ನಕುಲ
ನಾನು ಇದುವರೆವಿಗೂ ನೋಡಿದ ಅತ್ಯಂತ ಕೆಟ್ಟ ಚಿತ್ರಗಳ ಪಟ್ಟಿ ಮಾಡಿದಲ್ಲಿ, ಮೊದಲನೇ ಸಾಲಿನಲ್ಲೇ ನಿಲ್ಲುವಂತಹ ಚಿತ್ರ `ಮತ್ತೆ ಮುಂಗಾರು’. ಶೇ. 70 ಭಾಗವನ್ನು ಒಂದು ಕತ್ತಲೆಯ ಕೋಣೆಯಲ್ಲೇ ಚಿತ್ರೀಕರಿಸಿ, ನಾವೇನೋ ಅದ್ಭುತ ಮಾಡಿದ್ದೇವೆ ಎಂಬಂತೆ ಬಿಂಬಿಸುತ್ತಿರುವ ನಿರ್ದೇಶಕ ರಾಘವ್ ಪ್ರೇಕ್ಷಕರಿಗೆ ದೊಡ್ಡ ಮೋಸವನ್ನೇ ಮಾಡಿದ್ದಾರೆ. `ಮುಂಗಾರು ಮಳೆ’ಯ ಗುಂಗಿನಲ್ಲೇ ಪ್ರೇಮ ಕಥಾನಕವೊಂದರ ನವಿರು ಚಿತ್ರಣ ನಿರೀಕ್ಷಿಸಿ ಹೋಗುವ ಪ್ರೇಕ್ಷಕನಿಗೆ ಆಘಾತವಾಗುವುದು ಗ್ಯಾರಂಟಿ!
ಬಿಜೆಪಿ ಪಕ್ಷದ `ಬಚ್ಚಿಟ್ಟ ಅಜೆಂಡಾ’ಗಳಂತೆ ನಿರ್ಧೇಶಕರು ಬೇರೆ ಏನನೋ ಪ್ರೇಕ್ಷಕರಿಗೆ ಮುಟ್ಟಿಸುವ ಯತ್ನ ಗುಪ್ತಗಾಮಿನಿಯಂತೆ ಈ ಚಿತ್ರದಲ್ಲಿ ಹರಿಯುತ್ತದೆ. ದೇಶಾಭಿಮಾನದ ನೆವದಲ್ಲಿ ಅಂಧಾಭಿಮಾನವನ್ನು ಉದ್ದೀಪಿಸುವ, ನೆರೆ ರಾಷ್ಟ್ರಗಳ ಬಗ್ಗೆ ಯಾವುದೇ ತರ್ಕಕ್ಕೆ ಸಿಗದ, ಕುತರ್ಕದ ಅತಿರೇಕದಿಂದ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಅವರು. ತಾವು ಕೋಮುವಾದಿ ಪಕ್ಷವೊಂದರ ಬೆಂಬಲಿಗರು ಎಂಬುದನ್ನು ಪರೋಕ್ಷವಾಗಿ ನಿರೂಪಿಸಿದ್ದಾರೆ ಅವರು.
ಇನ್ನು ಇವರ ಅಜ್ಞಾನಕ್ಕಂತೂ ಎಣೆಯೇ ಇಲ್ಲ. ನೆರೆ ರಾಷ್ಟ್ರಗಳೊಂದಿಗಿನ ಸಂಬಂಧಗಳ ಕುರಿತು ಚಿತ್ರಿಸುವಾಗ ಸಾಕಷ್ಟು ಅಧ್ಯಯನ, ರಾಜತಾಂತ್ರಿಕ ವ್ಯವಹಾರಗಳ ಕುರಿತ ಕನಿಷ್ಟ ತಿಳುವಳಿಕೆಯೂ ಇದ್ದಂತಿಲ್ಲ ಅವರಿಗೆ. ಇದಾವುದೂ ಅಗತ್ಯವಿದ್ದಂತೆಯೂ ಕಾಣುವುದಿಲ್ಲ ಅವರಿಗೆ. ತಮಗೆ ಅನಿಸಿದ್ದೇ ಸರಿ, ತೋಚಿದ್ದೇ ಸತ್ಯ ಎಂಬಂತೆ ತಮ್ಮ ಮೂಗಿನ ನೇರಕ್ಕೆ ಚಿತ್ರವನ್ನು ರೂಪಿಸಿ ನಗೆಪಾಟಲಿಗೆ ಈಡಾಗಿದ್ದಾರೆ.
