ಪ್ರಭುತ್ವ, ಅಧಿಕಾರ ಹಾಗೂ ಸಂಸ್ಕೃತಿಯ ನಡುವಿನ ಸಂಘರ್ಷಮಯ ಸಂಬಂಧಗಳು ಎಂದಿಗೂ ಇದ್ದೇ ಇವೆ. ತತ್ವಜ್ಞಾನಿ ಫೂಕೋನ ಮಾತಿನಲ್ಲಿ ಹೇಳುವುದಾದರೆ ಅಧಿಕಾರದ (power) ವ್ಯಾಪ್ತಿಯ ಹೊರಗೆ ಯಾವುದೂ ಇಲ್ಲ. ಸಂಸ್ಕೃತಿಯು ಈ ಅಧಿಕಾರದಲ್ಲಿ ಪಾಲುಗೊಳ್ಳುತ್ತದೆ; ಶಾಮೀಲಾಗುತ್ತದೆ; ವಿರೋಧ ಪ್ರತಿರೋಧ ಹೂಡುತ್ತದೆ. ಆದರೆ ಇದೆಲ್ಲವೂ ಅಧಿಕಾರದ ನೆರಳಿನಲ್ಲಿಯೆ. ಹಾಗಿರುವಾಗ ಕನ್ನಡದ ಅನೇಕ ಬರಹಗಾರರು ಈಗಲೂ ಸಾಹಿತ್ಯ-ಸಂಸ್ಸೃತಿಗಳು ಪ್ರಭುತ್ವ ಅಥವಾ ಸರಕಾರದ ವ್ಯಾಪ್ತಿಯ ಆಚೆಗಿರುವ ಅಬಾಧಿತವಾದ ವಿದ್ಯಮಾನಗಳು ಎನ್ನುವ ನಂಬಿಕೆ ಹೊಂದಿದ್ದಾರೆ.
ಈ ವಿಷಯಗಳು ಚರ್ಚೆಗೆ ಬಂದ ಕೂಡಲೆ ‘ಸಾಹಿತ್ಯ ಸಂಸ್ಸೃತಿಗಳಲ್ಲಿ ರಾಜಕೀಯವಿರಬಾರದು. ಯಾವುದೇ “ಇಸಮ್” ಇರಬಾರದು. ಎಡ-ಬಲಗಳು ಇರಬಾರದು’ ಎನ್ನುವ ಪ್ರತಿಕ್ರಿಯೆಗಳು ಶುರುವಾಗುತ್ತವೆ. ಸಾಮಾನ್ಯವಾಗಿ ರಾಜಕೀಯ ಇರಬಾರದು ಎಂದರೆ ಎಡಪಂಥೀಯ ರಾಜಕೀಯ ಇರಬಾರದು ಎಂದೇ ಅರ್ಥ. ಇದು ತುಂಬಾ ಅಪ್ರಬುದ್ಧವಾದುದು. ಹಿರಿಯ ಅರ್ಥದಲ್ಲಿ ಸಂಸ್ಕೃತಿಯು ರಾಜಕೀಯದ ಭಾಗವೇ ಆಗಿರುತ್ತದೆ. ಒಳ್ಳೆಯ ಕಲೆ ಒಳ್ಳೆಯ ರಾಜಕೀಯವನ್ನು ಸವ್ಮರ್ಥಿಸುತ್ತದೆ. ಅಂದರೆ, ಪಕ್ಷ ರಾಜಕೀಯವನ್ನಲ್ಲ, ಅಧಿಕಾರದ ಅಸಮಾನತೆಯನ್ನು ಪ್ರಶ್ನಿಸುವ, ಅದರ ದೌರ್ಜನ್ಯವನ್ನು ಬಯಲಿಗೆಳೆವ ರಾಜಕೀಯವನ್ನು ಅದು ಮಾಡುತ್ತದೆ.
ಪ್ರಭುತ್ವ(state)ದ ಶಕ್ತಿಯ ಆಚೆಗೆ, ಅಂದರೆ ಅದರ ಅಧಿಕಾರದ ವ್ಯಾಪ್ತಿಯ ಹೊರಗೆ ಇರುವುದು ಯಾವುದು ಅನ್ನುವುದರ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಈ ಚರ್ಚೆಯ ಬೇರುಗಳನ್ನು ಹುಡುಕುತ್ತಾ ಹೋದರೆ ನಾವು ಪ್ರಾಚೀನ ಕಾಲದ ಪರಂಪರೆಗಳವರೆಗೆ ತಲುಪುತ್ತೇವೆ. ಉದಾಹರಣೆಗೆ ಗ್ರೀಕ್ ತತ್ವಜ್ಞಾನಿ ಪ್ಲೇಟೋ ತನ್ನ Republic ಹಾಗೂ ಇತರ ಕೃತಿಗಳಲ್ಲಿ ಈ ವಿಷಯದ ಕುರಿತು ವಿಸ್ತಾರವಾಗಿ ಚರ್ಚೆ ಮಾಡಿದ್ದ. ಸ್ವತಃ ಕವಿಯ ಪ್ರತಿಭೆಯುಳ್ಳ ಅವನಿಗೆ ಆದರ್ಶ ಗಣರಾಜ್ಯದ ಅಧಿಕಾರವೇ ಮುಖ್ಯವಾಗಿತ್ತು. ಕಾವ್ಯ ಅಥವಾ ನಾಟಕಗಳಲ್ಲ. ಕಾವ್ಯ ಹಾಗೂ ನಾಟಕಗಳು ಸತ್ಯವನ್ನು ಹೇಳುವುದಿಲ್ಲ; ಅಲ್ಲದೆ ಮನುಷ್ಯರ ತಾರ್ಕಿಕವಾದ ನಡವಳಿಕೆಗೆ ಅಪಾಯಕಾರಿಯಾದ ಭಾವನೆಗಳನ್ನು ಉದ್ರೇಕಿಸುತ್ತವೆ – ಇವೇ ಮುಂತಾದ ಗಾಢವಾದ ಅನುಮಾನಗಳು ಅವನಿಗಿದ್ದವು. ಮಹಾಜ್ಞಾನಿಯಾಗಿದ್ದರೂ ಕಾವ್ಯದ ಸೋಂಕೇ ಇರದ ಅವನ ಶಿಷ್ಯನಾದ ಅರಿಸ್ಟಾಟಲ್ ನಾಟಕ, ಅದರಲ್ಲೂ ಗ್ರೀಕ್ ಸಂಸ್ಕೃತಿಯ ಮುಖ್ಯ ಭಾಗವಾಗಿದ್ದ ದುರಂತ ನಾಟಕಗಳು, ನಮ್ಮ ಆಳವಾದ ಭಾವನೆಗಳ ಶುದ್ಧೀಕರಣವನ್ನು ಮಾಡುತ್ತವೆಯೆಂದು ಕಲೆಯನ್ನು ಸಮರ್ಥಿಸಿದೆ. ಅದೇ ಹೊತ್ತಿಗೆ ಆರಿಸ್ಪೋಫೇನಸ್ನಂಥ ನಾಟಕಕಾರರು ಕವಿಗಳನ್ನು, ನಾಟಕಕಾರರನ್ನು ಇನ್ನಿಲ್ಲದಂತೆ ಲೇವಡಿ ಮಾಡಿದ್ದರು. ಇದರ ಒಟ್ಟು ಅರ್ಥವೆಂದರೆ ಕಲೆ ಮತ್ತು ಸಂಸ್ಕೃತಿಗಳು ಹಾಗೂ ರಾಜಕೀಯದ ಮಧ್ಯದ ಸಂಬಂಧಗಳನ್ನು ಆ ಕಾಲದಲ್ಲಿ ಆಳವಾಗಿ ಚರ್ಚಿಸಲಾಯಿತು.
