ಆರೋಗ್ಯ, ಉದ್ಯೋಗ, ಆರ್ಥಿಕ ಚೇತರಿಕೆ? ಸ್ವಾತಂತ್ರ್ಯ ದಿನದ ಟೊಳ್ಳು ಭಾಷಣ

ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನದಂದು ಮಾಡುವ ಭಾಷಣಗಳು ಈಗ ಹಿಂದಿನ ವರ್ಷದ ಸಾಧನೆಗಳು ಮತ್ತು ಮುಂದಿರುವ ಸವಾಲುಗಳ ಪರಾಮರ್ಶೆಯಿರುವ ಒಂದು ತೆರನ ʻರಾಷ್ಟ್ರ ಸನ್ನಿವೇಶʼ ಭಾಷಣಗಳ ಸ್ವರೂಪ ಪಡೆದಿವೆ. ಆದರೆ ಬಾರಿಯ ಮೋದಿಯವರ  86 ನಿಮಿಷಗಳ ಭಾಷಣ ಹೆಚ್ಚಾಗಿ ಅವರ ಎಂದಿನ ಪ್ರಚಾರ ಶೈಲಿಯಲ್ಲೇ ಇತ್ತು, ದೇಶದ ಮತ್ತು ಜನತೆಯ ನಿಜ ಸಮಸ್ಯೆಗಳು ಮತ್ತು ಸವಾಲುಗಳ  ಬಗ್ಗೆ ಮಾತುಗಳು ಸುಮಾರಾಗಿ ಇಲ್ಲವೇ ಇಲ್ಲ.

ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳ ಭಾಷಣವನ್ನು ನಿರೀಕ್ಷಣಾ ಭಾವದಿಂದ ವೀಕ್ಷಿಸಲಾಗಿತ್ತು. ಕೋವಿಡ್ ಮಹಾಸೋಂಕಿನಿಂದಾಗಿ ಉಂಟಾಗಿರುವ ಆರೋಗ್ಯ ಬಿಕ್ಕಟ್ಟು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಜೀವನೋಪಾಯಗಳ ನಷ್ಟವನ್ನು ನಿಭಾಯಿಸಲು ಏನಾದರೂ ಹೊಸ ಹೆಜ್ಜೆಗಳನ್ನು ಅವರು ಪ್ರಕಟಿಸುತ್ತಾರೋ ಎಂದು ಜನ ಕಾದಿದ್ದರು.

ಆದರೆ, ಈ ಎರಡು ವಿಷಯಗಳಲ್ಲೂ ಪ್ರಧಾನಿಗಳ ಭಾಷಣ ನಿರಾಶೆ ಉಂಟು ಮಾಡಿದೆ. ಕಳೆದ ಆರು ತಿಂಗಳಲ್ಲಿ ಕೊರೊನ ಮಹಾಸೋಂಕು ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಪಾಲನೆಯ ಶೋಚನೀಯ ಸ್ಥಿತಿ ಬಯಲಿಗೆ ತಂದಿದೆ. ದಶಕಗಳಿಂದ ಸರಕಾರಗಳು ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸಿವೆ, ಆರೋಗ್ಯದ ಮೇಲೆ ಸರಕಾರದ ವೆಚ್ಚ ಜಿಡಿಪಿಯ 1  ಶೇಕಡವಷ್ಟೇ. ದೇಶದಲ್ಲಿ ಈ ಮಹಾಸೋಂಕಿನ ರಭಸ ಇನ್ನೂ ಮುಂದುವರೆದಿರುವುದರಿಂದ ಮೋದಿ ಸರಕಾರಕ್ಕೆ ಬುದ್ಧಿ ಬಂದು ಪಾಟ ಕಲಿತಿರಬಹುದು, ಇಷ್ಟೊಂದು ವಿಳಂಬದ ನಂತರವಾದರೂ, ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಕ್ರಮವನ್ನು ಪ್ರಕಟಿಸಬಹುದು ಮತ್ತು ಅದಕ್ಕೆ ಸಾಕಷ್ಟು ಹಣವನ್ನು ಕೂಡ ನೀಡಬಹುದು ಎಂದು ಯೋಚನೆ ಬಂದಿತ್ತು.

