ಈ ಸರ್ಕಾರ ಬಿಕ್ಕಟ್ಟಿನ ನಿರ್ವಹಣೆ ಕುರಿತು ನುರಿತ ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸರ್ಕಾರದ ಚಿಂತನೆಯೇ ಅರ್ಥವಾಗುತ್ತಿಲ್ಲ. ಇದಕ್ಕೆ ಸಮಸ್ಯೆಯ ಸ್ಪಷ್ಟವಾದ ಅಂದಾಜೇ ಇದ್ದಂತಿಲ್ಲ. ಹೀಗಾಗಿ ಏನು ಮಾಡಬೇಕೆಂದು ಅಂದಾಜಿಲ್ಲದೆ ಸಮಸ್ಯೆಯನ್ನು ಎದುರಿಸಲು ಹೊರಟಿರುವಂತಿದೆ. ಇಂತಹ ಭೀಕರ ಅಸಮರ್ಥ ಆರ್ಥಿಕ ನಿರ್ವಹಣೆಯನ್ನು ಇದುವರೆಗೂ ನೋಡಿಲ್ಲ. ಇದೊಂದು ಕ್ರ್ರಿಮಿನಲ್ ಅಸಮರ್ಥ ನಿರ್ವಹಣೆಯಾಗಿದೆ. ಏಕೆಂದರೆ ಇದರಿಂದ ಜನರ ಜೀವಗಳು ಬಲಿಯಾಗುತ್ತಿವೆ. ಪರಿಹಾರದ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ, ಎಲ್ಲ ಹೊಣೆಗಾರಿಕೆಯನ್ನು ಜನರ ಮೇಲೆ ಮತ್ತು ರಾಜ್ಯ ಸರ್ಕಾರಗಳ ಮೇಲೆ ಹಾಕುತ್ತದೆ.
ಕೋವಿಡ್-೧೯ ಬಿಕ್ಕಟ್ಟು ತೀವ್ರವಾದ ನಿರುದ್ಯೋಗ ಮತ್ತು ಹಸಿವಿನ ಸಮಸ್ಯೆಗೆ ಕಾರಣವಾಗಲಿದೆ. ಭಾರತದಲ್ಲಿ ಶೇ.೯೦ ಕ್ಕೂ ಹೆಚ್ಚು ಜನ ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಇವರ ಪೈಕಿ ಶೇ.೮೦ ರಷ್ಟು ಜನ ಕೆಲಸ ಕಳೆದುಕೊಂಡಿರಬಹುದು. ಇವರಲ್ಲಿ ಅನೇಕರು ಹಸಿವಿನ ಸಮಸ್ಯೆಯಿಂದ ಭಾಧಿತರಾಗಿದ್ದಾರೆ. ಹಸಿವಿನ ಕಾರಣಕ್ಕೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕತೆ ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆ. ಹಸಿವಿನ ಸಾವುಗಳಿಗೆ ಕಾರಣವಾಗುತ್ತಿರುವ ಪೂರೈಕೆಯ ಸಮಸ್ಯೆಯನ್ನು ನಾವಿಂದು ಎದುರಿಸುತ್ತಿದ್ದೇವೆ. ಸರ್ಕಾರ ಆಹಾರ ಪೂರೈಕೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ. ಆದ್ದರಿಂದ ಆರ್ಥಿಕತೆ ಪುನಶ್ಚೇನಗೊಳ್ಳುವುದು ಹೇಗೆಂಬ ಚಿಂತೆ ಕಾಡುತ್ತಿದೆ.
