ಬೆಂಗಳೂರು; ಕೋವಿಡ್ 19 ನಿಯಂತ್ರಣಕ್ಕಾಗಿ ವೈದ್ಯಕೀಯ ಪರಿಕರ ಖರೀದಿಯಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಭ್ರಷ್ಟಾಚಾರ ಎಸಗಿದೆ ಎಂದು ಗುರುವಾರ ಬೆಳಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು. ಈ ಆರೋಪ ಸಂಬಂಧ ಇಂದು ವಿಧಾನಸೌಧದಲ್ಲಿ ಐವರು ಸಚಿವರು ಪ್ರತಿಯಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಸಚಿವರಾದ ಆರ್. ಅಶೋಕ್. ಶ್ರೀರಾಮಲು, ಆಶ್ವಥ ನಾರಾಯಣ್, ಕೆ. ಸುಧಾಕರ್ ಹಾಗೂ ಬಸವರಾಜ್ ಬೊಮ್ಮಯಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವಥ ನಾರಾಯಣ ಅವರು, 330 ರೂಪಾಯಿಗೆ 1.5 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ. ಆದರೆ, 2100 ಕೊಟ್ಟು ಚೀನಾದಿಂದ ಪಿಪಿಇ ಕಿಟ್ ತಂದಿದ್ದಾರೆ ಅಂತ ಆರೋಪಿಸಿದ್ದಾರೆ. ಆದರೆ, ಮಾರ್ಚ್, ಮೇ ನಲ್ಲಿ ಭಾರತದಲ್ಲಿ ಪಿಪಿಇ ಕಿಟ್ ಉತ್ಪಾದನೆ ಆಗ್ತಿರಲಿಲ್ಲ. ಆ ವೇಳೆ ಚೈನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದ್ವಿ. ಈಗಲೂ 3900 ರೂ.ಗೆ ಫ್ಲಿಪ್ ಕಾರ್ಟ್ ನಲ್ಲಿ ಪಿಪಿಇ ಕಿಟ್ ಮಾರಾಟ ಆಗುತ್ತಿದೆ ಎಂದು ಹೇಳಿದರು.
ಜವಾಬ್ದಾರಿ ಸ್ಥಾನದಲ್ಲಿರೋರು ದಾಖಲೆ ಇಲ್ಲದೇ ಆರೋಪ ಮಾಡೋದು ಎಷ್ಟು ಸರಿ? ಅವರ ಆರೋಪ ರಾಜಕೀಯ ಪ್ರೇರಿತ ಎಂದು ಹೇಳಿದ ಅಶ್ವಥ ನಾರಾಯಣ ಅವರು, ಇವರು ಹಿಂದೆ 21 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದಾರೆ. 15.72 ಲಕ್ಷಕ್ಕೂ ಖರೀದಿ ಮಾಡಿದ್ದಾರೆ. 14.9 ಲಕ್ಷಕ್ಕೂ ಖರೀದಿ ಮಾಡಿದ್ದಾರೆ. ನಾವು 28 ಯುನಿಟ್ ಅನ್ನು 7 ಲಕ್ಷಕ್ಕೆ ಖರೀದಿ ಮಾಡಿದ್ದೇವೆ. 4 ಲಕ್ಷಕ್ಕೆ ತಮಿಳುನಾಡು ಖರೀದಿ ಮಾಡಿದೆ ಅಂತಾ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲದೇ ಆರೋಪ ಮಾಡಿದ್ದಾರೆ ಎಂದರು.
147-97 ರೂ. ಮೊತ್ತದಲ್ಲಿ ಮಾಸ್ಕ್ ಖರೀದಿ ಮಾಡಿದ್ದೇವೆ. ಈಗ ಮಾಸ್ಕ್ ಹೊರಗೆ 200 ರೂ.ಗೆ ಮಾರಾಟವಾಗ್ತಿದೆ. ಸ್ಯಾನಿಟೈಸರ್ ಬಗ್ಗೆ ಕೋವಿಡ್ ಸಮಯದಲ್ಲಿ ಎಸ್ಎಂ ಕಂಪನಿಯಿಂದ ಖರೀದಿ ಮಾಡಿಯೇ ಇಲ್ಲ. 500 ಎಂಎಲ್ ಸ್ಯಾನಿಟೈಸರ್ ಅನ್ನು 250 ರೂ.ಗೆ ಖರೀದಿ ಮಾಡಿದ್ದೇವೆ. ಆಕ್ಸಿಜೆನ್ ದುಡ್ಡು ಕೊಟ್ಟು ಖರೀದಿಸಿಲ್ಲ ಎಂದು ಹೇಳಿದರು.
ಸ್ಕ್ಯಾನ್ ರೇ ಕಂಪನಿ ಮೈಸೂರು ಇವರಿಂದ 7.28 ಕೋಟಿಗೆ 130 ವೆಂಟಿಲೇಟರ್, ಕೆಕೆ ಅಲಿನೇಜ್ನಿಂದ 12.32 ಲಕ್ಷಕ್ಕೆ 10 ವೆಂಟಿಲೇಟರ್ ಕೇಳಲಾಗಿದ್ದು, 8 ಪೂರೈಕೆ ಮಾಡಿದ್ದಾರೆ. ಬಯೋ ಮೆಡಿಕ್ಸ್ ವೆಂಟಿಲೇಟರ್ ಕೊಟ್ಟಿಲ್ಲ. ಹೋ ಮೆಡಿಕ್ಸ್ – 13.44 ಲಕ್ಷಕ್ಕೆ 5 ವೆಂಟಿಲೇಟರ್ ನೀಡಿದ್ದಾರೆ ಎಂದು ಹೇಳಿದ ಅಶ್ವಥ್ ನಾರಾಯಣ ಅವರು, 2019ರಲ್ಲಿ ೧೪ ಲಕ್ಷಕ್ಕೆ ಚೆನ್ನೈ ಗೆ ನೀಡಿದ್ದಾರೆ. ನಮಗೆ ೪ ಲಕ್ಷಕ್ಕೆ ನೀಡಿದ್ದಾರೆ. ಹೋಂ ವರ್ಕ್ ಮಾಡದರೆ, ಮಾಹಿತಿ ಇಲ್ಲದೇ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಮಾತಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಎಲ್ಲ ಇಲಾಖೆ ಸೇರಿ ಒಟ್ಟು 2118 ಕೋಟಿ ರೂ. ಖರ್ಚಾಗಿದೆ. 1000 ವೆಂಟಿಲೇಟರ್ ಖರೀದಿ ಮಾಡಿದ್ದಾರೆ ಅಂದಿದ್ದಾರೆ . ಆದರೆ ಒಟ್ಟು 248 ವೆಂಟಿಲೇಟರ್ ಮಾತ್ರ ಖರೀದಿ ಮಾಡಲಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಮಾತನಾಡಿ, ಜನರು ಇವರನ್ನು ಯಾವತ್ತು ಕ್ಷಮಿಸಲ್ಲ. ನಿಮ್ಮ ತಟ್ಟೆಲಿ ಹೆಗ್ಗಣ ಬಿದ್ದಿದೆ. ಅದನ್ನು ಬಿಟ್ಟು ನಮ್ಮ ಬಗ್ಗೆ ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾ ಇದ್ದೀರಿ. ಇವರ ಆರೋಪ ಬರೀ ಸುಳ್ಳು ಎಂದರು.
ಕೊರೋನಾ ಸಮಯದಲ್ಲಿ ಕಾಂಗ್ರೆಸ್ ಪುನಶ್ಚೇತನ ಮಾಡಿಕೊಳ್ಳುವ ಉದ್ದೇಶ ಇದ್ದರೆ ಅದು ಸುಳ್ಳು. ರಜೆ ಇಲ್ಲದೇ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ದಾಖಲೆ ಇಲ್ಲದೇ ಹೇಗೆ ಆರೋಪ ಮಾಡ್ತೀರಿ. ಇದು ರಾಜ್ಯದ ಜನರ ದಿಕ್ಕು ತಪ್ಪಿಸುವ ಯತ್ನ. ಮಾಹಿತಿ ಕೊರತೆಯಿಂದ ಮಾತಾಡೋದು ಸಹ ಅಪರಾಧವೇ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಜನರಲ್ಲಿ ಕಾಂಗ್ರೆಸ್ ಬಗ್ಗೆ ಸಿಂಪತಿ ಬರಲಿ ಅನ್ನೋ ದುರುದ್ದೇಶದಿಂದ ಹೀಗೆ ಆರೋಪ ಮಾಡಿದ್ದಾರೆ. ಕಾರ್ಮಿಕರಿಗೆ ದುಡ್ಡು ನಾವೇ ಕೊಡ್ತಿವಿ ಅನ್ನುತ್ತಾರೆ. ಆದರೆ, ಒಬ್ಬರಿಗೂ ದುಡ್ಡು ಕೊಡಲಿಲ್ಲ. ಐತಿಹಾಸಿಕ ಪ್ರಮಾದವನ್ನು ನೀವು ಮಾಡಿದ್ದೀರಿ. ನಾವು ಯಾವ ತನಿಖೆಗೂ ಸಿದ್ಧ ಎಂದು ಸವಾಲು ಹಾಕಿದರು.