’ತ್ರೀ ಈಡಿಯಟ್ಸ” : ಶಿಕ್ಷಣ ವ್ಯವಸ್ಥೆಯ ಮೇಲೆ ಕ್ಷಕಿರಣ

-ಲವಿತ್ರ ವಸ್ತ್ರದ

ಸಿನೆಮಾ ಅಂದರೆ ಸಾಕು ಹೀರೊ, ಹೀರೊಯಿನ್, ರೊಮ್ಯಾನ್ಸ್, ವಿಲನ್, ಹೊಡೆದಾಟ, `ಸಿಕ್ಕ ದೇವರಿಗೆ ಕೈ ಮುಗಿದ ಮ್ಯಾಲ’ ಕಷ್ಟ ಪರಿಹಾರ. ಚಿಂದಿ ಬಟ್ಟೆ ತೊಟ್ಟ ಹುಡುಗಿಯರ ನೃತ್ಯ, ಲಾಂಗು-ಮಚ್ಚುಗಳ ಧಾಳಿ ಜೊತಿಗೆ ತಲೆ ಕೆಟ್ಟು ಹೋಗುವಂತಹ ಕಥೆ-ದೃಶ್ಯಗಳು ಸುಪರಿಚಿತ. ಆದ್ರೆ ತೀರ ಅಪರೂಪ ಅನ್ನುವಂಥ ಚಿತ್ರ ‘ತ್ರೀ ಈಡಿಯಟ್ಸ ‘.  ಈ ಚಿತ್ರದ ನಾಯಕರು ರಂಚೋಡದಾಸ್, ಫರಾನ್, ರಾಜ್ ಮೂರು ಜನ ಬೇರೆ ಬೇರೆ ಪರಿಸರದಿಂದ ಬೇರೆ ಬೇರೆ ಹಿನ್ನೆಲೆಯಿಂದ ಬಂದವರು. ಸಮಯ ಸರೀತಾ ಹೋದ ಹಾಗೆ ಮೂರು ಜನ ಒಳ್ಳೆಯ ಸ್ನೇಹಿತರಾಗ್ತಾರೆ. ಕಾಲೇಜಿಗೆ ಬಂದ ಕೆಲದಿನಗಳಲ್ಲೇ ರ್ಯಾಂಚೋ(ರಂಚೋಡ್ದಾಸ್)ನ ಹೆಸರು ಎಲ್ಲರಿಗೂ ಪರಿಚಯವಾಗುತ್ತದೆ. ರ್ಯಾಗಿಂಗ್ ಮಾಡುವಾಗ ತಪ್ಪಿಸಿಕೊಳ್ಳಲು ಫಿಸಿಕ್ಸ್ ನ ಸಾಮಾನ್ಯ ಜ್ಞಾನವನ್ನು  ಯೂಸ್ ಮಾಡ್ಕೊಂಡಿದ್ದು, ಕ್ಲಾಸಿನಿಂದ ಹೊರ ಹಾಕಿದ ತತ್ಕ್ಷಣ ಬೇರೆ ಕ್ಲಾಸ್ನಲ್ಲಿ ಹೋಗಿ ಕೂಡೊದು…ಹೀಗೆ ಇವನ ಕೀರ್ತಿ ಹಬ್ಬುತ್ತಾ ಹೋಗುತ್ತೆ. ಹೀಗೆ ಸಮಯ ಸರೀತಾ ಹೋಗುತ್ತೆ. ಪರೀಕ್ಷೆ ಬಂದೇಬಿಡುತ್ತೆ, ಪರೀಕ್ಷೆ ಬರೆದಿದ್ದು ಆಯ್ತು, ರಿಸಲ್ಟ್ ಕೂಡಾ ಬಂದಾಯ್ತು. ರಾಜ್ ಮತ್ತು ಫರಾನ್ ಲಾಸ್ಟ್ ಪ್ಲೇಸ್ ನಲ್ಲಿ. ಆದರೆ ರ್ಯಾಂಚೊ ಫಸ್ಟ್ ಪ್ಲೇಸ್  ನಲ್ಲಿದ್ದ. ಅವನು ಫಸ್ಟ್ ಬಂದಿದ್ದು ತುಂಬಾ ಆಶ್ಚರ್ಯದ ಸಂಗತಿ ಅಂತ ಉಳಿದ ಇಬ್ಬರಿಗೂ ಅನಿಸಿತು. ಆದರೆ ರ್ಯಾಂಚೋಗೆ ಎಂಜಿನಿಯರಿಂಗ್ ಕಠಿಣ ವಿಷಯವಾಗಿರಲಿಲ್ಲ.
ಹೀಗೆ ಒಂದ್ಸಲ ಮೂರು ಜನ ಕೂತು ಚರ್ಚೆ ಮಾಡುವಾಗ ರಾಜ್ ಮತ್ತು ಫರಾನ್ ಅವನು ಫಸ್ಟ್ ಬಂದಿದ್ದು ಹೇಗೆ ಅಂತ ಕೇಳಿಯೇ ಬಿಡ್ತಾರೆ, ಆವಾಗ ಅವನು ಹೇಳಿದ್ದು ವಿಷಯವನ್ನು ಯಾವಾಗ್ಲೂ ಅಂಕಗಳಿಗಾಗಿ ಓದಬಾರದು, ಅದನ್ನು ಅರ್ಥ ಮಾಡ್ಕೊಂಡು ಓದಿದರೆ ಯಶಸ್ಸು ತಾನಾಗಿಯೇ ಹಿಂದೆ ಓಡಿ ಬರುತ್ತದೆ ಅಂತ.
ನಾವು ಏನನ್ನ ಇಷ್ಟಪಡ್ತೇವೆಯೋ… ಅದನ್ನೇ ಓದಬೇಕು, ನಿಮಗೆ ಇಷ್ಟ ಇರೋ ಕೆಲಸವನ್ನೇ ಮಾಡಿ, ಹೆದರತಾ ಹೆದರತಾ ಯಾವುದೇ ಕೆಲಸ ಮಾಡಿದ್ರೂ ಅದು ಪೂರ್ತಿ ಆಗಲ್ಲ. ಫರಾನ್ ತಂದೆಯ ಒತ್ತಾಯಕ್ಕೆ ಇಂಜಿನಿಯರಿಂಗ್ ಸೇರಿದ್ರೆ, ರಾಜ್ ಮನೆಯ ಸ್ಥಿತಿ ಸುಧಾರಿಸಲಿಕ್ಕೆ ಸೇರ್ತಾನೆ. ಆದ್ರೆ ರ್ಯಾಂಚೊಗೆ ಅದು ಪ್ಯಾಶನ್ ಆಗಿತ್ತು. ತುರ್ತು ಸಮಯದಲ್ಲಿ ಇದ್ದ-ಬಿದ್ದ  ಎಲೆಕ್ಟ್ರೊನಿಕ್ ಸಾಮಾಗ್ರಿಗಳನ್ನೇ ಉಪಯೋಗಿಸಿಕೊಂಡು ಗೆಳತಿಯ ಅಕ್ಕನ ಬಾಣಂತನ ಕೂಡಾ ಮಾಡ್ತಾನೆ.  ಇದರಿಂದ ಏನು ತಿಳಿಯುತ್ತೆ ಅಂದ್ರೆ ನೀವು ತೆಗೆದುಕೊಂಡ ವಿಷಯದ ಮೇಲೆ ನಿಮಗೆ ಸಂಪೂರ್ಣ ಹಿಡಿತವಿರಬೇಕು. ವಿಷಯದ ಬೇರಿನಿಂದ ಹಿಡಿದು ಹಣ್ಣಿನವರೆಗೆ ಸರಿಯಾಗಿ ಮತ್ತು ಸಂಪೂರ್ಣವಾಗಿ ತಿಳಿದುಕೊಂಡರೆ ಅದರ ಮೇಲೆ ಹಿಡಿತ ಸಾಧಿಸಲು ಸುಲಭ.
