ದುಡಿಯುವ ಜನಗಳನ್ನು ಗುಲಾಮರಾಗಿಸುವ ಕ್ರೂರ ಅಮಾನುಷ ದಾಳಿ

ಕೇಂದ್ರೀಯ ಕಾರ್ಮಿಕ ಸಂಘಗಳಿಂದ ಐಎಲ್‌ಒ ಗೆ ದೂರು, ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಯೋಚನೆ

ಒಂದೂವರೆ ತಿಂಗಳ ಲಾಕ್‌ಡೌನ್ ಪ್ರಕ್ರಿಯೆಯಲ್ಲಿ ಉದ್ಯೋಗ, ಆದಾಯ, ಸೂರು ಎಲ್ಲವನ್ನೂ ಕಳಕೊಂಡು ಅಮಾನವೀಯ ಸಂಕಟಗಳಿಗೆ, ಹಸಿವು, ಅವಮಾನಗಳಿಗೆ ಈಡಾಗಿರುವ ದೇಶದ ದುಡಿಯುವ ಜನಸಮೂಹಗಳಿಗೆ ಪರಿಹಾರ ಒದಗಿಸಬೇಕಾದ ಸರಕಾರ, ಅದರ ಬದಲು ತನ್ನ ವಿಷದ ಹಲ್ಲುಗಳು, ಪಂಜಗಳನ್ನು ತೆರೆದು ಎರಗುತ್ತಿದೆ, ಅವರನ್ನು ಗುಲಾಮರ ಮಟ್ಟಕ್ಕೆ ಇಳಿಸುತ್ತಿದೆ ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿವೆ.

ಆರು ರಾಜ್ಯ ಸರಕಾರಗಳು ಕೊವಿಡ್ ಮಹಾಮಾರಿಯ ಸಮಯವನ್ನು ದುರುಪಯೋಗಪಡಿಸಿಕೊಂಡು ಕಾರ್ಖಾನೆ ಕಾಯ್ದೆಯನ್ನು ಉಲ್ಲಂಘಿಸಿ ಕೆಲಸದ ಅವಧಿಯನ್ನು ೮ ಗಂಟೆಗಳಿಂದ ೧೨ ಗಂಟೆಗಳಿಗೆ ಹೆಚ್ಚಿಸಿದ ನಂತರ, ಎರಡನೇ ಘಟ್ಟದಲ್ಲಿ ಕಾರ್ಮಿಕ ಕಾನೂನುಗಳನ್ನೇ ವಜಾ ಮಾಡುವ ಕೆಲಸಕ್ಕೆ ಕೈಹಾಕಿವೆ. ಉತ್ತರಪ್ರದೇಶ ಸರಕಾರ ಮೂರು ವರ್ಷಗಳ ಕಾಲ ಇವನ್ನು ಅಮಾನತಿನಲ್ಲಿಡುವ ಸುಗ್ರೀವಾಜ್ಷೆಯನ್ನು ಹೊರಡಿಸಿದೆ, ಒಂದು ತಿಂಗಳಿಗೂ ಹೆಚ್ಚು ಕಾಲ ಸಂಪುಟವನ್ನೇ ರಚಿಸಲಾರದ ಸ್ಥಿತಿಯಲ್ಲಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ೧೦೦೦ ದಿನಗಳ ವರೆಗೆ ಅಮಾನತಿನಲ್ಲಿಡುವ ಮಾತಾಡಿದ್ದರೆ, ಗುಜರಾತ್ ಅದನ್ನು ೧೨೦೦ ದಿನಗಳ ವರೆಗೂ ವಿಸ್ತರಿಸುವ ಸ್ಪರ್ಧೆಗಿಳಿದಿದೆ.

ಇವೆಲ್ಲದಕ್ಕೂ ಕೇಂದ್ರ ಸರಕಾರದ ಆಶೀರ್ವಾದ ಇದೆಯೆಂಬುದರಲ್ಲಿ ಸಂದೇಹವಿಲ್ಲ.

ಈ ಎಲ್ಲ ನಡೆಗಳು ಒಂದು ಅಮಾನವೀಯ ಅಪರಾಧ ಮತ್ತು ದುಡಿಯುವ ಜನಗಳ ಮೇಲೆ ನಡೆಸಿರುವ ಅಮಾನುಷ ಕೃತ್ಯಗಳು ಎಂದು ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಹೆಚ್‌ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಮತ್ತು ವಿವಿಧ ವಲಯಗಳ ರಾಷ್ಟ್ರೀಯ ಸಂಘಟನೆಗಳು ಒಂದು ಜಂಟಿ ಹೇಳಿಕೆಯಲ್ಲಿ ಬಲವಾಗಿ ಖಂಡಿಸಿವೆ.

ಇದು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ)ಯ ಮೂಲ ಅಧಿನಿರ್ಣಯಗಳ ಉಲ್ಲಂಘನೆಯೂ ಆಗಿದೆ.  ಆದ್ದರಿಂದ ಸರಕಾರದ ಈ ಕುಕೃತ್ಯಗಳ ವಿರುದ್ಧ ಐಎಲ್‌ಒಗೆ ದೂರು ನೀಡುವ ಬಗ್ಗೆ ಗಂಬೀರವಾಗಿ ಯೋಚಿಸುತ್ತಿರುವುದಾಗಿ ತಿಳಿಸಿರುವ ಈ ಜಂಟಿ ಹೇಳಿಕೆ ನೌಕರರು ಮತ್ತು ಕಾರ್ಮಿಕರಿಗೆ ತಮ್ಮ ಮೇಲೆ ಗುಲಾಮಿಕೆಯನ್ನು ಹೇರುವ ಈ ಹುನ್ನಾರದ ವಿರುದ್ಧ  ದೇಶವ್ಯಾಪಿ ಪ್ರತಿರೋಧ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದೆ. ರಾಜ್ಯಗಳಲ್ಲಿ ಈಗಾಗಲೇ ಕಾರ್ಮಿಕ ಸಂಘಟನೆಗಳು ಸ್ವತಂತ್ರವಾಗಿ ಐಕ್ಯ ಹೋರಾಟಗಳಿಗೆ ಇಳಿದಿದ್ದಾರೆ, ರಾಷ್ಟ್ರಮಟ್ಟದಲ್ಲಿಯೂ ಒಂದು ಕಾರ್ಯಾಚರಣೆಗೆ ಕರೆ ನೀಡಲಾಗುವುದು ಎಂದು ಈ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹೇಳಿವೆ.

Donate Janashakthi Media

Leave a Reply

Your email address will not be published. Required fields are marked *