- ಫೇಸ್ಬುಕ್ ಲೈವ್ ಮೂಲಕ ಮುಟ್ಟು ಏನಿದರ ಒಳಗುಟ್ಟು” ಪುಸ್ತಕ ಬಿಡುಗಡೆ
ಬೆಂಗಳೂರು: ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು, ಮತ್ತ್ಯಾಕೆ ಈ ಗುಟ್ಟು ಎನ್ನುವ “ ಮುಟ್ಟು ಏನಿದರ ಒಳಗುಟ್ಟು” ಪುಸ್ತಕ ಕರ್ನಾಟಕದ ಪುಸ್ತಕ ಇತಿಹಾಸದಲ್ಲೆ ಮೊಟ್ಟಮೊದಲ ಬಾರಿಗೆ ಫೇಸ್ಬುಕ್ ಲೈವ್ ಮೂಲಕ ಬಿಡುಗಡೆಯಾಯಿತು.
ಅಂಗಳ ಪ್ರಕಾಶನ ಪ್ರಕಟಿಸಿರುವ ಜ್ಯೋತಿ ಹಿಟ್ನಾಳ ಅವರು ಸಂಪಾದಿಸಿರುವ ಮುಟ್ಟು ಏನಿದರ ಒಳಗುಟ್ಟು ಪುಸ್ತಕವನ್ನು ಹಿರಿಯ ಸಾಹಿತಿಗಳಾದ ಹೆಚ್.ಎಲ್.ಪುಷ್ಪ ಮತ್ತು ಹಿರಿಯ ಪತ್ರಕರ್ತರಾದ ರವೀಂದ್ರ ಭಟ್ ಬಿಡುಗಡೆ ಮಾಡಿದರು. ಪುಸ್ತಕದ ಕುರಿತು ಮಾತನಾಡಿದ ಹೆಚ್.ಎಲ್.ಪುಷ್ಪ, ಮಹಿಳೆಯರನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಸಿಟ್ಟ ಸಮಾಜ ಮುಟ್ಟನ್ನು ಸೂತಕವೆಂದೇ ಇಂದಿಗೂ ಭಾವಿಸುವುದು ದುರಂತವೇ. ಆದರೆ 12ನೇ ಶತಮಾನದಲ್ಲಿ ಶರಣರು ಮುಟ್ಟು ಸೂತಕವೆಂಬುವುದನ್ನು ಅಲ್ಲೆಗೆಳೆದು ಸ್ತ್ರೀಯರಿಗೆ ಸಮಾನತೆ ನೀಡಿದ್ದರು ಎಂದು ಹೇಳಿದರು.
ರವೀಂದ್ರ ಭಟ್ ಮಾತನಾಡಿ, ಸಮಾಜದಲ್ಲಿ ಮುಟ್ಟನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಮುಟ್ಟಿನ ಕುರಿತು ಲೈಂಗಿಕತೆಯ ಕುರಿತು ಪಾಠಗಳಿದ್ದರೂ ಪಾಠ ಮಾಡಲು ಶಿಕ್ಷಕರು ಮುಜುಗರ ಪಡುತ್ತಾರೆ. ಈ ವ್ಯವಸ್ಥೆ ಬದಲಾಗಬೇಕಾದಿದೆ. ಸಮಾಜದಲ್ಲಿ ವೃದ್ದಾಶ್ರಮಗಳು ಹೆಚ್ಚಾಗಲೂ ಈ ಮುಟ್ಟು ಒಂದು ಕಾರಣವಾಗಿರಬೇಕು. ಇದರ ಬಗ್ಗೆ ಅಧ್ಯಯನವಾಗಬೇಕೆಂದು ತಿಳಿಸಿದರು.
ನಾವು ವಾಸಿಸುವ ಸಮಾಜ ನಮಗೆ ಮಡಿ, ಮಲಿಗೆ ಎಂಬುವುದನ್ನೆ ತಲೆಯಲ್ಲಿ ತುಂಬಿದ್ದಾರೆ. ನಮ್ಮ ದೇಹದ ಬಗ್ಗೆ ನಾವೆ ಸಂಕೋಚ ಪಟ್ಟುಕೊಳ್ಳುವಂತೆ ಮಾಡಿದೆ. ಈ ಎಲ್ಲ ಚೌಕಟ್ಟುಗಳನ್ನು ಒಡೆದು ಈ ಪುಸ್ತಕ ವಿಸ್ತಾರಗೊಳ್ಳುವಂತಿದೆ ಎಂದು ಹೆಚ್. ಎನ್. ಆರತಿ ಮಾತನಾಡಿದರು. ಹಾಗೂ ಯುವ ಬರಹಗಾರ ಚಾಂದ್ ಪಾಷಾ ಅವರು ಪುಸ್ತಕದ ಕುರಿತು ಮಾತನಾಡುತ್ತಾ ಪುರುಷಪ್ರಧಾನ ಮೌಲ್ಯಗಳು ಮಹಿಳೆಯನ್ನು ಧಾರ್ಮಿಕವಾಗಿ ಇಂದಿಗೂ ಬಂಧಿಸಿದ್ದು ವಿಷಾದವೆಂದು ಹೇಳಿದರು.