ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ತಡೆಯುವುದು ಹೇಗೆ?

ಪ್ರಕಾಶ ಕಾರಟ್

ಹೈದರಾಬಾದ್ ಅಪರಾಧದಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ ಮೇಲೆ ಇಂಥ ಭೀಕರ ಅಪರಾಧಗಳು ಜರುಗದಂತೆ, ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತತೆ ಖಾತ್ರಿಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಟಗಳನ್ನು  ಬಹು ಆಯಾಮಗಳಲ್ಲಿ ನಡೆಸಬೇಕಾಗಿದೆ. ಪುರುಷಪ್ರಾಧಾನ್ಯ ಮತ್ತು ಸ್ರೀದ್ವೇಷದ ವಿರುದ್ಧ, ಮಹಿಳೆಯರನ್ನು ಸರಕಾಗಿ ಬಿಂಬಿಸುವುದರ ವಿರುದ್ಧ ಹೋರಾಟಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಕ್ಕು ಮತ್ತು ಚಟುವಟಿಕೆಗಳನ್ನು ವಿಸ್ತರಿಸುವ ಸತತ ಹೋರಾಟಗಳನ್ನು ನಡೆಸಬೇಕಾಗಿದೆ.  ತಕ್ಷಣದ ಕಾರ್ಯಭಾರವಂತೂ ಮಹಿಳೆಯರ ವಿರುದ್ಧ ಎಲ್ಲಾ ಅಪರಾಧದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸುವುದು ಆಗಿದೆ.

ಹೈದರಾಬಾದಿನ ಹೊರವಲಯದಲ್ಲಿ ಪಶುವೈದ್ಯೆಯಾಗಿರುವ ೨೭ ವರ್ಷದ ಮಹಿಳೆಯ ಗ್ಯಾಂಗ್ ರೇಪ್ ಮತ್ತು ಕೊಲೆ, ನಮ್ಮ ದೇಶದಲ್ಲಿ ಮಹಿಳೆಯರು ಪ್ರತಿದಿನ ಎದುರಿಸುತ್ತಿರುವ ಹಿಂಸಾಚಾರವದ ಭೀಕರತೆಯನ್ನು ಮತ್ತೆ ಚಿತ್ರಿಸಿದೆ. ಈ ಅಪರಾಧದಲ್ಲಿ ಕಂಡು ಬಂದ ಮೃಗೀಯತೆ ಮತ್ತು ಕ್ರೌರ್ಯದ ವಿರುದ್ಧ ದೇಶದಾದ್ಯಂತ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ಕಟ್ಟೊಡೆದು ಬಂದಿದೆ.

ಹೈದರಾಬಾದ್ ಪ್ರಕರಣದ ನಂತರ ಮತ್ತು ಮೊದಲು sಗಳ ಪ್ರಕರಣಗಳ ವರದಿಗಳಿಂದ, ಇದೊಂದು ಪ್ರತ್ಯೇಕ ಪ್ರಕರಣವಲ್ಲ ಎಂಬುದು ಸ್ಪಷ್ಟವಾಗಿದೆ. ರಾಂಚಿಯಲ್ಲಿ ತನ್ನ ಸ್ನೇಹಿತೆಯೊಂದಿಗಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಲಾಗಿದೆ. ರಾಜಸ್ಥಾನದ ಟೊಂಕ್‌ನಲ್ಲಿ ಶಾಲೆಯಿಂದ ಮರಳುತ್ತಿದ್ದ ೬ ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿ, ಅವಳ ಶಾಲಾ ಯುನಿಫೋರ್ಮಿನ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಇವು ಹೈದರಾಬಾದ್ ಪ್ರಕರಣದ ಮೊದಲ ಘಟಿಸಿದರೆ, ಅದರ ಮರುದಿನ ಕೊಯಂಬತ್ತೂರಿನಲ್ಲಿ ೧೧ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಗ್ಯಾಂಗ್ ರೇಪ್‌ಗೆ ಗುರಿ ಮಾಡಲಾಗಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಇಂತಹ ಭೀಕರ ದಾಳಿಗಳು ವ್ಯಾಪಕವಾಗಿ ನಡೆಯುತ್ತಿವೆ.

ಹೈದರಾಬಾದ್ ಪ್ರಕರಣವು ಡಿಸಂಬರ್ ೨೦೧೨ರ ದೆಹಲಿಯ ದಂಗು ಬಡಿಸಿದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಿದೆ. ಏಳು ವರ್ಷಗಳ ನಂತರವೂ ಮಹಿಳೆಯರ ಸುರಕ್ಷಿತತೆಯ ಅಭಾವದ ಭಯಾನಕ ಸ್ಥಿತಿ ಕಿಂಚಿತ್ತೂ ಉತ್ತಮಗೊಂಡಂತ್ತಿಲ್ಲ.

ಹೈದರಾಬಾದ್ ಅಪರಾಧ ಎಬ್ಬಿಸಿರುವ ಆಕ್ರೋಶ ಮತ್ತು ಸಿಟ್ಟಿನಲ್ಲಿ, ಪಾರ್ಲಿಮೆಂಟಿನಲ್ಲಿ ಮತ್ತು ಹೊರಗೂ ಅತ್ಯಾಚಾರದ ಅಪರಾಧಿಗಳಿಗೆ ಇನ್ನೂ ಸಾರ್ವಜನಿಕ ನೇಣು, ನಿರ್ಬಿಜೀಕರಣ ಮುಂತಾದ ಇನ್ನೂ ಹೆಚ್ಚಿನ ಕಠಿಣ ಶಿಕ್ಷೆ ಕೊಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಇಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೀಯತೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ ಮೇಲೆ ಇಂಥ ಭೀಕರ ಅಪರಾಧಗಳು ಜರುಗದಂತೆ, ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತತೆ ಖಾತ್ರಿಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.

ಲೋಕಸಭೆಯಲ್ಲಿ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಮತ್ತು ರಾಜ್ಯಸಭೆಯ ಮುಖ್ಯಸ್ಥ, ಮಹಿಳೆಯರ ಮೇಲೆ ಜರುಗುವ ಅಪರಾಧಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಎಲ್ಲಾ ಸಲಹೆ-ಸೂಚನೆಗಳನ್ನು ಪರಿಶೀಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಸಮಾಜವನ್ನು ಬಾಧಿಸುತ್ತಿರುವ ಈ ಭೀಕರ ಸಮಸ್ಯೆಗೆ ಇದು ಪರಿಹಾರವೇ? ನಿರ್ಭಯಾ ಪ್ರಕರಣದ ನಂತರ, ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನು ಈಗಾಗಲೇ ವಿಧಿಸಲಾಗಿದೆ. ೧೨ ವರ್ಷದ ಕೆಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಬದಲಾವಣೆಗಳನ್ನು ಮೋದಿ ಸರಕಾರ ತಂದಿದೆ.  ಆದರೆ ಸಮಸ್ಯೆಯಿರುವುದು ಕಾನೂನಿನಲ್ಲಿ ಎಷ್ಟು ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂಬುದರಲ್ಲಿ ಅಲ್ಲ. ಬದಲಾಗಿ ನ್ಯಾಯ ವ್ಯವಸ್ಥೆ ಎಷ್ಟು ತ್ವರಿತವಾಗಿ ಅಪರಾಧದ ತನಿಖೆ, ವಿಚಾರಣೆ ನಡೆಸಿ ಶಿಕ್ಷೆಯ ತೀರ್ಪು ಕೊಡಬಲ್ಲುದು ಎಂಬುದರಲ್ಲಿದೆ. ರಾಷ್ಟ್ರೀಯ ಅಪರಾಧ ಸಂಶೋಧನೆ ಬ್ಯೂರೊದ ೨೦೧೭ರ ವರದಿಯ ಪ್ರಕಾರ, ಮಕ್ಕಳ ಮೇಲೆ ಅತ್ಯಾಚಾರ ಸೇರಿದಂತೆ ಅತ್ಯಾಚಾರದ ಪ್ರಕರಣಗಳು ತೀವ್ರ ವಿಳಂಬ ಎದುರಿಸುತ್ತಿವೆ. ಹಿಂದಿನ ವರ್ಷಗಳ ೧.೧೭ ಲಕ್ಷ ಪ್ರಕರಣಗಳು ಇತ್ಯರ್ಥವಾಗಿಲ್ಲ. ೨೦೧೭ರಲ್ಲಿ ತೀರ್ಪು ಬಂದ ೧೮,೦೯೯ ಪ್ರಕರಣಗಳಲ್ಲಿ ಕೇವಲ ೫,೮೨೨ ಅಂದರೆ ಶೇ. ೩೨.೨ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

ಅಪರಾಧಕ್ಕೆ ತ್ವರಿತ ಮತ್ತು ಖಾತ್ರಿ ಶಿಕ್ಷೆಯಾಗುತ್ತದೆ ಎಂಬುದು ಮಾತ್ರ ಅಪರಾಧವನ್ನು ತಡೆಯಬಲ್ಲುದು. ಕಾನೂನು ಪುಸ್ತಕಗಳಲ್ಲಿ ಕಠಿಣ ಶಿಕ್ಷೆ ಸೇರಿಸುತ್ತಾ ಹೋಗುವುದರಿಂದ ಅಪರಾಧಗಳನ್ನು ತಡೆಯಲಾಗುವುದಿಲ್ಲ.

ಅತ್ಯಾಚಾರ ಸಂಸ್ಕೃತಿ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳ ಬಗ್ಗೆ ನಿರ್ಭಯಗಳ ಮೂಲ, ಭಾರತೀಯ ಸಮಾಜದಲ್ಲಿ ಬೇರು ಬಿಟ್ಟಿರುವ ಪುರುಷಪ್ರಧಾನ ಮತ್ತು ಸ್ತ್ರೀದ್ವೇಷದ ಸಾಮಾಜಿಕ ಮೌಲ್ಯಗಳಲ್ಲಿದೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಅಡಿಯಾಳಾಗಿರಿಸುವುದ ಜತೆಗೆ, ನಮ್ಮ ಸಮೂಹ ಮಾಧ್ಯಮ ಮತ್ತು ಮನೋರಂಜನಾ ಉದ್ಯಮಗಳಲ್ಲಿ ಮಹಿಳೆಯರನ್ನು ಕಾಮದ ಗೊಂಬೆಯಾಗಿ ಚಿತ್ರಿಸುವ ಮಾರುಕಟ್ಟೆ ಮತ್ತು ಉಪಭೋಗ ಮೌಲ್ಯಗಳು ಇದನ್ನು ಬೆಳೆಸುತ್ತಿವೆ. ಮಹಿಳೆಯರ ಸಮಾನತೆ ಮತ್ತು ಸ್ವಾಯತ್ತತೆಯನ್ನು ಮನ್ನಿಸಲು ನಿರಾಕರಣೆಯು, ನಮ್ಮ ಸಾಮಾಜಿಕ, ಧಾರ್ಮಿಕ ಮತ್ತು ಕೌಟುಂಬಿಕ ಕಟ್ಟು-ಕಟ್ಟಳೆಗಳಲ್ಲಿ ಆಳವಾಗಿ ಹುದುಗಿದೆ.

ಮಹಿಳೆಯರ ವಿರುದ್ಧ ಅಪರಾಧಗಳು ಜಗತ್ತಿನಾದ್ಯಂತ  ಅದರಲ್ಲೂ ವಿಶೇಷವಾಗಿ ಭಾರತದಂತಹ ಪರಿಸ್ಥಿತಿ ಇರುವ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ – ಹೆಚ್ಚುತ್ತಿವೆ. ಪುರುಷಪ್ರಾಧಾನ್ಯ ಮತ್ತು ಪುರುಷಯಜಮಾನಿಕೆಗಳು ಅತಿಯಾಗಿದ್ದು, ಜತೆಗೆ ಜನಾಂಗೀಯ ಮತ್ತು ಜಾತಿ ಶ್ರೇಣಿಗಳು ಈ ಮೂರೂ ಪ್ರಮುಖ ವಿಕಾಸಶೀಲ ದೇಶಗಳಲ್ಲಿ ಸೇರಿಕೊಂಡಿವೆ. ಲೂಟಿಕೋರ ಬಂಡವಾಳಶಾಹಿಯಿಂದಾಗಿ ಆರ್ಥಿಕವಾಗಿಯೂ ಇವು ಅತ್ಯಂತ ಅಸಮಾನ ಸಮಾಜಗಳು. ದಕ್ಷಿಣ ಆಫ್ರಿಕಾದಲ್ಲಿ ೩೦೦೦ ಮಹಿಳೆಯರು ಕೊಲೆಯಾಗಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಮೇಲೆ ಕೊಲೆಯ ಮೊದಲು ಭೀಕರ ದಾಳಿ ಅಥವಾ ಅತ್ಯಾಚಾರ ನಡೆದಿದೆ. ಇದೇ ಸೆಪ್ಟೆಂಬರಿನಲ್ಲಿ ಕೇಪ್ ಟೌನಿನ ೧೯ ವರ್ಷದ ವಿ.ವಿ. ವಿದ್ಯಾರ್ಥಿನಿಯ ರೇಪ್ ಮತ್ತು ಕೊಲೆಯ ವಿರುದ್ಧ, ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಮಹಿಳೆಯ ವಿರುದ್ಧ ಅಪರಾಧಗಳು ಒಂದು ರಾಷ್ಟ್ರೀಯ ಬಿಕ್ಕಟ್ಟು ಆಗಿದೆ ಎಂದು ಅಧ್ಯಕ್ಷ ರಾಮಫೋಸ ಒಪ್ಪಿಕೊಳ್ಳಬೇಕಾಗಿ ಬಂದಿತ್ತು.

ಬ್ರೆಜಿಲಿನಲ್ಲಿ ಮಹಿಳೆಯರ ವಿರುದ್ಧ ಅಪರಾಧ ಎಷ್ಟು ವ್ಯಾಪಕವಾಗಿದೆಯೆಂದರೆ, ಸಾರ್ವಜನಿಕ ಸುರಕ್ಷಿತತೆಗಾಗಿ ಬ್ರೆಜಿಲ್ ವೇದಿಕೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ಗಂಟೆಯಲ್ಲಿ ೧೩ ವರ್ಷದ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ರೇಪ್ ಗೆ ಒಳಗಾಗುತ್ತಾರೆ ಎಂಬ ಭೀಕರ ವಾಸ್ತವವನ್ನು ಹೊರಗೆಡಹಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾಗಳಂತೆ ಬ್ರೆಜಿಲ್ ಸಹ ಅತ್ಯಂತ ಅಸಮಾನ ಸಮಾಜವಾಗಿದೆ. ಅಲ್ಲಿ ಪುರುಷಪ್ರಾಧಾನ್ಯ ಮತ್ತು ಪುರುಷ-ಹೆಚ್ಚುಗಾರಿಕೆಯ ಭಾವನೆ ಅತ್ಯಂತ ತೀವ್ರ ರೂಪದಲ್ಲಿದೆ. ಮಹಿಳೆಯರ ಬಗ್ಗೆ ಹಿಂದುತ್ವದ ಪುರುಷಪ್ರಾಧಾನ್ಯ ಮತ್ತು ಗೋಸುಂಬೆತನದಂತೆ, ಅಧ್ಯಕ್ಷ ಬೊಲ್ಸೆನಾರೊ ಅವರ ಬಲಪಂಥೀಯ ಸರಕಾರ ಮಹಿಳೆಯರ ಹಕ್ಕುಗಳ ಬಗ್ಗೆ ಅತ್ಯಂತ ಪ್ರತಿಗಾಮಿ ಧೋರಣೆ ಹೊಂದಿದೆ. ಮಹಿಳೆಯರ ಮೇಲೆ ದಾಳಿಗಳನ್ನು ವಿಶ್ಲೇಷಿಸುವಾಗ ಅವುಗಳನ್ನು ಇನ್ನಷ್ಟು ಉದ್ರೇಕಿಸುವ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಗಮನಿಸಬೇಕು.

ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಸಮಾನರಾಗಿ ಕಾಣುವಂತೆ ಮತ್ತು ಅವರ ಸ್ವಾಯತ್ತತೆಯನ್ನು ಗೌರವಿಸುವಂತೆ, ಶಿಕ್ಷಣ ಸಂಸ್ಥೆಗಳಲ್ಲಿ ಹುಡುಗರು ಮತ್ತು ಗಂಡಸರಿಗೆ ಶಿಕ್ಷಣ ನೀಡಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದರಿಂದ ಮಾತ್ರವೇ ಮಹಿಳೆಯರ ವಿರುದ್ಧ ಹಿಂಸಾಚಾರವನ್ನು ಪೋಷಿಸುವ ಪ್ರತಿಗಾಮಿ ಮೌಲ್ಯಗಳನ್ನು ಬದಲಾಯಿಸಲು ಸಾಧ್ಯ. ಆಗ ಮಾತ್ರ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಲಿಂಗ ಸಮಾನತೆ ಖಾತ್ರಿಗೊಳಿಸಬಹುದು.

ನಿರ್ಭಯಾ ಪ್ರಕರಣದ ನಂತರ ನೇಮಿಸಲಾದ ನ್ಯಾಯಮೂರ್ತಿ ವರ್ಮಾ ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿ ಮಾಡುವುದರಲ್ಲಿ ವಿಫಲವಾಗಿರುವುದು ಸಹ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಅಸುರಕ್ಷಿತತೆಗೆ ಕಾರಣವಾಗಿದೆ. ಸುರಕ್ಷಿತ ಸಾರ್ವಜನಿಕ ಸಾಗಾಣಿಕೆ, ಬೀದಿ ದೀಪಗಳ ನಿರ್ವಹಣೆ, ಅಸುರಕ್ಷಿತ ಸ್ಥಳಗಳನ್ನು ಗುರುತಿಸಿ ಹೆಚ್ಚಿನ ಪೋಲಿಸ್ ಗಸ್ತು ಒದಗಿಸುವುದು ಮುಂತಾದ ಕ್ರಮಗಳನ್ನು ಆ ಸಮಿತಿ ಶಿಫಾರಸು ಮಾಡಿತ್ತು.

ಹಲವು ಸರಕಾರಗಳ ಸಚಿವರು, ಚುನಾಯಿತ ಪ್ರತಿನಿಧಿಗಳು ಮಹಿಳೆಯರನ್ನು ಕೀಳಾಗಿ ಕಾಣುವ ಅಥವಾ ಮಹಿಳೆಯರ ವಿರುದ್ಧ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಹೇಳಿಕೆಗಳನ್ನು ಪದೇ ಪದೇ ಮಾಡುತ್ತಿದ್ದಾರೆ. ಮಹಿಳೆಯರ ಮೇಲೆ ಹಲವು ಹಂತಗಳಲ್ಲಿ ಭೀಕರ ದಾಳಿಗಳನ್ನು ನೆಪವಾಗಿಟ್ಟುಕೊಂಡು, ಸಾಂಪ್ರದಾಯಿಕ ಶಕ್ತಿಗಳು ಮಹಿಳೆಯರನ್ನು ಸಾರ್ವಜನಿಕ ಸ್ಥಳಗಳಿಗೆ ಹೊಗದಂತೆ ನಿರ್ಬಂಧಗಳನ್ನು ಹೇರಬೇಕು ಮತ್ತು ಮನೆಗೆ ಸೀಮಿತಗೊಳಿಸಬೇಕು ಎಂದು ವಾದಿಸುತ್ತಿದ್ದಾರೆ. ಈ ವಲಯಗಳಲ್ಲಿ ಅತ್ಯಾಚಾರ ಸಂತ್ರಸ್ತೆಯ ಉಡುಪು ಅಥವಾ ಜೀವನ ವಿಧಾನಗಳೇ ಅವಳ ವಿರುದ್ಧ ಅಪರಾಧಕ್ಕೆ ಕಾರಣ ಎಂದು ಅಪರಾಧಿ ಸ್ಥಾನದಲ್ಲಿರಿಸಲಾಗುತ್ತಿದೆ.

ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಟಗಳನ್ನು ಈ ರೀತಿ ಬಹು ಆಯಾಮಗಳಲ್ಲಿ ನಡೆಸಬೇಕಾಗಿದೆ. ಪುರುಷಪ್ರಾಧಾನ್ಯ ಮತ್ತು ಸ್ರೀದ್ವೇಷದ ವಿರುದ್ಧ, ಮಹಿಳೆಯರನ್ನು ಸರಕಾಗಿ ಬಿಂಬಿಸುವುದರ ವಿರುದ್ಧ ಹೋರಾಟಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಕ್ಕು ಮತ್ತು ಚಟುವಟಿಕೆಗಳನ್ನು ವಿಸ್ತರಿಸುವ ಸತತ ಹೋರಾಟಗಳನ್ನು ನಡೆಸಬೇಕಾಗಿದೆ.  ತಕ್ಷಣದ ಕಾರ್ಯಭಾರವಂತೂ ಮಹಿಳೆಯರ ವಿರುದ್ಧ ಎಲ್ಲಾ ಅಪರಾಧದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸುವುದು ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷಿತತೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರಗಳ ಮೇಲೆ ಒತ್ತಡ ಹೇರುವುದು ಸಹ ತಕ್ಷಣದ ಆದ್ಯತೆಯಾಗಬೇಕು.

Donate Janashakthi Media

Leave a Reply

Your email address will not be published. Required fields are marked *