`ಮತ್ತೆ ಮುಂಗಾರು’ ಹೆಸರಷ್ಟೇ ಮಧುರ, ಕೆಲವು ಹಾಡುಗಳೂ ಇಂಪಾಗಿವೆ. ಉಳಿದೆಲ್ಲವೂ ಕರ್ಕಶ. ಪ್ರಾರಂಭದಲ್ಲಿ ಚಿತ್ರ ಸಾಕಷ್ಟು ಲವಲವಿಕೆಯಿಂದಲೇ ಆರಂಭಗೊಳ್ಳುತ್ತದಾದರೂ ಆನಂತರ ತೀವ್ರ ನಿರಾಶೆ ಮೂಡಿಸುತ್ತದೆ. ಇದು 80 ರ ದಶಕದ ಕಥೆ (ಅಂದಿನ ವಾತಾವರಣದ ಪುನರ್ಸೃಷ್ಟಿಗೆ ನಿರ್ದೇಶಕರು ತಲೆಕೆಡಿಸಿಕೊಂಡಂತಿಲ್ಲ). ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗಿನಿಂದ ಆರಂಭವಾಗುವ ಕಥೆ ಅಂತಿಮವಾಗಿ 90 ರ ದಶಕದ ಅಂತ್ಯದಲ್ಲಿ ವಾಜಪೇಯಿ ಪ್ರಧಾನಿಯಾಗುವವರೆಗಿನ ಕಾಲದವರೆಗಿನ ಕಥೆ ಇದು. ಬಾಂಬೆಯ ಮೀನುಗಾರರು ಮೀನು ಹಿಡಿಯಲು ಹೋಗಿ ಚಂಡಮಾರುತಕ್ಕೆ ಸಿಕ್ಕಿ, ಭಾರತದ ಗಡಿ ದಾಟಿ, ಪಾಕಿಸ್ತಾನದ ಸೇನೆಯ ಕೈಗೆ ಸಿಕ್ಕಿಬಿದ್ದು, ಎರಡು ದಶಕಗಳ ಕಾಲ ಜೈಲಿನಲ್ಲೇ ಉಳಿಯುವಂತಾಗುತ್ತದೆ. ಯಾವ ರಾಜಕೀಯ ನಾಯಕರು ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ, ಕೊನೆಗೆ ವಾಜಪೇಯಿ ಬಂದ ನಂತರವಷ್ಟೇ ಅವರಿಗೆ ಬಿಡುಗಡೆಯ ಭಾಗ್ಯ ದೊರೆಯುವುದು ಎಂಬುದು ನಿರ್ದೇಶಕರ ನಿರೂಪಣೆ. ಪ್ರಾರಂಭದಲ್ಲಿ ಪ್ರೀತಿ ಪ್ರೇಮದ ಒಂದು ಸಣ್ಣ ಎಳೆ ಇದ್ದರೂ ಆನಂತರದಲ್ಲಿ ಅದು ಗೌಣವಾಗಿ, ಜೈಲುಪಾಲಾದ ಈ ಮೀನುಗಾರರ ಅರಚಾಟ, ಕಿರಿಚಾಟವೇ ಮೇಲುಗೈಯಾಗಿ ಕರ್ಣಕಠೋರವಾಗಿ ಮಾರ್ಪಡುತ್ತದೆ ಈ ಚಿತ್ರ.
ಪೂರ್ವಗ್ರಹಪೀಡಿತರೇ ಆಗಿರುವ ನಿರ್ದೇಶಕರು ಖೈದಿಗಳಿಗೆ ನೀಡುವ ಚಿತ್ರಹಿಂಸೆಯನ್ನು ಅತಿಯಾಗಿ ವಿಜೃಂಭಿಸಿ, ಪಾಕಿಸ್ತಾನದ ವಿರುದ್ಧ ದ್ವೇಷವನ್ನು ಹುಟ್ಟುಹಾಕಲೇಬೇಕೆಂಬ ಹಠಕ್ಕೆ ಬಿದ್ದವರಂತೆ ಚಿತ್ರಿಸಿದ್ದಾರೆ. ಇಲ್ಲಿ ಯಾವುದೇ ತರ್ಕ, ವಾಸ್ತವತೆ, ಇಂತಹ ಸಂದರ್ಭದಲ್ಲಿ ಕೈಗೊಳ್ಳಲಾಗುವ ಕಾನೂನು ಕ್ರಮಗಳೇನು ಎಂಬುದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಂತಿಲ್ಲ. ಅವರ ಉದ್ದೇಶ ಒಂದೇ! ಆ ಎರಡು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ಗೆ ಯಾವುದೇ ಕಾಳಜಿಯಿಲ್ಲ! ಬಿಜೆಪಿಗೆ ಮಾತ್ರವೇ ನೈಜ ಕಾಳಜಿ ಎಂದು ಬಿಂಬಿಸುವುದು.
ಅದನ್ನಾದರೂ ಸರಿಯಾದ ತಿಳುವಳಿಕೆಯಿಂದ ಮಾಡಿದ್ದಾರೆಂದರೆ ಅದೂ ಇಲ್ಲ. ಕೈದಿಗಳ ಹಸ್ತಾಂತರಕ್ಕೂ ಒಂದು ರೀತಿನೀತಿ ಇರುತ್ತದೆಂಬ ಕಲ್ಪನೆಯೂ ನಿರ್ದೇಶಕರಿಗಿಲ್ಲ. ಪಾಕಿಸ್ತಾನ ಸೈನಿಕರು ಸಿಕ್ಕಿಬಿದ್ದ ಮೀರನುಗಾರರನ್ನೇ ತಂದು ಭಾರತದ ಗಡಿಯಲ್ಲಿದ್ದ ಭಾರತೀಯ ಸೈನಿಕರಿಗೆ ಒಪ್ಪಿಸುತ್ತಾರೆ. ಅವರೆಲ್ಲಾ ಬಾಂಬೆಯವರೆ ಆಗಿದ್ದರೂ ಅವರನ್ನು ಸಿಕ್ಕ ಸಿಕ್ಕ ಬಸ್ಸಿನಲ್ಲಿ ಇಬ್ಬಿಬ್ಬರಂತೆ ಕೂರಿಸಿ ಕಳುಹಿಸಿಕೊಡುತ್ತಾರೆ. ಬಾಂಬೆಗೆ ಬಂದ ನಾಯಕನನ್ನು ಅಲ್ಲಿನ ಅಧಿಕಾರಿಗಳು ಬಂಧಿಸುತ್ತಾರೆ. ಕಾರಣ ಅವನು ಪಾಕಿಸ್ತಾನದಿಂದ ಬಂದಿದ್ದಾನೆಂಬ ಕಾರಣಕ್ಕೆ! ಇದೆಂಥಾ ಹುಚ್ಚಾಟ. ಕೈದಿಗಳ ಹಸ್ತಾಂತರಕ್ಕೆ ಒಂದು ರೀತಿ-ರಿವಾಜು ಇಲ್ಲವೇ? ಬಿಡುಗಡೆಯಾದ ಕೈದಿ ವಾಸಿಸುವ ಸ್ಥಳದ ಸ್ಥಳೀಯ ಅಧಿಕಾರಿಗಳಿಗೆ ಆ ಮಾಹಿತಿಯಿರುವುದಿಲ್ಲವೇ?
ಇನ್ನು ಹೆಚ್ಚಿನ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಕಾರಣ ಕತ್ತಲೆ ಕೋಣೆಯ ಚಿತ್ರಣವಾದ್ದರಿಂದ, ತಮ್ಮ ಮುಖದ ಭಾವನೆಗಳನ್ನು ಬಿಂಬಿಸಲು ಸಾಕಷ್ಟು ತಿಣುಕಾಡಿದ್ದಾರೆ. ಮತ್ತೊಂದು ಆಶ್ಚರ್ಯವೆಂದರೆ ಅಂಬರೀಷ್ ಕೂಡಾ ಚಿತ್ರದಲ್ಲಿದ್ದಾರೆ. ಆದರೆ ಅವರ ಮುಖಾರವಿಂದದ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ಕಾರಣ ಕತ್ತಲೆಯ ಕೋಣೆ! ಚಿತ್ರದ ಒಂದು ಪಾತ್ರವಾಗಿ ಅವರ ಧ್ವನಿಯಷ್ಟೇ ಇದೆ. ಶ್ರೀನಗರ ಕಿಟ್ಟಿಯದು ನಾಯಕನ ಪಾತ್ರವಾದರೂ ಆವರ ಪಾತ್ರ ಪೋಷಣೆ ತೀವ್ರ ಸೊರಗಿದೆ. ಮೀನುಗಾರರ ಬೋಟಿನಲ್ಲಿ ಮೆಕಾನಿಕ್ ಆಗಿ ಹೋಗುವ ಆತ, ಜೈಲು ಪಾಲಾದ ಮೇಲೆ ಹತ್ತರಲ್ಲಿ ಅವನು ಒಬ್ಬನಾಗುವುದರಿಂದ ನಾಯಕನ ಪಾತ್ರದ ಮಹತ್ವವೇ ಕಳೆದುಹೋಗುತ್ತದೆ.
ಚಿತ್ರದ ಯಶಸ್ಸಿನ ಅಂದಾಜು ಒಂದೇ ವಾರಕ್ಕೆ ನಿರ್ಮಾಪಕ ಇ.ಕೃಷ್ಣಪ್ಪ ಮತ್ತು ನಿರ್ದೇಶಕರಿಗೆ ಈಗಾಗಲೇ ಮನವರಿಕೆಯಾದಂತಿದೆ. ಎರಡನೇ ವಾರದಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮುಲಾಕ `ನಿಮ್ಮಿಂದಲೇ ನಮ್ಮ ಬದುಕು, ದಯವಿಟ್ಟು ನೋಡಿ, ನಮ್ಮನ್ನು ಉಳಿಸಿ’ ಎಂದು ದುಂಬಾಲು ಬಿದ್ದಿರುವುದನ್ನು ನೋಡಿದರೆ ಜನರೇ ನಿರ್ಧರಿಸಿಬಹುದು ಇಂದೆಂಥಾ ಚಿತ್ರವೆಂದು. ನಿಜಕ್ಕೂ ಉತ್ತಮ ಚಿತ್ರವಾಗಿದ್ದಲ್ಲಿ ನೋಡುವ ಜನರನ್ನು ತಡೆಯಲಾಗುವುದಿಲ್ಲ. ಇಂತಹಾ ಗಿಮಿಕ್ಕುಗಳಿಂದ ಯಾರನ್ನೂ ಬಲವಂತವಾಗಿ ಎಳೆದು ತಂದು ಸಿನಿಮಾ ತೋರಿಸಲಾಗುವುದಿಲ್ಲ!0