ಮಂಗಳೂರಿನಲ್ಲಿ ನಾಳೆಯಿಂದ ‘ಜನನುಡಿ–2026’

Please follow and like us:
ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ನಾಳೆಯಿಂದ (ನವೆಂಬರ್ 28) ಎರಡು ದಿನಗಳ ಕಾಲ ರಾಜ್ಯಮಟ್ಟದ ಪ್ರತಿಷ್ಠಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ‘ಜನನುಡಿ–2026’ ನಡೆಯಲಿದೆ.

ಅಭಿಮತ ಮಂಗಳೂರು ಮತ್ತು ಭಗತ್ ಸಿಂಗ್ ಮೆಮೊರಿಯಲ್ ಕಲ್ಚರಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಸಮ್ಮೇಳನವು ನವೆಂಬರ್ 28 ಮತ್ತು 29ರಂದು (ಶನಿವಾರ ಮತ್ತು ಭಾನುವಾರ) ಮಂಗಳೂರಿನ ಬಲ್ಮಠದ ಕೆಟಿಸಿ (KTC) ಕ್ಯಾಂಪಸ್‌ನಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಜರುಗಲಿದೆ.

ನಾಳೆ ಬೆಳಗ್ಗೆ ಖ್ಯಾತ ಚಿಂತಕ ಮತ್ತು ಸಾಹಿತಿ ರಹಮತ್ ತರೀಕೆರೆ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ ಜನನುಡಿಯು ‘ಯುವಜನ ರಾಜಕಾರಣ: ದಿಕ್ಕು–ಭವಿಷ್ಯ–ಸವಾಲು’ ಹಾಗೂ ‘ನುಡಿಯು ಸಿರಿಯಲ್ಲ ಬದುಕು’ ಎಂಬ ಪ್ರಮುಖ ಆಶಯಗಳೊಂದಿಗೆ ನಡೆಯುತ್ತಿದೆ.

ಗೋಷ್ಠಿಗಳು: ಎರಡು ದಿನಗಳ ಕಾಲ ಒಟ್ಟು ಎಂಟು ವಿಚಾರಗೋಷ್ಠಿಗಳು ನಡೆಯಲಿದ್ದು, ನಾಡಿನ ಪ್ರಮುಖ ಚಿಂತಕರು, ಲೇಖಕರು ಹಾಗೂ ಯುವ ಹೋರಾಟಗಾರರು ಪ್ರಸ್ತುತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಿದ್ದಾರೆ.

ಸಾರ್ವಜನಿಕರಿಗೆ ಮುಕ್ತ ಪ್ರವೇಶ: ಕೋವಿಡ್ ಕಾರಣದಿಂದ ಕಳೆದ ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಸಮಾಜಮುಖಿ ಸಾಂಸ್ಕೃತಿಕ ಹಬ್ಬಕ್ಕೆ ಮತ್ತೆ ಚಾಲನೆ ಸಿಕ್ಕಿದ್ದು, ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶವಿದೆ. ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಎರಡು ದಿನಗಳ ಪ್ರಮುಖ ಕಾರ್ಯಕ್ರಮಗಳ ವಿವರ ಹೀಗಿದೆ:

ಮೊದಲ ದಿನ: ನವೆಂಬರ್ 28 (ಶನಿವಾರ)

• ಪುಸ್ತಕ ಮೇಳ ಉದ್ಘಾಟನೆ (ಬೆಳಿಗ್ಗೆ 9:00): ಚಿಂತಕ ಬಸವರಾಜ ಸೂಳಿಭಾವಿ ಮತ್ತು ಪತ್ರಕರ್ತ ಅನಿಲ್ ಹೊಸಮನಿ ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದು, ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನಾ ಗೋಷ್ಠಿ (ಬೆಳಿಗ್ಗೆ 10:00): ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ರಹಮತ್ ತರೀಕೆರೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ವಿಶೇಷ ಭಾಷಣ ಮಾಡಲಿದ್ದಾರೆ.

• ವಿಚಾರಗೋಷ್ಠಿಗಳು ಮತ್ತು ಸಂವಾದ: ಈ ಬಾರಿಯ ಪ್ರಧಾನ ಆಶಯವಾದ ‘ಯುವಜನ ರಾಜಕಾರಣ: ದಿಕ್ಕು–ಭವಿಷ್ಯ–ಸವಾಲು’ ಕುರಿತಂತೆ ವಿದ್ಯಾರ್ಥಿ ಚಳವಳಿ, ಯುವಜನರ ರಾಜಕೀಯ ಪ್ರಜ್ಞೆ ಮತ್ತು ಸಮಕಾಲೀನ ಸಾಮಾಜಿಕ ಸವಾಲುಗಳ ಕುರಿತು ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎರಡನೇ ದಿನ: ನವೆಂಬರ್ 29 (ಭಾನುವಾರ)

• ಕವಿಗೋಷ್ಠಿ (ಬೆಳಿಗ್ಗೆ 9:00): ವಿಲ್ಸನ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ‘ಪ್ರತಿರೋಧದ ಕವಿತೆ’ ಎಂಬ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಲಿದೆ.

• ಗೋಷ್ಠಿ – ರಾಷ್ಟ್ರೀಯತೆ, ಅಸ್ಮಿತೆ ಮತ್ತು ಡಿಜಿಟಲ್ ರಾಜಕಾರಣ (ಬೆಳಿಗ್ಗೆ 10:30): ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಗೋಷ್ಠಿಯಲ್ಲಿ ಪತ್ರಕರ್ತ ಜಿ. ವಿಷ್ಣು (ಉಡುಪಿ) ಮತ್ತು ವಸಂತ ಕಲಾಲ್ ವಿಷಯ ಮಂಡಿಸಲಿದ್ದಾರೆ. ಶಾಲಿಕಾ ಎಕ್ಕಾರು ‘ಜೆನ್ ಝಿ’ (Gen Z) ಪ್ರತಿಕ್ರಿಯೆ ನೀಡಲಿದ್ದಾರೆ.

• ಗೋಷ್ಠಿ – ಕೋಮುವಾದ ಮತ್ತು ಕ್ರೋನಿ ಕ್ಯಾಪಿಟಲಿಸಂ ಮೈತ್ರಿ: ಸವಾಲು (ಮಧ್ಯಾಹ್ನ 12:00): ದೇಶದ ಪ್ರಸ್ತುತ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ಕುರಿತು ತಜ್ಞರು ವಿಚಾರ ಮಂಡಿಸಲಿದ್ದಾರೆ.

ಸಂಜೆಯ ಗೋಷ್ಠಿಯಲ್ಲಿ ‘ಪ್ರಜಾಪ್ರಭುತ್ವದ ಅಳಿವು ಉಳಿವು–ಸಿದ್ಧಾಂತಗಳ ಪಾತ್ರ’ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಿಪಿಐಎಂ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಹಾಗೂ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ವಿಚಾರ ಮಂಡಿಸಲಿದ್ದಾರೆ. ಹಿರಿಯ ಚಿಂತಕ ಡಾ. ಬಿ.ಆರ್ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಲೇಖಕಿ ಕೆ. ನೀಲಾ ಹಾಗೂ ಡಾ. ಎಚ್.ಎಸ್. ಅನುಪಮ ಸಮಾರೋಪದ ಮಾತುಗಳನ್ನಾಡಲಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *