ಬೆಂಗಳೂರು : ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಾಗಿದ್ದು, ಅಂತಿಮ ಪಟ್ಟಿಯೇ ತರ್ಕಹೀನವಾಗಿದೆ ಎಂದು ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ ಆರೋಪಿಸಿದೆ. ಚುನಾವಣಾ ಆಯೋಗ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ಪ್ರಕ್ರಿಯೆ ಆರಂಭಿಸಿದ್ದು, ಇದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಕರ್ನಾಟಕದ
ಎಸ್ಐಆರ್ ವಿರೋಧಿ ಹೋರಾಟದ ಮುಂದಿನ ಹಂತವಾಗಿ ನವೆಂಬರ್ 26ರಂದು ದೇಶದ 100 ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು. ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಅಭಿಯಾನ ಆರಂಭಿಸಿ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರಜಾ ಪಾರ್ಲಿಮೆಂಟ್ ಆಯೋಜಿಸಲಾಗುವುದು. ಅಲ್ಲದೆ, ನವೆಂಬರ್ 20ರಿಂದ ಡಿಸೆಂಬರ್ 20ರವರೆಗೆ ಮತದಾರರ ಪಟ್ಟಿಯ ಲೋಪಗಳನ್ನು ಬಯಲಿಗೆಳೆಯಲು ಪರಿಶೋಧನಾ ಅಭಿಯಾನ ನಡೆಸಲಾಗುವುದು ಎಂದು ಒಕ್ಕೂಟದ ಮಾಧ್ಯಮ ಹೇಳಿಕೆ ತಿಳಿಸಿದೆ.
ಚುನಾವಣಾ ಆಯೋಗ ನೈತಿಕವಾಗಿ ಸೋಲೊಪ್ಪಿಕೊಂಡಿದೆ
ಹೊಸ ಮತದಾರರ ನೋಂದಣಿಗಾಗಿ ಬಳಸುವ ನಮೂನೆ-6ರಲ್ಲಿ ತಾನು ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಚುನಾವಣಾ ಆಯೋಗ ಹೇಳಿರುವುದು ಮತ್ತೊಂದು ಸುಳ್ಳು ಎಂದು ಒಕ್ಕೂಟ ಆರೋಪಿಸಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದ, ತಪ್ಪಾಗಿ ಅಳಿಸಲ್ಪಟ್ಟ ಮತದಾರರಿಗೆ ಹೊಸ ಮತದಾರರಿಗಾಗಿ ಇರುವ ನಮೂನೆ-6 ನೀಡಿದ್ದೇಕೆ ಎಂಬುದಕ್ಕೆ ಆಯೋಗದ ಬಳಿ ಉತ್ತರವಿಲ್ಲ ಎಂದು ಹೇಳಿದೆ.
ಬಿಹಾರ ಚುನಾವಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನುಮೋದನೆ ಪಡೆದೇ ಈ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ಚುನಾವಣಾ ಆಯೋಗ ವಾದಿಸಿದ್ದರೆ, ನಮೂನೆ-6 ತಿದ್ದುಪಡಿಗೆ ಅನುಮೋದನೆ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಹೊಣೆಗಾರಿಕೆಯನ್ನು ಚುನಾವಣಾ ಆಯೋಗದ ಮೇಲೆಯೇ ಹೊರಿಸಲಾಗಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.
ಇದೇ ಸಂದರ್ಭದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಂದುವರಿಯುತ್ತಿರುವ ಏಳು ರಾಜ್ಯಗಳಿಗೆ ನವೆಂಬರ್ 6ರಂದು ಚುನಾವಣಾ ಆಯೋಗ ಹೊಸ ಸುತ್ತೋಲೆ ಹೊರಡಿಸಿದೆ. ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ತಪ್ಪಾಗಿ ಅಳಿಸಲ್ಪಟ್ಟ ಮತದಾರರನ್ನು ಗುರುತಿಸಿ ಮತ್ತೆ ಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ.
ಅಳಿಸಲ್ಪಟ್ಟವರ ಪಟ್ಟಿಯನ್ನು ಪ್ರತಿ ಮತಗಟ್ಟೆಯಲ್ಲೂ ಪ್ರಕಟಿಸಬೇಕು, ಮನೆಮನೆಗೆ ಭೇಟಿ ನೀಡಿ ಅಥವಾ ಅಕ್ಕಪಕ್ಕದವರಿಂದ ಮಾಹಿತಿ ಪಡೆದು, ದೂರವಾಣಿ ಮೂಲಕ ಸಂಪರ್ಕಿಸಿ ಮತದಾರರನ್ನು ಮರುನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ತಪ್ಪಾಗಿ ಅಳಿಸಲ್ಪಟ್ಟವರಿಗೆ ನಮೂನೆ-6 ನೀಡುವ ಬದಲು, ಅವರ ಹಳೆಯ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನೇ ಉಳಿಸಿಕೊಂಡು ಗಣನಾ ನಮೂನೆಯಲ್ಲಿ ವಿವರ ಪಡೆದು ಮರುಸೇರ್ಪಡೆ ಮಾಡಬೇಕು. ಬೇರೆಡೆಗೆ ಸ್ಥಳಾಂತರಗೊಂಡಿದ್ದರೂ ಹೊಸ ವಿಳಾಸದ ವಿವರ ಪಡೆದು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಆಯೋಗ ನಿರ್ದೇಶಿಸಿದೆ.
ಆದರೆ ಕರ್ನಾಟಕದಲ್ಲಿ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಇರುವುದೇಕೆ ಎಂದು ಒಕ್ಕೂಟ ಪ್ರಶ್ನಿಸಿದೆ. ಈ ಕುರಿತು ಹಲವು ಮನವಿ ಪತ್ರಗಳನ್ನು ಸಲ್ಲಿಸಿ, ಪತ್ರಿಕಾಗೋಷ್ಠಿಗಳ ಮೂಲಕ ಗಮನ ಸೆಳೆದಿದ್ದರೂ ಆಯೋಗ ಸ್ಪಂದಿಸಿಲ್ಲ ಎಂದು ಆರೋಪಿಸಿದೆ.
ಕರ್ನಾಟಕದ ಮತದಾರರ ಪಟ್ಟಿಯಲ್ಲಿ 70 ಲಕ್ಷ ಜನರು ಎಲ್ಲಿ ಹೋದರು?
ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಕರ ಜನಸಂಖ್ಯೆ ಸುಮಾರು 5.2 ಕೋಟಿ ಇದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳುತ್ತವೆ. ಆದರೆ ಎಸ್ಐಆರ್ ನಂತರ ಮತದಾರರ ಪಟ್ಟಿಯಲ್ಲಿ ಸುಮಾರು 4.5 ಕೋಟಿ ಜನರು ಮಾತ್ರ ಉಳಿದಿದ್ದಾರೆ. ಉಳಿದ 70 ಲಕ್ಷ ಜನರು ಮತದಾರರ ಪಟ್ಟಿಯಿಂದ ಹೊರಗುಳಿದಿರುವುದೇಕೆ ಎಂದು ಒಕ್ಕೂಟ ಪ್ರಶ್ನಿಸಿದೆ.
ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದರೂ ಮತದಾರರ ಪಟ್ಟಿಯಲ್ಲಿ ಅರ್ಧದಷ್ಟು ಜನರು ಕಣ್ಮರೆಯಾಗಿರುವುದು ಹೇಗೆ ಸಾಧ್ಯ? ಗಾಂಧಿನಗರ, ರಾಜಾಜಿನಗರ ಮತ್ತು ಬಸವನಗುಡಿ ಕ್ಷೇತ್ರಗಳಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರ ಸಂಖ್ಯೆಯೇ ಈಗಿನ ಮತದಾರರ ಪಟ್ಟಿಯಲ್ಲಿರುವ ಸಂಖ್ಯೆಯನ್ನು ಮೀರಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದೆ.
‘ಮತ ಕಾವಲು ಸಮಿತಿ’ ಪರಿಶೋಧನೆ ನಡೆಸಿದ 73 ಮತಗಟ್ಟೆಗಳಲ್ಲಿಯೂ ತಪ್ಪಾಗಿ ಅಳಿಸಲ್ಪಟ್ಟ ನೂರಾರು ಮತದಾರರ ಪ್ರಕರಣಗಳು ಪತ್ತೆಯಾಗಿವೆ. ಈ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಕೇವಲ 73 ಮತಗಟ್ಟೆಗಳಲ್ಲಿ ಇಷ್ಟು ಪ್ರಕರಣಗಳು ಪತ್ತೆಯಾಗಿರುವಾಗ ರಾಜ್ಯದ ಸುಮಾರು 6,000 ಮತಗಟ್ಟೆಗಳಲ್ಲಿ ಎಷ್ಟು ಜನರನ್ನು ತಪ್ಪಾಗಿ ಅಳಿಸಿರಬಹುದು ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ನಟ ಪ್ರಕಾಶ್ ರಾಜ್ ಅವರಂತಹ ಜೀವಂತ ವ್ಯಕ್ತಿಯನ್ನೇ ತಪ್ಪಾದ ಕಾರಣ ನೀಡಿ ಮತದಾರರ ಪಟ್ಟಿಯಿಂದ ಅಳಿಸಿರುವ ಪ್ರಕರಣ ಎದುರಿದ್ದರೂ, ಇಂತಹ ಮತದಾರರನ್ನು ಸಕ್ರಮವಾಗಿ ಮರುನೋಂದಣಿ ಮಾಡಿಕೊಳ್ಳದೆ ಹೊರಗಿಡುತ್ತಿರುವುದು ಸರಿಯಲ್ಲ ಎಂದು ಹೇಳಿದೆ.
ಅಂತಿಮ ಮತದಾರರ ಪಟ್ಟಿಯಲ್ಲಿಯೂ ಸುಮಾರು 9,000 ನಕಲಿ ನಮೂದುಗಳು, ಒಂದೇ ಮನೆ ಸಂಖ್ಯೆಯಲ್ಲಿ 100ಕ್ಕೂ ಹೆಚ್ಚು ಮತದಾರರು ದಾಖಲಾಗಿರುವ 380 ಪ್ರಕರಣಗಳು ಹಾಗೂ ಸರಿಯಾದ ವಿಳಾಸವಿಲ್ಲದ ಸುಮಾರು 20 ಲಕ್ಷ ನಮೂದುಗಳನ್ನು ತನ್ನ ದತ್ತಾಂಶ ತಂಡ ಪತ್ತೆಹಚ್ಚಿದೆ ಎಂದು ಒಕ್ಕೂಟ ಹೇಳಿದೆ.
30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಮತದಾರರಲ್ಲಿ ಶೇ.25ರಷ್ಟು ಮಂದಿ ನೋಂದಣಿಯಾಗದೆ ಹೊರಗುಳಿದಿದ್ದಾರೆ ಎಂಬ ಬಿಕ್ಷಂ ಗುಜ್ಜ ಅವರ ಅಧ್ಯಯನವನ್ನು ಉಲ್ಲೇಖಿಸಿರುವ ಒಕ್ಕೂಟ, ಬೆಂಗಳೂರಿನಲ್ಲಿ 1.2 ಲಕ್ಷ ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದ ಮೂಲ ಮಾಹಿತಿ ಲಭ್ಯವಿಲ್ಲ ಎಂದು ‘ದಿ ಹಿಂದೂ’ ವರದಿ ಮಾಡಿರುವುದನ್ನೂ ಪ್ರಸ್ತಾಪಿಸಿದೆ.
ದೇಶದಲ್ಲೇ ಅತಿ ಹೆಚ್ಚು ಮತದಾರರ ಅಳಿಸುವಿಕೆ ಕರ್ನಾಟಕದಲ್ಲಿ ನಡೆದಿದ್ದು, ಈ ಲೋಪಗಳ ಕುರಿತು ಚುನಾವಣಾ ಆಯೋಗ ಸಮರ್ಪಕ ಉತ್ತರ ನೀಡಿಲ್ಲ ಎಂದು ಆರೋಪಿಸಿದೆ.
ಇದನ್ನೂ ಓದಿ : ಪಂಜಾಬ್ ರೈತರ ಪರ ಶಿವರಾಜ್ ಸಿಂಗ್ ಬ್ಯಾಟಿಂಗ್: ಬಿಜೆಪಿ-ಕಾಂಗ್ರೆಸ್ಗೆ ಕೇಜ್ರಿವಾಲ್ ತಿರುಗೇಟು! | Arvind Kejriwa
ಎಸ್ಎಸ್ಆರ್ ಪ್ರಕ್ರಿಯೆ ಚುನಾವಣಾ ಆಯೋಗದ ಮುಖ ಉಳಿಸಿಕೊಳ್ಳುವ ಪ್ರಯತ್ನ
ಎಸ್ಐಆರ್ ಮೂಲಕ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಬದಲು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಿರುವ ಒಕ್ಕೂಟ, ಇದೀಗ ಚುನಾವಣಾ ಆಯೋಗ ಡಿಸೆಂಬರ್ 1ರಿಂದ ಜನವರಿ 1ರವರೆಗೆ ಎಸ್ಎಸ್ಆರ್ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿದೆ.
ಎಸ್ಐಆರ್ ಸರಿಯಾಗಿ ನಡೆದಿದೆ ಎಂದು ಹೇಳುತ್ತಿರುವ ಆಯೋಗ, ಮತ್ತೆ ಮತದಾರರ ಸೇರ್ಪಡೆಗೆ ವಿಶೇಷ ಅಭಿಯಾನ ನಡೆಸುತ್ತಿರುವುದೇಕೆ? ಎಸ್ಐಆರ್ ಸಂದರ್ಭದಲ್ಲಿ ಹೊಸ ಮತದಾರರನ್ನು ಗುರುತಿಸಿ ನೋಂದಾಯಿಸಿಕೊಳ್ಳಲು ಮನೆಮನೆಗೆ ಭೇಟಿ ನೀಡಿದಾಗ ಏಕೆ ಗಮನ ಹರಿಸಲಿಲ್ಲ? ಮತದಾರರು ಪಟ್ಟಿಯಿಂದ ಹೊರಗುಳಿಯಲು ಕಾರಣವೇನು ಎಂಬ ಪರಿಶೀಲನೆ ನಡೆಸದೆ ಅವರನ್ನು ಮತ್ತೆ ಸೇರಿಸಿಕೊಳ್ಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಒಕ್ಕೂಟ ಹೇಳಿದೆ.
ಕರಡು ಪಟ್ಟಿಯಿಂದ ಅಳಿಸಲ್ಪಟ್ಟ 1.08 ಕೋಟಿ ಮತದಾರರಲ್ಲಿ ಕೇವಲ 14,900 ಜನರನ್ನು ಮಾತ್ರ ಮರುಸೇರ್ಪಡೆ ಮಾಡಲಾಗಿದೆ. ಇದು ಶೇ.0.14ರಷ್ಟು ಮಾತ್ರ. ಹೀಗಿರುವಾಗ ಮತ್ತೊಂದು ತಿಂಗಳ ಎಸ್ಎಸ್ಆರ್ ಪ್ರಕ್ರಿಯೆಯಿಂದ ಎಷ್ಟು ಜನರನ್ನು ಮತ್ತೆ ಸೇರಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿರುವ ಒಕ್ಕೂಟ, ಈ ಪ್ರಕ್ರಿಯೆಯನ್ನು ಬೂಟಾಟಿಕೆಯ ಪ್ರಯತ್ನವೆಂದು ತಿರಸ್ಕರಿಸಿದೆ.
ಎಸ್ಐಆರ್ ಕುರಿತು ದ್ವಂದ್ವ ನಿಲುವು ತಾಳುತ್ತಿರುವ ಕಾಂಗ್ರೆಸ್ ಸಚಿವರು
ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಎಸ್ಐಆರ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಕೆಲವು ಕಾಂಗ್ರೆಸ್ ಸಚಿವರು ದ್ವಂದ್ವ ನಿಲುವು ತಾಳಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಎಸ್ಐಆರ್ನಿಂದ ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ಬದಲಿಗೆ ಲಾಭವಾಗಿದೆ ಅಥವಾ ಅಳಿಸಲ್ಪಟ್ಟವರು ಉತ್ತರ ಭಾರತದ ಬಿಜೆಪಿ ಮತದಾರರು ಎಂಬಂತಹ ಹೇಳಿಕೆಗಳನ್ನು ಕೆಲವು ಸಚಿವರು ನೀಡುತ್ತಿದ್ದಾರೆ. ಈ ರೀತಿಯ ಹೇಳಿಕೆಗಳು ಮತದಾರರ ಪಟ್ಟಿಯಲ್ಲಿನ ಗಂಭೀರ ಲೋಪಗಳನ್ನು ಕಡೆಗಣಿಸುವುದಕ್ಕೆ ಸಮಾನ ಎಂದು ಒಕ್ಕೂಟ ಹೇಳಿದೆ.
ತಮ್ಮ ಕ್ಷೇತ್ರದ ರಾಜಕೀಯ ಲಾಭ-ನಷ್ಟಗಳನ್ನು ಲೆಕ್ಕಹಾಕಿ ಎಸ್ಐಆರ್ ಅಂತಿಮ ಪಟ್ಟಿಯನ್ನೇ ಒಪ್ಪಿಕೊಂಡು ಅದರಲ್ಲೇ ಮತದಾರರನ್ನು ಸೇರಿಸಿಕೊಳ್ಳೋಣ ಎನ್ನುವುದು ಸಂಕುಚಿತ ಮತ್ತು ಸ್ವಾರ್ಥ ರಾಜಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಈ ಸಚಿವರ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಕರ್ನಾಟಕದಲ್ಲಿ ನಾಗರಿಕ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಹೋರಾಟದಿಂದ ಮತದಾರರಲ್ಲಿ ಜಾಗೃತಿ ಮೂಡಿದ್ದು, ಎಸ್ಐಆರ್ ಪ್ರಕ್ರಿಯೆಯಲ್ಲಿ ಕೆಲವು ಸುಧಾರಣೆಗಳಾಗಿವೆ. ಬಿಜೆಪಿ ರೂಪಿಸಿದ್ದ ನಮೂನೆ-7ರ ಸಂಘಟಿತ ದುರುಪಯೋಗದ ಪ್ರಯತ್ನವೂ ಬಯಲಾಗಿ ವಿಫಲವಾಗಿದೆ. ಆದರೆ ಇದರಿಂದ ಎಸ್ಐಆರ್ ಷಡ್ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ಭಾವಿಸುವುದು ತಪ್ಪು ಎಂದು ಎಚ್ಚರಿಸಿದೆ.
ಎಸ್ಐಆರ್ ಅಂತಿಮ ಪಟ್ಟಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಲಿ
ಕರ್ನಾಟಕದಲ್ಲಿ ಸ್ಥಳೀಯ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವೂ ಗೊಂದಲದ ನಿಲುವು ತಾಳಿದೆ. ಎಸ್ಐಆರ್ ಅಂತಿಮ ಪಟ್ಟಿಯ ಆಧಾರದಲ್ಲಿ ಚುನಾವಣೆ ಸಿದ್ಧತೆ ನಡೆಸುವಂತೆ ಬಿಬಿಎಂಪಿ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಸೂಚಿಸಿರುವ ಆಯೋಗ, ಇದೇ ಪಟ್ಟಿಯನ್ನು ಸ್ಥಳೀಯ ಚುನಾವಣೆಗಳಿಗೆ ಬಳಸಬಹುದೇ ಎಂದು ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ.
ಈ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆಯಬೇಕು ಎಂದು ಒಕ್ಕೂಟ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ. ಸರ್ಕಾರ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
- ಎಸ್ಐಆರ್ ಅಂತಿಮ ಮತದಾರರ ಪಟ್ಟಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು.
- ಅಳಿಸಲ್ಪಟ್ಟ ಹಾಗೂ ನೋಂದಣಿಯಾಗದೆ ಉಳಿದ ಮತದಾರರನ್ನು ಗುರುತಿಸಿ ಸೇರಿಸಿಕೊಳ್ಳಲು ಸ್ವತಂತ್ರ ಮತ್ತು ವ್ಯವಸ್ಥಿತ ಸಾಮಾಜಿಕ ಪರಿಶೋಧನಾ ಅಭಿಯಾನ ನಡೆಸಬೇಕು.
- ಸಾಮಾಜಿಕ ಪರಿಶೋಧನೆಯ ಮೂಲಕ ಪರಿಷ್ಕೃತಗೊಂಡ 2025ರ ಮತದಾರರ ಪಟ್ಟಿಯ ಆಧಾರದಲ್ಲಿಯೇ ಸ್ಥಳೀಯ ಚುನಾವಣೆಗಳನ್ನು ನಡೆಸಬೇಕು.
ಬಿಜೆಪಿ ಆಡಳಿತದ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿಯೂ ಸ್ಥಳೀಯ ಚುನಾವಣೆಗಳಿಗೆ ಎಸ್ಐಆರ್ ಪಟ್ಟಿಯನ್ನು ಬಳಸಿಲ್ಲ ಎಂಬುದನ್ನು ಒಕ್ಕೂಟ ಗಮನಕ್ಕೆ ತಂದಿದೆ.
ನವೆಂಬರ್ 26ರಿಂದ ಹೊಸ ಹಂತದ ಹೋರಾಟ
ಚಳಿಗಾಲದ ಅಧಿವೇಶನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಸ್ಐಆರ್ ವಿರುದ್ಧ ಹೊಸ ಹಂತದ ಹೋರಾಟಕ್ಕೆ ನಾಗರಿಕ ಸಂಘಟನೆಗಳು ಸಿದ್ಧತೆ ನಡೆಸಿವೆ. ದೇಶದ ಸಮಾನ ಮನಸ್ಕ ಸಂಘಟನೆಗಳು ಮತ್ತು ವೇದಿಕೆಗಳು ಒಗ್ಗೂಡಿ ‘ಪೀಪಲ್ ಎಗೇನ್ಸ್ಟ್ ಎಸ್ಐಆರ್’ ಎಂಬ ವಿಶಾಲ ವೇದಿಕೆಯನ್ನು ರಚಿಸಿವೆ.
ನವೆಂಬರ್ 26ರಂದು ಸಂವಿಧಾನ ದಿನದಂದು ‘ಪ್ರಜಾಪ್ರಭುತ್ವ ಮರುಸ್ಥಾಪನಾ ಅಭಿಯಾನ’ಕ್ಕೆ ಚಾಲನೆ ನೀಡಲಾಗುವುದು. ಮತದಾನದ ಹಕ್ಕು, ಪ್ರತಿಭಟಿಸುವ ಹಕ್ಕು ಮತ್ತು ಬದುಕುವ ಹಕ್ಕುಗಳ ರಕ್ಷಣೆಗಾಗಿ ದೇಶದ 100 ನಗರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಎಸ್ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಚುನಾವಣಾ ಆಯೋಗದ ನೇಮಕಾತಿ ವಿಧಾನದಲ್ಲಿ ಬದಲಾವಣೆ ಮಾಡುವಂತೆ ಒತ್ತಾಯಿಸಲಾಗುವುದು.
ಕರ್ನಾಟಕದಲ್ಲಿಯೂ ಎಲ್ಲ ಜಿಲ್ಲೆಗಳಲ್ಲಿ ವಿವಿಧ ಜನಪರ ಹೋರಾಟಗಳೊಂದಿಗೆ ಸಮನ್ವಯ ಸಾಧಿಸಿ ಅಭಿಯಾನ ಆರಂಭಿಸಲಾಗುವುದು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಪರಿಣಾಮಕಾರಿ ‘ಪ್ರಜಾ ಪಾರ್ಲಿಮೆಂಟ್’ ಆಯೋಜಿಸಲಾಗುವುದು. ಇದರ ವಿವರಗಳನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.
ಇದಲ್ಲದೆ, ಎಸ್ಐಆರ್ನ ನೈಜ ಸ್ಥಿತಿಯನ್ನು ತಳಮಟ್ಟದ ಪರಿಶೋಧನೆಗಳ ಮೂಲಕ ಬಯಲಿಗೆಳೆಯಲು ನವೆಂಬರ್ 20ರಿಂದ ಡಿಸೆಂಬರ್ 20ರವರೆಗೆ ರಾಜ್ಯಾದ್ಯಂತ ಪರಿಶೋಧನಾ ಅಭಿಯಾನ ನಡೆಯಲಿದೆ. ಡಿಸೆಂಬರ್ 20ರಂದು ರಾಜ್ಯದ ಹಲವು ಕಡೆ ಮತಗಟ್ಟೆ ಮಟ್ಟದ ಸಾರ್ವಜನಿಕ ವಿಚಾರಣೆಗಳನ್ನು ಆಯೋಜಿಸಲಾಗುವುದು. ಈ ಹೋರಾಟ ಮತದಾರರ ಹಕ್ಕುಗಳ ರಕ್ಷಣೆಯ ತಾರ್ಕಿಕ ಅಂತ್ಯ ತಲುಪುವವರೆಗೆ ಮುಂದುವರಿಯಲಿದೆ ಎಂದು ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ ಘೋಷಿಸಿದೆ.
ಇದನ್ನೂ ನೋಡಿ : AIKS ಸಮ್ಮೇಳನ | ಕೃಷಿ ಮತ್ತು ರೈತರ ಬದುಕಿನ ರಕ್ಷಣೆಗಾಗಿ ಚಳವಳಿ ಬಲಪಡಿಸುವ ಸಂಕಲ್ಪ Janashakthi Media