ಆದರೆ ಪ್ರಧಾನ ಮಂತ್ರಿಗಳು ಪ್ರಕಟಿಸಿರುವುದು ಎಲ್ಲರಿಗೂ ಒಂದು ಡಿಜಿಟಲ್ ಆರೋಗ್ಯ ಗುರುತುಪತ್ರವನ್ನು-ಇದು ಪ್ರತಿ ವ್ಯಕ್ತಿಯ ಎಲ್ಲ ವೈದ್ಯಕೀಯ ದಾಖಲೆಗಳನ್ನು ಜೋಡಿಸುತ್ತದೆ. ಆದರೆ ನಿಜವಾದ ಸಮಸ್ಯೆ ವೈದ್ಯಕೀಯ ಸೌಲಭ್ಯಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಾಥಮಿಕ ಮಟ್ಟದಿಂದ ಹಿಡಿದು ತೃತೀಯ ಮಟ್ಟದ ವರೆಗೂ ಸಿಬ್ಬಂದಿ ಕೊರತೆ. ಇದನ್ನು  ಬದಿಗೊತ್ತಲಾಗಿದೆ. ಪ್ರಧಾನ ಮಂತ್ರಿಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಸ್ತರಿಸುವ ಮತ್ತು ಮೇಲ್ದರ್ಜೆಗೇರಿಸುವ ಗುರಿಯೊಂದಿಗೆ ರಾಜ್ಯಗಳು ಮತ್ತು ಕೇಂದ್ರಕ್ಕೆ ಕನಿಷ್ಟ 1 ಲಕ್ಷ ಕೋಟಿ ರೂ.ಗಳ ಒಂದು ಆರೋಗ್ಯ ಮೂಲರಚನೆ ಯೋಜನೆಯನ್ನು ಪ್ರಕಟಿಸಬೇಕಾಗಿತ್ತು. ಆದರೆ ಬಿಜೆಪಿ ಸರಕಾರ ಖಾಸಗೀಕೃತ ಆರೋಗ್ಯಪಾಲನೆಯ ಮೂಢನಂಬಿಕೆಗೆ ಕಟ್ಟುಬಿದ್ದಿರುವುದರಿಂದ ಅದರ  ಚೌಕಟ್ಟಿನ ಆಚೆ ಯೋಚಿಸಲಾರದು.

ಕೋವಿಡ್-19 ಎರಗುವ ಮೊದಲೇ ಗಮನಾರ್ಹವಾಗಿ ನಿಧಾನಗೊಂಡಿದ್ದ ಅರ್ಥವ್ಯವಸ್ಥೆ ಲಾಕ್‌ಡೌನ್ ಹೇರಿದಂದಿನಿಂದ ಅಧೋಗತಿಗೆ ಇಳಿಯುತ್ತಿದೆ. ಪರಿಣಿತರು 2020-21ರ ಜಿಡಿಪಿ ಶೇ.5ರಿಂದ ಶೇ.10ರವರೆಗೆ ಇಳಿಕೆಯಾಗುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಆಳವಾದ ಹಿಂಜರಿತದ ಪರಿಣಾಮವೆಂದರೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗನಷ್ಟಗಳು, ಸಣ್ಣ ವ್ಯಾಪಾರಗಳು ಮತ್ತು ಸೇವಾವಲಯದ ಗಣನೀಯ ಭಾಗಗಳು ಮುಚ್ಚುತ್ತಿರುವುದು.

ವ್ಯಂಗ್ಯಚಿತ್ರ ಕೃಪೆ: ಸುಭಾನಿ, ಡೆಕ್ಕನ್ ಕ್ರಾನಿಕಲ್

ಬೇಡಿಕೆ ಮತ್ತು ಅನುಭೋಗ ತೀವ್ರವಾಗಿ ಇಳಿದಿರುವುದು ಬಿಕ್ಕಟ್ಟನ್ನು ಇನ್ನಷ್ಟು ಆಳಗೊಳಿಸುತ್ತದೆ. ಆದಾಯಗಳಲ್ಲಿ ನಷ್ಟ ಉಳಿತಾಯಗಳನ್ನು ಸವೆಸುತ್ತದೆ. ಇದರಿಂದ ಹೊರಬರಲು ಸರಕಾರಕ್ಕೆ ಇರುವ ಏಕೈಕ ದಾರಿಯೆಂದರೆ ಸಾರ್ವಜನಿಕ ವೆಚ್ಚವನ್ನು ಮತ್ತು ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವುದು.

ಕೆಂಪು ಕೋಟೆಯಿಂದ ಪ್ರಧಾನಿಗಳ ಭಾಷಣ ಇಂತಹ ಸಂಕೇತವನ್ನೇನೂ ಕೊಟ್ಟಿಲ್ಲ. ಜನರಿಗೆ ನಗದು ವರ್ಗಾವಣೆಯ ಮೂಲಕ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು  ಅದು ಪಟ್ಟಾಗಿ ತಿರಸ್ಕರಿಸಿದೆ. ಮೂರು ತಿಂಗಳಲ್ಲಿ ಮಹಿಳಾ ಜನಧನ ಖಾತೆದಾರರಿಗೆ 1500 ರೂ. ಬಿಟ್ಟು ಸರಕಾರ ಬೇರೇನ್ನೂ ಮಾಡಿಲ್ಲ. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲರಿಗೂ ತಿಂಗಳಿಗೆ 7500 ರೂ.ನಂತೆ ವರ್ಗಾವಣೆ ಮಾಡಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ಅದು ತಿರಸ್ಕರಿಸಿದೆ.

ಅವರ ಭಾಷಣದಲ್ಲಿ ಉದ್ಯೋಗ ಕಳಕೊಂಡ, ಜೀವನೋಪಾಯಗಳನ್ನು ಕಳಕೊಂಡ, ಅಥವ ಆದಾಯಗಳು ತೀವ್ರವಾಗಿ ಕಡಿತಗೊಂಡಿರುವ ಲಕ್ಷಾಂತರ ಜನಗಳ ಪ್ರಸ್ತಾಪ ಕೂಡ ಇರಲಿಲ್ಲ.

ಏಕೈಕ ಪ್ರಕಟಣೆಯೆಂದರೆ, 1.10 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲರಚನೆ ಪೈಪ್‌ಲೈನ್ (ಎನ್‌ಐಪಿ). ವಾಸ್ತವವಾಗಿ, ಮೂಲರಚನೆ ಅಭಿವೃದ್ಧಿಗೆ ಒಟ್ಟಾರೆ ಒತ್ತು ನೀಡುವ ಈ ಎನ್‌ಐಪಿಯನ್ನು ಮೋದಿಯವರು 2019ರ ಸ್ವಾತಂತ್ರ್ಯ ದಿನದ ಭಾಷಣದಲ್ಲೇ ಪ್ರಕಟಿಸಿದ್ದರು. ಇದೊಂದು ಪಂಚವಾರ್ಷಿಕ ಯೋಜನೆ, ಅಂದರೆ ಒಂದು ದೀರ್ಘಕಾಲೀನ ಸ್ವರೂಪದ ಯೋಜನೆ. ತಕ್ಷಣಕ್ಕೆ ಯಾವುದೇ ಹೂಡಿಕೆಯ ಪ್ರಕಟಣೆಗಳು ಭಾಷಣದಲ್ಲಿ ಇರಲಿಲ್ಲ. ಮತ್ತೆ-ಮತ್ತೆ ಆತ್ಮನಿರ್ಭರ ಭಾರತದ ರಾಗಾಲಾಪನೆ ಇದ್ದರೂ, ಸರಕಾರ ಹೆಚ್ಚೆಚ್ಚು ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ಮತ್ತು ಖಾಸಗಿ ಹೂಡಿಕೆಗಳನ್ನೇ ನೆಚ್ಚಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

ರಾಮಮಂದಿರದ ನಿರ್ಮಾಣ ಬಗ್ಗೆ ಪ್ರಧಾನಿಗಳ ಉಲ್ಲೇಖ ಅದು ಎಲ್ಲ ಜನವಿಭಾಗಗಳ ಪ್ರೌಢತೆಗೆ ಸಾಕ್ಷಿ ಎಂಬ ಬೂಟಾಟಿಕೆಯಿಂದ ಕೂಡಿತ್ತು. ಸೂಕ್ಷ್ಮವಾಗಿ ನೋಡಿದರೆ, ಹಿಂದುತ್ವದ ಈ ವಿಜಯೋನ್ಮಾದಕ್ಕೆ ಮುಸ್ಲಿಂ ಅಲ್ಪಸಂಖ್ಯಾತರು ತಮ್ಮನ್ನು ಹೊಂದಿಸಿಕೊಂಡು ಬಿಟ್ಟಿದ್ದಾರೆ ಎಂಬ ತೃಪ್ತಿಯನ್ನು ಈ ಭಾಷಣ ವ್ಯಕ್ತಪಡಿಸಿದಂತಿತ್ತು.

ನಿಜ ಹೇಳಬೇಕೆಂದರೆ, ಕೋವಿಡ್ ಅವಧಿಯನ್ನು ವಿದೇಶಿ ಬಂಡವಾಳಕ್ಕೆ ಮತ್ತು ಕಾರ್ಪೊರೇಟ್‌ಗಳಿಗೆ ಹೆಚ್ಚು ರಿಯಾಯ್ತಿಗಳನ್ನು ಮುಂದೊತ್ತಲಿಕ್ಕಾಗಿಯೇ ಬಳಸಲಾಗಿದೆ. ಸಾರ್ವಜನಿಕ ವಲಯದ ಉದ್ದಿಮೆಗಳ ಸಾರಾಸಗಟು ಖಾಸಗೀಕರಣದ ಕ್ರಮಗಳನ್ನು ಪ್ರಕಟಿಸಲಾಗಿದೆ.  ಪರಿಸರ ಪರಿಣಾಮ ನಿರ್ಧಾರದ ಕರಡಿನಿಂದಾಗಿ ನಿಯಂತ್ರಕ ನಿಯಮಾವಳಿಗಳು ದುರ್ಬಲಗೊಂಡು ರಾಷ್ಟ್ರೀಯ ಆಸ್ತಿಗಳನ್ನು ವಿದೇಶಿ ಮತ್ತು ದೇಶಿ ಕಾರ್ಪೊರೇಟ್‌ಗಳು ಲೂಟಿ ಹೊಡೆಯಲು ಸೌಕರ್ಯ ಒದಗುತ್ತದೆ. ಇದು ಅರಣ್ಯಗಳಿಗೆ ಮತ್ತು ಪರಿಸರಕ್ಕೆ ಭಾರೀ ಹಾನಿಯನ್ನು ಉಂಟು ಮಾಡುತ್ತದೆ.

ಮಹಾಸೋಂಕಿನ ಸಾಮಾಜಿಕ ಪರಿಣಾಮದ ಬಗ್ಗೆ ಯಾವುದೇ ಅರಿವು ಈ ಭಾಷಣದಲ್ಲಿ ಇರಲಿಲ್ಲ. ವಂಚಿತ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಶಾಲಾ ವಿದ್ಯಾರ್ಥಿಗಳ ಒಂದಿಡೀ ಪೀಳಿಗೆಯೇ ಶಿಕ್ಷಣದ ಸಾಧ್ಯತೆಯೇ ಇಲ್ಲದ ಒಂದು ಭವಿಷ್ಯವನ್ನು ಎದುರಿಸಬೇಕಾಗಿ ಬರುತ್ತಿದೆ. ಹಲವರು ನಡುವೆಯೇ ಶಾಲೆ ಬಿಡಲಿದ್ದಾರೆ. ಒಂದು ಹೊಸ ಆರಂಭ ಎಂದು ಪ್ರಧಾನ ಮಂತ್ರಿಗಳು ಸಾರಿರುವ ನೂತನ ಶಿಕ್ಷಣ ನೀತಿಯಲ್ಲಿ ಇದಕ್ಕೆ ಉತ್ತರವಿಲ್ಲ.

