– ಉಳಿದ ನಾಲ್ವರಿಗೆ ಮುಂದುವರಿದ ಶೋಧ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ತಲಕಾವೇರಿಯಲ್ಲಿ ಆಗಸ್ಟ್ 6 ರಂದು ಬ್ರಹ್ಮಗಿರಿ ಬೆಟ್ಟ ಕುಸಿದು ಭೂಸಮಾಧಿಯಾಗಿದ್ದ ಐವರಲ್ಲಿ ಒಂದು ಮೃತದೇಹ ಶನಿವಾರ ಪತ್ತೆಯಾಗಿದೆ.
ಆ.6ರಂದು ಭೂಕುಸಿತದಿಂದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ, ಅವರ ಪತ್ನಿ, ಸಹೋದರ ಹಾಗೂ ಇಬ್ಬರು ಯುವ ಅರ್ಚಕರು ಕಣ್ಮರೆಯಾಗಿದ್ದರು. ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಭೂಕುಸಿತಕ್ಕೆ ಸಿಲುಕಿ ಕಣ್ಮರೆಯಾದವರ ಶೋಧಕಾರ್ಯ ಅಸಾಧ್ಯವಾಗಿತ್ತು. ಜಿಲ್ಲೆಯಲ್ಲಿ ಶನಿವಾರ ದಿನ ವರುಣ ಕೊಂಚ ಬಿಡುವು ನೀಡಿದೆ.
ಶನಿವಾರ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮತ್ತು ಪೆÇಲೀಸ್ಇ ಲಾಖಾ ತಂಡಗಳು ಬ್ರಹ್ಮಗಿರಿ ಶ್ರೇಣಿಯಲ್ಲಿ ಬಿಡುವು ನೀಡದೇ ಸತತವಾಗಿ ಸುರಿಯುತ್ತಿರುವ ಮಳೆಯು ನಡುವೆ ಕಾರ್ಯಾಚರಣೆ ನಡೆಸಿ, ಕಾಣೆಯಾದವರ ಐವರ ಪೈಕಿ ಆನಂದತೀರ್ಥ(86)ರವರ ಮೃತದೇಹ ಪತ್ತೆಯಾಗಿದೆ. ಉಳಿದ ನಾಲ್ವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ತಲಕಾವೇರಿ ಭೂಕುಸಿತದಲ್ಲಿ ಕಾಣೆಯಾಗಿರುವವರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ.
ಕಡಿಮೆಯಾದ ಮಳೆ ಅಬ್ಬರ
ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸುರಿದ ಮಹಾಮಳೆಯಿಂದ ಕೊಡಗಿನ ಜನತೆ ತತ್ತರಿಸಿ ಹೋಗಿದ್ದರು. ಇದೀಗ ಶನಿವಾರ ದಿನ ಜಿಲ್ಲೆಯಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಜಲಾವೃತಗೊಂಡ ಗ್ರಾಮಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿಲ್ಲ.
ಇಂದು ತಲಕಾವೇರಿಗೆ ಕಂದಾಯ ಸಚಿವ ಆರ್.ಅಶೋಕ್, ಡಿಕೆಶಿ ಭೇಟಿ
ತೀವ್ರಮಳೆಯಿಂದ ಹಾನಿಯಾಗಿರುವ ಕೊಡಗು ಜಿಲ್ಲೆಯ ಪ್ರದೇಶಗಳಿಗೆ ಭಾನುವಾರ ಕಂದಾಯ ಸಚಿವ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಮಂಡಲ, ಹಾಗೂ ಭೂಕುಸಿತ ಸಂಭವಿಸಿದ ತಲಕಾವೇರಿಗೆ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದಾರೆ.