- ಡಿಜಿ ಹಳ್ಳಿ ಗಲಭೆ ವರದಿ ವೇಳೆ ಮಾಧ್ಯಮದವರಿಗೆ ಹಲ್ಲೆ ಪ್ರಕರಣ
ಕೊಪ್ಪಳ : ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯಲ್ಲಿ ಮಾಧ್ಯಮ ಮಿತ್ರರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ರ ಚಳವಳಿ ನಡೆದಿವೆ. ಕೊಪ್ಪಳ ಮೀಡಿಯಾ ಕ್ಲಬ್ ಹಾಗೂ ಬಳ್ಳಾರಿ ಪತ್ರಕರ್ತರಿಂದ ಜಿಲ್ಲಾ ಧಿಕಾರಿ ಕಚೇರಿಯ ಮುಂದೆ ಬುಧವಾರ ಪತ್ರ ಚಳವಳಿ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಾಗೂ ಸಮಾಜದ ಏಳಿಗೆಗಾಗಿ ಪತ್ರಕರ್ತರು ಹಗಲಿರುಳು ದುಡಿಯುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ವೃತ್ತಿನಿರತ ಪತ್ರಕರ್ತರ ಮೇಲೆ ಈ ಹಿಂದೆಯೂ ಸಾಕಷ್ಟು ಹಲ್ಲೆಗಳು ನಡೆದಿವೆ. ಇಂದಿಗೂ ನಡೆಯುತ್ತಲೇ ಇವೆ. ಪತ್ರಕರ್ತರ ರಕ್ಷಣೆ ನೀಡಿ ಎಂದು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕೊಪ್ಪಳ ಮೀಡಿಯಾ ಕ್ಲಬ್, ಬಳ್ಳಾರಿಯ ಪತ್ರಕರ್ತರು ಜಿಲ್ಲಾ ಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದು ತೀವ್ರ ನೋವಿನ ಸಂಗತಿ. ಪತ್ರಕರ್ತರಿಗೆ ಸಂಬಂಧಿಸಿದ ವೈದ್ಯರ ರಕ್ಷಣೆಗೆ ಇರುವ ಕಾಯ್ದೆ ವ್ಯಾಪ್ತಿಗೆ ಪತ್ರಕರ್ತರನ್ನು ತರಬೇಕು, ಪತ್ರಕರ್ತರಿಗೆ ಸರ್ಕಾರವೇ ವಿಮಾ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕೊಪ್ಪಳ ಮೀಡಿಯಾ ಕಬ್ಲ್ ಹಾಗೂ ಬಳ್ಳಾರಿಯ ಪತ್ರಕರ್ತರು ಜಿಲ್ಲಾ ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ತುರ್ತಾಗಿ ಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.