ಅಂಡಮಾನ್ -ನಿಕೋಬಾರ್ ನಲ್ಲಿ ಕೊರೊನಾ ಗಂಭೀರ: ತುರ್ತು ಕ್ರಮಕ್ಕೆ ಯೆಚೂರಿ ಆಗ್ರಹ

  • ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಿ- ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ನವದೆಹಲಿ: ಕೊರೊನಾ ಸೋಂಕು ಬಹಳ ಅಪಾಯಕಾರಿಯಾಗಿ ಹರಡುತ್ತಿರುವ ಅಂಡಮಾನ್‌  ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ  ತುರ್ತುಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌ ಹಲವಾರು ದ್ವೀಪಗಳಿರುವ ಪ್ರದೇಶ. ಒಂದು ದ್ವೀಪದಿಂದ ಇನ್ನೊಂದಕ್ಕೆ ಹೋಗಲು ಬಹಳ ಸಮಯ ತಗಲುತ್ತದೆ. ಈ ದ್ವೀಪಸಮೂಹದ ಜನಸಂಖ್ಯೆಯ ಅರ್ಧದಷ್ಟು ಉತ್ತರ ಅಂಡಮಾನಿನಲ್ಲಿದೆ. ಇಡೀ ದ್ವೀಪ ಪ್ರದೇಶದಲ್ಲಿ ಪೋರ್ಟ್‍ ಬ್ಲೇರ್ ನಲ್ಲಿ ಮಾತ್ರವೇ ಒಂದೇ ಒಂದು ಕೋವಿಡ್‍ ತಪಾಸಣೆ ಕೇಂದ್ರ ಮತ್ತು ಆಸ್ಪತ್ರೆ ಇರುವುದು. ಅಲ್ಲಿಂದ ಪೋರ್ಟ್‍ ಬ್ಲೇರ್ ಗೆ ಬರಲು ಹಲವು ದಿನಗಳೇ ಹಿಡಿಸುತ್ತವೆ.  ಯಾವುದೇ ಕೊವಿಡ್‍ ತಪಾಸಣೆಯ ಫಲಿತಾಂಶ ಬರಲು ಎಂಟು ದಿನಗಳಾಗುತ್ತವೆ. ಆ ವೇಳೆಗೆ ರೋಗಿಯ ಸ್ಥಿತಿ ಸಂಪೂರ್ಣ ಹದಗೆಟ್ಟಿರುತ್ತದೆ. ಅಲ್ಲದೆ ಈ ಆಸ್ಪತ್ರೆಯ 18 ಡಾಕ್ಟರುಗಳಿಗೆ ಕೊವಿಡ್‍ ಸೋಂಕು ತಗಲಿದೆ ಎಂದೂ ವರದಿಯಾಗಿದೆ. ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದು ಇಲ್ಲಿ ಬಹಳ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.   ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಪ್ರದೇಶವು ಕೇಂದ್ರಾಡಳಿತ ಪ್ರದೇಶವಾಗಿದ್ದು,  ನೇರವಾಗಿ ಕೇಂದ್ರ ಗೃಹ ಮಂತ್ರಾಲಯದ ನಿಯಂತ್ರಣದಲ್ಲಿದೆ.  ಆದ್ದರಿಂದ ಕೋವಿಡ್-19 ಸೋಂಕು  ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಜನಗಳಿಗೆ ತುರ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯೆಚೂರಿ ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಧಾನಮಂತ್ರಿಗಳು ಈ ದ್ವೀಪಸಮೂಹದಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ದ್ವೀಪಗಳಿಗೆ ಉನ್ನತ ವೇಗದ ಬ್ರಾಡ್‍ ಬ್ಯಾಂಡ್‍ ಸಂಪರ್ಕ ನೀಡುವುದಾಗಿ ಪ್ರಕಟಿಸಿದ್ದಾರೆಂದು ವರದಿಯಾಗಿದೆ. ಇದು ಹೊಸದೇನಲ್ಲ. ಹಲವು ವರ್ಷಗಳ ಹಿಂದೆಯೇ ಭಾರತ ಸರಕಾರ ಜಾರಿಗೊಳಿಸಿರುವ ಯೋಜನೆ.  ಈಗಾಗಲೇ ಚೆನ್ನೈನಿಂದ ನೀರಿನಡಿಯಲ್ಲಿ ಕೇಬಲ್‍ಗಳನ್ನು ಹಾಕುವ ಕೆಲಸವೂ ಆರಂಭವಾಗಿದೆ ಎನ್ನಲಾಗಿದೆ. ಅದೇನೇ ಇರಲಿ, ಈ ದ್ವೀಪಗಳ ಜನಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ಯಾವುದೇ ಕ್ರಮ ಸ್ವಾಗತಾರ್ಹ.  ಆದರೆ ಈಗ ತುರ್ತಾಗಿ ಕೇಂದ್ರ ಸರಕಾರ ಜನಗಳ ಬದುಕನ್ನು ಕಾಪಾಡಲು ಮತ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಮ್ಮ ಪತ್ರದಲ್ಲಿ ಯೆಚೂರಿ ಒತ್ತಾಯಿಸಿದ್ದಾರೆ.

ಕೊವಿಡ್‍ ತಪಾಸಣಾ ಕೇಂದ್ರಗಳನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಸಬೇಕು, ಕೋವಿಡ್‍ ರೋಗಿಗಳ ಆರೈಕೆಗೆ ಹೆಚ್ಚು ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು, ಮತ್ತು ಜನಗಳಿಗೆ ಪರಿಹಾರಗಳನ್ನು ಯುದ್ಧೋಪಾದಿಯಲ್ಲಿ ತಲುಪಿಸಬೇಕಾಗಿದೆ. -ಸೀತಾರಾಮ್‍ ಯೆಚುರಿ

ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬೇರೆ ಚುನಾಯಿತ ಸಂಸ್ಥೆಗಳಿಲ್ಲ. ಆದ್ದರಿಂದ ಜನಗಳು ಕೇಂದ್ರ ಗೃಹ ಮಂತ್ರಾಲಯದತ್ತವೇ ನೋಡಬೇಕಾಗುತ್ತದೆ. ಆದ್ದರಿಂದ “ನಿಮ್ಮ ಸರಕಾರದ ನೇರ ಹತೋಟಿಗೆ ಬರುವ ಇಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು, ಮತ್ತು ಮೇಲೆ ಹೇಳಿದ ಅತ್ಯಗತ್ಯ ಕ್ರಮಗಳನ್ನಾದರೂ ಯುದ್ಧಸ್ತರದಲ್ಲಿ ಕೈಗೊಳ್ಳಬೇಕು” ಎಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸೀತಾರಾಮ್‍ ಯೆಚುರಿ ಮನವಿ ಮಾಡಿದ್ದಾರೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ಬರೆದಿರುವ ಪತ್ರವನ್ನು ಸಿಪಿಎಂ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. https://www.cpim.org/pressbriefs/andaman-grave-health-emergency

Donate Janashakthi Media

Leave a Reply

Your email address will not be published. Required fields are marked *