ಮಂಗಳೂರು: ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯವೆಂದರೆ ಮೀಸಲಾತಿ ಮತ್ತು ವಂಚಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದಷ್ಟೇ ಅಲ್ಲ. ಶಿಕ್ಷಣ ನೀತಿ, ವ್ಯವಸ್ಥೆಯ ರಚನೆ, ಅನುಷ್ಠಾನ, ಪಠ್ಯಕ್ರಮ ಹಾಗೂ ಬೋಧನಾ ವಿಧಾನಗಳಲ್ಲೂ ಸಾಮಾಜಿಕ ನ್ಯಾಯ ಪ್ರತಿಫಲಿಸಬೇಕು ಎಂದು ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಹೇಳಿದರು. ಶಿಕ್ಷಣ
‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ವಿಷಯದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯ ಸಾಧಿಸುವ ಪರಿಕಲ್ಪನೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಮಹತ್ವದ ಬಗ್ಗೆ ಮಾತನಾಡುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಸಮಾಜದಲ್ಲಿರುವ ವಿರೋಧಾಭಾಸ ಎಂದು ಅಭಿಪ್ರಾಯಪಟ್ಟರು.
ಜ್ಯೋತಿಬಾ ಫುಲೆ ಅವರು 1881ರಲ್ಲಿ ಹಂಟರ್ ಶಿಕ್ಷಣ ಆಯೋಗಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಶೂದ್ರ ಮತ್ತು ಅತಿಶೂದ್ರ ಸಮುದಾಯಗಳಿಗೆ ಉಚಿತ, ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಂತೆ ಒತ್ತಾಯಿಸಿದ್ದರು. ಶಿಕ್ಷಣ ಕೆಲವೇ ಸಮುದಾಯಗಳ ಸ್ವತ್ತಾಗದೆ, ಶೋಷಿತ ಸಮುದಾಯಗಳಿಗೂ ತಲುಪಬೇಕು ಎಂಬುದು ಅವರ ಆಶಯವಾಗಿತ್ತು. ಸಾವಿತ್ರಿಬಾಯಿ ಫುಲೆ, ಅಯ್ಯಂಕಾಳಿ, ಅಯೋಧ್ಯಾದಾಸ್ ಮತ್ತು ಅಂಬೇಡ್ಕರ್ ಅವರ ಹೋರಾಟಗಳು ಸಾಮಾಜಿಕ ವಿಮೋಚನೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು.
ಖಾಸಗೀಕರಣದಿಂದ ಜಾತಿ ಅಸಮಾನತೆ ಹೆಚ್ಚಳ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಬಂಡವಾಳವೇ ಶೈಕ್ಷಣಿಕ ಬಂಡವಾಳವಾಗಿ ಪರಿವರ್ತನೆಯಾಗುತ್ತಿದೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ಸ್ಥಾಪನೆಯಾಗಿರುವ ಶಿಕ್ಷಣ ಸಂಸ್ಥೆಗಳು ಸಮಾನತೆ ಮತ್ತು ಸಹಬಾಳ್ವೆ ಬೆಳೆಸುವ ಬದಲು ಸಾಮಾಜಿಕ ಪ್ರತ್ಯೇಕತೆಯನ್ನು ಹೆಚ್ಚಿಸುವ ಅಪಾಯವಿದೆ ಎಂದು ಎಚ್ಚರಿಸಿದರು.
ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿ, ಧರ್ಮ ಮತ್ತು ವರ್ಗಗಳ ಮಕ್ಕಳು ಒಟ್ಟಿಗೆ ಕಲಿಯುವ ಅವಕಾಶವಿತ್ತು. ಖಾಸಗೀಕರಣದಿಂದ ಇಂತಹ ವಾತಾವರಣ ದುರ್ಬಲವಾಗುತ್ತಿದೆ. ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ ಸಾಧಿಸಲು ನೀತಿ, ವ್ಯವಸ್ಥೆಯ ರಚನೆ ಮತ್ತು ಅನುಷ್ಠಾನ ಈ ಮೂರು ಹಂತಗಳಲ್ಲೂ ಸಮಾನತೆಯ ಆಶಯ ಜಾರಿಯಾಗಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣವನ್ನು ಬ್ರಾಹ್ಮಣೀಕರಣ, ಕೋಮುವಾದೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೊರೇಟೀಕರಣದತ್ತ ಕೊಂಡೊಯ್ಯುವ ಅಪಾಯವಿದೆ ಎಂದು ಟೀಕಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈಜ್ಞಾನಿಕ ಮನೋಧರ್ಮಕ್ಕೆ ಆದ್ಯತೆ ನೀಡಬೇಕು. ಅವೈಜ್ಞಾನಿಕ ಆಚರಣೆಗಳಿಗೆ ಅವಕಾಶ ಕಲ್ಪಿಸುವ ಬೆಳವಣಿಗೆ ಆತಂಕಕಾರಿ ಎಂದರು.