ಇದು ನಂತರದ ಎಲ್ಲಾ ಕಾಲಘಟ್ಟಗಳಲ್ಲೂ ನಡೆದಿರುವ ಚರ್ಚೆ ಮಾತ್ರವಲ್ಲ. ಪ್ರಭುತ್ವವು ಕಾಲಕಾಲಕ್ಕೆ ಸಂಸ್ಕೃತಿಗೆ ಸೇರಿದ ವಿದ್ಯಮಾನಗಳ ಮೇಲೆ ಹತೋಟಿ ಸಾಧಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದೆ. ೧೬ ಮತ್ತು ೧೭ನೇ ಶತಮಾನದ ಇಂಗ್ಲೆಂಡ್ನಲ್ಲಿ ನಾಟಕಗಳ ಬಗ್ಗೆ ತೀವ್ರ ಟೀಕೆಗಳು ಬಂದವು. ಒಂದು ಘಟ್ಟದಲ್ಲಿ ನಾಟಕ ಗೃಹಗಳನ್ನು ಬಂದು ಮಾಡಲಾಯಿತು ಕೂಡ. ಆ ನಾಟಕಗಳಲ್ಲಿ ಅಶ್ಲೀಲತೆಯಿರುತ್ತದೆ ಎಂದು ಕಾರಣ ಕೊಡಲಾಯಿತಾದರೂ ನಿಜವಾದ ಕಾರಣವೆಂದರೆ ನಾಟಕ ರಂಗವು ಸಾಂಸ್ಕೃತಿಕ ರಾಜಕೀಯದ ಅಭಿವ್ಯಕ್ತಿಯಾಗಿತ್ತು. ಇದರಿಂದಾಗಿ ಪ್ರಭುತ್ವವು ಅದರ ಬಗ್ಗೆ ಸಂಶಯ ಹೊಂದಿತ್ತಲ್ಲದೆ ಅದರ ಮೇಲೆ ನಿಯಂತ್ರಣ ತರಲು ಪ್ರಯತ್ನಿಸಿತು. ಇದು ಕಾವ್ಯದ ಬಗ್ಗೆಯೂ ನಿಜವಾಗಿತ್ತು. ೧೭ನೇ ಶತಮಾನದ ಹಾಗೂ ೧೮ನೇ ಶತಮಾನದ ಇಂಗ್ಲೀಷ್ ಕಾವ್ಯ ನೇರವಾಗಿ ರಾಜಕೀಯ ವಿಷಯಗಳ ಬಗ್ಗೆ ಇತ್ತು.
ಭಾರತದ ಸಂದರ್ಭದಲ್ಲಿ ನೋಡುವುದಾದರೆ ವಸಾಹತುಶಾಹಿ ಬಂಗಾಲದ ಆಧುನಿಕ ಜನಪ್ರಿಯ ನಾಟಕಗಳು ನೇರವಾಗಿ ರಾಜಕೀಯದ ಕನ್ನಡಿಗಳೇ ಆಗಿದ್ದವು. ನೀಲಿ ಬೆಳೆಗಾರರ ಬಗೆಗಿನ ‘ನೀಲದರ್ಪಣ’ವು ನೀಲಿ ಬೆಳೆಯುವ ಎಸ್ಟೇಟ್ ಮಾಲೀಕರಾದ ಬ್ರಿಟಿಷ್ ಪುರುಷರ ದೌರ್ಜನ್ಯ, ಲೈಂಗಿಕ ಅತ್ಯಾಚಾರ, ಬ್ರಿಟಿಷ್ ನ್ಯಾಯಾಧೀಶರ ಪಕ್ಷಪಾತ ಇವೆಲ್ಲವನ್ನು ನೇರವಾಗಿ ಪ್ರಶ್ನಿಸಿತ್ತು. ಇಂಥ ನೂರಾರು ನಾಟಕಗಳು ಜನಪ್ರಸಿದ್ಧವಾಗಿದ್ದವು. ಆದ್ದರಿಂದಲೇ ಬ್ರಿಟಿಷ್ ಆಡಳಿತಶಾಹಿಯು ನಾಟಕಗಳ ಮೇಲೆ ನಿರ್ಬಂಧ ಹೇರಲು ಡಿ.ಪಿ.ಎ (D.P.A) ಕಾನೂನನ್ನು ಜಾರಿಗೆ ತಂದಿತು. ಇದು ಈಗಲೂ ಇದೆಯೆಂದು ಕೇಳಿದ್ದೇನೆ. ಇದರ ಪರಿಣಾಮ ಕರ್ನಾಟಕದ ಮೇಲೆಯೂ ಆಯಿತು. ‘ಸಂಗ್ಯಾ-ಬಾಳ್ಯಾ’ ದ ಪ್ರದರ್ಶನಕ್ಕೆ ವಿಶೇಷ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ವಿಜಯಪುರದ ಕಂದ್ಗಲ್ ಹನಮಂತರಾವ್ ಅವರು ಅವರ ನಾಟಕಗಳಿಂದಾಗಿ ಪೋಲೀಸ್ ಠಾಣೆಗಳಿಗೆ ಅಲೆಯಬೇಕಾಯಿತು. ‘ನರಬಲಿ’ ಪದ್ಯ ಬರೆದಿದ್ದಕ್ಕಾಗಿ ಕವಿ ದ.ರಾ.ಬೇಂದ್ರೆಯವರು ಜೈಲಿಗೆ ಹೋಗಿ ಆನಂತರ ನಜರ್ಬಂದ್ನಲ್ಲಿ ಇರಬೇಕಾಯಿತು.
ಈ ವಿವರಗಳಿಂದ ಗೊತ್ತಾಗುವಂತೆ ಪ್ರಭುತ್ವ, ಅಧಿಕಾರ ಹಾಗೂ ಸಂಸ್ಕೃತಿಯ ನಡುವಿನ ಸಂಘರ್ಷಮಯ ಸಂಬಂಧಗಳು ಎಂದಿಗೂ ಇದ್ದೇ ಇವೆ. ತತ್ವಜ್ಞಾನಿ ಫೂಕೋನ ಮಾತಿನಲ್ಲಿ ಹೇಳುವುದಾದರೆ ಅಧಿಕಾರದ (power) ವ್ಯಾಪ್ತಿಯ ಹೊರಗೆ ಯಾವುದೂ ಇಲ್ಲ. ಸಂಸ್ಕೃತಿಯು ಈ ಅಧಿಕಾರದಲ್ಲಿ ಪಾಲುಗೊಳ್ಳುತ್ತದೆ; ಶಾಮೀಲಾಗುತ್ತದೆ; ವಿರೋಧ ಪ್ರತಿರೋಧ ಹೂಡುತ್ತದೆ. ಆದರೆ ಇದೆಲ್ಲವೂ ಅಧಿಕಾರದ ನೆರಳಿನಲ್ಲಿಯೆ. ಹಾಗಿರುವಾಗ ಕನ್ನಡದ ಅನೇಕ ಬರಹಗಾರರು ಈಗಲೂ ಸಾಹಿತ್ಯ-ಸಂಸ್ಕೃತಿಗಳು ಪ್ರಭುತ್ವ ಅಥವಾ ಸರಕಾರದ ವ್ಯಾಪ್ತಿಯ ಆಚೆಗಿರುವ ಅಬಾಧಿತವಾದ ವಿದ್ಯಮಾನಗಳು ಎನ್ನುವ ನಂಬಿಕೆ ಹೊಂದಿದ್ದಾರೆ? ಈ ಕುರಿತು ಕೆ.ವಿ.ಅಕ್ಷರ ಅವರು ಶಿವಮೊಗ್ಗದಲ್ಲಿ, ಸಾಗರದಲ್ಲಿ ಮಾಡಿದ ಭಾಷಣಗಳು ಮತ್ತು ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ಬರೆದ ಲೇಖನವನ್ನು ಗಮನಿಸಬೇಕಾಗಿದೆ.
ಅಕ್ಷರ ಅವರು ಸಾಹಿತ್ಯ, ನಾಟಕ ಹಾಗೂ ಕಲೆಗಳಲ್ಲಿ ಸರಕಾರದ ಪ್ರವೇಶವನ್ನು ಕುರಿತು ಅನೇಕ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆಗೆ ನೀಡುವ ಅನುದಾನ ಕಡಿಮೆ ಏನಲ್ಲ. ಆದರೆ ಅದರಲ್ಲಿ ಬಹುಪಾಲು ಅನೇಕ ಜಯಂತಿಗಳ ಕಡ್ಡಾಯ ಆಚರಣೆಗಳಿಗೆ ವ್ಯಯವಾಗುತ್ತದೆ. ಇದರಲ್ಲಿ ಭ್ರಷ್ಟಾಚಾರವು ಅಗಾಧವಾಗಿದೆ. ಆದರೆ ಒಟ್ಟಾರೆ ಎಂಥ ಸ್ಥಿತಿಯೆಂದರೆ ಸಾಂಸ್ಕೃತಿಕ ವಲಯವು ಸರಕಾರವನ್ನೇ ತನ್ನ ಚಟುವಟಿಕೆಗಳಿಗಾಗಿ ಅವಲಂಬಿಸುವಂತಾಗಿದೆ. ಹೀಗಾಗಿಯೇ ಬರಹಗಾರರೂ, ಕಲೆಗಾರರೂ ಕೂಡ ಈ ಸ್ಥಿತಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ಅಕಾಡೆಮಿಗಳ ಸದಸ್ಯತ್ವ ಇತ್ಯಾದಿಗಳು ಸರಕಾರದ ಆದೇಶದಂತೆ ನಡೆಯುತ್ತಿವೆ.
ಈ ವಿಷಯಗಳು ಚರ್ಚೆಗೆ ಬಂದ ಕೂಡಲೆ ‘ಸಾಹಿತ್ಯ ಸಂಸ್ಕೃತಿಗಳಲ್ಲಿ ರಾಜಕೀಯವಿರಬಾರದು. ಯಾವುದೇ “ಇಸಮ್” ಇರಬಾರದು. ಎಡ-ಬಲಗಳು ಇರಬಾರದು’ ಎನ್ನುವ ಪ್ರತಿಕ್ರಿಯೆಗಳು ಶುರುವಾಗುತ್ತವೆ. ಸಾಮಾನ್ಯವಾಗಿ ರಾಜಕೀಯ ಇರಬಾರದು ಎಂದರೆ ಎಡಪಂಥೀಯ ರಾಜಕೀಯ ಇರಬಾರದು ಎಂದೇ ಅರ್ಥ. ಇದು ತುಂಬಾ ಅಪ್ರಬುದ್ಧವಾದುದು. ಹಿರಿಯ ಅರ್ಥದಲ್ಲಿ ಸಂಸ್ಕೃತಿಯು ರಾಜಕೀಯದ ಭಾಗವೇ ಆಗಿರುತ್ತದೆ. ಒಳ್ಳೆಯ ಕಲೆ ಒಳ್ಳೆಯ ರಾಜಕೀಯವನ್ನು ಸಮರ್ಥಿಸುತ್ತದೆ. ಅಂದರೆ, ಪಕ್ಷ ರಾಜಕೀಯವನ್ನಲ್ಲ, ಅಧಿಕಾರದ ಅಸಮಾನತೆಯನ್ನು ಪ್ರಶ್ನಿಸುವ, ಅದರ ದೌರ್ಜನ್ಯವನ್ನು ಬಯಲಿಗೆಳೆವ ರಾಜಕೀಯವನ್ನು ಅದು ಮಾಡುತ್ತದೆ.
ನಮ್ಮ ಸಂದರ್ಭದ ಸಮಸ್ಯೆಯೆಂದರೆ ಸರಕಾರವು ಧನಸಹಾಯ ಮಾಡುತ್ತದೆಯಾದ್ದರಿಂದ ಅದಕ್ಕೆ ಸಂಸ್ಕೃತಿಯ ಮೇಲೆ ಸಾರ್ವಭೌಮ ಅದಿಕಾರವಿದೆಯೆನ್ನುವ ಸುಳ್ಳು ನಂಬಿಕೆ. ನಮ್ಮ ಸರಕಾರಗಳ ಬಹುಪಾಲು ಸದಸ್ಯರು ಅಶಿಕ್ಷಿತರೂ, ಕುಸಂಸ್ಕೃತಿಯ ಆರಾಧಕರೂ ಆಗಿರುವುದರಿಂದ ಈ ಸಮಸ್ಯೆ ಉಲ್ಭಣಿಸಿದೆ. ಇನ್ನೊಂದು ಕಡೆಗೆ ಬರಹಗಾರರು ವಿಧೇಯ ಗುಲಾಮರಂತೆ ವರ್ತಿಸುತ್ತಿದ್ದಾರೆ, ಇದು ಅವನತಿಯ ಲಕ್ಷಣವಾಗಿದೆ. ಪರಿಹಾರವೆಂದರೆ ಸಾಹಿತ್ಯ ಕಲೆಗಳು ಅರಾಜಕೀಯವಾಗಿರಬೇಕೆಂದು ವಾದಿಸುವುದಲ್ಲ. ಬದಲಾಗಿ ಪ್ರಭುತ್ವದ ವಿಮರ್ಶೆ ಹಾಗೂ ವಿಶ್ಲೇಷಣೆಯ ತಮ್ಮ ಕೆಲಸವನ್ನು ಮಾಡುವ ಸ್ವಾಯತ್ತತೆಯನ್ನು ಬಲವಾಗಿ ಸಮರ್ಥಿಸಬೇಕಿದೆ. ಪ್ರಭುತ್ವದ ಅಧಿಕಾರದ ನೆರಳಿನಲ್ಲಿಯೂ ತಮ್ಮ ವಿಮರ್ಶಾತ್ಮಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.