ಟಿಕ್ ಟಾಕ್ ಹೋಯ್ತು ..….ಡುಂ ಡುಂ…ಮೈಕ್ರೋಸಾಫ್ಟ್ ಬಂತು.. ..ಡುಂ ಡುಂ!!

ನಮ್ಮ ಐಟಿ ಮತ್ತು ದೂರಸಂಪರ್ಕ ಸಚಿವರು ಒಂದು ಕಡೆ ನಮ್ಮ ‘ದಿಟ್ಟ ಟಿಕ್ ಟಾಕ್ ನಿಷೇಧ’ದಿಂದ ಸ್ಫೂರ್ತಿಗೊಂಡ ಅಮೆರಿಕದ ಅಧ್ಯಕ್ಷ ಟ್ರಂಪ್ ನಮ್ಮ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಆದರೆ ಅಧ್ಯಕ್ಷ ಟ್ರಂಪ್ ಮಾಡಿದಾದ್ದರೂ ಏನು? ಅಮೆರಿಕದ ನಾಗರಿಕರ ಮತ್ತು ಕಂಪನಿಗಳ ದತ್ತಾಂಶವನ್ನು ದೇಶದಲ್ಲೇ ಶೇಖರಿಸಿ ನಿಭಾಯಿಸುವ ಯಾವುದೇ ಅಮೆರಿಕದ ಕಂಪನಿ ‘ಟಿಕ್ ಟಾಕ್’ ಆಪ್ ನ್ನು ನಿಭಾಯಿಸುವ ‘ಬೈಟ್ ಡಾನ್ಸ್’ ಕಂಪನಿಯನ್ನು ಖರೀದಿ ಮಾಡದಿದ್ದರೆ ಸೆಪ್ಟೆಂಬರ್ 15ರೊಳಗೆ ಅದರ ಅಮೆರಿಕದ ನಿರ್ವಹಣೆಯನ್ನು ಮುಚ್ಚಲಾಗುವುದು ಅಂತ. ಆಗ ಅಮೆರಿಕದ ದೈತ್ಯ ಕಂಪನಿ ಮೈಕ್ರೋಸಾಫ್ಟ್ ‘ಟಿಕ್ ಟಾಕ್’ನ ಖ್ಯಾತಿಯ ಬೈಟ್ ಡಾನ್ಸ್ ಕಂಪನಿಯನ್ನು ಖರೀದಿಸಲು ಮುಂದೆ ಬಂದಿದೆ. ಈ  ನಡುವೆ ಬೈಟ್ ಡಾನ್ಸ್ ಖರೀದಿಗೆ ಪೈಪೋಟಿ ಆರಂಭವಾಗಿದ್ದು ಇನ್ನೊಂದು ದೈತ್ಯ ಸಾಫ್ಟ್ ವೇರ್ ಕಂಪನಿ ಒರೆಕಲ್ ಸಹ ಅದನ್ನು ಖರೀದಿಸಬಹುದು ಎಂಬ ಸುದ್ದಿ ಹರಡಿದೆ. ಇದು ಆದರೆ ಬಹುಶಃ ‘ಟಿಕ್ ಟಾಕ್’ ಭಾರತಕ್ಕೆ ವಾಪಸು ಬರುತ್ತದೆ.

‘ಟಿಕ್ ಟಾಕ್’ ನ್ನು ಬೈಟ್ ಡಾನ್ಸ್ ನಿಭಾಯಿಸುವ ಬದಲು ಮೈಕ್ರೋಸಾಫ್ಟ್ ಅಥವಾ ಒರೆಕಲ್ ನಿಭಾಯಿಸುತ್ತದೆ. ಭಾರತದ ಗ್ರಾಹಕರ ದತ್ತಾಂಶವನ್ನು ಚೀನಾದಲ್ಲಿ ಶೇಖರಿಸುವ ಬದಲು ಬಹುಶಃ ಅಮೆರಿಕದಲ್ಲೋ ಇನ್ನೆಲ್ಲೋ ಅದಕ್ಕೆ ಸುಗಮವಾಗುವಲ್ಲಿ ಇಡಬಹುದು. ಯಾಕೆಂದರೆ ನಮ್ಮ ದತ್ತಾಂಶ ಕಾನೂನು ಅಂತಹ ನಿಬಂಧನೆಗಳನ್ನು ಯಾವುದೇ (ವಿದೇಶೀ ಅಥವಾ ಸ್ವದೇಶಿ) ಕಂಪನಿಗಳ ಮೇಲೆ ವಿಧಿಸುವುದಿಲ್ಲ.  ಮೋದಿ ಸರಕಾರ ಸಾಧಿಸಿದ್ದು ಏನು? ಚೀನಾದ ಸಣ್ಣ ಕಂಪನಿಯೊಂದರ ಬದಲು ಮಣಿಸಲು ಕಷ್ಟಸಾಧ್ಯವಾದ ಅಮೆರಿಕನ್ ದೈತ್ಯ ಕಂಪನಿ ನಮ್ಮ ನಾಗರಿಕರ ಖಾಸಗಿ ದತ್ತಾಂಶಗಳನ್ನು ಚೀನಾದ ಬದಲು ಬಹುಶಃ ಅಮೆರಿಕದಲ್ಲಿ ಇಡಬಹುದು, ಅಷ್ಟೇ!

ಭಾರತ ಸರಕಾರ ಇತ್ತೀಚೆಗೆ ಟಿಕ್ ಟಾಕ್, ವಿ ಚಾಟ್, ಶೇರ್-ಇಟ್ ಸೇರಿದಂತೆ 59 ಜನಪ್ರಿಯ ‘ಚೀನೀ’ ಆಪ್ (app) ಗಳನ್ನು  ನಿಷೇಧಿಸಿದೆ. ಅಲ್ಲದೆ ಹುವಾವೇ, ಝೀ.ಟಿ.ಇ ಮುಂತಾದ ಚೀನಿ ಕಂಪನಿಗಳ 3ಜಿ ಮತ್ತು 4ಜಿ ದೂರಸಂಪರ್ಕ ಉಪಕರಣಗಳ ಬಳಕೆಯನ್ನು ನಿಷೇಧಿಸಿದೆ. ಎರಡೂ ನಿಷೇಧಗಳಿಗೆ ‘ದೇಶದ ಏಕತೆ ಮತ್ತು ಸಾರ್ವಭೌಮತೆಗಳ ರಕ್ಷಣೆ’ಗೆ ಹಾಗೂ ‘ಪ್ರಭುತ್ವದ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆ’ಗೆ ಎನ್ನಲಾಗಿದೆ. ‘ಚೀನಿ’ ಆಪ್ (app) ಗಳು ದೇಶದ ಜನತೆಯ ದತ್ತಾಂಶ(ಡಾಟಾ)ಗಳನ್ನು ಹೊರಗೆ ಒಯ್ಯುವ ಮೂಲಕ ಭಾರತದ ನಾಗರಿಕರ ಖಾಸಗಿತನದ ಹರಣ ಮತ್ತು ಖಾಸಗಿ ದತ್ತಾಂಶದ ದುರ್ಬಳಕೆಯ ಕಾರಣವನ್ನೂ ಕೊಡಲಾಗಿದೆ. ಈ ನಿಷೇಧಗಳು ‘ಆತ್ಮ ನಿರ್ಭರತೆ’ ಹೆಚ್ಚಿಸುವ ಕ್ರಮಗಳೂ ಎಂದು ಹೇಳಲಾಗಿದೆ. ಈ ನಿಷೇಧ ಕ್ರಮಗಳು ರಾಷ್ಟ್ರೀಯ/ಅಂತರ್ರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿವೆಯೇ? ವಿದೇಶೀ ಬಂಡವಾಳಕ್ಕೆ ‘ವ್ಯವಹಾರದ ಸುಗಮತೆ’ ಖಾತರಿಗೊಳಿಸುವ ನೀತಿಗೆ ವಿರುದ್ಧವಲ್ಲವೇ?  ಈ ಆಪ್/ಉಪಕರಣಗಳು ಸರಕಾರ ಹೇಳುತ್ತಿರುವ ‘ಅಪಾಯ’ಗಳನ್ನು ನಿಜವಾಗಿಯೂ ಒಡ್ಡುತ್ತವೆಯೇ ಎಂಬ ಪ್ರಶ್ನೆಗಳನ್ನು ಬದಿಗಿಟ್ಟರೂ, ನಮ್ಮ ಸರಕಾರಗಳ ಸಾಫ್ಟ್‍ವೇರ್, ಆಪ್, ದತ್ತಾಂಶ, ಐಟಿ ಮತ್ತು ದೂರಸಂಪರ್ಕ ಸೇವೆ, ವಿದೇಶೀ ಬಂಡವಾಳ ಹೂಡಿಕೆ, ಖಾಸಗಿತನ ಇತ್ಯಾದಿಗಳ ಕುರಿತು ಈ ಸರಕಾರದ ಧೋರಣೆ ನೀತಿಗಳ ಹಿನ್ನೆಲೆಯಲ್ಲಿ ಇಂತಹ ನಿಷೇಧ ಕ್ರಮಗಳ ಸುಸಂಬದ್ಧತೆಯ ಬಗ್ಗೆ ನೋಡೋಣ.

ಉಚಿತ ಸೇವೆ = ನಿಮ್ಮನ್ನು ಮಾರಲಾಗುತ್ತಿದೆ !

ಆಪ್ ಗಳ ಕುರಿತು (ಅವು ಚೀನಿ, ಜಾಪಾನಿ, ಇಂಗ್ಲಿಸ್ತಾನಿ, ಹಿಂದುಸ್ತಾನಿ ಯಾವುದೇ ಇರಲಿ) ಹೇಳುವುದಾದರೆ ಅವುಗಳ ‘ವ್ಯವಹಾರ ಮಾದರಿ’ಯೇ (ಬಿಸಿನೆಸ್ ಮಾಡೆಲ್’) ಖಾಸಗಿತನ, ದತ್ತಾಂಶಗಳ ಭದ್ರತೆ, ದೇಶಗಳ ಸಾರ್ವಭೌಮತೆ ಇವುಗಳಿಗೆ ವಿರುದ್ಧವಾಗಿರುವಂತಹುದು. ಇವುಗಳಲ್ಲಿ ಹೆಚ್ಚಿನವು ತಮ್ಮ ‘ಸೇವೆ’ಗಳನ್ನು ಉಚಿತವಾಗಿ ಕೊಡುತ್ತವೆ. ಆದರೆ ಕೋಟ್ಯಾಂತರ ಡಾಲರುಗಳ ವ್ಯವಹಾರ ಮಾಡುತ್ತವೆ, ಲಾಭ ಗಳಿಸುತ್ತವೆ. ಈ ಕಂಪನಿಗಳಿಗಳಿಗೆ ಈ ಹಣ, ಲಾಭ ಎಲ್ಲಿಂದ ಬರುತ್ತವೆ? ಒಂದೋ ನಿಮಗೆ ‘ಉಚಿತ ಸೇವೆ’ಯೊಂದಿಗೆ ಬಲವಂತವಾಗಿ ಉಣಿಸುವ ಜಾಹೀರಾತುಗಳಿಂದ ಅಥವಾ ನಿಮ್ಮ ಖಾಸಗಿ ಮಾಹಿತಿಗಳನ್ನು ಇನ್ಯಾವುದೋ ಕಂಪನಿಗೆ ಮಾರುವುದರಿಂದ. ಇದಕ್ಕಾಗಿ ‘ಉಚಿತ ಸೇವೆ’ಯ ಜತೆ ಆ ಸೇವೆಗೆ ಅಗತ್ಯವಿಲ್ಲದ ಸಂಬಂಧವಿಲ್ಲದ ಎಲ್ಲ ಮಾಹಿತಿಗಳನ್ನು ಕೊಡಲು ಕೇಳುತ್ತದೆ. ಇದನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡುವುದಿಲ್ಲ, ಬೇರೆಯವರಿಗೆ ಕೊಡುವುದಿಲ್ಲ ಎಂಬಿತ್ಯಾದಿ ನೂರೆಂಟು ಪೊಳ್ಳು ಆಶ್ವಾಸನೆಗಳುಳ್ಳ ಯಾರೂ ಓದದ ಓದಿದರೂ ಅರ್ಥವಾಗದ ಕಾನೂನು-ಭಾಷೆಯಲ್ಲಿ ನಿಮ್ಮ ಕ್ಲಿಕ್ (ಅಥವಾ ‘ಹೆಬ್ಬೆಟ್ಟು’) ಒತ್ತಿಸಿಕೊಳ್ಳುತ್ತದೆ. ಈ ಮಾಹಿತಿಗಳೇ ಅವುಗಳ ಪ್ರಮುಖ ಆಸ್ತಿ. ಅವುಗಳನ್ನು ತಮ್ಮ ವ್ಯವಹಾರ ಕುದುರಿಸಲು ಬಳಸುವುದು (ದುರ್ಬಳಕೆ ಸೇರಿದಂತೆ) ಮಾರುವುದು ಅಥವಾ ಆಯಾ ಸರಕಾರಗಳು ಸೇರಿದಂತೆ ಇತರ ಕಂಪನಿಗಳಿಗೆ ಮಾರಿಕೊಳ್ಳುವುದು ಮಾಡುತ್ತವೆ. ಇದಕ್ಕಾಗಿಯೇ “ನಿಮಗೆ ನೆಟ್ ನಲ್ಲಿ ಉಚಿತ ಸೇವೆ ಸಿಗುತ್ತಿದ್ದರೆ ಅದರ ಅರ್ಥ ನೀವೇ ಅಥವಾ ನಿಮ್ಮ ಮಾಹಿತಿಯೇ ಅವರ ಉತ್ಪನ್ನ” ಅಂತ ಹೇಳಲಾಗುತ್ತದೆ! ಅವರಿಗೆ ನಿಮ್ಮ ಮಾಹಿತಿ ಕೊಡಲು ಸಿದ್ಧವಿಲ್ಲದಿದ್ದರೆ ನಿಮಗೆ ‘ಉಚಿತ ಸೇವೆ’ ಸಿಗುವುದಿಲ್ಲ. ಆದರೂ ನಿಮ್ಮ ಮಾಹಿತಿ ಬೇರೆ ಮೂಲಗಳಿಂದ ಅವುಗಳಿಗೆ ಸಿಗುವುದಿಲ್ಲ ಎಂದು ಯಾವುದೇ ಗ್ಯಾರಂಟಿ ಇಲ್ಲ.

ಗೂಗಲ್, ಫೇಸ್‍ಬುಕ್, ಮುಂತಾದ ಪ್ರಮುಖವಾಗಿ ನೆಟ್ ಸೇವಾ ಕಂಫನಿಗಳು ಮಾಡುವುದು ಕೋಟ್ಯಾಂತರ ಜನ ಬಳಸುವ ಸೇವೆ ಮತ್ತು ಆಪ್ ಗಳಿಂದ ಸಂಗ್ರಹಿಸಿದ ಮಾಹಿತಿಯಿಂದಲೇ. ಈ ಜಾಗತಿಕ ಕಂಪನಿಗಳು ಯಾವ ಮಾಹಿತಿ ಸಂಗ್ರಹಿಸುತ್ತವೆ, ಎಲ್ಲಿ ಶೇಖರಿಸುತ್ತವೆ, ಹೇಗೆ ಯಾವುದಕ್ಕೆ ಬಳಸುತ್ತವೆ ಎಂಬ ನಿಬಂಧನೆಗೆ ಒಳಪಡುವುದಿಲ್ಲ. ಇವು ಬೇರೆ ದೇಶಗಳಲ್ಲಿ ಸಂಗ್ರಹಿಸುವ ಮಾಹಿತಿಯನ್ನು ತಮ್ಮ ದೇಶದಲ್ಲಿ ಶೇಖರಿಸಿ ಇಡುತ್ತವೆ ಮತ್ತು ತಮ್ಮ ದೇಶದ ಬೇಹುಗಾರಿಕೆ ಮತ್ತು ಸರಕಾರದ ಯಾವುದೇ ಏಜೆನ್ಸಿಗಳಿಗೆ ಕೊಡುತ್ತವೆ. ಅಮೆರಿಕ, ಯುರೋಪಿನ ಕೆಲವು ಸರಕಾರಗಳನ್ನು ಬಿಟ್ಟರೆ ಇತರ ಸರಕಾರಗಳನ್ನು ನಿರ್ಲಕ್ಷ ಮಾಡಬಲ್ಲ, ನಡುಗಿಸಿ ಉರುಳಿಸಬಲ್ಲ, ತಮ್ಮ ಕ್ಷೇತ್ರಗಳಲ್ಲಿ ಅಪಾಯಕಾರಿ ಮಟ್ಟದ ಏಕಸ್ವಾಮ್ಯ ಹೊಂದಿರುವ, ಹಲವು ದೇಶಗಳ ಜಿಡಿಪಿಗಿಂತ ಹೆಚ್ಚು ವಹಿವಾಟು ಹೊಂದಿರುವ, ತಮಗೆ ಅನುಕೂಲಕರ ಶರತ್ತಿಗೆ ಒಪ್ಪಿಸಬಲ್ಲ ಆರ್ಥಿಕ ರಾಜಕೀಯ ಶಕ್ತಿ ಹೊಂದಿವೆ. ಇವುಗಳಲ್ಲಿ ಪ್ರಮುಖವಾಗಿ ಆಪ್, ಸಾಫ್ಟ್ ವೇರ್, ನೆಟ್ ಸೇವೆ ಒದಗಿಸುವ ಗೂಗಲ್, ಫೇಸ್‍ಬುಕ್,  ಅಮೆಜಾನ್, ಮೈಕ್ರೋಸಾಫ್ಟ್, ಆಪಲ್ ಮುಂತಾದವು ಜಗತ್ತಿನ ಅತ್ಯಂತ ಹತ್ತು ದೊಡ್ಡ ಕಂಪನಿಗಳ ಪಟ್ಟಿಯಲ್ಲಿ ಭಾರೀ ತೈಲ, ಬ್ಯಾಂಕುಗಳನ್ನು ಹಿಂದೆ ಹಾಕಿ ಹಲವು ವರ್ಷಗಳಿಂದ ಇವೆ ಎಂದಾಗ ಇವುಗಳ ವಿರಾಟ್ ಶಕ್ತಿ ತಿಳಿಯುತ್ತದೆ. ಇವುಗಳನ್ನು ತೀವ್ರ ನಿಬಂಧನೆಗೊಳಪಡಿಸದೆ ಕೆಲವು ಸೇವೆಗಳನ್ನು ನಿಷೇಧಿಸದೆ, ಕೆಲವು ಚೀನಿ ಕಂಪನಿಗಳ ಆಪ್ ನಿಷೇಧಿಸಿ ‘ದೇಶದ ಏಕತೆ ಮತ್ತು ಸಾರ್ವಭೌಮತೆಗಳ ರಕ್ಷಣೆ’, ‘ಪ್ರಭುತ್ವದ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆ’, ‘ನಾಗರಿಕರ ಖಾಸಗಿತನ’ದ ರಕ್ಷಣೆ ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದು ಬರಿಯ ‘ಕೆಟ್ಟ ಜೋಕ್’ ಅಷ್ಟೇ.

ಟಿಕ್ ಟಾಕ್ ಹೋಯ್ತು.. ಡುಂ ಡುಂ

ಮೈಕ್ರೋಸಾಫ್ಟ್ ಬಂತು.. ಡುಂ ಡುಂ

ಈ ದೈತ್ಯ ಕಂಪನಿಗಳ ಕುರಿತು ಇದು ಬರಿಯ ಆತಂಕವಲ್ಲ, ಊಹಾಪೋಹಗಳಲ್ಲ. ಇವುಗಳ ಅಪಾಯವನ್ನು ಹಲವು ಅಭಿವೃದ್ಧ ದೇಶಗಳಲ್ಲಿ ನಾಗರಿಕ ಸಮಾಜಗಳು ಮನಗಂಡಿದೆ ಮತ್ತು ಅದರ ವಿರುದ್ಧ ಹೋರಾಡುತ್ತಿವೆ. ತಮ್ಮ ಸರಕಾರಗಳು ಈ ದೈತ್ಯ ಕಂಪನಿಗಳ ಮೇಲೆ ನಿಬಂಧನೆ ಹೇರುವಂತೆ ಸರಕಾರಗಳ ಮೇಲೆ ಒತ್ತಡ ಹಾಕುತ್ತಿವೆ. ಫೇಸ್‍ಬುಕ್ ತನ್ನ ಗ್ರಾಹಕರ ಮಾಹಿತಿಯನ್ನು ಕ್ಯಾಂಬಿಜ್ ಅನಾಲಿಟಿಕಾ ಮೂಲಕ ಅಮೆರಿಕದ ಚುನಾವಣೆಗಳಲ್ಲಿ ಕೆಲವು ಪಕ್ಷಗಳ ಪರವಾಗಿ ಭಾರೀ ಹಣಕ್ಕಾಗಿ ದುರ್ಬಳಕೆ ಮಾಡಿ ರಾಜಕೀಯ ಪ್ರಕ್ರಿಯೆಯಲ್ಲಿ ಮೂಗುತೂರಿಸಿದೆ ಎಂಬ ಆಪಾದನೆಯ ತನಿಖೆ ಎದುರಿಸುತ್ತಿದೆ. (ಚೋದ್ಯದ ವಿಷಯವೆಂದರೆ ಇದರ ಪ್ರಯೋಜನ ಪಡೆದ ಟ್ರಂಪ್ ಚೀನಾ ಅಮೆರಿಕದ ಚುನಾವಣೆಗಳಲ್ಲಿ ಮೂಗು ತೂರಿಸುತ್ತಿದೆ ಎಂದು ಆಪಾದಿಸಿದ್ದಾರೆ) ಈ ದೈತ್ಯ ಕಂಪನಿಗಳು ಅಮೆರಿಕ ಮತ್ತು ಯುರೋಪಿಯನ್ ಕೂಟದ ಸಾರ್ವಭೌಮತೆ, ಭದ್ರತೆ, ಖಾಸಗಿತನದ ರಕ್ಷಣೆ ಮಾಡುವ ಹಲವು ಕಾನೂನುಗಳನ್ನು ಉಲ್ಲಂಘಿಸಿವೆ ಎಂಬ ಆಪಾದನೆಗಳ ತನಿಖೆಗೆ ಒಳಪಟ್ಟಿವೆ. ಅಧ್ಯಕ್ಷ ಚವೇಝ್ ಆಡಳಿತಾವಧಿಯಲ್ಲಿ, ಮೈಕ್ರೋಸಾಫ್ಟ್ ತಾನು ವೆನೆಜುವೇಲಾದ ತೈಲ ಸ್ಥಾವರಗಳ ಜಾಲದಲ್ಲಿ ಪೂರೈಸಿದ ಕಂಪ್ಯೂಟರ್ ಹಾರ್ಡ್ ವೇರ್/ಸಾಫ್ಟ್ ವೇರ್ ನಲ್ಲಿ ಇದಕ್ಕಾಗಿಯೇ ಇಡಲಾಗಿದ್ದ ಹಿಂಬಾಗಿಲ ಮೂಲಕ ಪ್ರವೇಶಿಸಿ ಅವುಗಳನ್ನು ಕೆಲಸ ಮಾಡದಂತೆ ಮಾಡಿ ಬುಡಮೇಲು ಕೃತ್ಯಗಳನ್ನು ನಡೆಸಿದೆ ಎಂದು ಬಹಿರಂಗವಾಗಿತ್ತು. ವೆನೆಜುವೇಲಾದ ‘ಸಾರ್ವಭೌಮತೆಯ ರಕ್ಷಣೆ’, ‘ಪ್ರಭುತ್ವದ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆ’ಗೆ ಮೈಕ್ರೋಸಾಫ್ಟ್ ಭಂಗ ತಂದಿತ್ತು.

ತಮಾಷೆಯ ವಿಷಯವೆಂದರೆ ನಮ್ಮ ಐಟಿ ಮತ್ತು ದೂರಸಂಪರ್ಕ ಸಚಿವರು ಒಂದು ಕಡೆ ನಮ್ಮ ‘ದಿಟ್ಟ ಟಿಕ್ ಟಾಕ್ ನಿಷೇಧ’ದಿಂದ ಸ್ಫೂರ್ತಿಗೊಂಡ ಅಮೆರಿಕದ ಅಧ್ಯಕ್ಷ ಟ್ರಂಪ್ ನಮ್ಮ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಆದರೆ ಅಧ್ಯಕ್ಷ ಟ್ರಂಪ್ ಮಾಡಿದಾದ್ದರೂ ಏನು? ಅಮೆರಿಕದ ನಾಗರಿಕರ ಮತ್ತು ಕಂಪನಿಗಳ ದತ್ತಾಂಶವನ್ನು ದೇಶದಲ್ಲೇ ಶೇಖರಿಸಿ ನಿಭಾಯಿಸುವ ಯಾವುದೇ ಅಮೆರಿಕದ ಕಂಪನಿ ‘ಟಿಕ್ ಟಾಕ್’ ಆಪ್ ನ್ನು ನಿಭಾಯಿಸುವ ‘ಬೈಟ್ ಡಾನ್ಸ್’ ಕಂಪನಿಯನ್ನು ಖರೀದಿ ಮಾಡದಿದ್ದರೆ ಸೆಪ್ಟೆಂಬರ್ 15ರೊಳಗೆ ಅದರ ಅಮೆರಿಕದ ನಿರ್ವಹಣೆಯನ್ನು ಮುಚ್ಚಲಾಗುವುದು ಅಂತ. ಆಗ ಅಮೆರಿಕದ ದೈತ್ಯ ಕಂಪನಿ ಮೈಕ್ರೋಸಾಫ್ಟ್ ‘ಟಿಕ್ ಟಾಕ್’ನ ಖ್ಯಾತಿಯ ಬೈಟ್ ಡಾನ್ಸ್ ಕಂಪನಿಯನ್ನು ಖರೀದಿಸಲು ಮುಂದೆ ಬಂದಿದೆ. ಹಾಗಾದರೆ ‘ಟಿಕ್ ಟಾಕ್’ನ್ನು ನಿಷೇಧಿಸಿ ಮುಚ್ಚುವುದಿಲ್ಲ ಎಂದಿದ್ದಾರೆ ಟ್ರಂಪ್! ಆದರೆ ಮೈಕ್ರೋಸಾಫ್ಟ್ ಖರೀದಿ ಬೆಲೆಯ ಒಂದು ಭಾಗವನ್ನು ಸರಕಾರಕ್ಕೆ ಕೊಡಬೇಕು ಎಂದೂ ಹೇಳಿದ್ದಾರಂತೆ! (ಇದು ಒಳ್ಳೆಯ ಐಡಿಯಾ! ಇದನ್ನು ನಮ್ಮ ಸರಕಾರ ಸಹ ಅನುಸರಿಸವುದೇ?!) ಆದರೆ ಮೈಕ್ರೋಸಾಫ್ಟ್ ಮೊದಲು ಅಮೆರಿಕದ ಸರಕಾರಕ್ಕೆ ಮತ್ತು ‘ಟಿಕ್ ಟಾಕ್’ಗೆ ಬರಿಯ ಅಮೆರಿಕದ ಗ್ರಾಹಕರ ವ್ಯವಹಾರ ಸಾಕಾಗುವುದಿಲ್ಲ; ಕನಿಷ್ಟ ಯು.ಕೆ, ಕೆನಡಾ, ನ್ಯೂಜಿಲಾಂಡ್, ಆಸ್ಟ್ರೇಲಿಯ ವ್ಯವಹಾರವನ್ನು ಒಳಗೊಳ್ಳಬೇಕು ಎಂದು ಷರತ್ತು ಹಾಕಿತ್ತು. ನಂತರ ಅದನ್ನು ಇಡೀ ಜಗತ್ತಿನ ‘ಟಿಕ್ ಟಾಕ್’ ವ್ಯವಹಾರಕ್ಕೆ ವಿಸ್ತರಿಸಿದೆ. ಮೈಕ್ರೋಸಾಫ್ಟ್ ದೊಡ್ಡ ಮೊತ್ತದ ಆಮಿಷ ತೋರಿಸುತ್ತಿದ್ದು ಬೈಟ್ ಡಾನ್ಸ್ ಜತೆ ಅದರ ವ್ಯವಹಾರ ಕುದುರುವಂತೆ ಕಾಣುತ್ತಿದೆ. ಈ  ನಡುವೆ ಬೈಟ್ ಡಾನ್ಸ್ ಖರೀದಿಗೆ ಪೈಪೋಟಿ ಆರಂಭವಾಗಿದ್ದು ಇನ್ನೊಂದು ದೈತ್ಯ ಸಾಫ್ಟ್ ವೇರ್ ಕಂಪನಿ ಒರೆಕಲ್ ಸಹ ಅದನ್ನು ಖರೀದಿಸಬಹುದು ಎಂಬ ಸುದ್ದಿ ಹರಡಿದೆ.

ಇದು ಆದರೆ ಬಹುಶಃ ‘ಟಿಕ್ ಟಾಕ್’ ಭಾರತಕ್ಕೆ ವಾಪಸು ಬರುತ್ತದೆ. ‘ಟಿಕ್ ಟಾಕ್’ ನ್ನು ಬೈಟ್ ಡಾನ್ಸ್ ನಿಭಾಯಿಸುವ ಬದಲು ಮೈಕ್ರೋಸಾಫ್ಟ್ ಅಥವಾ ಒರೆಕಲ್ ನಿಭಾಯಿಸುತ್ತದೆ. ಭಾರತದ ಗ್ರಾಹಕರ ದತ್ತಾಂಶವನ್ನು ಚೀನಾದಲ್ಲಿ ಶೇಖರಿಸುವ ಬದಲು ಬಹುಶಃ ಅಮೆರಿಕದಲ್ಲೋ ಇನ್ನೆಲ್ಲೋ ಅದಕ್ಕೆ ಸುಗಮವಾಗುವಲ್ಲಿ ಇಡಬಹುದು. ಯಾಕೆಂದರೆ ನಮ್ಮ ದತ್ತಾಂಶ ಕಾನೂನು ಅಂತಹ ನಿಬಂಧನೆಗಳನ್ನು ಯಾವುದೇ (ವಿದೇಶೀ ಅಥವಾ ಸ್ವದೇಶಿ) ಕಂಪನಿಗಳ ಮೇಲೆ ವಿಧಿಸುವುದಿಲ್ಲ. ಮೋದಿ ಸರಕಾರ ಸಾಧಿಸಿದ್ದು ಏನು? ಚೀನಾದ ಸಣ್ಣ ಕಂಪನಿಯೊಂದರ ಬದಲು ಮಣಿಸಲು ಕಷ್ಟಸಾಧ್ಯವಾದ ಅಮೆರಿಕನ್ ದೈತ್ಯ ಕಂಪನಿ ನಮ್ಮ ನಾಗರಿಕರ ಖಾಸಗಿ ದತ್ತಾಂಶಗಳನ್ನು ಚೀನಾದ ಬದಲು ಬಹುಶಃ ಅಮೆರಿಕದಲ್ಲಿ ಇಡಬಹುದು, ಅಷ್ಟೇ! ಬೈಟ್ ಡಾನ್ಸ್ ನ್ನು ಯಾವುದೇ ಭಾರತೀಯ ಕಂಪನಿ ಖರೀದಿ ಮಾಡಿದರೂ ಯಾವುದೇ ಕಾನೂನು ನಿಬಂಧನೆ ಇಲ್ಲದಿರುವುದರಿಂದ ಭಾರತದ ಗ್ರಾಹಕರ ದತ್ತಾಂಶವನ್ನು ಎಲ್ಲಿ ಬೇಕಾದರೂ ಇಡಬಹುದು.

ಇದು ಬಹುಪಾಲು ಎಲ್ಲ ಆಪ್ ಕಂಪನಿಗಳ ಬಗೆಗೂ ನಿಜ. ನಿಷೇಧಿತ ಚೀನಿ ಆಪ್ ಗಳ ಬದಲಿಯಾಗಿ ಬರುವ ಭಾರತದ ಅಥವಾ ಜಾಗತಿಕ ಕಂಪನಿಗಳೂ ಭಾರತದ ಗ್ರಾಹಕರ ದತ್ತಾಂಶವನ್ನು ಎಲ್ಲಿ ಬೇಕಾದರೂ ಇಡಬಹುದು. ಏನೂ ಬೇಕಾದರೂ ಮಾಡಬಹುದು. ಆದ್ದರಿಂದ ಚೀನಿ ಆಪ್ ನಿಷೇಧದಿಂದ ಅದಕ್ಕೆ ಕಾರಣವೆಂದು ಹೇಳಲಾದ ಗುರಿಯನ್ನಂತೂ ಸಾಧಿಸಲಾಗುವುದಿಲ್ಲ.

 ಗೂಗಲ್, ಫೆಸ್ ಬುಕ್ (ವಾಟ್ಸಪ್ ಸೇರಿದಂತೆ) ಮುಂತಾದ ಆಪ್ ಅಥವಾ ನೆಟ್ ಸೇವಾ ಕಂಪನಿಗಳು ಈಗಲೂ ಭಾರತದ ನಾಗರಿಕರ ಅಗಾಧ ದತ್ತಾಂಶವನ್ನು ತಮಗೆ ಮನಬಂದಂತೆ ಮನಬಂದಲ್ಲಿ ಶೇಖರಿಸುತ್ತವೆ. ದುರ್ಬಳಕೆ ಮಾಡುತ್ತವೆ. ಹಾಗಾದರೆ ‘ದೇಶದ ಏಕತೆ ಮತ್ತು ಸಾರ್ವಭೌಮತೆಗಳ ರಕ್ಷಣೆ’, ‘ಪ್ರಭುತ್ವದ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆ’, ‘ನಾಗರಿಕರ ಖಾಸಗಿತನ’ದ ರಕ್ಷಣೆಯನ್ನು ನಿಜವಾಗಿಯೂ ಮಾಡಬೇಕಾದರೆ ಏನು ಮಾಡಬೇಕು? ಕನಿಷ್ಠ ನ್ಯಾಯಮೂರ್ತಿ ಶ್ರೀಕೃಷ್ಣ ಕಮಿಶನ್ ದತ್ತಾಂಶ ಸಂಗ್ರಹ, ಶೇಖರಣೆ ಕುರಿತು ದತ್ತಾಂಶ ರಕ್ಷಣೆ ಕರಡು ಮಸೂದೆಯಲ್ಲಿ ನಮೂದಿಸಿದ ಅಂಶಗಳನ್ನು ಜಾರಿಗೆ ತರಬೇಕು. ಈ ದೇಶದ ಯಾವುದೇ ದತ್ತಾಂಶ ದೇಶದಲ್ಲೇ ಶೇಖರಿಸಿ ಸಂಸ್ಕರಿಸಬೇಕು (ದತ್ತಾಂಶ ಸ್ಥಳೀಕರಣ) ಮುಂತಾದ ನಿಬಂಧನೆಗಳನ್ನು ಈ ಕರಡು ವಿಧಿಸಿತ್ತು. ರಿಸರ್ವ್ ಬ್ಯಾಂಕ್ ಎಪ್ರಿಲ್ 2018ರಲ್ಲಿ ಹೊರಡಿಸಿದ ನೋಟಿಫಿಕೇಶನಿನಲ್ಲಿ ಭಾರತದಲ್ಲಿ ಹಣ ಪಾವತಿ ಸೇವೆ (ಡೆಬಿಟ್/ಕ್ರೆಡಿಟ್ ಕಾರ್ಡ್, ಬ್ಯಾಂಕಿಂಗ್, ಮೊಬೈಲ್ ಪಾವತಿ ಇತ್ಯಾದಿ)  ಒದಗಿಸುವ ಎಲ್ಲಾ ಸಂಸ್ಥೆಗಳು ಆರು ತಿಂಗಳೊಳಗೆ ತಮ್ಮ ಎಲ್ಲ ದತ್ತಾಂಶಗಳು ಭಾರತದಲ್ಲೇ ಇಡಬೇಕು ಎಂದು ವಿಧಿಸಿತ್ತು.  ದತ್ತಾಂಶ ಸ್ಥಳೀಕರಣ ಮತ್ತು ರಿಸರ್ವ್ ಬ್ಯಾಂಕ್ ನ ಮೇಲಿನ ನೋಟಿಫಿಕೇಶನಿಗೆ ಯು.ಎಸ್ ವಾಣಿಜ್ಯ ಪ್ರತಿನಿಧಿಯು, ಇದು ಯು.ಎಸ್ ಕಂಪನಿಗಳ ವ್ಯವಹಾರಕ್ಕೆ ಧಕ್ಕೆ ತರುತ್ತದೆ ಎಂದು ತೀವ್ರವಾಗಿ ಆಕ್ಷೇಪಿಸಿದ್ದರು.

ಕೂಡಲೇ 56 ಇಂಚಿನ ಎದೆಯ ಮೋದಿಯ ಸರಕಾರ ಮೊಣಕಾಲೂರಿ 2019ರ ದತ್ತಾಂಶ ರಕ್ಷಣೆ ಕರಡು ಮಸೂದೆಯಲ್ಲಿ ಈ ಅಂಶಗಳನ್ನು ದುರ್ಬಲಗೊಳಿಸಿತ್ತು. ಅಮೆರಿಕದ ದೈತ್ಯ ಕಂಪನಿಗಳ ಬಲದ ಎದುರು ಸಹ, ಯುರೋಪಿಯನ್ ಕೂಟ ಪ್ರಬಲ ದತ್ತಾಂಶ ಸ್ಥಳೀಕರಣದ ನಿಬಂಧನೆಗಳನ್ನು ವಿಧಿಸಿದೆ. ಭಾರತಕ್ಕೂ ಇದು ಸಾಧ್ಯವಿದೆ. ಇಂತಹ ನಿಬಂಧನೆಗಳನ್ನು ವಿಧಿಸುವ ಕಾನೂನಿನ ನೀತಿ ಸಂಹಿತೆಗಳ ಚೌಕಟ್ಟು ಇಲ್ಲದೆ ಬೇಕಾಬಿಟ್ಟಿ ನಿಷೇಧಗಳನ್ನು ಹೇರುವುದು ಇದಕ್ಕೆ ಸುಸಂಬದ್ಧ ಪರಿಹಾರವಲ್ಲ. ಸಂತ್ರಸ್ತ ಕಂಪನಿಗಳು ಕೋರ್ಟಿಗೆ ಹೋದರೆ ಇವು ತಾರತಮ್ಯದವು ಕಾನೂನುಬಾಹಿರ ಎಂದು ಬಿದ್ದು ಸಹ ಹೋಗಬಹುದು. ಇವುಗಳನ್ನು ಅಂತರ್ರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆ ಎಂದು ಸಹ ಪ್ರಶ್ನಿಸಲಾಗಬಹುದು.

ಚೀನೀ ಉಪಕರಣಗಳ ನಿಷೇಧ ಸಹ ಬರಿಯಾ ಡ್ರಾಮಾ

ಇದೇ 3ಜಿ, 4ಜಿ ಮತ್ತು ಮುಂಬರುವ ದೂರ ಸಂಪರ್ಕ ಉಪಕರಣಗಳ ಆಮದಿನಲ್ಲಿ ಚೀನಾದ ಕಂಪನಿಗಳ ಉತ್ಪನ್ನಗಳ ನಿಷೇಧಕ್ಕೂ ಅನ್ವಯಿಸುತ್ತದೆ. ಮೊದಲನೆಯದಾಗಿ ಈ ನಿಷೇಧ ಅಪ್ರಾಮಾಣಿಕ. ಇದು ಬಿ.ಎಸ್.ಎನ್.ಎಲ್ ಗೆ ಮಾತ್ರ ಅನ್ವಯಿಸುತ್ತದೆ. ದೂರಸಂಪರ್ಕ ಕ್ಷೇತ್ರದಲ್ಲಿ ಶೇ.100 ವಿದೇಶೀ ಹೂಡಿಕೆಗೆ ಅನುವು ಮಾಡಿಕೊಟ್ಟಿರುವಾಗ ಖಾಸಗಿ ಟೆಲಿಕಾಂ ಕಂಪನಿಗಳ ಮೇಲೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ದೇಶದ ದೂರ ಸಂಪರ್ಕ ಜಾಲದ ಉಪಕರಣಗಳಲ್ಲಿ ಶೇ.90 ವಿದೇಶಿ. ಉಪಕರಣಗಳು. ಇವು ಹೆಚ್ಚಾಗಿ  ಜಗತ್ತಿನ 5 (3 ಅಮೆರಿಕನ್-ಯುರೋಪಿಯನ್, 2 ಚೀನಿ) ದೈತ್ಯ ಕಂಪನಿಗಳವು. ಇವೆಲ್ಲವೂ ಅಗತ್ಯ ಬಿದ್ದಾಗ ತಮ್ಮ ವ್ಯಾಪಾರೀ ಉದ್ದೇಶಗಳಿಗಾಗಿ ಅಥವಾ ತಮ್ಮ ದೇಶದ ಸರಕಾರಗಳ ಅಣತಿಗೆ ಅನುಗುಣವಾಗಿ ಭಾರತದ ಮೇಲೆ ಬೇಹುಗಾರಿಕೆ ನಡೆಸುವ ಸಾಮಥ್ರ್ಯ ಹೊಂದಿವೆ. ಚೀನಿ ಕಂಪನಿಗಳ ಕುರಿತ ಆತಂಕ ಸಂಶಯಗಳು ಅಮೆರಿಕನ್-ಯುರೋಪಿಯನ್ ಕಂಪನಿಗಳ ಬಗೆಗೂ ನಿಜ.

ಅಮೆರಿಕನ್-ಯುರೋಪಿಯನ್ ಕಂಪನಿಗಳು ವಾಸ್ತವವಾಗಿ ಇಂತಹ ಕುಕೃತ್ಯಗಳನ್ನು ಮಾಡಿರುವ ಉದಾಹರಣೆಗಳಿವೆ. ಈಗ ನೋಕಿಯ-ಸೀಮನ್ಸ್ ಕಂಪನಿಯ ಭಾಗವಾಗಿರುವ ಸೀಮನ್ಸ್ ಇರಾನಿನ ಅಣುಶಕ್ತಿ ಘಟಕದಲ್ಲಿ ಇದ್ದ ತಮ್ಮ ಉಪಕರಣಗಳನ್ನು ದೂರದಿಂದಲೇ ಕೆಲಸ ಮಾಡದಂತೆ ಮಾಡಿದ ಬುಡಮೇಲು ಕೃತ್ಯ ನಡೆಸಿತ್ತು. ಇದಕ್ಕೆ ಪರಿಹಾರವೆಂದರೆ ಯಾವುದೇ ಇಂತಹ ಆಯಕಟ್ಟಿನ ದೂರಸಂಪರ್ಕ ಉಪಕರಣಗಳ (ಸಾಫ್ಟ್ ವೇರ್ ಕೋಡ್ ಸೇರಿದಂತೆ) ಪೂರ್ಣ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮಥ್ರ್ಯ ವರ್ಗಾಯಿಸಲು ಒತ್ತಾಯಿಸುವುದು ಅಥವಾ ದೇಶೀಯ ತಂತ್ರಜ್ಞಾನ ಅಭಿವೃಧ್ಧಿ ಪಡಿಸುವ ದೂರಗಾಮೀ ಸಮಗ್ರ ಸ್ವಾವಲಂಬನೆಯ ನೀತಿ ಅನುಸರಿಸುವುದು. ಇವು ಮಾತ್ರ ನಿಜವಾಗಿಯೂ ‘ಸಾರ್ವಭೌಮತೆ’ಯ, ಪ್ರಭುತ್ವದ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆಯ’ ರಕ್ಷಣೆ ಮಾಡಬಲ್ಲದು. ಇಂತಹ ಧೋರಣೆಯಂತೂ ಎಲ್ಲೂ ಕಾಣುತ್ತಿಲ್ಲ.

ಚೀನೀ ಆಪ್ ಗಳು ಮತ್ತು ದೂರಸಂಪರ್ಕ ಉಪಕರಣಗಳ ಮೇಲಿನ ನಿಷೇಧ ಮತ್ತು ಚೀನಾ ಇದರಿಂದ “ಥರ ಥರ ನಡುಗುತ್ತಿದೆ’ ಎಂಬುದು ವಾಸ್ತವವೂ ಅಲ್ಲ. ಅದರ ಘೋಷಿತ ಉದ್ದೇಶಗಳನ್ನು ಈಡೇರಿಸುವುದೂ ಇಲ್ಲ. ಬರಿಯ ಪ್ರಚಾರದ ಡ್ರಾಮಾ ಬಿಟ್ಟರೆ ಏನೂ ಅಲ್ಲ. ಎಲ್ಲ ರಂಗಗಳಲ್ಲಿ ವೈಫಲ್ಯ ಮಾತ್ರ ಇರುವ ಟ್ರಂಪ್ ಗೂ ಸಹ ಈ ಚುನಾವಣಾ ವರ್ಷದಲ್ಲಿ ಇಂತಹುದೇ ‘ನೋಡಿ! ಚೀನಾವನ್ನು ಮಟಾಶ್ ಮಾಡಿದೆ’ ಎಂಬ ಡ್ರಾಮಾ ಬೇಕಾಗಿರುವುದರಿಂದ ಅವರ ಸರಕಾರ ಮೋದಿ ಸರಕಾರವನ್ನು ಅನುಸರಿಸುವುದರಲ್ಲಿ ಆಶ್ಚರ್ಯವೇನಿಲ್ಲ.

Donate Janashakthi Media

Leave a Reply

Your email address will not be published. Required fields are marked *