- ಕೊರೊನಾ ನಿಯಂತ್ರಣ ಸಂಬಂಧ ಡಾ. ನಾಗೇಂದ್ರ ಮೇಲೆ ಒತ್ತಡ ಹೇರಿದ್ದ ಆರೋಪ
- ಭಾರತೀಯ ವೈದ್ಯಕೀಯ ಸಂಘದಿಂದ ಮುಖ್ಯಮಂತ್ರಿ ಬಿಎಸ್‌ವೈಗೆ ಪತ್ರ
ಮೈಸೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವೈದ್ಯಾಧಿಕಾರಿಯ ತಂದೆ ನೀಡಿದ ದೂರಿನ ಮೇರೆಗೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಮಿಶ್ರಾ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪಂಚಾಯತ್ನ ಮುಖ್ಯ ನಿರ್ವಹಣಾಧಿಕಾರಿಯವರು ನನ್ನ ಮಗನ ಮೇಲೆ ಒತ್ತಡ ಹೇರುತ್ತಿದ್ದರು. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದರು ಎಂದು ರಾಮಕೃಷ್ಣ ತಮ್ಮ ದೂರಿನಲ್ಲಿ ಪ್ರಸ್ತಾಪಿಸಿದ್ದರು. ಈ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಜಿಪಂ ಸಿಇಒ ಪ್ರಶಾಂತ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸಿದ ಪರಿಣಾಮ ಇರುವ ಸಿಬ್ಬಂದಿ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಣಾಮವೇ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆಗೆ ಮೂಲ ಕಾರಣ.
ಈ ಆತ್ಮಹತ್ಯೆ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ವೈದ್ಯರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ವೈದ್ಯರು ತಮ್ಮ ಮುಷ್ಕರವನ್ನು ಮುಂದುವರಿಸಿದ್ದಾರೆ. ಇವತ್ತೂ ಕೂಡ ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವೈದ್ಯರು, ನಂಜನಗೂಡು ಟಿಎಚ್ಒ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ. ಡಾ. ನಾಗೇಂದ್ರ ಸಾವಿಗೆ ಕಾರಣವಾಗಿರುವ ಜಿಪಂ ಸಿಇಒ ಪ್ರಶಾಂತ್ ಮಿಶ್ರಾ ಅವರನ್ನ ಅಮಾನತು ಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ಸಿಇಒ ವರ್ಗಾವಣೆ:
ಇದೇ ವೇಳೆ, ವೈದ್ಯರ ಒತ್ತಡಕ್ಕೆ ಮಣಿದು ಸರ್ಕಾರ ಪ್ರಶಾಂತ್ ಮಿಶ್ರಾ ಅವರನ್ನ ವರ್ಗಾವಣೆ ಮಾಡಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರಿಗೆ ಈಗ ತಾತ್ಕಾಲಿಕವಾಗಿ ಸಿಇಒ ಜವಾಬ್ದಾರಿ ಕೊಡಲಾಗಿದೆ.
ಸಿಎಂಗೆ ಐಎಂಒ ಪತ್ರ
ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಭಾರತೀಯ ವೈದ್ಯಕೀಯ ಸಂಘ( ಐಎಂಒ), ಕೊರೊನಾ ಸಾಂಕ್ರಾಮಿಕ ರೋಗದಂತಹ ಸಂದಿಗ್ಧ ಸಮಯದಲ್ಲಿ ರಾಷ್ಟ್ರಾದ್ಯಂತ ಎಲ್ಲೆಡೆ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಮತ್ತು ದಾದಿಯರು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ಹಲವಾರು ಸವಾಲುಗಳನ್ನು ಎದುರುಗೊಳ್ಳುತ್ತಿದ್ದಾರೆ. ಆದರೆ, ಅಂತಹ ಕೆಲಸಕ್ಕೆ ಮುಂದಾಗುವವರ ವಿರುದ್ಧ ಸೂಕ್ಷ್ಮತೆ ಇಲ್ಲದ ನಡವಳಿಕೆ ಸರಿಯಲ್ಲ. ಹೀಗಾಗಿ ವೈದ್ಯರು ಮತ್ತು ದಾದಿಯರ ಯೋಗಕ್ಷೇಮದ ಕುರಿತು ರಾಜ್ಯ ಸರ್ಕಾರ ಗಮನವಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದೆ.
ವೈದ್ಯಕೀಯ ಸೇವೆಯಲ್ಲಿ ಡೆಡ್‌ಲೈನ್ ಅಥವಾ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ನಂಜನಗೂಡು ಟಿಎಚ್‌ಓ ಡಾ. ನಾಗೇಂದ್ರ ಅವರಿಗೆ ಅಧಿಕಾರಿಗಳು ಟಾರ್ಗೆಟ್ ಡೆಡ್‌ಲೈನ್ ನೀಡಿದ್ದಾರೆ. ಈ ಒತ್ತಡದಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ದುರದೃಷ್ಟಕರ.
ಈ ಘಟನೆಯಿಂದ ಇಡೀ ವೈದ್ಯಕೀಯ ಸಮೂಹ ಆಘಾತಕ್ಕೊಳಗಾಗಿದೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ನಮಗೆ ನ್ಯಾಯ ದೊರಕಿಸಿಕೊಡಿ ಮತ್ತು ಇಂತಹ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳಿ” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.