ಕೇಂದ್ರ ಸರ್ಕಾರ ಲಾಕ್ಡೌನ್ ನಂತರದಲ್ಲಿ ೧.೭೦ ಲಕ್ಷ ಕೋಟಿ ರೂಗಳ ಉತ್ತೇಜನ ಪ್ಯಾಕೇಜ್ ಘೋಷಿಸಿದೆ. ಈ ಮೊತ್ತ ಭಾರತದಂತಹ ಬೃಹತ್ ಆರ್ಥಿಕತೆಗೆ ಸಹಾಯವಾಗುತ್ತದೆಯೇ? ಇಲ್ಲವೇ ಇಲ್ಲ. ಈ ಪ್ಯಾಕೇಜಿನಲ್ಲಿ ಸುಮಾರು ೫೦ ಸಾವಿರ ಕೋಟಿ ರೂಗಳು ಈಗಾಗಲೇ ತೀರ್ಮಾನಿಸಲಾಗಿದ್ದ ಬಜೆಟ್ ವೆಚ್ಚಗಳ ಭಾಗವಾಗಿ ಘೋಷಿಸಲಾಗಿದೆ. ಈ ಪ್ಯಾಕೇಜ್ ಭಾರತದ ಜಿಡಿಪಿಯ ಶೇ.೦.೫ ಕ್ಕಿಂತಲೂ ಕಡಿಮೆಯಿದೆ. ನಮ್ಮ ಆರ್ಥಿಕತೆಯ ಪ್ರಮಾಣವನ್ನು ಪರಿಗಣಿಸಿದಾಗ ಇದು ಯಾವ ಮೂಲೆಗೂ ಸಾಲುವುದಿಲ್ಲ. ಅಸಲಿಗೆ ಇಡೀ ಆರ್ಥಿಕತೆಯನ್ನು ಸ್ಥಬ್ದಗೊಳಿಸಲಾಗಿದೆ. ನೂರಾರು ಮಿಲಿಯನ್ ಶ್ರಮಜೀವಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಇದರಿಂದ ಬೃಹತ್ತಾದ ಅನಾಹುತ ಸಂಭವಿಸಲಿದೆ. ಪ್ರಸಕ್ತ ಬಿಕ್ಕಟ್ಟಿನ ಪ್ರಮಾಣಕ್ಕೆ ಕನಿಷ್ಟವೆಂದರೂ ಜಿಡಿಪಿಯ ಶೇ.೫ ರಿಂದ ಶೇ.೭ ರವರೆಗೆ ಪ್ಯಾಕೇಜ್ ಘೋಷಿಸಬೇಕಾಗಿದೆ. ಈ ತಕ್ಷಣದ ಬಿಕ್ಕಟ್ಟನ್ನು ಎದುರಿಸಲು ಜಗತ್ತಿನ ಹಲವಾರು ದೇಶಗಳು ತಂತಮ್ಮ ಜಿಡಿಪಿಗಳ ಶೇ.೫ ರಿಂದ ಶೇ.೨೦ ರಷ್ಟು ಹಣದ ಪ್ಯಾಕೇಜುಗಳನ್ನು ಘೋಷಿಸಿವೆ.
ನಾವು ಇದುವರೆಗೂ ಕಂಡರಿಯದ ಆರ್ಥಿಕ ಬಿಕ್ಕಟ್ಟಿನ ಸವಾಲನ್ನು ಎದುರಿತ್ತಿದ್ದೇವೆ. ಅದರಲ್ಲೂ ವಲಸೆ ಮತ್ತು ದಿನಗೂಲಿ ಕಾರ್ಮಿಕರು ಅಪಾರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಆದಾಯ ನಿಂತು ಹೋಗಿದೆ, ತಿನ್ನಲು ಆಹಾರವಿಲ್ಲದಂತಾಗಿದೆ ಮತ್ತು ನಿಲ್ಲಲು ಸೂರಿಲ್ಲದಂತಾಗಿದೆ. ಮುಂಬೈ, ಸೂರತ್, ಅಹ್ಮದಾಬಾದ್ ಮುಂತಾದ ಕಡೆಗಳಲ್ಲಿ ವಲಸೆ ಕಾರ್ಮಿಕರು ಲಾಕ್ಡೌನ್ ಇದ್ದರೂ ಅದನ್ನು ಕಡೆಗಣಿಸಿ ಬೀದಿಗೆ ಬಂದಿದ್ದಾರೆ. ಪ್ರತಿನಿತ್ಯ ದುಡಿದು ಜೀವನ ಸಾಗಿಸುತ್ತಿದ್ದ ದಿನಗೂಲಿಗಳು, ವಲಸೆ ಕಾರ್ಮಿಕರು ಮತ್ತು ಇತರೆ ಅನೌಪಚರಿಕ ವಲಯದ ಕಾರ್ಮಿಕರ ಈ ಆರ್ಥಿಕ ಬಿಕ್ಕಟ್ಟು ಸಾಮಾಜಿಕ ಬಿಕ್ಕಟ್ಟಾಗಿ ಪರಿವರ್ತನೆಯಾಗಬಹುದು. ನಗರಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ. ಇದರ ಜೊತೆಗೆ ನಗರಗಳ ವಲಸಿಗರಲ್ಲದ ಕಾರ್ಮಿಕರು, ಗ್ರಾಮೀಣ ಪ್ರದೇಶಗಳ ದುಡಿಮೆಗಾರರು ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ. ಇವರೆಲ್ಲರೂ ಜೀವ ಉಳಿಸಿಕೊಳ್ಳುವ ಕನಿಷ್ಟ ಮಟ್ಟದ ಜೀವನಗಳನ್ನು ನಡೆಸುತ್ತಿದ್ದಾರೆ. ಈ ಆರ್ಥಿಕ ದುರಂತದ ಪ್ರಮಾಣ ಎಂದೂ ಕಂಡರಿಯದ ವಿದ್ಯಮಾನವಾಗಿದೆ. ಮತ್ತು ಇದನ್ನು ತಡೆಗಟ್ಟದಿದ್ದರೆ ಇದು ಅತ್ಯಂತ ಸುಲಭವಾಗಿ ಒಂದು ದುರಂತವಾಗಿ ಪರಿಣಮಿಸಬಹುದು.
ಮೋದಿಯವರ ಎರಡನೇ ಉತ್ತೇಜನದ ಪ್ಯಾಕೇಜ್ ತಕ್ಷಣಕ್ಕೆ ಕನಿಷ್ಟವೆಂದರೂ ಎರಡು ಪ್ರಮುಖ ಅಂಶಗಳನ್ನು ಒಳಗೊಳ್ಳಬೇಕು. ಮೊದಲನೆಯದಾಗಿ, ಭಾರತ ಆಹಾರ ನಿಗಮದ ಗೋಡೌನ್ಗಳಲ್ಲಿ ೭.೭ ಕೋಟಿ ಆಹಾರದ ದಾಸ್ತಾನು ಶೇಖರಣೆಯಾಗಿದೆ. ಜೊತೆಗೆ ಈಗ ರಬಿ ಬೆಳೆಗಳಿಂದ ಲೆವಿ ಸಂಗ್ರಹವಾಗಲಿದೆ. ಭಾರತದ ಭವಿಷ್ಯದ ಆಹಾರಕ್ಕೆ ಬಫರ್ ದಾಸ್ತಾನು ೨.೧ ಕೋಟಿ ಟನ್ ಆಹಾರ ಇದ್ದರೆ ಸಾಕು. ಆದ್ದರಿಂದ ತಕ್ಷಣವೇ ನಮ್ಮ ಎಫ್.ಸಿ.ಐ. ಗೋಡೌನ್ಗಳಿಂದ ಸರ್ಕಾರ ತಕ್ಷಣವೇ ೫ ಕೋಟಿ ಟನ್ನುಗಳಷ್ಟು ಆಹಾರ ಪದಾರ್ಥಗಳನ್ನು ಬಿಡುಗಡೆ ಮಾಡಬೇಕು. ಇದನ್ನು ರಾಜ್ಯಗಳಿಗೆ ವಿತರಿಸಬೇಕು. ರಾಜ್ಯಗಳು ಜನರಿಗೆ ಉಚಿತವಾಗಿ ತಲಾ ೧೦ ಕೆಜಿಯಂತೆ ಹಂಚಬೇಕು ಮತ್ತು ಆ ಮೂಲಕ ಅಹಾರ ಭದ್ರತೆಯನ್ನು ಕಲ್ಪಿಸಬೇಕು. ವಲಸೆ ಕಾರ್ಮಿಕರಿಗೆ ಮತ್ತು ಇತರ ಆಹಾರವಿಲ್ಲದ ಅಸಹಾಯಕರಿಗೆ ಕಿಚನ್ಗಳನ್ನು ನಡೆಸಿ ಆಹಾರ ನೀಡಬೇಕು.
ಎರಡನೆಯದಾಗಿ, ಜನರ ಆದಾಯ ಗಳಿಕೆಯನ್ನು ತಡೆಯಬಾರದು. ಈಗ ತಕ್ಷಣಕ್ಕೆ ಕೆಲಸಗಳಿಲ್ಲದಿರುವುದರಿಂದ ಅವರುಗಳಿಗೆ ಹಣ ವರ್ಗಾವಣೆಯನ್ನು ಮಾಡಬೇಕು. ಇದನ್ನು ಹಲವು ರೀತಿಗಳಲ್ಲಿ ಮಾಡಬಹುದು. ರೇಷನ್ ಕಾರ್ಡುಗಳು ಇರುವವರಿಗೆ, ಕಾರ್ಡ್ ಇಲ್ಲದೆ ಆಹಾರಕ್ಕೆ ಆಶ್ರಯಿಸಿರುವವರಿಗೆ ಹಣವನ್ನು ವರ್ಗಾವಣೆ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಎಲ್ಲರಿಗೂ ತಿಂಗಳಿಗೆ ೨೦ ದಿನಗಳ ಕೆಲಸದಂತೆ ಮೂರು ತಿಂಗಳ ಹಣವನ್ನು ಸರ್ಕಾರವೇ ನೀಡಬೇಕು. ಇದಲ್ಲದೆ ಪೆನ್ಶನ್ಗಳು, ಇತರೆ ಸ್ಕೀಮ್ಗಳ ಮೂಲಕವೂ ನೀಡಲು ಸಾಧ್ಯವಿದೆ. ಈ ವ್ಯಾಪ್ತಿಗೆ ಬರದಿರುವವರಿಗೆ ಯಾವ ರೀತಿ ಕೊಡಬಹುದೆಂದು ರಾಜ್ಯ ಸರ್ಕಾರಗಳು ಹೇಳಬೇಕು. ಒಟ್ಟಾರೆಯಾಗಿ ಹಣ ವರ್ಗಾವಣೆ ಮಾಡಲೇಬೇಕು. ಜೀವಗಳನ್ನು ಉಳಿಸುವ ಹೆಸರಲ್ಲಿ ಜೀವಗಳನ್ನು ತೆಗೆಯಬಾರದು.
ಮಧ್ಯಮ ವರ್ಗಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಸಾಲದ ಕಂತುಗಳ ಮರುಪಾವತಿ ತಡೆಯನ್ನು ರಿಜರ್ವ್ ಬ್ಯಾಂಕ್ ಘೋಷಿಸಿದೆ. ಆದರೆ ನಿಜವಾದ ಅರ್ಥದಲ್ಲಿ ಅದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಸಾಲದ ಕಂತುಗಳನ್ನು ಈಗ ಕಟ್ಟುವ ಬದಲು ಮೂರು ತಿಂಗಳು ಬಿಟ್ಟು ಬಡ್ಡಿಯನ್ನೂ ಸೇರಿಸಿ ಕಟ್ಟಬೇಕು. ಇದರಿಂದ ಜನರಿಗೆ ಯಾವ ಪ್ರಯೋಜನವಿದೆ. ಸಾಲದ ಕಂತುಗಳ ಮರುಪಾವತಿ ತಡೆ ಜನರಿಗೆ ಪ್ರಯೋಜನವಾಗಬೇಕೆಂದರೆ ಬಡ್ಡಿಯನ್ನು ರದ್ದು ಮಾಡಿ ಸಾಲದ ಕಂತುಗಳನ್ನು ನಿಧಾನಕ್ಕೆ ಕಟ್ಟುವಂತೆ ಹೇಳುವುದು. ಬಡ್ಡಿಯ ಹಣವನ್ನು ಸರ್ಕಾರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ತುಂಬಿ ಕೊಡಬೇಕು. ಜಗತ್ತಿನಾದ್ಯಂತ ಈಗ ಆಗುತ್ತಿರುವುದು ಈ ರೀತಿಯಲ್ಲಿಯೇ. ಆದ್ದರಿಂದ ನಮ್ಮ ಕೇಂದ್ರ ಬ್ಯಾಂಕ್ ಈ ಬಗ್ಗೆ ಸ್ಪಷ್ಟವಾದ ಕ್ರಮಗಳಿಗೆ ಮುಂದಾಗಬೇಕು.
ಡೆನ್ಮಾರ್ಕ್ ದೇಶವು ಅಲ್ಲಿರುವ ಖಾಸಗಿ ಸಂಸ್ಥೆಗಳಲ್ಲಿರುವವರೂ ಸೇರಿದಂತೆ ಎಲ್ಲ ಕೆಲಸಗಾರರಿಗೂ ಶೇ.೭೦ ರಷ್ಟು ವೇತನಗಳನ್ನು ನೀಡುವುದಾಗಿ ಪ್ರಕಟಿಸಿದೆ, ಅದೇ ರೀತಿ ಇಂಗ್ಲೆಂಡ್ ಜನರ ಬಳಿ ಹಣದ ಹರಿವು ಇರಬೇಕೆಂಬ ಕಾರಣಕ್ಕೆ ಶೇ.೮೦ ರಷ್ಟು ಸಹಾಯವನ್ನು ಘೋಷಿಸಿದೆ. ಆದರೆ ಭಾರತ ಸರ್ಕಾರವು ಇಲ್ಲಿನ ಸಮಸ್ಯೆಯ ಗಾತ್ರ ಮತ್ತು ಅಗಾಧತೆಗೆ ಹೋಲಿಸಿದರೆ ಯಾವುದೇ ಸಹಾಯವನ್ನು ಮಾಡುತ್ತಿಲ್ಲ. ನಮ್ಮಲ್ಲಿ ಎಂಎಸ್ಎಂಇ’ಗಳಲ್ಲಿ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ಇರುವವರನ್ನೂ ಸೇರಿಸಿದರೆ ಶೇ.೧೫ ರಷ್ಟು ಮಾತ್ರ ರೆಗ್ಯುಲರ್ ಕೆಲಸಗಳಲ್ಲಿ ಇರುವುದು. ಎಂಎಸ್ಎಂಇ’ಗಳಲ್ಲಿರುವವರು ಅರಬರೆ ವೇತನಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ಉಳಿದ ವೇತನದ ಸಹಾಯವನ್ನು ನೀಡಬೇಕಾಗುತ್ತದೆ. ಇನ್ನು ನಮ್ಮ ಅರ್ಧಕ್ಕಿಂತ ಹೆಚ್ಚಿನ ಶ್ರಮಶಕ್ತಿಯು ಸ್ವಯಂ-ಉದ್ಯೋಗಿಗಳಾಗಿದ್ದಾರೆ. ಅವರೀಗ ಉದ್ಯೋಗವಿಲ್ಲ ಮತ್ತು ಆದಾಯವಿಲ್ಲ ಎಂದಾಗಿ ಅತಂತ್ರರಾಗಿದ್ದಾರೆ. ಇವರಿಗೆ ಸರ್ಕಾರ ಏನಾದರೂ ಮಾಡಲೇಬೇಕು. ಆದ್ದರಿಂದಲೇ ಈ ಸಂದರ್ಭಕ್ಕೆ ಹಣ ವರ್ಗಾವಣೆ ಒಂದೇ ಪರಿಹಾರ ಎಂದು ನಾನು ಹೇಳುವುದು.
ಭಾರತದ ಆರ್ಥಿಕತೆಯ ಕುಸಿತದ ಬಗ್ಗೆ ದೊಡ್ಡ ಸಂಖ್ಯೆಯ ಅರ್ಥಶಾಸ್ತ್ರಜ್ಞರು, ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು, ಐಎಂಎಫ್, ವಿಶ್ವಬ್ಯಾಂಕ್ಗಳು ಗಂಭೀರ ಚಿತ್ರಣವನ್ನು ನೀಡಿವೆ. ಬಾರ್ಕ್ಲೇ ಸಮೀಕ್ಷಾ ಸಂಸ್ಥೆಯ ಪ್ರಕಾರ ಭಾರತದ ಭವಿಷ್ಯದ ಜಿಡಿಪಿ ದರ ಶೇ.೦ ಇರಲಿದೆ. ಇದು ಆರ್ಥಿಕ ಬೆಳವಣಿಗೆಯ ಸ್ಥಗಿತತೆಯನ್ನು ಸೂಚಿಸುತ್ತದೆ. ಆದರೆ ನನ್ನ ಪ್ರಕಾರ ಜಿಡಿಪಿ ದರ ಸ್ಥಗಿತವಲ್ಲ, ನಕಾರಾತ್ಮಕವಾಗಿರಲಿದೆ. ನಾವು ಆರ್ಥಿಕ ಪ್ರಪಾತಕ್ಕೆ ಬೀಳಲಿದ್ದೇವೆ. ನಾವು ಎಷ್ಟು ಹಿಂದಿದ್ದೇವೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾದ ಅಂದಾಜೇ ಇಲ್ಲವಾಗಿದೆ. ಹೀಗಾಗಿ ಸರ್ಕಾರಕ್ಕೆ ಏನು ಮಾಡಬೇಕೆಂದು ಅಂದಾಜಿಲ್ಲದೆ ಸಮಸ್ಯೆಯನ್ನು ಎದುರಿಸಲು ಹೊರಟಿದೆ.
ಈಗಾಗಲೇ ಹೇಳಿದಂತೆ, ಜಗತ್ತಿನ ಎಲ್ಲಾ ದೇಶಗಳೂ ಕೋವಿಡ್-೧೯ ಬಿಕ್ಕಟ್ಟಿನಿಂದ ಹೊರಬರಲು ತಮ್ಮ ಜಿಡಿಪಿಯ ಶೇ.೫ ರಿಂದ ಶೇ.೨೦ ರಷ್ಟು ಖರ್ಚು ಮಾಡುತ್ತಿರುವಾಗ, ಕೇಂದ್ರ ಸರ್ಕಾರ ಮಾಡುತ್ತಿರುವ ಖರ್ಚು ಯಾವುದಕ್ಕೂ ಸಾಲದಂತಾಗಿದೆ. ಮತ್ತೊಂದು ಅಂಶವೆಂದರೆ, ಸದ್ಯದ ಬಿಕ್ಕಟ್ಟನ್ನು ಮುಂಚೂಣಿಯಲ್ಲಿದ್ದು ನಿಭಾಯಿಸುತ್ತಿರುವ ರಾಜ್ಯ ಸರ್ಕಾರಗಳ ಬಳಿ ಹಣವಿಲ್ಲ. ಅವರು ತಮ್ಮ ಖರ್ಚುಗಳನ್ನು ಕಡಿತ ಮಾಡುತ್ತಿದ್ದಾರೆ. ಇದರಿಂದ ಒಟ್ಟಾರೆ ಎಲ್ಲ ರೀತಿಯ ಬೇಡಿಕೆ ಕುಸಿತವಾಗಿದೆ, ಪರಿಣಾಮವಾಗಿ ಪೂರೈಕೆಯೂ ಕುಸಿದು ಹೋಗಿದೆ. ನಮ್ಮ ಆಹಾರದ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಲಾಗಿದೆ. ನಾವು ಆಹಾರದ ಕೊರತೆಯನ್ನು ಅನುಭವಿಸುವಂತಾಗಿದೆ. ಜೊತೆಗೆ ರೈತರು ತಮ್ಮ ವಸ್ತುಗಳನ್ನು ಮಾರಲಾಗದಂತಹ ಪರಿಸ್ಥಿತಿಯಿದೆ. ಜೊತೆಗೆ ನಾವು ಹಲವಾರು ವಸ್ತುಗಳ ಉತ್ಪಾದನೆ ಮತ್ತು ವಿತರಣೆಯನ್ನು ನಿಲ್ಲಿಸಿಬಿಟ್ಟಿದ್ದೇವೆ. ಇದು ಸ್ಪಷ್ಟವಾಗಿ ಕುಸಿಯುತ್ತಿರುವ ಆರ್ಥಿಕತೆಯ ಲಕ್ಷಣವಾಗಿದೆ. ಇದು ಎಷ್ಟು ಬೇಗ ಮತ್ತು ವೇಗವಾಗಿ ಪುನಶ್ಚೇತನಗೊಳ್ಳುತ್ತದೆ ಎಂಬುದು ಸರ್ಕಾರದ ಕ್ರಮಗಳ ಮೇಲೆ ನಿಂತಿದೆ. ಆದರೆ ಇದುವರೆಗಿನ ಸರ್ಕಾರದ ಕ್ರಮಗಳು ಅತ್ಯಂತ ಕೆಟ್ಟದಾಗಿವೆ.
ಈ ಸರ್ಕಾರ ಬಿಕ್ಕಟ್ಟಿನ ನಿರ್ವಹಣೆ ಕುರಿತು ನುರಿತ ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸರ್ಕಾರದ ಚಿಂತನೆಯೇ ಅರ್ಥವಾಗುತ್ತಿಲ್ಲ. ನಾನೊಂದು ಮಾತು ಹೇಳಬಹುದು, ನಾನು ಇಂತಹ ಭೀಕರ ಅಸಮರ್ಥ ಆರ್ಥಿಕ ನಿರ್ವಹಣೆಯನ್ನು ಇದುವರೆಗೂ ನೋಡಿಲ್ಲ. ಇದೊಂದು ಕ್ರ್ರಿಮಿನಲ್ ಅಸಮರ್ಥ ನಿರ್ವಹಣೆಯಾಗಿದೆ. ಏಕೆಂದರೆ ಇದರಿಂದ ಜನರ ಜೀವಗಳು ಬಲಿಯಾಗುತ್ತಿವೆ. ಆದ್ದರಿಂದ ಲಾಕ್ಡೌನ್ನ ಈ ಸಂದರ್ಭದಲ್ಲಿ, ತಕ್ಷಣದಲ್ಲೇ ಆಹಾರವನ್ನು ಮತ್ತು ಆದಾಯವನ್ನು ಒದಗಿಸಬೇಕು ಮತ್ತು ಪೂರೈಕೆಯನ್ನು ಖಾತ್ರಿಗೊಳಿಸಬೇಕು. ಪ್ರಧಾನ ಮಂತ್ರಿಗಳು ಆಗಾಗ ಬಂದು ನಾವು ಏನು ಮಾಡಬೇಕು ಎಂಬುದನ್ನು ಹೇಳುತ್ತಿದ್ದಾರೆ. ನಾವು ಅವರನ್ನು ಕೇಳಬಯಸುವುದೇನೆಂದರೆ, ಕಳೆದ ಮೂರು ವಾರಗಳಲ್ಲಿ ನೀವೇನು ಮಾಡಿದಿರಿ, ಏನನ್ನು ತಯಾರಿ ಮಾಡಿಕೊಂಡಿದ್ದಿರಿ, ಮುಂದಿನ ೨೦ ದಿನಗಳ ಕಾಲ ಏನು ಮಾಡುತ್ತೀರಿ? ಲಾಕ್ಡೌನ್ ಹಿಂಪಡೆಯುವಾಗ ಎಂತಹ ವ್ಯವಸ್ಥೆ ಇರುತ್ತದೆ? ಈ ಬಗ್ಗೆ ನಿಮ್ಮ ಯೋಜನೆಯೇನಿದೆ? ಆದರೆ ಇವುಗಳ ಬಗ್ಗೆ ಸರ್ಕಾರ ಏನನ್ನೂ ನಮಗೆ ಹೇಳುತ್ತಿಲ್ಲ.
ಹೀಗಾಗಿ ಇಂತಹ ಅಪಾರವಾದ ಬಿಕ್ಕಟ್ಟನ್ನು ನಾವೇ ಎದುರಿಸಬೇಕಾದ ಹೊಣೆಗಾರಿಕೆಯನ್ನು ಸರ್ಕಾರವೇ ಸೃಷ್ಟಿಸಿದ ಹಾಗೆ ಕಾಣುತ್ತದೆ. ನಾವು ಅನುಭವಿಸುತ್ತಿರುವ ಲಾಕ್ಡೌನ್ ಜಗತ್ತಿನಲ್ಲೇ ಅತ್ಯಂತ ಕರಾಳ ಮತ್ತು ದೀರ್ಘಾವಧಿಯದ್ದಾಗಿದೆ. ಸರ್ಕಾರವೇ ಇಂತಹ ಕ್ರೂರ ಲಾಕ್ಡೌನ್ನ್ನು ನಿರ್ಮಾಣ ಮಾಡುತ್ತದೆ ಮತ್ತು ಪರಿಹಾರದ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ, ಎಲ್ಲ ಹೊಣೆಗಾರಿಕೆಯನ್ನು ಜನರ ಮೇಲೆ ಮತ್ತು ರಾಜ್ಯ ಸರ್ಕಾರಗಳ ಮೇಲೆ ಹಾಕುತ್ತದೆ, ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವನ್ನು ತಡೆಹಿಡಿಯುತ್ತದೆ, ಕಳೆದ ವರ್ಷದ್ದೇ ಇನ್ನೂ ೪೦ ಸಾವಿರ ಕೋಟಿ ರೂಗಳಷ್ಟು ಬಾಕಿ ರಾಜ್ಯ ಸರ್ಕಾರಗಳಿಗೆ ಕೊಡಬೇಕಾಗಿದೆ.
ಹೀಗಾಗಿ ಇದನ್ನು ನಾನು ಕೇವಲ ಅಸಮರ್ಥ ನಿರ್ವಹಣೆ ಮಾತ್ರವಲ್ಲ ಕ್ರಿಮಿನಲ್ ನಿರ್ವಹಣೆ ಎಂದು ಕರೆಯುತ್ತೇನೆ. ಸರ್ಕಾರ ಈಗಲಾದರೂ ಭಾರತ ಮಾತ್ರವಲ್ಲ, ಜಗತ್ತಿನೆಲ್ಲೆಡೆಯೂ ಹೇಳುತ್ತಿರುವಂತೆ, ನುರಿತ ಆರ್ಥಿಕ ತಜ್ಞರ ಮಾತುಗಳನ್ನು ಕೇಳುತ್ತದೆ ಎಂದು ಭಾವಿಸುತ್ತೇನೆ.
ಕನ್ನಡಕ್ಕೆ: ಡಾ.ಕೆ.ಪ್ರಕಾಶ್