20 ಲಕ್ಷ ಕೊಟಿ ರೂ. ಅಥವ 10ಶೇ. ಜಿಡಿಪಿ ಪ್ಯಾಕೇಜ್ – ಮಾತಿನ, ಅಂಕೆ-ಸಂಖ್ಯೆಗಳ ಮಾಯಾಜಾಲದ ಹಿಂದೆ

ಪ್ರಧಾನ ಮಂತ್ರಿಗಳು ಇನ್ನೊಂದು ರಾತ್ರಿ 8ರ ಭಾಷಣ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ರಸ್ತೆಗಳಲಲ್ಇ ಪಡುತ್ತಿರುವ ಪಾಡು ಮುಖ್ಯಧಾರೆಯ ಮಾಧ್ಯಮಗಳೂ ನಿರ್ಲಕ್ಷಿಸಲಾಗದಂತಹ ಪರಿಸ್ತಿತಿ ಏರ್ಪಟ್ಟಿದ್ದು, ಕೊನೆಗೂ ಇವರನ್ನು ಅವರವರ ಹುಟ್ಟೂರುಗಳಿಗೆ ತಲುಪಿಸಲು ‘ಶ್ರಮಿಕ ಸ್ಪೆಷಲ್‍’ ರೈಲುಗಳನ್ನು ಓಡಿಸಲು ಕೇಂದ್ರ ಸರಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ  ಈ ಭಾಷಣವನ್ನು ಪ್ರಧಾನಿಗಳು ಮಾಡುತ್ತಿದ್ದುದರಿಂದ ಅದರಲ್ಲಿ ದೇಶವನ್ನು ಈಗ ಬಾಧಿಸುತ್ತಿರುವ  ಈ ಜ್ವಲಂತ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಈಗಲಾದರೂ ಹೇಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದೂ ಹುಸಿಯಾಗಿದೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿಯವರು ಹೇಳಿರುವಂತೆ ವಲಸೆ ಕಾರ್ಮಿಕರ ಹತಾಶೆ, ಮಹಾಮಾರಿಯ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳಿಗೆ ಸಂಪನ್ನೂಲಗಳ ಪೂರೈಕೆ, ಮತ್ತು ಲಾಕ್‍ಡೌನ್‍ ಉಂಟು ಮಾಡಿರುವ ಹಸಿವು ಮತ್ತು ಉದ್ಯೋಗಹೀನತೆ ಈ ಬಗ್ಗೆ ಪ್ರಧಾನಿಗಳು ಮಾತನಾಡಲೇ ಇಲ್ಲ.

ಭಾಷಣದಲ್ಲಿ ಕೊನೆಗೂ ಪರಿಹಾರ ಪ್ಯಾಕೆಜಿನ ಪ್ರಸ್ತಾಪ ಬಂತು. ಈ ಬಾರಿ ಬಹುದೊಡ್ಡ ಪ್ಯಾಕೇಜನ್ನೇ ಕೊಡುತ್ತಿರುವುದಾಗಿ  ಸಾರಿದರು, ಎಲ್ಲ ಜನವಿಭಾಗಗಳಿಗೆ ಪರಿಹಾರ ಕೊಡುವ 20 ಲಕ್ಷ ಕೋಟಿ ರೂ.ಗಳ ಬೃಹತ್‍ ಆರ್ಥಿಕ ಪ್ಯಾಕೇಜನ್ನು ಹಣಕಾಸು ಮಂತ್ರಿಗಳು ಪ್ರಕಟಿಸುವುದಾಗಿ ಹೇಳಿದರು. ಇದು ನಮ್ಮ ದೇಶದ ಜಿಡಿಪಿಯ 10ಶೇ.ದಷ್ಟಾಗುತ್ತದೆ  ಎಂಬುದನ್ನು ಒತ್ತಿ-ಒತ್ತಿ ಹೇಳಿದರು. ನಂತರ, ಈಗಾಗಲೇ ಮೊದಲ ಲಾಕ್‍ಡೌನ್‍ ಆರಂಭಿಸಿದ 36 ಗಂಟೆಗಳ ನಂತರ ಪ್ರಕಟಿಸಿದ 1.7ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‍ ಮತ್ತು ಅದರ ಮೊದಲು ಮತ್ತು ನಂತರ ಇದುವರೆಗೆ ರಿಝರ್ವ್ ಬ್ಯಾಂಕ್ ‍ಪ್ರಕಟಿಸಿದ ಹಣಕಾಸು ಕ್ರಮಗಳೂ ಈ 20ಲಕ್ಷ ಕೋಟಿಯಲ್ಲಿ, ಅಥವ 10ಶೇ.ಜಿಡಿಪಿಯಲ್ಲಿ ಸೇರಿವೆ ಎಂದು ಸೇರಿಸಿದರು.

ಇದರ ಮೊತ್ತ ಎಷ್ಟೆಂದು ಅವರೇನೂ ಹೇಳಿಲ್ಲ. ವಾಸ್ತವವಾಗಿ ಜನಸಾಮಾನ್ಯರಿಗೆ ಅದುವರೆಗಿನ ಈ ಕ್ರಮಗಳಿಂದ ಏನೇನೂ ಸಿಕ್ಕಿರದಿದ್ದರೂ, ಅದರ ಮೊತ್ತ ಆಗಲೇ 9.8 ಲಕ್ಷ ಕೊಟಿ ರೂ. ಆಗಿದೆ ದು ಪರಿಣಿತರು ಲೆಕ್ಕ ಹಾಕಿದ್ದಾರೆ. ಇಂತಹ ಅನುಭವದ ಹಿನ್ನೆಲೆಯಲ್ಲಿ ಇನ್ನು ಉಳಿದ 10.2 ಲಕ್ಷ ಕೋಟಿ ರೂ.ಗಳಲ್ಲಿ ಜನಸಾಮಾನ್ಯರ ಸಂಕಟಗಳನ್ನು ಪರಿಹರಿಸಲು ಎಷ್ಟು ತಾನೇ ಸಿಗಬಹುದು ಎಂಬ ಬಗ್ಗೆ ಸಂದೇಹ ಸಹಜವಾಗಿಯೇ ಮೂಡಿತ್ತು.

ಮೇ 13 ರಂದು ಹಣಕಾಸು ಮಂತ್ರಿಗಳು ಪ್ರಕಟಿಸಿದ ‘ಪರಿಹಾರ’ಗಳ ಮೊದಲ ಕಂತು ಈ ಸಂದೇಹವನ್ನು ನಿಜಗೊಳಿಸಿದೆ. ಏಕೆಂದರೆ ಅವರು ತೆರೆದಿಟ್ಟ  20 ಲಕ್ಷ ಕೋಟಿಯಲ್ಲಿನ  ಉಳಿದ 10.2 ಲಕ್ಷ ಕೋಟಿಯ  5.94 ಲಕ್ಷ ಕೋಟಿ ರೂ.ಗಳ ಪ್ಯಾಕೇಜಿನ ಈ ಕಂತಿನಲ್ಲಿ ಹಸಿವಿನಿಂದ ಬಳಲುತ್ತಿರುವ ವಲಸೆ ಕಾರ್ಮಿಕರಿಗೆ ಮತ್ತು ಜೀವನೋಪಾಯಗಳನ್ನು ಕಳಕೊಂಡ ಇತರ ದುಡಿಯುವ ಜನಗಳಿಗೆ ಏನೂ ಇರಲಿಲ್ಲ. ಇದರಲ್ಲಿ ಇದ್ದದ್ದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ  ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಗೆ ಸಾಲಗಳ ಗ್ಯಾರಂಟಿ, ಹಣದ ಹರಿವನ್ನು ಹೆಚ್ಚಿಸುವ ಇನ್ನಷ್ಟು ಕ್ರಮಗಳು . ಮತ್ತು ನೌಕರಿಯಲ್ಲಿರುವವರಿಗೆ ಮತ್ತು ತೆರಿಗೆದಾರರಿಗೆ ಕೆಲವು ತಾತ್ಕಾಲಿಕ ರಿಯಾಯ್ತಿಗಳು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಲಕ್ಷ ಕೊಟಿಗಳೆಲ್ಲವೂ  ತೋರಿಕೆಗೆ ಮಾತ್ರ, ಸರಕಾರ ನಿಜವಾಗಿ ಮಾಡುವ ವೆಚ್ಚ ಬಹಳ ಕಡಿಮೆ.

ಉದಾಹರಣೆಗೆ ಈ ಮೊದಲು ಪ್ರಕಟಿಸಿದ 1.7ಲಕ್ಷ ಕೋಟಿ ರೂ. ಪ್ಯಾಕೇಜಿನಲ್ಲಿ ಸುಮಾರು 80,000 ಕೋಟಿಯಷ್ಟು ಈಗಾಗಲೇ  ಈ ಷರ್ಷದ ಬಜೆಟಿನಲ್ಲಿ ಪ್ರಕಟಿಸಿದ್ದ ಕ್ರಮಗಳು. ಅಂದರೆ ಮೋದಿ ಸರಕಾರ ಮಾಡುವ ಹೆಚ್ಚುವರಿ ವೆಚ್ಚ ಕೇವಲ ಸುಮಾರು 90ರಿಂದ 95 ಸಾವಿರ ಕೋಟಿ ರೂ. ಇದು ಜಿಡಿಪಿಯ 0.5ಶೇ.ದಷ್ಟು ಮಾತ್ರ. ಬೇರೆಲ್ಲಾ ಕ್ರಮಗಳು ರಿಝರ್ವ್‍ ಬ್ಯಾಂಕಿನ ಕ್ರಮಗಳು. ಅದಕ್ಕೆ ಸರಕಾರದ ಬೊಕ್ಕಸದಿಂದ ಏನೇನೂ ಖರ್ಚು ಮಾಡುವುದಿಲ್ಲ

 ಅಂದರೆ ಪ್ರಧಾನಿಗಳ 10ಶೇ. ಜಿಡಿಪಿ ಪ್ಯಾಕೇಜಿನ ಘೋಷಣೆಯ ಭಾಗವಾಗಿದ್ದ 4.8ಶೇ. ಜಿಡಿಪಿಯಲ್ಲಿ ಸರಕಾರದ ಪಾಲು ಕೇವಲ 0.5ಶೇ.

ಮೇ 13 ರಂದು ಪ್ರಕಟಿಸಿದ  5.94 ಲಕ್ಷ ಕೋಟಿ ರೂ.ಗಳಲ್ಲಿ , ಅಥವ ಜಿಡಿಪಿಯ 2.97ಶೇ.ದಲ್ಲಿ ಸರಕಾರಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ತಗಲುವ ವೆಚ್ಚ ಸುಮಾರಾಗಿ ಕೇವಲ 20,000 ಕೋಟಿ ರೂ. ಅಂದರೆ ಸುಮಾರು ಜಿಡಿಪಿಯ 0.1ಶೇ.ದಷ್ಟು ಎಂದು ಪರಿಣಿತರು ಲೆಕ್ಕ ಹಾಕಿದ್ದಾರೆ.

ಈಗ 20ಲಕ್ಷ ಕೊಟಿಯಲ್ಲಿ ಇನ್ನೂ ಸುಮಾರು 4ಲಕ್ಷ ಕೋಟಿ ರೂ.ಗಳು ಉಳಿದಿವೆ. ಇದರಲ್ಲೂ ಸರಕಾರ ನಿಜವಾಗಿ ಮಾಡುವ ವೆಚ್ಚ ಎಷ್ಟು ಎಂದು ಊಹಿಸಿಕೊಳ್ಳಬೇಕಷ್ಟೇ. ಏನೇ ಆಗಲಿ ಇ ಸರಕಾರ ಅತಿ ಹೆಚ್ಚೆಂದರೆ ಒಟ್ಟು ಜಿಡಿಪಿಯ 2ಶೇ.ದಷ್ಟು ಖರ್ಚು ಮಾಡುವ ಕ್ರಮಗಳನ್ನು ಉಳಿದ ಕಂತುಗಳಲ್ಲಿ ಪ್ರಕಟಿಸಬಹುದಷ್ಟೇ ಎಂದು ಪರಿಣಿತರು ಹೇಳುತ್ತಿದ್ದಾರೆ.

ಅಂದರೆ ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬಾದ ಕೋಟ್ಯಂತರ ದುಡಿಯುವ ಜನಗಳು ಈ  ‘ಉತ್ತೇಜನಾ ಪ್ಯಾಕೆಜಿ’ನ ಉಳಿದ ಕಂತುಗಳಲ್ಲೂ  ನಿರೀಕ್ಷಿಸಬಹುದಾದ್ದು ಬಹುಶಃ ಏನೂ ಇಲ್ಲ.

ಪ್ರಧಾನ ಮಂತ್ರಿಗಳು ‘ಸ್ವಾವಲಂಬನೆ’ ಎಂದು ಹೇಳಿದ ಅಮೋಘ ಮಾತುಗಳ ಬಗ್ಗೆ ಈಗ ಮುಖ್ಯಧಾರೆಯ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿವೆ. ಆದರೆ ಅದರ ನಿಜ ಅರ್ಥ ಇದೇ ಇರಬಹುದೇನೋ. ಅಂದರೆ ಕೋಟ್ಯಂತರ ದುಡಿಯುವ ಜನರು ಸರಕಾರವನ್ನು ಅವಲಂಬಿಸಬಾರದು ಎಂದು.

ಇದೀಗ ಮಹಾಮಾರಿಯ ವಿರುದ್ಧ ಸಮರದ ಹಿನ್ನೆಲೆಯಲ್ಲಿ  ಕೇಂದ್ರ ಸರಕಾರ ಹೆಣೆದಿರುವ ಅಬ್ಬರದ ಮಾತುಗಳ ಮತ್ತು  ಅಂಕಿ-ಅಂಶಗಳ ಮಾಯಾಜಾಲ ಎಂದರೆ ಬಹುಶಃ ತಪ್ಪೇನಲ್ಲ.

Donate Janashakthi Media

Leave a Reply

Your email address will not be published. Required fields are marked *