ಕಾಂಗ್ರೆಸ್‍ನಲ್ಲಿ ಪುನಃಶ್ಚೇತನದ ಕೂಗು:  ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಸೋನಿಯಾಗೆ ಪತ್ರ

 

  • ಸಾಮೂಹಿಕ ನಾಯಕತ್ವ, ಆಂತರಿಕ ಚುನಾವಣೆ ಮೂಲಕ ಸುಧಾರಣೆ

ದೆಹಲಿ: ದೇಶದ ಹಳೆಯ ರಾಜಕೀಯ ಪಕ್ಷವಾದ ರಾಷ್ಟ್ರೀಯ ಕಾಂಗ್ರೆಸ್‍ಗೆ ಪುನಃಶ್ಚೇತನ ನೀಡಬೇಕು ಎಂಬ ಕೂಗು ಈಗ ಕಾಂಗ್ರೆಸ್‍ನಲ್ಲಿ ಬಲವಾಗಿ ಕೇಳಿಬರುತ್ತಿದೆ.
ಚುನಾವಣೆಯಲ್ಲಿ ಗೆದ್ದರೂ ಸರ್ಕಾರ ರಚಿಸಲಾಗದ ಮತ್ತು ಸರ್ಕಾರ ರಚಿಸಿದರೂ ಸರ್ಕಾರ ಉಳಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಅನ್ನು ಬುಡದಿಂದಲೇ ಸುಧಾರಣೆ ಮಾಡಬೇಕು ಎಂಬ ಆಗ್ರಹ ಕಾಂಗ್ರೆಸ್ ಹಿರಿಯ ನಾಯಕರಿಂದ ಕೇಳಿಬರುತ್ತಿದೆ. ಈ ಬಗ್ಗೆ ಕಾಂಗ್ರೆಸ್‍ನ 23 ಹಿರಿಯ ನಾಯಕರು ಕಾಂಗ್ರೆಸ್‍ನ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಕಾಂಗ್ರೆಸ್‍ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸೋಮವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ ಮತ್ತು ಕಾಂಗ್ರೆಸ್‍ನ ಭವಿಷ್ಯದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ನ ಯುವನಾಯಕರಿಂದಲೇ ಸರ್ಕಾರ ಪತನವಾದರೆ ರಾಜಸ್ಥಾನದಲ್ಲಿ ಅದೇ ಯುವನಾಯಕ ನಡೆಸಿದ ಬಂಡಾಯ ಕಾಂಗ್ರೆಸ್ ಪುನಃಶ್ಚೇತನದ ಕೂಗು ಏಳಲು ಕಾರಣವಾಗಿದೆ. ಬಲವಿದ್ದರೂ ದುರ್ಬಲವಾಗಿರುವ ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ಬಿಜೆಪಿಗೆ ಲಾಭವಾಗುತ್ತಿದೆ ಎನ್ನುವುದಕ್ಕಿಂತ ಕಾಂಗ್ರೆಸ್ಸಿನ ಅಳಿವು ಉಳಿವಿನ ವಿಚಾರ ಎಂದು ಐದು ಮಾಜಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು, ಸಂಸದರು, ಮಾಜಿ ಕೇಂದ್ರ ಸಚಿವರು ಈ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಗೆ ಪತ್ರ ಬರೆದಿದ್ದಾರೆ. ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರುವಂತೆ ನಾಯಕರು ಮನವಿ ಮಾಡಿದ್ದಾರೆ ಎಂಬುದಾಗಿ ಸುದ್ದಿಮಾಧ್ಯಮಗಳು ವರದಿ ಮಾಡಿದೆ.
ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್, ಸಂಸದ ಹಾಗೂ ಮಾಜಿ ಸಚಿವ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ವಿವೇಕ್ ತನ್ಖಾ, ಸಿಡಬ್ಲ್ಯುಸಿ ಸದಸ್ಯ ಮುಕುಲ್ ವಾನ್ಸಿಕ್ ಮತ್ತು ಜಿತಿನ್ ಪ್ರಸಾದ್, ಮಾಜಿ ಸಿಎಂ ಮತ್ತು ಮಾಜಿ ಕೇಂದ್ರ ಸಚಿವ ಭೂಪೇಂದ್ರ ಸಿಂಗ್ ಹೂಡಾ, ರಾಜೆಂದ್ರ ಕೌರ್, ಎಂ.ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚೌಹಾಣ್ ಪತ್ರಕ್ಕೆ ಸಹಿ ಹಾಕಿದ್ದಾರೆ.

ಈ ಪತ್ರದಲ್ಲಿ “ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಹೀಗಾಗಿ ಉನ್ನತ ಮಟ್ಟದ ಹುದ್ದೆಯಲ್ಲಿ ಜನರಿಗೆ ಹೆಚ್ಚು ಪರಿಚಯವಾಗಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ನಾಯಕನನ್ನು ಆಯ್ಕೆ ಮಾಡಬೇಕು. ಬಿಜೆಪಿಯನ್ನು ಎದುರಿಸಲು ಹಾಗೂ ಕಾಂಗ್ರೆಸ್ ಮೇಲೆ ಮತ್ತೆ ನಂಬಿಕೆ ಬರುವಂತೆ ಮಾಡಲು ಕಾಂಗ್ರೆಸ್ ಮುಂದಾಗಬೇಕಿದೆ. ಹೀಗಾಗಿ, ಪಕ್ಷದ ನಾಯಕತ್ವದಲ್ಲಿ ಸುಧಾರಣೆ ಆಗಬೇಕು. ಅಧಿಕಾರದ ವಿಕೇಂದ್ರೀಕರಣ ಆಗಬೇಕು, ಬ್ಲಾಕ್ ಮಟ್ಟದಿಂದ ಸಿಡಬ್ಲ್ಯುಸಿ ವರೆಗೆ ನಾಯಕರನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು” ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಂಥ ಸಂದರ್ಭದಲ್ಲಿ ಪಕ್ಷದ ಸಬಲಗೊಳ್ಳುವ ಬದಲು ಕುಸಿಯುತ್ತಿರುವ ಬಗ್ಗೆ ಆತಂಕ ಹೊರಹಾಕಿರುವ ನಾಯಕರು, ದೇಶದಲ್ಲಿ ಭಯ ಮತ್ತು ಅಭದ್ರತೆ ಅತಿಯಾಗುತ್ತಿದೆ. ಕೊರೊನಾದಿಂದ ದೇಶ ತತ್ತರಿಸಿ ಹೋಗಿದೆ. ಗಡಿ ಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಡುತ್ತಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಭಾರತ ಎದುರಿಸುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. 2019ರಲ್ಲೂ ಕಾಂಗ್ರೆಸ್ ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದಿತ್ತು. ಆದಾಗ್ಯೂ ಕಾಂಗ್ರೆಸ್ ಪಕ್ಷವನ್ನು ಸಬಲಗೊಳಿಸಲು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದಾಗಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ರಾಜಸ್ಥಾನದಲ್ಲಿ ಸಚಿನ್ ಪೈಲಟ್ ನಡೆಸಿದ ಬಂಡಾಯದ ಸಂದರ್ಭದಲ್ಲಿಯೇ ಕಪಿಲ್ ಸಿಬಲ್ ಹಾಗೂ ಶಶಿ ತರೂರ್ ಅವರಂತಹ ನಾಯಕರು, ನಾಯಕತ್ವ ಬದಲಾವಣೆ, ಚುನಾವಣೆ ಹಾಗೂ ಪಕ್ಷದ ಸುಧಾರಣೆ ಬಗ್ಗೆ ಪದೇಪದೆ ಪ್ರಸ್ತಾಪಿಸುತ್ತಿದ್ದರು.

ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯದ ಬಳಿಕ ಪಕ್ಷದ ಹಿರಿಯ ನಾಯಕ ಸಂಜಯ್ ಝಾ ಅವರನ್ನ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅದರ ಬೆನ್ನಲ್ಲೇ ರಾಜಸ್ಥಾನದ ಯವ ನಾಯಕ ಸಚಿನ್ ಪೈಲಟ್ ರೊಚ್ಚಿಗೆದ್ದಿದ್ದರು. ಶಶಿ ತರೂರ್ ಆಗಾಗ ಹೈಕಮಾಂಡ್‍ಗೆ ಪರೋಕ್ಷವಾಗಿ ಬಿಸಿ ಮುಟ್ಟಿಸುತ್ತಲೇ ಇರುತ್ತಾರೆ. ಭಾನುವಾರ ಬೆಳಗ್ಗೆ ಕೂಡಾ ನೆಹರೂ ಅವರ ‘ಹುಮ್ಮಸ್ಸು ಇಲ್ಲವಾದ್ರೆ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತದೆ’ ಎಂಬ ಅರ್ಥದಲ್ಲಿ ಟ್ವೀಟಿಸಿ ಗಮನ ಸೆಳೆದಿದ್ದರು.
ಕಪಿಲ್ ಸಿಬಲ್ ಅವರೂ ಕೂಡ ಬಿಜೆಪಿಯು ನಮ್ಮ ಎಲ್ಲಾ ನಾಯಕರನ್ನು ಖರೀದಿಸಿದ ಬಳಿಕ ನಾವು ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಬಗ್ಗೆ ಯೋಚನೆ ಮಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಹೊಸ ಅಧ್ಯಕ್ಷರ ಆಯ್ಕೆ ಮಾಡಿ: ಸೋನಿಯಾ ಗಾಂಧಿ

ಪಕ್ಷದ ಮುಖಂಡತ್ವದಲ್ಲಿ ಸಂಪೂರ್ಣ ಬದಲಾವಣೆಗಾಗಿ ಮುಖಂಡರು ಬರೆದಿರುವ ಪತ್ರಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದು, ಪಕ್ಷದ ನಾಯಕರೆಲ್ಲರೂ ಒಟ್ಟಿಗೆ ಸೇರಿ ಹೊಸ ಮುಖಂಡರನ್ನು ಗುರುತಿಸುವಂತೆ ಹೇಳಿದ್ದಾರೆ.
ಶೀಘ್ರದಲ್ಲಿಯೇ ಪಕ್ಷಕ್ಕೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಭರವಸೆಯ ಮೇರೆಗೆ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಪಕ್ಷದ ನೇತೃತ್ವ ವಹಿಸಿದ್ದಾರೆ. ‘ನೂತನ ಅಧ್ಯಕ್ಷರು’ ಗಾಂಧಿ ಕುಟುಂಬದಿಂದ ಹೊರತಾಗಿರುವವರೇ ಆಗಿರಬೇಕು ಎಂದು ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಹಾಗಾಗಿ ಸೋಮವಾರದಸ ಸಿಡಬ್ಲ್ಯೂಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಒಂದು ಅಂತಿಮ ನಿರ್ಣಯಕ್ಕೆ ಬರುವ ಸಾಧ್ಯತೆ ಇದೆ.

ಕಾಂಗ್ರೆಸ್ ನಾಯಕತ್ವ ಸಂಬಂಧ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಸತ್ತೆಯನ್ನೇ ನಾಶ ಮಾಡಲು ಹೊರಟಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಹೊರತು ದುರ್ಬಲಗೊಳಿಸುವುದಲ್ಲ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *