ಭೂಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

  • ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಎಚ್.ಡಿ ದೇವೇಗೌಡರ ನೇತೃತ್ವದಲ್ಲಿ  ಧರಣಿ

ಹಾಸನ: ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿ ಜೆಡಿಎಸ್ ವತಿಯಿಂದ ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸದಸ್ಯ ಎಚ್.ಡಿ ದೇವೇಗೌಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿದ ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಬಾವುಟ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಘೋಷನೆ ಕೂಗುತ್ತಾ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮಳೆಯ ನಡುವೆಯೂ ಧರಣಿ ನಡೆಸಿದರು.

ಜೆಡಿಎಸ್‍  ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಉಳ್ಳವರು ಕೃಷಿ ಭೂಮಿ ಖರಿದಿಗೆ ಮುಂದಾಗುತ್ತಾರೆ. ಇದರಿಂದ ಕೃಷಿ ಭೂಮಿ ಹಣವಂತರ ಕೈ ಸೇರಲಿದೆ. ರಾಜ್ಯದಲ್ಲಿ ರೈತರ ಜಮೀನು ಲೂಟಿ ಆಗಲಿದೆ. ಆದ್ದರಿಂದ ಈ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷದ ರಾಜಕಾರಣ ಮಾಡಿಕೊಂಡು ಬರಲಾಗುತ್ತಿದೆ. ವಿಧಾನ ಸಭೆ ಅಧಿವೇಶನ ಕರೆಯಲಿ. ರಾಜ್ಯ ಸರ್ಕಾರದ ಭ್ರಷ್ಟಚಾರದ ಕುರಿತು ಎಳೆಎಳೆಯಾಗಿ ಬಿಚ್ಚಿಡಲಾಗುವುದು. ಯಡಿಯೂರಪ್ಪ ಅವರಿಗೆ ಮುಖ್ಯ ಮಂತ್ರಿಯಾಗಿರುವು ಇದೇ ಕೊನೆಯ ಅವಧಿ ಆದ್ದರಿಂದ ಎಷ್ಟು ಬೇಕೋ ಅಷ್ಟು ಭ್ರಷ್ಟಾಚಾರ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಉದ್ಯೋಗ ಸೃಷ್ಠಿ ಮಾಡಬೇಕು ಎಂದು ಅನೇಕ ಬಾರಿ ಕೇಳಿದ್ದೇವೆ.  ಆದರೆ ರೈತರಿಂದ ಭೂಮಿ ಕಿತ್ತುಕೊಂಡು ಯುವಕರಿಗೆ ಉದ್ಯೋಗ ನೀಡಿ ಎಂದು ನಾವು ಕೇಳಿಲ್ಲ. ಕೈಗಾರಿಕೆಗಳಿಗೆ ಶಕ್ತಿ ನೀಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎನ್ನುತ್ತಾರೆ. ಆದರೆ, ಇದರಿಂದ ಸಾಕಷ್ಟು ರೈತರಿಗೆ ಅನನುಕೂಲ ಆಗಲಿದೆ. ಹಾಸನದಲ್ಲಿ ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ಹೋರಾಟ ಆರಂಭವಾಗಿದ್ದು, ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸಬೇಕು ಎಂದು ಕರೆಕೊಟ್ಟರು.
ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಉಳುವವನೇ ಭೂಮಿಯ ಒಡೆಯ ಎಂಬು ಉದ್ದೇಶ ಹೊಂದಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ತಿದ್ದುಪಡಿ ತರುವ ಮೂಲಕ ಉಳ್ಳವನೇ ಭೂಮಿಯ ಒಡೆಯ ಎಂದು ಅರ್ಥ ನೀಡಿದೆ. ಹಣವಂತರು ಈಗಾಗಲೇ ಕೃಷಿ ಭೂಮಿ ಖರೀದಿ ಮಾಡುವ ಪ್ರಕ್ರಿಯೇ ನಡೆಯುತ್ತಿದೆ. ಆದ್ದರಿಂದ ರೈತರ ಹಿತದೃಷ್ಠಿಯಿಂದ ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಮನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಜನ ವಿರೋಧಿ ಕಾನೂನುಗಳನ್ನ ಜಾರಿ ಮಾಡಿದೆ, ಕೊರೊನಾ ಇಲ್ಲದೆ ಹೋಗಿದ್ರೆ ರಕ್ತ ಪಾತ ಆಗೋಕೆ ನಾವು ಬಿಡುತ್ತಿರಲಿಲ್ಲ. ಆದ್ರೆ ಏನ್ಮಾಡೋದು ಕೊರೊನಾದಿಂದ ನೀವು ಬಚಾವಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ-ಟೆಂಡರ್ ಅಂತೀರಾ, ಇದ್ರಿಂದ ಯಾರಿಗಾದ್ರು ಉಪಯೋಗ ಆಗಿದ್ಯಾ? ಪ್ರಧಾನಿ ಮೋದಿಯವರೇ ನೀವು ಹೇಳುತ್ತಿರೊ ಯೋಜನೆಗಳಿಂದ ಯಾರಿಗಾದ್ರು ಉಪಯೋಗ ಆಗಿದ್ಯಾ, ಸುಮ್ಮನೇ ಬೋಗಸ್ ಯೋಜನೆ ತಂದು ಜನರನ್ನ ದಿಕ್ಕೆಡಿಸುತ್ತಿದ್ದೀರಾ, ನಿಮಗೆ ಒಳ್ಳೆಯದಾಗಲ್ಲ, ಭೂ ತಾಯಿ ನಿಮ್ಮನ್ನ ಕ್ಷಮಿಸೋದಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *