- ಕೇರಳ ರಾಜ್ಯ ಸಚಿವಾಲಯದಲ್ಲಿ ಅಗ್ನಿ ಆಕಸ್ಮಿಕ
ತಿರುವನಂತಪುರ: ಕೇರಳ ರಾಜ್ಯ ಸಚಿವಾಲಯದಲ್ಲಿ ಮಂಗಳವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಕೇರಳದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ ಭಾರಿ ಸದ್ದು ಮಾಡುತ್ತಿರುವುದರಿಂದ ಬೆಂಕಿ ಬಿದ್ದಿರುವ ಪ್ರಕರಣ ಭಾರಿ ವಿವಾದ ಎಬ್ಬಿಸಿದೆ.
ಪ್ರಧಾನ ಆಡಳಿತ ಕಚೇರಿಯ ರಾಜಕೀಯ ವಿಭಾಗದಲ್ಲಿ ಸಂಜೆ 4.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ರಾಜತಾಂತ್ರಿಕ ಮಾರ್ಗದ ಮೂಲಕ ರಾಜ್ಯಕ್ಕೆ ತರಲಾದ ಸರಕುಗಳ ಮಾಹಿತಿಯನ್ನು ಒದಗಿಸುವಂತೆ ಪ್ರಧಾನ ಆಡಳಿತ ಕಚೇರಿ ಅಧಿಕಾರಿ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಕೇಳಿದ್ದವು ಎಂದು ಇತ್ತೀಚೆಗೆ ವರದಿಯಾಗಿತ್ತು. ಸಚಿವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸುವಂತೆ ಎನ್ಐಎ ಕೋರಿತ್ತು. ಆದರೆ, ತಾಂತ್ರಿಕ ಕಾರಣ ನೀಡಿರುವ ಅಧಿಕಾರಿಗಳು ಇನ್ನೂ ಸಿಸಿಟಿವಿ ದೃಶ್ಯಾವಳಿಗಳನ್ನು ಎನ್ಐಎಗೆ ನೀಡಿಲ್ಲ ಎನ್ನಲಾಗಿದೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅಗ್ನಿ ಆಕಸ್ಮಿಕದ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿವೆ.
‘ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ. ಸರ್ಕಾರಿ ಅತಿಥಿಗೃಹ ಹಂಚಿಕೆಗೆ ಸಂಬಂಧಿಸಿದ ಕಡತಗಳಿಗಷ್ಟೇ ಹಾನಿಯಾಗಿವೆ. ಬೆಂಕಿಯನ್ನು ತಕ್ಷಣವೇ ನಂದಿಸಲಾಗಿತ್ತು. ಅದೃಷ್ಟವಶಾತ್, ಸಾವು–ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇರಳದಲ್ಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ ಭಾರಿ ಸದ್ದು ಮಾಡುತ್ತಿರುವುದರಿಂದ ಬೆಂಕಿ ಪ್ರಕರಣ ವಿವಾದ ಎಬ್ಬಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನೆ ನಡೆಸಿವೆ. ಈ ವೇಳೆ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿ. ಮುರಳೀಧರನ್ ಅವರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಬಿಡುಗಡೆ ಮಾಡಿದ್ದಾರೆ.
ಪ್ರತಿಪಕ್ಷ ನಾಯಕ, ಕಾಂಗ್ರೆಸ್ನ ರಮೇಶ್ ಚೆನ್ನಿತ್ತಲ ಅವರಿಗೆ ತೀವ್ರ ಪ್ರತಿಭಟನೆಯ ಬಳಿಕ ಅಗ್ನಿ ಆಕಸ್ಮಿಕ ಸಂಭವಿಸಿದ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ವಿದೇಶ ಪ್ರವಾಸ ಮತ್ತು ಗಣ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಕಡತಗಳು ಹಾನಿಗೊಳಗಾದವುಗಳಲ್ಲಿ ಸೇರಿವೆ ಎಂಬುದು ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಹೀಗಾಗಿ ಘಟನೆಯು ಚಿನ್ನ ಕಳ್ಳಸಾಗಣೆ ಮತ್ತು ಅದಕ್ಕೆ ಸಂಬಂಧಿತ ಇತರ ತನಿಖೆಗಳಿಗೆ ಅಡ್ಡಿ ಉಂಟುಮಾಡಲು ಹೂಡಿದ ವ್ಯವಸ್ಥಿತ ಸಂಚು’ ಎಂದು ಆರೋಪಿಸಿದ್ದಾರೆ.