ನಾವು ವಿಷಯವನ್ನು ತಿಳಿದುಕೊಂಡು ಅರ್ಥಮಾಡಿಕೊಂಡು ಓದಬೇಕು ಅನ್ನುವುದಕ್ಕೆ ಒಂದು ಸಣ್ಣ ಸಂಗತಿಯನ್ನು ತುಂಬಾ ಚೆನ್ನಾಗಿ ಜೊತೆಗೆ ಹಾಸ್ಯಮಯವಾಗಿ ತೋರಿಸಿದ್ದಾರೆ. ಜಾಗತೀಕರಣದ ಈ ಸಂದರ್ಭದಲ್ಲಿ ಶಿಕ್ಷಣ ಒಂದು ವ್ಯಾಪಾರವಾಗುತ್ತಿರುವುದನ್ನು ಮತ್ತು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಜೊತೆ ಕ್ರೂರವಾಗಿ ನಡೆದುಕೊಳ್ಳುವುದನ್ನು ಜನರೆದುರಿಗೆ ಇಡಲಾಗಿದೆ. ಒತ್ತಡಕ್ಕೊಳಗಾದ ವಿದ್ಯಾರ್ಥಿಗಳನ್ನು ಮತ್ತಷ್ಟು ಒತ್ತಡದ ಕೂಪಕ್ಕೆ ತಳ್ಳಿ ಅವರ ಸಾವಿಗೆ ಕಾರಣವಾಗುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಜಾಗತಿಕ ಕಣ್ಣೋಟಕ್ಕೆ ಸೂಕ್ಷ್ಮ ರೀತಿಯಲ್ಲಿ ಡೈಲಾಗ್ನ ಎರಕ ಹೊಯ್ಯಲಾಗಿದೆ. ಅಮೇರಿಕ ಇರಾಕ್ಮೇಲೆ ಮಾಡಿದ ಧಾಳಿಯ ಸಂಗತಿಯೂ ಸಹ ಡೈಲಾಗ್ಗಳ ಹಾದಿಯಲ್ಲಿ ಹಾದು ಹೋಗುತ್ತವೆ. ಸೌಹಾರ್ದತೆಯ ಸಂಕೇತದ ಪಾತ್ರಗಳೇ ‘ತ್ರೀ ಈಡಿಯಟ್ಸ ‘.
ಇದೇ ಸಮಯದಲ್ಲಿ ಮೂಢನಂಬಿಕೆ – ಅಂಧಶ್ರದ್ಧೆ ಆಚರಣೆಯಿಂದ ಅಂಕಗಳು ಬರುವುದಿಲ್ಲ. ಅದರ ಬದಲಿಗೆ ವೈಜ್ಞಾನಿಕ ದೃಷ್ಟಿಕೋನದಿಂದ, ಏಕಾಗ್ರತೆಯಿಂದ ಮತ್ತು ವಿಷಯ ಮನನ ಮಾಡಿಕೊಂಡು ಅಧ್ಯಯನ ಮಾಡಿದಲ್ಲಿ ಅಂಕಗಳನ್ನು ಗಳಿಸಲು ಸಾಧ್ಯ ಎನ್ನುವುದನ್ನು ಸಿನಿಮಾ ಧ್ವನಿಸುತ್ತದೆ. ಇದೇ ಸಮಯದಲ್ಲಿ ಗ್ರೇಡ್ ಪದ್ಧತಿ ಕೂಡಾ ತಪ್ಪು, ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಹೆಚ್ಚಿಸುವತ್ತ ಕ್ರಮ ಕೈಗೊಳ್ಳಬೇಕೆಂದು ರ್ಯಾಂಚೊ ವಾದಿಸುತ್ತಾನೆ. ಸುಳ್ಳು ಪ್ರತಿಷ್ಠೆಯ ಭ್ರಮಾಲೋಕದ ಪರದೆಯನ್ನು ಸರಿಸಲು ಈ ಸಿನೆಮಾ ಸಹಾಯ ಮಾಡುತ್ತದೆ. ಕಾಲೇಜಿನಲ್ಲಿ ನಡೆದ ರ್ಯಾಗಿಂಗ್ ಅನ್ನು ರ್ಯಾಂಚೊ ಎದುರಿಸಿದ ವಿಧಾನದಲ್ಲೂ ವೈಜ್ಞಾನಿಕ ಪಾಠವಿದೆ.
ಸಿನೆಮಾದಲ್ಲಿ ಬರುವ ರ್ಯಾಗಿಂಗ್ ದೃಶ್ಯ ಮತ್ತು ಒಬ್ಬ ವಿದ್ಯಾರ್ಥಿಯ ಆತ್ಮಹತ್ಯೆಯ ಘಟನೆಗಳನ್ನಿಟ್ಟುಕೊಂಡು ಅನಾವಶ್ಯಕವಾಗಿ ವಿವಾದಗಳನ್ನು ಸೃಷ್ಟಿಸಲಾಗಿದೆ. ಲಗಾನ್ ದಂತಹ ಉತ್ತಮ ಸಿನೇಮಾ ಕೊಟ್ಟ ಅಮೀರ್ ಖಾನ್ `ತಾರೇ ಜಮೀನ್ ಪರ್’ ಮತ್ತು ‘ತ್ರೀ ಈಡಿಯಟ್ಸ ‘.  ಸಿನೆಮಾಗಳನ್ನು ನಿಜವಾಗಲೂ ತುಂಬ ಅರ್ಥಪೂರ್ಣವಾಗಿ ಜನರ ಎದುರಿಗಿಟ್ಟಿದ್ದಾರೆ. ಒಂದು ಅರ್ಥದಲ್ಲಿ ಸಿನೆಮಾವು ಒಟ್ಟು ಶೈಕ್ಷಣಿಕ ಪದ್ಧತಿಯ ಬದಲಾವಣೆಯನ್ನು ಬಯಸುತ್ತದೆ. ವಿದ್ಯಾರ್ಥಿಗಳ ಮನೋಸ್ಥೆ ರ್ಯವನ್ನು ಹೆಚ್ಚಿಸುವತ್ತ ಸಮಾಜ ಮತ್ತು ಪೋಷಕರು ಶ್ರಮಿಸಬೇಕು ಎಂಬ ಸಂದೇಶ ಕೊಡುತ್ತದೆ.
ರಾಜಕುಮಾರ್ ಹಿರಾನಿ ಈ ಚಿತ್ರದ ನಿರ್ದೇಶಕರು. ಈ ಮುನ್ನ ಅವರು `ಮುನ್ನಭಾಯಿ ಎಂಬಿಬಿಎಸ್’ ಚಿತ್ರದ ಮೂಲಕ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಯಲ್ಲಿನ ಯಾಂತ್ರಿಕ ಕಾರ್ಯವೈಖರಿ ಬಗ್ಗೆ ಚಿತ್ರಿಸಿದ್ದ ಅವರು ನಂತರ `ಲಗೇ ರಹೋ ಮುನ್ನಾಬಾಯಿ’ ಮುಖಾಂತರ `ಗಾಂಧಿಸಂ’ ಪರಿಚಯಿಸಿ ಹೊಸ ಬಗೆಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದವರು. ಈಗ ಅಂತದ್ದೇ ಪ್ರಯತ್ನದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ಮೇಲಿನ ಒತ್ತಡ, ಪೋಷಕರ ಪ್ರತಿಷ್ಠೆ, ಅಸಹಾಯಕತೆಗಳನ್ನು ಪರಿಚಯಿಸಿ ಮತ್ತೊಮ್ಮೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Donate Janashakthi Media

0 thoughts on “’ತ್ರೀ ಈಡಿಯಟ್ಸ” : ಶಿಕ್ಷಣ ವ್ಯವಸ್ಥೆಯ ಮೇಲೆ ಕ್ಷಕಿರಣ

Leave a Reply

Your email address will not be published. Required fields are marked *