ಕಳೆದ ಸ್ವಾತಂತ್ರ್ಯ ದಿನದಿಂದ ಮೋದಿ ಸರಕಾರದ ಧೋರಣೆಗಳು ಹೆಚ್ಚು ಪ್ರತಿಗಾಮಿ ತಿರುವನ್ನು ಪಡೆದಿವೆ.  ಮೋದಿ ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಹರಿದು ಹಾಕಿದ್ದನ್ನು ಅಲ್ಲಿಯ ಜನಗಳ ವಿವಿಧ ವಿಭಾಗಗಳಿಗೆ ಹೊಸ ಹಕ್ಕುಗಳನ್ನು ತರಲಿದೆ ಎಂದು ಹೊಗಳಿದ್ದಾರೆ;  ಕಡಿತಗೊಂಡ ವಿಧಾನಸಭೆಗಾಗಿ ಕ್ಷೇತ್ರಗಳ ಮರುವಿಂಗಡಣೆಯ ಪ್ರಕ್ರಿಯೆಯನ್ನು ಪ್ರಶಂಸಿಸಿದ್ದಾರೆ. ಪೌರತ್ವದ ಜಾತ್ಯತೀತ ನಿರೂಪಣೆಯನ್ನು ಶಿಥಿಲಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿಯ ಪ್ರಸ್ತಾಪವೇ ಇಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಬಗ್ಗೆ ಅವರ ಉಲ್ಲೇಖ ಅದು ಎಲ್ಲ ಜನವಿಭಾಗಗಳ ಪ್ರೌಢತೆಗೆ ಸಾಕ್ಷಿ ಎಂಬ ಬೂಟಾಟಿಕೆಯಿಂದ ಕೂಡಿತ್ತು. ಸೂಕ್ಷ್ಮವಾಗಿ ನೋಡಿದರೆ, ಹಿಂದುತ್ವದ ಈ ವಿಜಯೋನ್ಮಾದಕ್ಕೆ ಮುಸ್ಲಿಂ ಅಲ್ಪಸಂಖ್ಯಾತರು ತಮ್ಮನ್ನು ಹೊಂದಿಸಿಕೊಂಡು ಬಿಟ್ಟಿದ್ದಾರೆ ಎಂಬ ತೃಪ್ತಿಯನ್ನು ಈ ಭಾಷಣ ವ್ಯಕ್ತಪಡಿಸಿದಂತಿತ್ತು.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸಾಮರಸ್ಯದ ಆವಶ್ಯಕತೆಗೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿಗಳ ಭಾಷಣದಲ್ಲಿ ಒಂದು ಸಕಾರಾತ್ಮಕ ದನಿ ಇತ್ತು. ಇದು ಪಾಕಿಸ್ತಾನದ ವಿರುದ್ದ ಎಂದಿನ ವಾಗ್ಬಾಣಗಳಿಗೆ ತದ್ವಿರುದ್ಧವಾಗಿದೆ. ಶಾಂತಿ ಮತ್ತು ಸಾಮರಸ್ಯದ ವಾತಾವರಣವನ್ನು ಕಟ್ಟುವುದು ದಕ್ಷಿಣ ಏಷ್ಯಾದ ದೇಶಗಳ ಮುಖಂಡರ ಹೊಣೆಗಾರಿಕೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ ನಮ್ಮ ನೆರೆದೇಶಗಳೊಂದಿಗೆ ಸಂಬಂಧಗಳು ಹೇಗೆ ಕಹಿಯಾದವು ಎಂಬುದನ್ನು ಪರಿಗಣಿಸಿದರೆ, ಈ ಮಾತು ಮೊದಲಿಗೆ ಮತ್ತು ಎಲ್ಲರಿಗಿಂತ ಹೆಚ್ಚಾಗಿ ಮೋದಿ ಮತ್ತು ಅವರ ಸರಕಾರಕ್ಕೇ ಅನ್ವಯವಾಗುವಂತದ್ದು. ಭಾರತವು ಅಮೆರಿಕಾದ ಇಂಡೋ-ಪ್ಯಾಸಿಫಿಕ್ ಕಾರ್ಯವ್ಯೂಹವನ್ನು ಸೇರಿದರೆ, ಶ್ರೀಲಂಕಾ, ಬಾಂಗ್ಲಾದೇಶ್, ನೇಪಾಳ ಮತ್ತು ಪಾಕಿಸ್ತಾನ ಬೆಲ್ಟ್ ಅಂಡ್ ರೋಡ್ ಹೆಜ್ಜೆಯನ್ನು ಸೇರಿವೆ.

ಪ್ರಧಾನ ಮಂತ್ರಿಗಳ ಸ್ವಾತಂತ್ರ್ಯ ದಿನದ ಭಾಷಣಗಳು ದೇಶದ ಮುಂದಿರುವ ಸವಾಲುಗಳು-ಸಾಧನೆಗಳ ಪರಾಮರ್ಶೆ ನಡೆಸುವ ಒಂದು ತೆರನ ರಾಷ್ಟ್ರ ಸನ್ನಿವೇಶ ಭಾಷಣದಂತಾಗಿವೆ. ಈ ಬಾರಿಯ, 86 ನಿಮಿಷಗಳ ಮೋದಿ ಭಾಷಣ ಜನಗಳು ಮತ್ತು ದೇಶ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಹೇಳಿರುವುದು ಬಹಳ ಕಡಿಮೆ, ಅದು ಎಂದಿನಂತೆ ಅವರ ಪ್ರಚಾರಶೈಲಿಯಲ್ಲೇ ಇತ್ತು.

 

Donate Janashakthi Media

Leave a Reply

Your email address will not be published. Required fields are marked *