ರಷ್ಟು ಸಾಕ್ಷರ ಪ್ರಮಾಣವಿದೆ. ಬಳಿಕ ಬಿಹಾರ ಶೇ 70.9, ತೆಲಂಗಾಣ ಶೇ. 72.8, ಉತ್ತರ ಪ್ರದೇಶ ಶೇ 73 ಮತ್ತು ಮಧ್ಯಪ್ರದೇಶದಲ್ಲಿ ಶೇ 73.7ರಷ್ಟು ಸಾಕ್ಷರ ಪ್ರಮಾಣವಿದೆ.

ದೇಶದ ಸಾಕ್ಷರತಾ ಪ್ರಮಾಣ ಶೇ 77.7 ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಶೇ 73.5 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟಿದೆ. ರಾಷ್ಟ್ರಮಟ್ಟದಲ್ಲಿ ಪುರುಷರ  ಸಾಕ್ಷರತೆಯ ಪ್ರಮಾಣ ಶೇ 84.7 ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಶೇ 70.3 ರಷ್ಟಿದೆ. ಸಮೀಕ್ಷೆಯಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣಕ್ಕಿಂತಲೂ ಪುರುಷರ ಸಾಕ್ಷರತೆ ಪ್ರಮಾಣವೇ ಎಲ್ಲಾ ರಾಜ್ಯಗಳಲ್ಲಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ, ದೆಹಲಿಯಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಶೇ 93.7ರಷ್ಟಿದ್ದರೆ, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ 82.4 ರಷ್ಟಿದೆ. ಸಾಧನೆಯಲ್ಲಿ ಹಿಂದುಳಿದಿರುವ ರಾಜ್ಯಗಳಲ್ಲಿಯೂ ಕೂಡ ಮಹಿಳೆ ಮತ್ತು ಪುರುಷರ ಸಾಕ್ಷರತೆ ಪ್ರಮಾಣದಲ್ಲಿ ಸಾಕಷ್ಟು ಅಂತರವಿದೆ. ಆಂಧ್ರ ಪ್ರದೇಶದಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ 73.4ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ 59.5ರಷ್ಟಿದೆ. ರಾಜಸ್ಥಾನದಲ್ಲಿ ಈ ಅಂತರ ಇನ್ನಷ್ಟು ಜಾಸ್ತಿಯಿದ್ದು, ಪುರುಷರು ಶೇ 80.8 ಮತ್ತು ಮಹಿಳೆಯರ ಸಾಕ್ಷರತೆ ಪ್ರಮಾಣ ಕೇವಲ ಶೇ 57.6 ರಷ್ಟಿದೆ. ಬಿಹಾರದಲ್ಲಿ ಶೇ 79.7ರಷ್ಟು ಪುರುಷರು ಮತ್ತು ಶೇ 60.5ರಷ್ಟು ಮಹಿಳೆಯರ ಸಾಕ್ಷರತೆ ಪ್ರಮಾಣವಿದೆ.

ಭಾರತದಾದ್ಯಂತ 8,097 ಗ್ರಾಮಗಳಿಂದ 64,519 ಕುಟುಂಬಗಳು ಮತ್ತು 6,188 ಬ್ಲಾಕ್‌ಗಳಿಂದ 49,238 ನಗರದ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 4 ಪ್ರತಿಶತದಷ್ಟು ಗ್ರಾಮೀಣ ಕುಟುಂಬಗಳು ಮತ್ತು 23 ಪ್ರತಿಶತ ನಗರ ಕುಟುಂಬಗಳು ಕಂಪ್ಯೂಟರ್ ಅನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ 15 ರಿಂದ 29 ವಯಸ್ಸಿನ ಶೇ 24ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇ 56ರಷ್ಟು ಜನರು ನಗರ ಪ್ರದೇಶಗಳಲ್ಲಿ ಕಂಪ್ಯೂಟರ್ ಅನ್ನು ಬಳಸಲು ಸಮರ್ಥರಾಗಿರುವುದಾಗಿ ತಿಳಿಸಿದ್ದಾರೆ.

ಸಮೀಕ್ಷೆಯ ದಿನಾಂಕಕ್ಕಿಂತ 30 ದಿನಗಳ ಮೊದಲು 15-29 ವರ್ಷ ವಯಸ್ಸಿನವರಲ್ಲಿ ಸುಮಾರು ಶೇ 35ರಷ್ಟು ಜನರು ಇಂಟರ್ನೆಟ್ ಬಳಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಪ್ರಮಾಣವು ಗ್ರಾಮೀಣ ಪ್ರದೇಶದಲ್ಲಿ ಶೇ 25 ಮತ್ತು ನಗರ ಪ್ರದೇಶಗಳಲ್ಲಿ ಶೇ 58 ರಷ್ಟಿತ್ತು.

Donate Janashakthi Media

Leave a Reply

Your email address will not be published. Required fields are marked *