ಬಿಸಿಯೂಟ ಯೋಜನೆಯಲ್ಲೂ ಜಾತಿ ತಾರತಮ್ಯದ ಆರೋಪ
ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಯೂ ಕೆಲವು ಕಡೆ ಜಾತಿ ತಾರತಮ್ಯ ನಡೆಯುತ್ತಿದೆ. ದಲಿತ ಮಹಿಳೆಯರು ತಯಾರಿಸುವ ಆಹಾರವನ್ನು ಕೆಲವು ಮಕ್ಕಳು ನಿರಾಕರಿಸುವ ಘಟನೆಗಳು ನಡೆಯುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಅಡುಗೆ ಕೆಲಸದಿಂದ ಮಹಿಳೆಯರನ್ನೇ ದೂರವಿಡುವುದು ತಾರತಮ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ದಲಿತ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿ ಹಲವು ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ. ಹಣದುಬ್ಬರ ಮತ್ತು ಜೀವನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿವೇತನದ ಆದಾಯ ಮಿತಿ ಪರಿಷ್ಕರಿಸಬೇಕು. ಇಲ್ಲದಿದ್ದರೆ ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳ ದುರ್ಬಲ ಸ್ಥಿತಿ ಆತಂಕಕಾರಿ
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನಡೆಸಿದ ಸಮೀಕ್ಷೆಯ ಪ್ರಕಾರ, 18 ಜಿಲ್ಲೆಗಳ 222 ಸರ್ಕಾರಿ ಶಾಲೆಗಳಲ್ಲಿ ಶೇ.58ರಷ್ಟು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಶೇ.51ರಷ್ಟು ಮಕ್ಕಳು ಹೆಣ್ಣುಮಕ್ಕಳಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸುವುದರಿಂದ ದಲಿತ, ಆದಿವಾಸಿ ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಅವಕಾಶಗಳಿಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದರು.
ಸಮೀಕ್ಷೆಯಲ್ಲಿ ಶೇ.35ರಷ್ಟು ಶಿಕ್ಷಕರು ಅತಿಥಿ ಶಿಕ್ಷಕರಾಗಿದ್ದು, ಶೇ.38ರಷ್ಟು ಶಾಲೆಗಳಲ್ಲಿ ಮುಖ್ಯಶಿಕ್ಷಕರಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸದೆ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ ಎಂದರು.
ಶಿಕ್ಷಣದ ಭಾಷಾ ನೀತಿಯಲ್ಲೂ ಅಸಮಾನತೆ ಇದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬಡ ಮತ್ತು ವಂಚಿತ ಸಮುದಾಯಗಳ ಮಕ್ಕಳು ಕಲಿಯುತ್ತಿದ್ದರೆ, ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಕಾಶ ಹೆಚ್ಚಾಗಿದೆ. ಕನ್ನಡ ಉಳಿಸುವ ಹೊಣೆಗಾರಿಕೆಯನ್ನು ಕೇವಲ ಬಡ ಮಕ್ಕಳ ಮೇಲೆ ಹೊರಿಸುವುದು ಸರಿಯಲ್ಲ. ಭಾಷೆ ಮತ್ತು ಶಿಕ್ಷಣದ ಅವಕಾಶಗಳ ನಡುವಿನ ಅಂತರ ಸಾಮಾಜಿಕ ವಿಭಜನೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
ಪಠ್ಯಕ್ರಮದಲ್ಲೂ ಸಾಮಾಜಿಕ ನ್ಯಾಯ ಅಗತ್ಯ
ಶಿಕ್ಷಕರು ಕೇವಲ ಪಾಠ ಮಾಡುವವರಾಗಿರದೆ ಸಾಮಾಜಿಕ ಪರಿವರ್ತನೆಯ ಬೌದ್ಧಿಕ ಶಕ್ತಿಗಳಾಗಬೇಕು. ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ನೀಡುವಾಗ ಅವರ ಭಾಷೆ, ಸಂಸ್ಕೃತಿ ಮತ್ತು ಬದುಕಿನ ಹಿನ್ನೆಲೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಪಾದ್ ಭಟ್ ಹೇಳಿದರು.
ಪಠ್ಯಪುಸ್ತಕ, ಸಾಹಿತ್ಯ, ಬೋಧನಾ ವಿಧಾನ ಮತ್ತು ಕಲಿಕಾ ಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರಬೇಕು. ಸಾಹಿತ್ಯವನ್ನು ಅದರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಯೊಂದಿಗೆ ಪರಿಚಯಿಸಬೇಕು. ಸ್ಥಳೀಯ ಬದುಕಿನ ಅನುಭವಗಳನ್ನು ಜಾಗತಿಕ ಜ್ಞಾನದೊಂದಿಗೆ ಬೆಸೆಯುವ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಪ್ರತಿಪಾದಿಸಿದರು.
ಶಿಕ್ಷಣದಲ್ಲಿ ಸಮಾನತೆ ಮತ್ತು ಸಮತೆಯನ್ನು ಒಂದೇ ರೀತಿಯಲ್ಲಿ ನೋಡಬಾರದು. ಎಲ್ಲರಿಗೂ ಒಂದೇ ಅವಕಾಶ ನೀಡುವುದಷ್ಟೇ ಸಾಕಾಗುವುದಿಲ್ಲ. ಐತಿಹಾಸಿಕವಾಗಿ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಗತ್ಯಗಳನ್ನು ಗುರುತಿಸಿ ಹೆಚ್ಚುವರಿ ಅವಕಾಶಗಳನ್ನು ಕಲ್ಪಿಸಬೇಕು. ಒಳಮೀಸಲಾತಿಯಂತಹ ಕ್ರಮಗಳು ಈ ನಿಟ್ಟಿನಲ್ಲಿ ಮಹತ್ವ ಪಡೆದಿವೆ ಎಂದರು. ಶಿಕ್ಷಣ
ಇದನ್ನೂ ಓದಿ: ಎಸ್ಎಫ್ಐ ರಾಜ್ಯ ಸಮ್ಮೇಳನ | ಸಾರ್ವಜನಿಕ ಶಿಕ್ಷಣ ಬಲಪಡಿಸಲು, ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹ
ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ ಸಾಧಿಸಲು ಮೀಸಲಾತಿ, ಪ್ರಾತಿನಿಧ್ಯ ಮತ್ತು ವಿದ್ಯಾರ್ಥಿವೇತನಗಳ ಜೊತೆಗೆ ಶಿಕ್ಷಣ ನೀತಿ, ಸಂಸ್ಥೆಗಳ ರಚನೆ, ಪಠ್ಯಕ್ರಮ, ಬೋಧನಾ ವಿಧಾನ ಹಾಗೂ ಭಾಷಾ ನೀತಿಗಳಲ್ಲೂ ಸಮಾನತೆಯ ಆಶಯ ಜಾರಿಯಾಗಬೇಕು. ಸಂವಿಧಾನ ನೀಡಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜಕೀಯ ಮತ್ತು ಶೈಕ್ಷಣಿಕ ಬದ್ಧತೆ ಅಗತ್ಯ ಎಂದು ಶ್ರೀಪಾದ್ ಭಟ್ ಪ್ರತಿಪಾದಿಸಿದರು.
ಇದನ್ನೂ ನೋಡಿ: ನಮ್ಮ ಶಾಲೆ ಮಾರಾಟಕ್ಕಿಲ್ಲ! ದತ್ತು ಯೋಜನೆ ರದ್ದಾಗಲಿ | ವಿದ್ಯಾರ್ಥಿ, ಪೋಷಕರ ಬೃಹತ್ ಪ್ರತಿಭಟನೆ Janashakthi Media
