ಕವಿತೆ: ನನ್ನಕ್ಕ

ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ

ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ”

ಎಂದಳು ಆ ಅಕ್ಕ

ಆ ಅಕ್ಕನ ಹಾಗಲ್ಲ ನನ್ನಕ್ಕ  

 

ಕೊಟ್ಟ ಮನೆಗೆ ಎದುರಾಡದೇ

ಹರಕೆಯ ಕುರಿಯಾಗಿ ಮೌನದಲಿ ನಡೆದವಳು

ಸೂರ್ಯನೊಂದಿಗೆ ಎದ್ದು

ತಲೆ ಮೇಲೆ ಸುತ್ತಿಗೆ ಎಡಗೈಯಲಿ ಬುತ್ತಿ-ಹೊತ್ತು  

ಗುಡ್ಡವನೇ ಹತ್ತಿ ಗುಡ್ಡಕ್ಕೂ ಬೆವರು ಬರಿಸಿದವಳು

ಕಣಿವೆ ಕಣಿವೆಯ ಸುತ್ತಿ ಚೀಪುಗಲ್ಲನ್ನಾಯ್ದು

ಹರಳೊಡೆದು, ಸಣ್ಣಾಗಿ ಸುಣ್ಣವಾದವಳು

ಗಂಡನ ಕುಡಿತಕ್ಕೆ ಅವನ ಬಡಿತಕ್ಕೆ

ಬಾಳೆಪಟ್ಟೆಯ ಬಿಚ್ಚಿ ದುಡ್ಡು ಕೊಟ್ಟವಳು

-ದೀಪವಾದವಳು.  

 

ಗಂಡ ಕೆಮ್ಮಿದರೆ, ನರಳಿದರೆ

ಕಾಲಬಳಿ ಕುಳಿತು ದಿಙ್ಮೂಢಳಾದವಳು

ಹೊಡೆದರೂ ಕೂದಲ್ಹಿಡಿದೆಳೆದರೂ

ಮತ್ತೈದು ನಿಮಿಷದಲ್ಲಿ

ಊಟಕ್ಕೆ ಕರೆದು ಉಣದಿದ್ದರೆ ತಾನೂ

ತಣ್ಣೀರು ಕುಡಿದವಳು ಮಡಿಲಲ್ಲಿ ಕರೆದವಳು.  

 

ಮಕ್ಕಳಾಗದ್ದಕ್ಕೆ

ದೇವರು-ದಿಂಡಿರು ಎಂದು ಊರೂರು ತಿರುತಿರುಗಿ

ದಿಂಡುರುಕಿ ಉರುಳಿ ಕಣ್ಣೀರು ಕುಡಿದವಳು

ಬೇಸತ್ತು ದೇವರಿಗೆ ಹಿಡಿಮಣ್ಣು ತೂರಿ

ಲಕೆಯನು ಮುರಿದವಳು.  

 

ಇಳಿಹೊತ್ತಿನಲಿ

ಯಾರೋ ಕೊಟ್ಟ ಬೇಬಿಟ್ಟಿ ಕೂಸಿಗೆ

ಮಮತೆಯ ಮರವಾಗಿ ತಂಗಾಳಿ ಬೀಸಿದಳು

ಗುಟಿಹಾಕಿ

ಕಣ್ಣಲ್ಲಿ ಕಣ್ಣಿಟ್ಟು

ಜೋಗುಳವ ಹಾಡಿದಳು.  

 

ಈಗ-ಕಂಕುಳಲಿ ಕೂಸು

ತಲೆ ಮೇಲೆ ಅದೇ ಸುತ್ತಿಗೆ ಬುಟ್ಟಿ

ಏರುವ ಸೂರ್ಯನ ಹಾಗೆ ಗುಡ್ಡ ಹತ್ತುತ್ತಾಳೆ

ಮಗನಿಗಾಗಿ, ಗಂಡನಿಗಾಗಿ

ಚಂದ್ರ-ತಾರೆಯರ ಕಣ್ಣಲ್ಲಿ ಕುಣಿಸಿ

ಆ ಅಕ್ಕನ ಹಾಗಲ್ಲ-ನನ್ನಕ್ಕ.  

 

  • ಡಾ. ಸತ್ಯಾನಂದ ಪಾತ್ರೋಟ
Donate Janashakthi Media

Leave a Reply

Your email address will not be published. Required fields are marked *